ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿಲಾನಿ ಖುದ್ದು ಹಾಜರಾತಿಗೆ ಸುಪ್ರೀಂಕೋರ್ಟ್ ಆದೇಶ

Last Updated 10 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ): ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ 13ರಂದು ನ್ಯಾಯಾಲಯಕ್ಕೆ ಹಾಜರಾಗಬೇಕೆಂಬ ಆದೇಶದ ವಿರುದ್ಧ ಪ್ರಧಾನಿ ಯುಸೂಫ್ ರಜಾ ಗಿಲಾನಿ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರಿಂಕೋರ್ಟ್ ಶುಕ್ರವಾರ ತಳ್ಳಿಹಾಕಿದ್ದು, ಸೋಮವಾರ ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ಆದೇಶಿಸಿದೆ. ಗಿಲಾನಿ ಅವರಿಗೆ ಇದರಿಂದ ಮತ್ತೊಂದು ಹಿನ್ನಡೆಯಾದಂತಾಗಿದೆ.

ಕಾನೂನು ಕ್ರಮಗಳ ವಿಚಾರದಲ್ಲಿ ಅಧ್ಯಕ್ಷರಿಗೆ ಸಂಪೂರ್ಣ ವಿನಾಯ್ತಿ ಇರುವುದರಿಂದ ದೇಶ ಅಥವಾ ವಿದೇಶಗಳಲ್ಲಿ ಅವರ ವಿರುದ್ಧದ ಪ್ರಕರಣಗಳ ಮರು ತನಿಖೆ ಅಸಾಧ್ಯ. ಹೀಗಾಗಿ ಈ ಪ್ರಕರಣದಲ್ಲಿ ಪ್ರಧಾನಿ ಯಾವುದೇ ತಪ್ಪು ಎಸೆಗಿಲ್ಲ ಎಂದು ಅವರ ವಕೀಲ ಐತಜಾಜ್ ಎಹಸಾನ್ ವಾದಿಸಿದರು. ಆದರೆ,  ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಚೌಧರಿ ನೇತೃತ್ವದ ಎಂಟು ನ್ಯಾಯಮೂರ್ತಿಗಳ ಪೀಠ ಪ್ರಧಾನಿಯ ಮೇಲ್ಮನವಿಯನ್ನು ತಳ್ಳಿಹಾಕಿತು.
ಪ್ರಧಾನಿ ಈ ವಿಷಯದಲ್ಲಿ ಕಾನೂನು ಸಲಹೆಗಾರರ ಸಲಹೆಯಂತೆ ನಡೆದುಕೊಂಡಿದ್ದಾರೆ ಎಂಬ ವಕೀಲರ ವಾದವನ್ನು ಒಪ್ಪದ ನ್ಯಾಯಮೂರ್ತಿಗಳು, ಪ್ರಧಾನಿಗೆ ನ್ಯಾಯಾಲಯದ ಆದೇಶದಂತೆ ನಡೆದುಕೊಳ್ಳುವಂತೆ ತಿಳಿಸಿ ಎಂದು ಖಾರವಾಗಿ ನುಡಿದರು.

ಇದೇ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಸುಮಾರು ಎಂಟು ಸಾವಿರ ಜನರ ವಿರುದ್ಧ ಕೋರ್ಟ್ ಯಾವುದೇ ಕ್ರಮ ಜರುಗಿಸಿಲ್ಲ ಎಂದು ತಜ್ಞರು ಅಭಿಪ್ರಾಯಪಟಿದ್ದಾರೆ.

ಇಜಾಜ್ ಹೇಳಿಕೆ: ಮೆಮೊಗೇಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಡನ್‌ನಿಂದ ವಿಡಿಯೋ ಮೂಲಕ ಹೇಳಿಕೆ ನೀಡಲು ಉದ್ಯಮಿ ಮನ್ಸೂರ್ ಇಜಾಜ್ ಅವರಿಗೆ ಅವಕಾಶ ಮಾಡಿಕೊಡಲಾಗಿದೆ.

ನ್ಯಾಯಾಂಗ ಆಯೋಗದ ಮುಂದೆ ಹಾಜರಾಗಲು ಇಜಾಜ್ ಪದೇ ಪದೇ ವಿಫಲರಾಗುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಆಯೋಗವು ಈ ಆದೇಶ ನೀಡಿದೆ.ಇದೇ 22 ರಂದು ಇಜಾಜ್ ಅವರಿಂದ ವಿಡಿಯೋ ಮೂಲಕ ಹೇಳಿಕೆ ಪಡೆಯಲಾಗುತ್ತದೆ.
 

ಹಾಜರಾಗುತ್ತಾರೆ...

ನ್ಯಾಯಾಲಯದ ಆದೇಶದ ನಂತರ ಕೋರ್ಟ್ ಹೊರ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಹಸಾನ್, ಫೆಬ್ರುವರಿ 13ರಂದು ಪ್ರಧಾನಿ ಖುದ್ದಾಗಿ ಸುಪ್ರೀಂಕೋರ್ಟ್‌ಗೆ ಹಾಜರಾಗಲಿದ್ದಾರೆ ಎಂದು ತಿಳಿಸಿದರು.

ಪ್ರಧಾನಿಯನ್ನು ಸಂಪರ್ಕಿಸಲು ಇನ್ನೂ 10-15 ದಿನಗಳ ಕಾಲಾವಕಾಶ ಕೋರಿದ ವಕೀಲರ ಮನವಿಯನ್ನು ತಳ್ಳಿಹಾಕಿದ ನ್ಯಾಯಪೀಠ, ಹತ್ತು ನಿಮಿಷಗಳ ಕಾಲಾವಕಾಶ ಮಾತ್ರ ನೀಡುವುದಾಗಿ ಹೇಳಿತು. ಅದಾದ ಕೆಲವೇ ಕ್ಷಣಗಳಲ್ಲಿ ಗಿಲಾನಿ ಮೇಲ್ಮನವಿ ತಿರಸ್ಕೃತವಾದ ಆದೇಶ ಹೊರಬಿತ್ತು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೊದಲು ಜನವರಿ 19ರಂದು ಅವರು ಖುದ್ದಾಗಿ ಸುಪ್ರೀಂಕೋರ್ಟ್ ಎದುರು ಹಾಜರಾಗಿದ್ದರು.    

ಒಂದು ವೇಳೆ ಗಿಲಾನಿ ವಿರುದ್ಧದ ನ್ಯಾಯಾಂಗ ನಿಂದನೆ ಆರೋಪ ಸಾಬೀತಾದರೆ ಅವರು 6 ತಿಂಗಳ ಸೆರೆವಾಸದ ಜೊತೆಗೆ 5 ವರ್ಷಗಳ ಕಾಲ ಸಾರ್ವಜನಿಕ ಸೇವೆಯಿಂದ ಅನರ್ಹರಾಗುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT