ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿರ್ ಸಿಂಹಗಳಿಗೆ ಮತ್ತೊಂದು ನೆಲೆ

Last Updated 18 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಗುಜರಾತ್ ಸರ್ಕಾರದ ಸ್ವಾರ್ಥ ಸಾಧನೆಯ ಹೋರಾಟಕ್ಕೆ ಸುಪ್ರೀಂಕೋರ್ಟ್ ಚೆನ್ನಾಗಿಯೇ ಬರೆ ಎಳೆದಿದೆ. ಗುಜರಾತ್ ರಾಜ್ಯದ ಗಿರ್ ಸಂರಕ್ಷಿತ ಅರಣ್ಯದಲ್ಲಿರುವ ಏಷ್ಯಾದ ವಿಶಿಷ್ಟ ಪ್ರಭೇದವಾದ ಸಿಂಹಗಳಿಗೆ ಮಧ್ಯಪ್ರದೇಶದ ಪಾಲ್ಪುರ್ ಕುನೊ ಅರಣ್ಯದಲ್ಲಿ ಎರಡನೇ ಆವಾಸ ಸ್ಥಾನ ಕಲ್ಪಿಸಬೇಕೆಂಬ ಸುಪ್ರೀಂಕೋರ್ಟ್ ತೀರ್ಪು, ಮೂಕಪ್ರಾಣಿಗಳ ಉಳಿವಿಗೆ  ವನ್ಯಜೀವಿ ಸಂರಕ್ಷಕರು ನಡೆಸಿದ ಹೋರಾಟಕ್ಕೆ ಸಂದ ಜಯ. ಅಳಿವಿನಂಚಿಗೆ ಸಾಗುತ್ತಿರುವ ಗಿರ್‌ಸಿಂಹಗಳಿಗೆ ಮತ್ತೊಂದು ನೆಲೆ ಕಲ್ಪಿಸದಿದ್ದರೆ ಈ ಸಂತತಿ ಮುಂದಿನ ಜನಾಂಗಕ್ಕೆ ಕಾಣಸಿಗದು ಎನ್ನುವ  ವಾದವನ್ನು ಮೊದಲು ಮುಂದಿಟ್ಟದ್ದೇ ವನ್ಯಜೀವಿ ಸಂರಕ್ಷಕರು.

ವಿಶಿಷ್ಟ ಸಿಂಹಗಳ ಈ ಅರಣ್ಯ ಪ್ರವಾಸೋದ್ಯಮ ದೃಷ್ಟಿಯಿಂದ ಅಲ್ಲಿನ ಸರ್ಕಾರಕ್ಕೆ ಲಾಭ ತರುತ್ತಿತ್ತಾದ್ದರಿಂದ ಈ ಹೊಳಹು ಗುಜರಾತ್‌ಸರ್ಕಾರಕ್ಕೆ ಪಥ್ಯವಾಗಲಿಲ್ಲ.  ಈ ವಿಶಿಷ್ಟ ಸಿಂಹಗಳು ನಮ್ಮ ರಾಜ್ಯದ `ಹೆಮ್ಮೆ' ಎಂದು ಹೇಳಿಕೊಂಡ ಗುಜರಾತ್ ಸರ್ಕಾರ, ಅವುಗಳಲ್ಲಿ ಕೆಲವನ್ನು ಮಧ್ಯಪ್ರದೇಶದ ಅರಣ್ಯಕ್ಕೆ ಸಾಗಿಸುವ ಚಿಂತನೆಗೆ ವಿರೋಧ ವ್ಯಕ್ತಪಡಿಸಿತಲ್ಲದೆ, ಸುಪ್ರೀಂಕೋರ್ಟ್‌ನಲ್ಲಿ ಅದನ್ನು ಪ್ರಶ್ನಿಸಿತು. ಹರಿಯುವ ನೀರಿಗಾಗಿ ನೆರೆ ರಾಜ್ಯಗಳ ಜೊತೆ ತಕರಾರು ಮಾಡುವ, ತುಂಡು ಭೂಮಿಗಾಗಿ ಹಕ್ಕು ಚಲಾಯಿಸಿ ಗಡಿಜಗಳ ಕಾಯುತ್ತಾ ರಾಜಕಾರಣ ಮಾಡುವ ಹೃದಯವೈಶಾಲ್ಯವಿಲ್ಲದ ಜನ, ಮೂಕಪ್ರಾಣಿಗಳ ವಿಷಯದಲ್ಲೂ ರಾಜಕೀಯ ಮಾಡುವುದೇ ವಿಚಿತ್ರ ಮನೋಭಾವ. ಅಭಯಾರಣ್ಯದ ಪ್ರಾಣಿಗಳು ರಾಷ್ಟ್ರೀಯ ಸ್ವತ್ತು. ಯಾವ ರಾಜ್ಯವೂ ಅವುಗಳ ಮೇಲೆ ಹಕ್ಕು ಸಾಧಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿರುವುದು ಅರ್ಥಪೂರ್ಣವಾಗಿದೆ.

ಗಿರ್ ಅರಣ್ಯದಲ್ಲೆಗ 400 ಸಿಂಹಗಳು ಮಾತ್ರ ಇವೆ. ಅಂತರರಾಷ್ಟ್ರೀಯ ವನ್ಯಸಂರಕ್ಷಣಾ ಸಂಘದ ಅಂದಾಜಿನ ಪ್ರಕಾರ ಇವು ಅಳಿವಿನಂಚಿನಲ್ಲಿವೆ. ಆಫ್ರಿಕಾ ಮತ್ತು ಗ್ರೀಸ್‌ನ ಅರಣ್ಯದಲ್ಲಿದ್ದ ಈ ಸಿಂಹಸಂತತಿ ಅವನತಿಯಾಗಿವೆ. ಈಗ ಇವು ಕಾಣಸಿಗುವುದು ಗಿರ್‌ನಲ್ಲಿ ಮಾತ್ರ.ಒಂದೇ ಕಡೆ ಇರುವ ಈ ಸಿಂಹಗಳಿಗೆ ಎಂದಿದ್ದರೂ ಆಪತ್ತು ತಪ್ಪಿದ್ದಲ್ಲ. ಸಾಂಕ್ರಾಮಿಕ ರೋಗ ಹರಡಿದರೆ, ಕಾಡ್ಗಿಚ್ಚು ವ್ಯಾಪಿಸಿದರೆ ಅಪೂರ್ವ ಸಿಂಹಗಳು ಅಪಾಯಕ್ಕೆ ಸಿಲುಕುತ್ತವೆ. ಅಲ್ಲದೆ ಒಂದೇ ಕಡೆ ಎಲ್ಲ ಸಿಂಹಗಳೂ ಇರುವುದು ಕೂಡ ಪ್ರಾಣಿ ಜೀವನದ ರೂಢಿಗತ ಚಲನವಲನಗಳಿಗೆ ಅಡ್ಡಿಯಾಗಬಹುದು.ಇಂತಹ ಸಮಸ್ಯೆಯನ್ನು ಪರಿಹರಿಸುವುದು ಸೇರಿದಂತೆ ದೇಶದ ಬೇರೆ ಬೇರೆ ಕಡೆಯೂ ಈ ಸಿಂಹಸಂತತಿ ವೃದ್ಧಿಗೊಳ್ಳುವುದು ಅಪೇಕ್ಷಣಿಯವಾಗಿದೆ.

ಈ ಕಾರಣದಿಂದಲೇ ರಾಷ್ಟ್ರೀಯ ವನ್ಯಜೀವಿ ಮಂಡಳಿ, ಏಷ್ಯಾದ ವಿಶಿಷ್ಟ ಪ್ರಭೇದವಾದ ಈ ಸಿಂಹಗಳಿಗೆ ಮತ್ತೊಂದು ನೆಲೆ ಬೇಕೆಂದು ಪ್ರಬಲ ವಾದ ಮಂಡಿಸಿತ್ತು. ಆರುತಿಂಗಳಲ್ಲಿ ಮಧ್ಯಪ್ರದೇಶದ ಪಾಲ್ಪುರ್ ಕುನೊ ಅರಣ್ಯಕ್ಕೆ ಕೆಲವು ಸಿಂಹಗಳನ್ನು ಸ್ಥಳಾಂತರಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಹೊಸ ವಾತಾವರಣಕ್ಕೆ ಸಿಂಹಗಳು ಹೊಂದಿಕೊಳ್ಳುವುದಿಲ್ಲ. ಅಲ್ಲದೆ ಮಧ್ಯಪ್ರದೇಶದ ಅರಣ್ಯ ಸಿಂಹಗಳ ವಾಸಕ್ಕೆ ಯೋಗ್ಯ ವಾತಾವರಣ ಹೊಂದಿಲ್ಲ ಎಂಬ ಗುಜರಾತ್ ಸರ್ಕಾರದ ಮೊಂಡುವಾದವನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿರುವುದು ಸ್ವಾಗತಾರ್ಹ. ಈ ತೀರ್ಪಿನ ವಿರುದ್ಧ ಜುನಾಗಡ ಬಂದ್ ಮಾಡಿ ಪ್ರತಿಭಟಿಸುತ್ತಿರುವುದರ ಹಿಂದೆ ಸಿಂಹಗಳ ಬಗ್ಗೆ ಕಾಳಜಿಗಿಂತ ಪ್ರವಾಸೋದ್ಯಮಕ್ಕೆ ಎಲ್ಲಿ ಪೆಟ್ಟು ಬೀಳುತ್ತದೋ ಎನ್ನುವ ಆತಂಕವೇ ಹೆಚ್ಚಾಗಿರುವಂತೆ ಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT