ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿರಿಜನರ ಸಮಸ್ಯೆಗೆ ಧ್ವನಿಯಾದ ಗ್ರಾಮಸಭೆ

Last Updated 1 ಆಗಸ್ಟ್ 2013, 10:28 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ನಾಗರಹೊಳೆ ಅರಣ್ಯದಂಚಿನ ಗಿರಿಜನರು ಎದುರಿಸುತ್ತಿರುವ ಸಮಸ್ಯೆಗಳ ಸರಮಾಲೆ  ನಿಟ್ಟೂರು ಗ್ರಾಮಸಭೆಯಲ್ಲಿ ಮಾರ್ದನಿಸಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾಚಂಗಡ ಅಶೋಕ್ ಅವರ ಅಧ್ಯಕ್ಷತೆಯಲ್ಲಿ ಈಚೆಗೆ ಜರುಗಿದ ಸಭೆಯಲ್ಲಿ ಮೊದಲಿಗೆ ಮಾತನಾಡಿದ ಮಾಜಿ ಅಧ್ಯಕ್ಷ ಮೇಚಂಡ ಸೋಮಯ್ಯ ಅರಣ್ಯಹಕ್ಕು ಕಾಯ್ದೆ ಅಡಿಯಲ್ಲಿ ಗಿರಿಜನರಿಗೆ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು 2 ತಿಂಗಳ ಒಳಗಾಗಿ ಕಲ್ಪಿಸಕೊಡಬೇಕು. ಇಲ್ಲದಿದ್ದರೆ  ತಾಲ್ಲೂಕು ಸಮಾಜಕಲ್ಯಾಣ ಕಚೇರಿ ಎದುರು ಗಿರಿಜನರೊಡನೆ  ಸೇರಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಹೊರರಾಜ್ಯದಿಂದ ಬಂದ ಕಾರ್ಮಿಕರಿಗೆ ಬಿಪಿಎಲ್ ಕಾರ್ಡ್‌ನಿಂದ ಹಿಡಿದು ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಆದರೆ ಶತಮಾನಗಳಿಂದ ಕಾಡಿನಲ್ಲೇ ವಾಸಿಸುತ್ತಿರುವ ಗಿರಿಜನರಿಗೆ  ಕನಿಷ್ಠ ಸೌಲಭ್ಯಗಳು ದೊರಕದಿರುವುದು ಅಧಿಕಾರಿಗಳ ನಿರ್ಲಕ್ಷ್ಯ ತೋರಿಸುತ್ತಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ತಟ್ಟೆಕೆರೆ  ಗಿರಿಜನ ಹಾಡಿಯಲ್ಲಿ 30, ಕೋಳಂಗೇರಿ ಹಾಡಿಯಲ್ಲಿ 19 ಗಿರಿಜನರ ಕುಟುಂಬಗಳಿವೆ ಎಂದು ಹಿಂದೆ ದಾಖಲು ಮಾಡಲಾಗಿತ್ತು. ಆದರೆ ಇತ್ತೀಚಿಗೆ ಅರಣ್ಯ ಹಕ್ಕು  ಕಾಯ್ದೆಯ ಲಾಭ ಪಡೆಯಲು ಹಲವರು ಬಂದು ಗುಡಿಸಲು ನಿರ್ಮಿಸಿಕೊಂಡಿದ್ದಾರೆ. ಆ. 8ರ ಒಳಗೆ ಗ್ರಾಮ ಪಂಚಾಯಿತಿ, ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಸೇರಿ ಚರ್ಚಿಸಿ ಅರಣ್ಯ ಹಕ್ಕು ಕಾಯ್ದೆಯ ಫಲಾನುಭವಿಗಳನ್ನು ಗುರುತಿಸಬೇಕು ಎಂದು ಒತ್ತಾಯಿಸಿದರು.

ಬಾಳೆಲೆ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಚೆಕ್ಕೆರ ಅಯ್ಯಪ್ಪ ಮಾತನಾಡಿ, ಅರಣ್ಯದೊಳಗೆ ವಾಸಿಸುತ್ತಿರುವ ಗಿರಿಜನರನ್ನು ಬೇರೆ ಕಡೆಗೆ ಎತ್ತಂಗಡಿ ಮಾಡದೇ ಅರಣ್ಯದ ಅಂಚಿನಲ್ಲಿಯೇ ವಸತಿ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಹೇಳಿದರು.

ಇದಕ್ಕೆ ಉತ್ತರಿಸಿದ ಕಲ್ಲಳ್ಳ ವಲಯ ಅರಣ್ಯಾಧಿಕಾರಿ ಕಿರಣ್ ಸರ್ಕಾರದ ಪುನರ್ವಸತಿ ಕಾಯ್ದೆ ಅನ್ವಯ  ಗಿರಿಜನರಿಗೆ ಕನಿಷ್ಠ 3 ಎಕರೆ ಭೂಮಿ ನೀಡಬೇಕಾಗಿದೆ. ಆದರೆ ಇಷ್ಟೊಂದು ಭೂಮಿ ಅರಣ್ಯದ ಅಂಚಿನಲ್ಲಿ ಲಭಿಸುವುದಿಲ್ಲ ಎಂದು ಹೇಳಿದರು.

ಬಾಳೆಲೆ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಚಿಮ್ಮಣಮಾಡ ಕೃಷ್ಣ ಗಣಪತಿ ಮಾತನಾಡಿ ಬಾಳೆಲೆ ಸುತ್ತಮುತ್ತಲಿನ ಜನರಿಗೆ ಬಿತ್ತನೆ ಬೀಜದ ಕೊರತೆ ಕಾಡುತ್ತಿದೆ. ರೈತ ಸಂಪರ್ಕ ಕೇಂದ್ರ ಇದನ್ನು ಪೂರೈಸುವಲ್ಲಿ ವಿಫಲವಾಗಿದೆ. ಅತೀರ ಭತ್ತದ ಬೀಜವೂ ಕೂಡ ಲಭಿಸುತ್ತಿಲ್ಲ.

ರೈತ ಸ್ನೇಹಿ ಆಗಬೇಕಾಗಿದ್ದ  ಸಂಪರ್ಕ ಕೇಂದ್ರ ರೈತರಿಗೆ ಯಾವುದೇ ಸಹಕಾರ ನೀಡುತ್ತಿಲ್ಲ ಎಂದು ದೂರಿದರು. ತಾಂತ್ರಿಕ ತೊಂದರೆಯಿಂದ ಆರ್‌ಟಿಸಿ ಸಕಾಲಕ್ಕೆ ಸಿಗುತ್ತಿಲ್ಲ. ಇದನ್ನೆ ನೆಪವಾಗಿಸಿಕೊಂಡು ಆರ್‌ಟಿಸಿ ಇಲ್ಲದವರಿಗೆ ಬಿತ್ತನೆ ಬೀಜ ನೀಡದಿರುವುದು ಖಂಡನೀಯ ಎಂದರು. 

ಕಾಫಿ ಬೆಳೆಗಾರ ಅರಮಣಮಾಡ ಸತೀಶ್ ಮಾತನಾಡಿ ಗಿರಿಜನರಿಗೆ ಪ್ರತ್ಯೇಕ ವಿದ್ಯುತ್ ಸೌಲಭ್ಯ ನೀಡಬೇಕು.  ಈಗಾಗಲೇ ನೂತನ ಟ್ರಾನ್ಸ್‌ಫಾರ್ಮರ್ ಅಳವಡಿಸಿದ್ದರೂ ಅದನ್ನು ಕಾರ್ಯಗತಗೊಳಿಸಿಲ್ಲ. ಹೀಗಾಗಿ  ಗುಣಮಟ್ಟದ ವಿದ್ಯುತ್ ಕೊರತೆ ಕಾಡುತ್ತಿದೆ. ಬಾಳೆಲೆಗೆ  ಪ್ರತ್ಯೇಕ ವಿದ್ಯುತ್ ಸಂಗ್ರಹ ಕೇಂದ್ರವನ್ನು ಸ್ಥಾಪಿಸಬೇಕು ಎಂದು ಕೋರಿದರು.

ತಟ್ಟೆಕೆರೆ ನಿವಾಸಿ ಗೋಪಾಲಿ ಮಾತನಾಡಿ, ಅಂಗನವಾಡಿ ಮೂಲಕ ಗಿರಿಜನರಿಗೆ ನೀಡುತ್ತಿರುವ ಅಕ್ಕಿ, ಬೇಳೆ,  ಗೋಧಿ ಮೊದಲಾದ ವಸ್ತುಗಳೆಲ್ಲ ಅಂಗಡಿ ಸೇರುತ್ತಿವೆ. ಅವು ಗಿರಿಜನರಿಗೆ ತಲುಪುತ್ತಿಲ್ಲ. ಈ ಬಗ್ಗೆ ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.

ಮಳೆಗಾಲದಲ್ಲಿ  ಮೇಲ್ಛಾವಣಿಯ ಪ್ಲಾಸ್ಟಿಕ್ ಹರಿದು ಹೋಗಿ ಮನೆಗಳೆಲ್ಲ ಸೋರುತ್ತಿವೆ. ತಾಲ್ಲೂಕು ಪಂಚಾಯಿತಿ ಸದಸ್ಯರು ಹಿಂದೆ ಕೋಳಂಗೇರಿ ಹಾಡಿಗೆ ಬಂದು ಪ್ಲಾಸ್ಟಿಕ್ ನೀಡಲಾಗುವುದು ಎಂದು ಹೇಳಿ ಹೋದವರು ಮತ್ತೆ ತಿರುಗಿ ನೋಡಲಿಲ್ಲ ಎಂದು ಹಾಡಿಯ ಜನತೆ ಸದಸ್ಯ ಜೆ.ಕೆ. ರಾಮು ಅವರನ್ನು ತರಾಟೆ ತೆಗೆದುಕೊಂಡರು.

ಸಭೆಗೆ ಜಿಲ್ಲಾ ಪಂಚಾಯಿತಿ ಸದಸ್ಯೆ  ಶಕುಂತಲಾ ರವೀಂದ್ರ  ಸಭೆಗೆ ಗೈರು ಹಾಜರಾದ ಬಗ್ಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ  ಸದಸ್ಯರಿಬ್ಬರೂ ಮೀಸಲು ಕ್ಷೇತ್ರದವರೇ  ಆಗಿದ್ದರೂ ಗಿರಿಜನರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಆರೋಪಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಜೆ.ಕೆ. ರಾಮು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರಾಧಾ, ಸದಸ್ಯರಾದ ರಘು , ಪ್ರಮಿಳಾ, ಜೆ.ಕೆ. ಕಡ್ಡಿ, ಪಿಡಿಒ ಅಪ್ಪಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT