ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಿ-ಹೊಂಡಗಳ ದಾರಿಯಲ್ಲಿ ಸಂಚಾರ ದುಸ್ತರ

ಲಗ್ಗೆರೆ: ಮಳೆ ಬಂದರೆ ಕೆಸರು ಗದ್ದೆಗಳಾಗುವ ರಸ್ತೆಗಳು...
Last Updated 1 ಸೆಪ್ಟೆಂಬರ್ 2013, 19:51 IST
ಅಕ್ಷರ ಗಾತ್ರ

ಬೆಂಗಳೂರು: ಹಳ್ಳ ಬಿದ್ದ ರಸ್ತೆಗಳಲ್ಲಿ ನಡೆಯಲು ಪರದಾಡುವ ಜನ. ರಸ್ತೆಯ ಗುಂಡಿಗಳನ್ನು ತಪ್ಪಿಸಿ ವಾಹನ ಚಲಾಯಿಸಲು ಹರಸಾಹಸ ಪಡುವ ಬೈಕ್ ಸವಾರರು. ಮಳೆ ಬಂದರೆ ಹೊಂಡಗಳಾಗುವ ರಸ್ತೆಗಳು...

ನಗರದ ರಾಜ್‌ಕುಮಾರ್ ಸಮಾಧಿ ಸಮೀಪದ ಲಗ್ಗೆರೆ, ನರಸಿಂಹಸ್ವಾಮಿ ಬಡಾವಣೆ, ಸ್ವತಂತ್ರಯೋಧರ ನಗರ, ರಾಜೀವ್‌ಗಾಂಧಿನಗರದ ರಸ್ತೆಗಳ ಚಿತ್ರಣವಿದು.

ವಾರ್ಡ್ ಸಂಖ್ಯೆ 69ರ ಈ ಬಡಾವಣೆಗಳ ರಸ್ತೆಗಳು ನಡೆದಾಡಲೂ ಸಾಧ್ಯವಾಗದಷ್ಟು ಹಾಳಾಗಿವೆ. ರಸ್ತೆಗಳಲ್ಲಿ ದೊಡ್ಡ ಗುಂಡಿಗಳು ಬಿದ್ದಿದ್ದು, ಇದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.

ಸ್ವಲ್ಪ ಪ್ರಮಾಣದಲ್ಲಿ ಮಳೆ ಬಿದ್ದರೂ ಇಲ್ಲಿನ ರಸ್ತೆಗಳ ಗುಂಡಿಗಳಲ್ಲಿ ನೀರು ತುಂಬಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗುತ್ತದೆ. ಮೊದಲೇ ಗುಂಡಿ ಬಿದ್ದು ಹಾಳಾಗಿದ್ದ ರಸ್ತೆಗಳಲ್ಲಿ ಜಲಮಂಡಲಿಯು ಒಳಚರಂಡಿ ಹಾಗೂ ನೀರಿನ ಪೈಪ್‌ಲೈನ್ ಅಳವಡಿಸಲು ಅಗೆದಿದ್ದ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚಿಲ್ಲ. ಇದರಿಂದ ಇಲ್ಲಿನ ರಸ್ತೆ ಸಮಸ್ಯೆ ಇನ್ನಷ್ಟು ಹೆಚ್ಚಾಗಿದೆ. ನಂದಿನಿ ಬಡಾವಣೆಯಿಂದ ಲಗ್ಗೆರೆ ಕಡೆಗೆ ಹೋಗುವ ರಸ್ತೆಯಂತೂ ಕೊರಕಲು ಹಾಗೂ ಹಳ್ಳಗಳಿಂದ ಕೂಡಿದೆ.

`ಎರಡು ವರ್ಷದ ಹಿಂದೆ ರಸ್ತೆಗೆ ಡಾಂಬರು ಹಾಕಲಾಗಿತ್ತು. ಆ ನಂತರ ಈವರೆಗೂ ರಸ್ತೆಯ ನಿರ್ವಹಣೆಯಾಗಿಲ್ಲ. ಈ ಮಧ್ಯೆ ಜಲಮಂಡಳಿಯವರು ಪೈಪ್‌ಲೈನ್ ಅಳವಡಿಕೆಗಾಗಿ ಎರಡು ಬಾರಿ ರಸ್ತೆ ಅಗೆದಿದ್ದಾರೆ. ಇದರಿಂದ ರಸ್ತೆಗಳ ತುಂಬೆಲ್ಲಾ ಮಣ್ಣು ತುಂಬಿದೆ. ಮಳೆ ಬಂದರೆ ರಸ್ತೆಗಳು ಕೆಸರು ಗದ್ದೆಯಾಗುತ್ತವೆ. ರಸ್ತೆಯಲ್ಲಿ ವಾಹನ ಸವಾರಿ ಮಾಡುವುದಿರಲಿ, ನಡೆದುಕೊಂಡು ಹೋಗುವುದೂ ದುಸ್ಸರವಾಗಿದೆ' ಎಂದು ನರಸಿಂಹಸ್ವಾಮಿ ಬಡಾವಣೆಯ ನಿವಾಸಿ ವೀರೇಶ್ ಅಸಮಾಧಾನ ವ್ಯಕ್ತಪಡಿಸಿದರು.

`ಲಗ್ಗೆರೆಯಿಂದ ನಂದಿನಿ ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗುಂಡಿಗಳ ಮಧ್ಯೆ ರಸ್ತೆಯನ್ನು ಹುಡುಕಬೇಕಾದ ಪರಿಸ್ಥಿತಿ ಇದೆ. ರಸ್ತೆಗಳನ್ನು ಅಭಿವೃದ್ಧಿ ಪಡಿಸುವಂತೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಸ್ಥಳೀಯ ಪಾಲಿಕೆ ಸದಸ್ಯರಿಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ಪಾಲಿಕೆಯ ಹಿರಿಯ ಅಧಿಕಾರಿಗಳು ಗಮನ ಹರಿಸಿ ರಸ್ತೆ ಅಭಿವೃದ್ಧಿ ಪಡಿಸಬೇಕು' ಎಂದು ಅವರು ಒತ್ತಾಯಿಸಿದರು.

`ಒಳಚರಂಡಿ ಹಾಗೂ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆಗೆ ಜಲಮಂಡಲಿ ರಸ್ತೆಗಳನ್ನು ಅಗೆದಿದ್ದು, ಗುಂಡಿಗಳನ್ನು ಮುಚ್ಚಿಲ್ಲ. ಮಕ್ಕಳು ಹಾಗೂ ವಯಸ್ಸಾದವರು ಈ ರಸ್ತೆಗಳಲ್ಲಿ ನಡೆದಾಡುವುದು ಕಷ್ಟ. ಈ ಮಧ್ಯೆ ಕೆಲವರು ರಾತ್ರೋರಾತ್ರಿ ಟೆಂಪೊಗಳಲ್ಲಿ ಕಟ್ಟಡದ ಅವಶೇಷಗಳನ್ನು ತಂದು ರಸ್ತೆಯಲ್ಲಿ ಸುರಿಯುತ್ತಿದ್ದಾರೆ. ಇದರಿಂದ ರಸ್ತೆಯಲ್ಲಿ ವಾಹನಗಳು ಸಂಚರಿಸುವುದು ಕಷ್ಟವಾಗಿದೆ' ಎಂದು ಸ್ಥಳೀಯರಾದ ರಾಜಗೋಪಾಲ್ ಆಗ್ರಹಿಸಿದರು.

`ಕುರುಬರಹಳ್ಳಿಯಿಂದ ಲಗ್ಗೆರೆಗೆ ಸಂಪರ್ಕ ಕಲ್ಪಿಸುವ ಸಂಪರ್ಕ ರಸ್ತೆಗೆ ಕೆಲವೇ ತಿಂಗಳ ಹಿಂದಷ್ಟೇ ಡಾಂಬರ್ ಹಾಕಲಾಗಿತ್ತು. ಆದರೆ, ಈಗ ರಸ್ತೆ ಅಲ್ಲಲ್ಲಿ ಗುಂಡಿ ಬಿದ್ದಿದೆ. ಒಳಚರಂಡಿ ಪೈಪ್‌ಗಳನ್ನು ಅಳವಡಿಸಲು ಜಲಮಂಡಲಿಯು ನಾಲ್ಕು ತಿಂಗಳ ಹಿಂದೆ ರಸ್ತೆಗಳನ್ನು ಅಗೆದಿತ್ತು. ಪೈಪ್‌ಗಳ ಅಳವಡಿಕೆಯ ನಂತರ ಅಗೆದ ಗುಂಡಿಗಳನ್ನು ಸರಿಯಾಗಿ ಮುಚ್ಚಿರಲಿಲ್ಲ. ಆದರೂ ಅದರ ಮೇಲೆಯೇ ಡಾಂಬರ್ ಹಾಕಿದ್ದರಿಂದ ರಸ್ತೆ ಗುಂಡಿ ಬಿದ್ದಿದೆ' ಎಂದು ಸ್ವತಂತ್ರಯೋಧರ ನಗರದ ನಿವಾಸಿ ದೇವರಾಜ್ ದೂರಿದರು.

`ಬಡಾವಣೆಯ ಇತರೆ ರಸ್ತೆಗಳಲ್ಲೂ ಒಳಚರಂಡಿಯ ಪೈಪ್‌ಲೈನ್ ಅಳವಡಿಕೆಗಾಗಿ ರಸ್ತೆಗಳನ್ನು ಅಗೆದಿರುವ ಜಲಮಂಡಲಿಯು ಕಾಮಗಾರಿ ಮುಗಿದ ನಂತರ ಗುಂಡಿಗಳನ್ನು ಸರಿಯಾಗಿ ಮುಚ್ಚಿಲ್ಲ. ಇದರಿಂದ ರಸ್ತೆಗಳಲ್ಲಿ ಓಡಾಡಲು ತೀವ್ರ ತೊಂದರೆಯಾಗುತ್ತಿದೆ. ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ತಾತ್ಕಾಲಿಕವಾಗಿಯಾದರೂ ಮುಚ್ಚಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು' ಎಂದು ಅವರು ಒತ್ತಾಯಿಸಿದರು. ಅಗೆದಿರುವ ರಸ್ತೆಯ ಭಾಗ ಮುಚ್ಚುವುದು ಮಾತ್ರ ತಮ್ಮ ಕೆಲಸ, ಡಾಂಬರ್ ಹಾಕುವುದು ಬಿಬಿಎಂಪಿ ಜವಾಬ್ದಾರಿ ಎಂದು ಜಲಮಂಡಳಿ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಬಿಬಿಎಂಪಿ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ಕರೆ ಸ್ವೀಕರಿಸಲಿಲ್ಲ.

ಶೀಘ್ರವೇ ದುರಸ್ತಿಗೆ ಕ್ರಮ
`ಜಲಮಂಡಳಿ ಪೈಪ್‌ಲೈನ್ ಅಳವಡಿಸುವ ಕಾರ್ಯಕ್ಕಾಗಿ ರಸ್ತೆಗಳನ್ನು ಅಗೆದಿದ್ದರಿಂದ ಸಮಸ್ಯೆಯಾಗಿದೆ. ವಾರ್ಡ್‌ನ ಹಾಳಾದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ರೂ 3 ಕೋಟಿ ಅಂದಾಜು ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದ್ದು, ಕಾಮಗಾರಿ ಆದೇಶವೂ ಆಗಿದೆ. ಆದಷ್ಟು ಬೇಗ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು'
-ಲಕ್ಷ್ಮೀಕಾಂತ ರೆಡ್ಡಿ, ಬಿಬಿಎಂಪಿ ಸದಸ್ಯ, ವಾರ್ಡ್ ಸಂಖ್ಯೆ 69,ಲಗ್ಗೆರೆ

ಓಡಾಟ ನಿತ್ಯ ನರಕ
`ಬಡಾವಣೆಯ ರಸ್ತೆಗಳು ಗುಂಡಿ ಬಿದ್ದಿರುವುದರಿಂದ ಈ ರಸ್ತೆಗಳಲ್ಲಿ ಸಂಚರಿಸುವುದು ನಿತ್ಯ ನರಕವಾಗಿದೆ. ಜಲಮಂಡಲಿಯು ಪೈಪ್‌ಲೈನ್ ಅಳವಡಿಕೆಗಾಗಿ ತೋಡಿದ್ದ ಗುಂಡಿಗಳನ್ನು ಆದಷ್ಟು ಬೇಗ ಮುಚ್ಚಬೇಕು. ಹಾಳಾಗಿರುವ ರಸ್ತೆಗಳನ್ನು ಬಿಬಿಎಂಪಿ ದುರಸ್ತಿ ಪಡಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು'
-ರಾಜು, ಸ್ಥಳೀಯ, ಸ್ವತಂತ್ರಯೋಧರ ನಗರ
 

`ರಸ್ತೆ ಅಭಿವೃದ್ಧಿ ಬಿಬಿಎಂಪಿ ಕೆಲಸ'
`ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಮುಗಿದ ನಂತರ ಅಗೆದಿದ್ದ ಗುಂಡಿಗಳನ್ನು ಸಂಪೂರ್ಣ ಮುಚ್ಚಲಾಗಿದೆ. ರಸ್ತೆಯಲ್ಲಿ ಅಗೆದಿದ್ದ ಭಾಗವನ್ನು ಮಣ್ಣಿನಿಂದ ಮುಚ್ಚುವುದು ಜಲಮಂಡಳಿಯ ಕಾರ್ಯ. ಆ ನಂತರ ಡಾಂಬರ್ ಹಾಕಿ ರಸ್ತೆ ಅಭಿವೃದ್ಧಿ ಪಡಿಸಬೇಕಾದ್ದು ಬಿಬಿಎಂಪಿ ಕೆಲಸ. ನಗರಾಭಿವೃದ್ಧಿ ಯೋಜನೆಯಡಿ ರಸ್ತೆ ದುರಸ್ತಿ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಬಿಬಿಎಂಪಿಗೆ ಹಣ ಬರುತ್ತದೆ. ಆ ಅನುದಾನದಲ್ಲಿ ಬಿಬಿಎಂಪಿ ರಸ್ತೆ ಅಭಿವೃದ್ಧಿ ಪಡಿಬೇಕು. ಲಗ್ಗೆರೆಯಲ್ಲಿ ಅಗೆದಿರುವ ರಸ್ತೆಯ ಭಾಗವನ್ನು ಸರಿಯಾಗಿ ಮುಚ್ಚದೇ ಇದ್ದರೆ ಆ ವಿಭಾಗದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು'

 -ರಾಮಸ್ವಾಮಿ, ಮುಖ್ಯ ಎಂಜಿನಿಯರ್,  ಯೋಜನಾ ವಿಭಾಗ, ಬೆಂಗಳೂರು ಜಲಮಂಡಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT