ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾನ ಕಲಾಶ್ರೀಗೆ `ಗಾನ ವಾರಿಧಿ' ಪ್ರಶಸ್ತಿ

Last Updated 6 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಮೈಸೂರಿನ ಹಳೆಯ ಸಂಗೀತ ಪರಂಪರೆಗೆ ಸೇರಿದ್ದ ಎಂ.ಎ. ನರಸಿಂಹಾಚಾರ್ (1924-2004) ಅವರು ಗಾಯಕ, ಬೋಧಕ ಮೇಲಾಗಿ ಸಹೃದಯಿಯಾಗಿ ಬಾಳಿ ಬೆಳಗಿದವರು. ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಸಂಗೀತ ಭೂಷಣ ಪದವಿ ಪಡೆದು, ಮೈಸೂರಿನಲ್ಲಿ ಗಾನಕಲಾಮಂದಿರ  ಸ್ಥಾಪಿಸಿ, ನೂರಾರು ಜನಕ್ಕೆ ಸಂಗೀತ ಶಿಕ್ಷಣ ನೀಡಿದರು.

ಬೆಂಗಳೂರಿನ ಆಚಾರ್ಯ ಪಾಠಶಾಲೆಯಲ್ಲೂ ಕೆಲ ಕಾಲ ಬೋಧಕರಾಗಿದ್ದ ಅವರು ರಾಜ್ಯದ ಒಳ ಹೊರಗೆ ಗಾಯನ ಕಛೇರಿಗಳನ್ನು ನೀಡಿದ್ದರು. ಅಪರೂಪದ ರಾಗ-ಕೃತಿಗಳ ಭಂಡಾರವೇ ಅವರಲ್ಲಿತ್ತು. ಸಾಕಷ್ಟು ಓದುವ ಹವ್ಯಾಸ ಹೊಂದಿದ್ದ ಎಂ.ಎ.ಎನ್. ಕೆಲ ಪುಸ್ತಕಗಳನ್ನೂ ಬರೆದಿದ್ದಾರೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪುರಸ್ಕಾರ, ರಾಜ್ಯ ಸಂಗೀತ ವಿದ್ವಾನ್‌ಗಳಲ್ಲದೆ ಕರ್ನಾಟಕ ಗಾನಕಲಾ ಪರಿಷತ್ತಿನಿಂದ `ಗಾನಕಲಾಭೂಷಣ' ಬಿರುದುಗಳಿಗೂ ಅವರು ಭಾಜನರಾಗಿದ್ದರು.

ಅವರ ಸ್ಮರಣಾರ್ಥ ಸ್ಥಾಪಿಸಿರುವ ಎಂ.ಎ. ನರಸಿಂಹಾಚಾರ್ ಮ್ಯೂಸಿಕ್ ಫೌಂಡೇಶನ್ ಕಳೆದ 10 ವರ್ಷಗಳಿಂದ ಗಣ್ಯ ಕಲಾವಿದರಿಗೆ `ಗಾನ ವಾರಿಧಿ' ಪ್ರಶಸ್ತಿಯನ್ನು (10,000 ರೂ. ನಗದು) ವಿತರಿಸುತ್ತಿದೆ. ಪ್ರತಿ ತಿಂಗಳೂ ಕಾರ್ಯಕ್ರಮ ನಡೆಸುತ್ತಿರುವ ಪ್ರತಿಷ್ಠಾನ ಪ್ರತಿವರ್ಷ 10 ವಿದ್ಯಾರ್ಥಿಗಳಿಗೆ ಶಿಷ್ಯ ವೇತನವನ್ನೂ ನೀಡುತ್ತಿದೆ. ಅಲ್ಲದೆ ವಾರ್ಷಿಕ ಸಂಗೀತೋತ್ಸವದಲ್ಲಿ ಪ್ರಖ್ಯಾತ ಕಲಾವಿದರು ಪಾಲ್ಗೊಳ್ಳುತ್ತಿದ್ದಾರೆ.

ಕಳೆದ ವಾರ ಈ ವರ್ಷದ `ಗಾನವಾರಿಧಿ' ಪ್ರಶಸ್ತಿ ಸ್ವೀಕರಿಸಿದ ಎಚ್.ಕೆ. ವೆಂಕಟರಾಂ ಅವರು ಓರ್ವ ಗೌರವಾನ್ವಿತ ಪಿಟೀಲು ವಾದಕರಾಗಿದ್ದಾರೆ. ತಂದೆ ಪ್ರೊ. ಎಚ್.ವಿ. ಕೃಷ್ಣಮೂರ್ತಿ ಅವರಲ್ಲಿ ಕ್ರಮಬದ್ಧ ಶಿಕ್ಷಣ ಪಡೆದು, ತನ್ನ ಸಹೋದರ ಎಚ್.ಕೆ. ರಾಘವೇಂದ್ರ ಅವರೊಂದಿಗೆ ಯುಗಳ ವಾದನ ಮಾಡತೊಡಗಿ, ಮುಂದೆ ರಾಜ್ಯ-ರಾಷ್ಟ್ರದ ಪ್ರಮುಖ ವಿದ್ವಾಂಸರಿಗೆಲ್ಲಾ ಪಕ್ಕವಾದ್ಯ ನುಡಿಸಿ, ಸೇವೆ ಸಲ್ಲಿಸುತ್ತಿದ್ದಾರೆ.

ಅವರದು ಸಂಪ್ರದಾಯಬದ್ಧ ವಿನಿಕೆ, ಪ್ರಧಾನ ಕಲಾವಿದರ ಅನುಸರಣೆ ಹಾಗೂ ಹಿತಮಿತ ಭಾವಪೂರ್ಣ ನಿರೂಪಣೆ. ಇದರಿಂದ ಇಂದಿನ ಬಹು ಬೇಡಿಕೆ ಉಳ್ಳ ಕಲಾವಿದರಾಗಿ ವೆಂಕಟರಾಂ ಬೆಳಗುತ್ತಿದ್ದಾರೆ. ಚೆನ್ನೈನ ಮ್ಯೂಸಿಕ್ ಅಕಾಡೆಮಿಯಿಂದ ಶ್ರೇಷ್ಠ ಪಿಟೀಲುವಾದಕರಾಗಿ ಅನೇಕ ಬಾರಿ ಬಹುಮಾನ ಗಳಿಸಿರುವ ಅವರಿಗೆ ಕರ್ನಾಟಕ ಗಾನಕಲಾ ಪರಿಷತ್ತಿನಿಂದ  ಗಾನಕಲಾಶ್ರೀ ಬಿರುದು ಸಹ ಸಂದಿದೆ. ಕಳೆದ ವಾರ ಎಂ.ಎ. ನರಸಿಂಹಾಚಾರ್ ಮ್ಯೂಸಿಕ್ ಫೌಂಡೇಶನ್ ಆಶ್ರಯದಲ್ಲಿ ನಡೆದ ಸಂಗೀತೋತ್ಸವದಲ್ಲಿ ಗಣ್ಯ ಕಲಾವಿದರು ಪಾಲ್ಗೊಂಡರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT