ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿಡದಲ್ಲೂ ಬೆಳೆಯಬಹುದು ಬಂಗಾರ!

Last Updated 14 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನ್ಯೂಯಾರ್ಕ್ (ಪಿಟಿಐ): ಚಿನ್ನದ ದರ ಏರುಗತಿಯಲ್ಲೇ ಸಾಗುತ್ತಿರುವುದನ್ನು ಕಂಡು,  ಛೇ... ಈ ಚಿನ್ನವನ್ನು ಗಿಡದಲ್ಲಿ ಬೆಳೆಯುವಂತಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ನೀವು ಅಂದುಕೊಂಡಿರಲೂ ಬಹುದು.

ಒಂದು ವೇಳೆ ಹಾಗೆ ಅಂದುಕೊಂಡಿದ್ದರೆ, ಅದು ಬರೀ ಊಹೆಯಲ್ಲ. ದುಬಾರಿ ಬಂಗಾರವನ್ನು ಗಿಡಗಳಲ್ಲಿ ಬೆಳೆಯಬಹುದಂತೆ! ಸಸ್ಯಗಳಲ್ಲಿ ಚಿನ್ನ ಬೆಳೆಸುವ ಹೊಸ ವಿಧಾನ ಅಭಿವೃದ್ಧಿ ಪಡಿಸಿರುವುದಾಗಿಯೂ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ. ಈ ವಿಧಾನವನ್ನು `ಗೋಲ್ಡ್ ಫೈಟೊಮೈನಿಂಗ್' (ನಿರ್ದಿಷ್ಟ ಲೋಹಗಳನ್ನು ಭೂಮಿಯಿಂದ ಸಂಗ್ರಹಿಸುವುದಕ್ಕಾಗಿ ಗಿಡಗಳನ್ನು ನೆಡುವುದು- ಗಿಡಗಳು ಲೋಹದ ಕಣಗಳನ್ನು ತಮ್ಮ ಅಂಗಾಂಶಗಳಲ್ಲಿ ಸಂಗ್ರಹಿಸುತ್ತವೆ) ಎಂದು ವಿಜ್ಞಾನಿಗಳು ಕರೆದಿದ್ದಾರೆ. ಈ  ವಿಧಾನದಲ್ಲಿ ಸಸಿಗಳನ್ನು ಬಳಸಿ ಭೂಮಿಯಿಂದ ಚಿನ್ನದ ಕಣಗಳನ್ನು ಪ್ರತ್ಯೇಕಿಸಲಾಗುತ್ತದೆ.

ಕೆಲವು ಸಸ್ಯಗಳು, ನಿಕ್ಕಲ್, ಕ್ಯಾಡ್ಮಿಯಂ, ಸತುವಿನಂತಹ ಲೋಹಗಳನ್ನು ಬೇರುಗಳ ಮೂಲಕ ಹೀರಿ ಎಲೆ, ಚಿಗುರುಗಳಲ್ಲಿ ಸಂಗ್ರಹಿಸಿಡುವ ಸ್ವಾಭಾವಿಕ ಸಾಮರ್ಥ್ಯವನ್ನು ಹೊಂದಿವೆ. ಹಲವು ವರ್ಷಗಳ ಹಿಂದೆಯೇ ವಿಜ್ಞಾನಿಗಳು ಇಂತಹ ಸಸ್ಯಗಳನ್ನು ಪತ್ತೆ ಹಚ್ಚಿದ್ದು, ಅವುಗಳನ್ನು ಅತಿಸಂಗ್ರಾಹಕಗಳು (ಹೈಪರ್‌ಅಕ್ಯುಮುಲೇಟರ್ಸ್‌) ಎಂದು ಕರೆದಿದ್ದಾರೆ.

ಆದರೆ, ಚಿನ್ನವನ್ನು ಅಂಗಾಂಶಗಳಲ್ಲಿ ಸಂಗ್ರಹಿಸಿಡುವ ಸಸ್ಯಗಳು ಇದುವರೆಗೆ ಕಂಡುಬಂದಿಲ್ಲ. ಇದಕ್ಕೆ ಪ್ರಮುಖ ಕಾರಣ, ಚಿನ್ನವು ಸುಲಭವಾಗಿ ನೀರಿನಲ್ಲಿ ಕರಗದೇ ಇರುವುದು. ಹಾಗಾಗಿ  ಸಸ್ಯಗಳಿಗೆ ಚಿನ್ನದ ಕಣಗಳನ್ನು ಸ್ವಾಭಾವಿಕವಾಗಿ ಹೀರಲು ಸಾಧ್ಯವಿಲ್ಲ ಎಂದು ವಿಜ್ಞಾನಿಗಳು ಹೇಳುತ್ತಾರೆ.
`ಆದರೆ, ಕೆಲವು ನಿರ್ದಿಷ್ಟ ರಾಸಾಯನಿಕ ಪರಿಸ್ಥಿತಿಯಲ್ಲಿ ಚಿನ್ನವನ್ನು  ಬಲವಂತವಾಗಿ ನೀರಿನಲ್ಲಿ ಕರಗುವಂತೆ ಮಾಡಬಹುದು' ಎಂದು ಹೇಳುತ್ತಾರೆ

ನ್ಯೂಜಿಲೆಂಡ್ ಮ್ಯಾಸ್ಸಿ ವಿಶ್ವವಿದ್ಯಾಲಯದ ಪರಿಸರ ಭೂರಸಾಯನ ವಿಜ್ಞಾನಿ ಹಾಗೂ ಗೋಲ್ಡ್ ಫೈಟೊಮೈನಿಂಗ್ ತಜ್ಞ ಕ್ರಿಸ್ ಆ್ಯಂಡರ್ಸನ್.
ಚಿನ್ನದ ಕಣಗಳನ್ನು ಹೊಂದಿದ ಭೂಭಾಗಕ್ಕೆ ರಾಸಾಯನಿಕವನ್ನು ಹಾಕಿ ಸಾಸಿವೆ ಗಿಡದಿಂದ ಚಿನ್ನವನ್ನು ಸಂಗ್ರಹಿಸಲು ಸಾಧ್ಯ ಎಂಬುದನ್ನು 15 ವರ್ಷಗಳ ಹಿಂದೆ ಆ್ಯಂಡರ್ಸನ್ ಪ್ರಾಯೋಗಿಕವಾಗಿ ತೋರಿಸಿದ್ದರು.

ಚಿನ್ನ ಪ್ರತ್ಯೇಕಿಸುವುದು ಕಷ್ಟ: ಗಿಡಗಳಲ್ಲಿ ಚಿನ್ನ ಸಂಗ್ರಹವಾಗುವಂತೆ ಮಾಡುವುದು ಸುಲಭ. ಆದರೆ ಅದನ್ನು ಸಸ್ಯಗಳಿಂದ ಪ್ರತ್ಯೇಕಿಸಿ ಸಂಗ್ರಹಿಸುವುದು ಕಷ್ಟದ ಕೆಲಸ ಎಂದು ಹೇಳುತ್ತಾರೆ ಆ್ಯಂಡರ್ಸನ್. ಒಂದು ವೇಳೆ ಗಿಡಗಳನ್ನು ಸುಟ್ಟರೆ, ಸ್ವಲ್ಪ ಚಿನ್ನ ಬೂದಿಯೊಂದಿಗೆ ಸೇರಿಕೊಂಡಿರುತ್ತದೆ. ಇನ್ನು ಸ್ವಲ್ಪ ನಾಶವಾಗುತ್ತವೆ. ಬೂದಿಯನ್ನು ಸಂಸ್ಕರಿಸಿ ಚಿನ್ನ ಸಂಗ್ರಹಿಸುವುದು ಕಷ್ಟದ ಕೆಲಸ. ಈ ಪ್ರಕ್ರಿಯೆಗೆ ಬಾರಿ ಪ್ರಮಾಣದಲ್ಲಿ ಆ್ಯಸಿಡ್‌ಬೇಕಾಗುತ್ತದೆ. ಅಲ್ಲದೇ ಅವುಗಳ ಸಾಗಣೆಯೂ ಅಪಾಯಕಾರಿ.

ಗಿಡಗಳಲ್ಲಿ ಕಂಡು ಬರುವ ಚಿನ್ನ ನ್ಯಾನೊ ಕಣಗಳಾಗಿರುವುದರಿಂದ ರಾಸಾಯನಿಕ ಉದ್ಯಮಕ್ಕೆ ಸಹಕಾರಿಯಾಗಲಿದೆ (ಇಲ್ಲಿ ರಾಸಾಯನಿಕ ಕ್ರಿಯೆಗಳಿಗೆ ಚಿನ್ನದ ನ್ಯಾನೊ ಕಣಗಳನ್ನು ವೇಗವರ್ಧಕವಾಗಿ ಬಳಸಲಾಗುತ್ತದೆ) ಎಂದು ಆ್ಯಂಡರ್ಸನ್ ಅಭಿಪ್ರಾಯ ಪಡುತ್ತಾರೆ. ಚಿನ್ನದ ಫೈಟೊಮೈನಿಂಗ್‌ನಿಂದಾಗಿ ಸಾಂಪ್ರದಾಯಿಕ ಚಿನ್ನದ ಗಣಿಗಾರಿಕೆ ಮೇಲೆ ಯಾವ ಪರಿಣಾಮವೂ ಇಲ್ಲ ಎಂದು ಸ್ಪಷ್ಟಪಡಿಸುತ್ತಾರೆ ಅವರು.

ವಿಜ್ಞಾನಿಗಳ ವಿರೋಧ: ಈ ಹೊಸ ವಿಧಾನಕ್ಕೆ ಕೆಲವು ವಿಜ್ಞಾನಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಪರಿಸರಕ್ಕೆ ತೀವ್ರವಾಗಿ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ. ಭೂಮಿಗೆ ಹಾಯಿಸುವ ನೀರಿನಲ್ಲಿ ಚಿನ್ನವನ್ನು ಕರಗಿಸಲು, ಸಾಂಪ್ರದಾಯಿಕ ಗಣಿಗಳಲ್ಲಿ ಬಳಸುವ ವಿಷಕಾರಿ ರಾಸಾಯನಿಕಗಳಾದ ಸೈಯನೈಡ್ ಮತ್ತು ಥಿಯೊಸೈಯನೇಟ್‌ಗಳನ್ನೇ ಬಳಸಬೇಕಾದೀತು. ಇದು ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಕೆಲವು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಸಾಸಿವೆ, ಸೂರ್ಯಕಾಂತಿ ಅಥವಾ ಹೊಗೆಸೊಪ್ಪಿನಂತಹ ದೊಡ್ಡ ಗಾತ್ರದ ಎಲೆಗಳನ್ನು ಹೊಂದಿರುವ ಹಾಗೂ ಅತಿ ಬೇಗ ಬೆಳೆಯುವ ಗಿಡಗಳನ್ನು ಚಿನ್ನದ ಅಂಶಗಳು ಹೆಚ್ಚು ಇರುವ ಪ್ರದೇಶದಲ್ಲಿ ನೆಡಲಾಗುತ್ತದೆ. ಗಿಡಗಳು ಬೆಳೆದ ನಂತರ ಚಿನ್ನವನ್ನು ಕರಗಿಸಬಲ್ಲ ರಾಸಾಯನಿಕವನ್ನು ಭೂಮಿಗೆ ಹಾಯಿಸಲಾಗುತ್ತದೆ.
  
ಚಿನ್ನದ ಕಣಗಳು ಬೆರೆತ ನೀರನ್ನು ಹೀರುವ ಗಿಡಗಳು, ತಮ್ಮ ಎಲೆಗಳಲ್ಲಿ, ಇತರ ಅಂಗಾಂಶಗಳಲ್ಲಿ ಚಿನ್ನವನ್ನು ಸಂಗ್ರಹಿಸುತ್ತವೆ. ನಂತರ ಆ ಗಿಡಗಳನ್ನು ಕಟಾವು ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT