ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಾಚಾರ್ ಎಂಬ ದಡ್ಡ ಮೇಷ್ಟ್ರು!

Last Updated 7 ಜುಲೈ 2012, 19:30 IST
ಅಕ್ಷರ ಗಾತ್ರ

ಒಂದಾನೊಂದು ಊರಿನಲ್ಲಿ ಬಂಡ್ಯಾಚಾರ್ ಎಂಬ ಒಬ್ಬ ಒಳ್ಳೆಯ ಗೃಹಸ್ಥ. ಅವರಿಗೊಬ್ಬ ಮಗ. ಅವನ ಹೆಸರು ಗುಂಡಾಚಾರ್ ಅಂತ. ಅವನನ್ನು ಎಲ್ಲರೂ ಪ್ರೀತಿಯಿಂದ ಗುಂಡ, ಗುಂಡ್ಯಾ, ಗುಂಡು, ಗುಂಡಪ್ಪ ಅಂತ ಕರೆಯುತ್ತಿದ್ದರು.

ಎಲ್ಲರ ಪ್ರೀತಿಯನ್ನು ದುರುಪಯೋಗ ಮಾಡಿಕೊಂಡ ಅವನು ಶಾಲೆಗೇ ಸರಿಯಾಗಿ ಹೋಗುತ್ತಿರಲಿಲ್ಲ. ಮೇಷ್ಟ್ರು ಹೇಳುತ್ತಿದ್ದರು, `ಅವನು ಶಾಲೆಗೆ ಬರೋದಾ! ಹುಣ್ಣಮಿ ಅಮಾಸಿ ಕಲೆತ ದಿನ ಶಾಲೆಗೆ ಬರ್ತಾನೆ. ಮನಸುಖರಾಯ....~ ಅಂತ. ಓದು ಬರಹ ಒಂದೂ ಇಲ್ಲದ ಮಗನನ್ನು ಅಪ್ಪ ಒಂದು ದಿನ ತರಾಟೆಗೆ ತೆಗೆದುಕೊಂಡರು.

`ಸರಿಯಾಗಿ ಶಾಲೆಗೆ ಹೋಗದಿದ್ದರೆ ನಿನ್ನ ಶಾಲೆ ಬಿಡಿಸಿ ದನಕಾಯಲು ಹಚ್ಚುತ್ತೇನೆ~ ಎಂದರು. ಮಗನೇನೂ ದಾರಿಗೆ ಬರಲಿಲ್ಲ. ಕಾಗುಣಿತ ಗೊತ್ತಿಲ್ಲ. ಒಂದೂ ಎರಡು ಬರಲ್ಲ. ಕೂಳು ದಂಡ. ಬಟ್ಟೆಬರೆ ದಂಡ. ಸರಿ ಶಾಲೆ ಬಿಡಿಸಿದರು. ಮನೆಯಿಂದ ಹೊರದಬ್ಬಿದರು. ತಾಯಿ ಒಂದೆರಡು ದಿನ ಅತ್ತರು. ದುಃಖಿಸಿದರು. `ಹಣೆಬರಹಕ್ಕೆ ಯಾರು ಹೊಣೆ~ ಅಂತ ಸುಮ್ಮನಾಗಬೇಕಾಯಿತು.

ಎಳೆಗರು ಎತ್ತಾಗುವ ಹಾಗೆ ಗುಂಡ ಯುವಕನಾಗತೊಡಗಿದ್ದ. ಕಾಲೆಳೆದ ಕಡೆ ಹೋದವನು ಪಕ್ಕದೂರಿಗೆ ಹೋದ. ಅಲ್ಲೊಂದು ಶಾಲೆ. ಮಕ್ಕಳೆಲ್ಲ ಮಗ್ಗಿ ಉರು ಹೊಡೆಯುತ್ತಿದ್ದರು. ಗುಂಪಿನಲ್ಲಿ ಒಬ್ಬ, `ಏಳಾ ಮೂಲೆಗಿ ಇಪ್ಪತ್ತು ನಾಲ್ಕು~ ಅಂದ. ಹೆಡ್ಮೇಸ್ಟ್ರು ಇದ್ದು `ಯಾವೊನಲೆ ಅವನು ಇಪ್ಪತ್ನಾಲ್ಕು ಅಂದದ್ದು~ ಅಂತ ಗದರಿಕೊಂಡರು. `

ತಪ್ಪಾಯಿತು ಗುರುಗಳೇ~ ಇಪ್ಪತ್ತೊಂದು~ ಅಂದ ಅವನು. `ಸರಿ ಮುಂದೆ ಹೇಳು....~ ಅಪ್ಪಣೆ ಕೊಡಿಸಿದರು. ಗುಂಡ ತರಗತಿಯ ಬಾಗಿಲಿಗೆ ಬಂದು ನಿಂತಿದ್ದ.
`ಬುದ್ಧೀ ನಂಗೆ ಏನಾದರೂ ಕೆಲಸ ಕೊಡ್ತೀರಾ~ `ಮೇಷ್ಟ್ರು ಕೆಲಸ ಮಾಡ್ತಿ ಏನೋ. ಶಾಲೆ ಗೀಲೆ ಅಂತ ಹೋಗಿದ್ಯಾ. `ಹ್ಞೂ ಬುದ್ಧಿ~. `ಹಾಗಿದ್ದರೆ ನಾಳೆಯಿಂದ ಕೆಲಸಕ್ಕೆ ಬಾ~ ಎಂದರು. `ನಮಗೆ ಮತಿ ಇಲ್ಲ. ನಿನಗೆ ಗತಿಯಿಲ್ಲ~ ಎಂಬ ಆಧಾರದ ಮೇಲೆ ಅವರು ಅವನನ್ನು ಕೆಲಸಕ್ಕೆ ತೆಗೆದುಕೊಂಡಂತಿತ್ತು.

ಗುಂಡ ಈಗ ಶಾಲಾಮಾಸ್ತರು. ಅವನಿಗೆ ಓದುಬರಹ ಬಂದಿದ್ದರೆ ತಾನೆ ಮಕ್ಕಳಿಗೆ ಏನಾದರೂ ಹೇಳಿಕೊಡಲು. `ನಿಮ್ಮ ಹೆಸರು ಹೇಳಿ~ ಅಂತ ಎಲ್ಲರ ಹೆಸರು ಹೇಳಿಸುತ್ತಿದ್ದ. `ಎಷ್ಟು ಹುಡುಗಿಯರಿದ್ದೀರಿ. ಎಣಿಸಿರಿ~ ಎನ್ನುತ್ತಿದ್ದ. `ಹುಡುಗರು, ಹುಡುಗಿಯರು, ನಿಶ್ಶಬ್ಧ....~ ಹೀಗೆ ಕಾಲಕಳೆಯುತ್ತಿದ್ದನೆ ಹೊರತು ಪಾಠ ಇಲ್ಲ. ಪ್ರವಚನ ಇಲ್ಲ.

ಒಂದು ದಿನ ಒಬ್ಬ ಮುದುಕಿ ಬಂದೇ ಬಂದಳು. ಕೈಯ್ಯಲೊಂದು ಕಾಗದ. ಬಹುಶಃ ಮಗನೂ ಮೊಮ್ಮಗನೊ ಕಾಗದ ಬರೆದಿರಬೇಕು. ಅವಳಿಗೆ ಓದು ಬಾರದು, ಮಾಸ್ತರಿಂದ ಓದಿಸಿ ತಿಳಿಯಲು ಬಂದಿದ್ದಳು. ಮಾಸ್ತರಿಗೂ ಓದು ಬಾರದು! ಕಾಗದ ಅಡ್ಡಹಿಡಿದರು. ಉದ್ದ ಹಿಡಿದರು. ಆಚೆ ಈಚೆ ಹೊರಳಿಸಿದರು.

ಏನು ಮಾಡಿದರೂ ಓದಲೇಬಾರದು. ಕೊನೆಗೆ ಮಾಸ್ತರಿಗೆ ಅಳು ಬಂದುಬಿಟ್ಟಿತು. `ಹೋ~ ಎಂದು ಅಳಲು ಶುರು ಮಾಡಿದರು. ತನ್ನ ಮಗನಿಗೆ ಏನೊ ಆಗಿದೆ ಎಂದು ಮುದುಕಿಯೂ ಅಳತೊಡಗಿತು. ಮಕ್ಕಳೂ ಅಳತೊಡಗಿದರು. ಎಲ್ಲರ ರೋದನ ಮುಗಿಲು ಮುಟ್ಟಲು ಗಾಬರಿಬಿದ್ದ ಹೆಡ್ಮಾಸ್ಟರು ಅಲ್ಲಿಗೆ ಬಂದು ವಿಷಯ ಏನೆಂದು ವಿಚಾರಿಸಿದರು.

ಮಾಸ್ತರಿಗೆ ಓದಲು ಬರುವುದಿಲ್ಲ ಎಂಬ ಸತ್ಯ ಬಯಲಾದಾಗ ಕೆಂಡಾಮಂಡಲವಾದ ಹೆಡ್ಮಾಸ್ಟರು ಗುಂಡನನ್ನು ಒದ್ದು ಹೊರಹಾಕಿದರು.ಗತಿಗೆಟ್ಟ ಗುಂಡ ಅಲ್ಲಿ ಇಲ್ಲಿ ಅಲೆದಾಡಿ ಕೊನೆಗೊಂದು ದೇವಸ್ಥಾನಕ್ಕೆ ಬಂದು ತಲುಪಿದ. `ದೆಸೆಗೆಟ್ಟವರಿಗೆ ದೇವರೇ ದಿಕ್ಕು~ ಎಂಬ ಮಾತು ಸುಳ್ಳಲ್ಲ. ಅಲ್ಲಿ ಭಕ್ತರು ಇತ್ತ ಪ್ರಸಾದದಿಂದ ಹೊಟ್ಟೆ ಹೊರೆದುಕೊಳ್ಳತೊಡಗಿದ.

ಒಂದು ದಿನ ಇವನನ್ನು `ಯಾರೊ ಸ್ವಾಮೇರು~ ಎಂದು ತಪ್ಪಾಗಿ ತಿಳಿದ ಅಗಸನೊಬ್ಬ ತನ್ನ ಕತ್ತೆ ಕಳೆದಿದೆ ಅಂತ ಬಂದು ಹೇಳಿಕೊಂಡ. ಒಂದು ಡಜನ್ ಬಾಳೆಹಣ್ಣು. ಹತ್ತು ರೂಪಾಯಿ ದಕ್ಷಿಣೆ ಎಲೆ ಎಡಿಕೆ ಬೇಡಿದ ಗುಂಡ. ಏನೊ ಬೆರಳೆಣಿಸಿ ಮಣ ಮಣ ಎಂದು ನಾಳೆ ಬಾ ನಿನ್ನ ಕತ್ತೆ ಸಿಗುತ್ತೆ ಅಂದ. ಅಂತೆಅಲ್ಲೆಲ್ಲೊ ಹೋಗಿ ಒಂದು ಕತ್ತೆ ಹಿಡಿದು ತಂದ, ಮರುದಿನ ಬಂದ ಅಗಸ ಗುಂಡನನ್ನು ಕೊಂಡಾಡಿದ್ದೇ ಕೊಂಡಾಡಿದ್ದು.
 
ಈ ಕಳ್ಳಾಟ ಬಹಳ ದಿನ ನಡೆಯಲಿಲ್ಲ. ಬೇಸತ್ತ ಗುಂಡ ಮನೆಯ ದಾರಿ ಹಿಡಿದ. ಅವನಿಗೆ ಅರ್ಥವಾಯಿತು: ಓದು ಬರಹವಿದ್ದರೆ ಮಾತ್ರ ಮನುಷ್ಯ ಪರಿಪೂರ್ಣ. ಓದಿಲ್ಲದಿದ್ದರೆ ಅವನ ಮುಖ ಹಾಳೂರ ಹದ್ದಿನಂತೆ. ರಾಜನಿಗೆ ಅವನ ರಾಜ್ಯದಲ್ಲಿ ಮಾತ್ರ ಮರ್ಯಾದೆ. ಓದು ಬಲ್ಲವನಿಗೆ ಎಲ್ಲೆಡೆ ಮಾನಮರ್ಯಾದೆ ಅಂತ ತಿಳಿದು ವಯಸ್ಕರ ವಿದ್ಯಾಭ್ಯಾಸ ಶಾಲೆಗೆ ಗುಂಡ ಸೇರಿಕೊಂಡ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT