ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಿಗಳದ್ದೇ ಅಬ್ಬರ, ಸಂಚಾರ ದುಸ್ತರ

Last Updated 8 ಜನವರಿ 2014, 19:35 IST
ಅಕ್ಷರ ಗಾತ್ರ

ಬೆಂಗಳೂರು: ಗುಂಡಿ ಬಿದ್ದು ಹಾಳಾದ ರಸ್ತೆ, ನಿರ್ವಹಣೆ ಇಲ್ಲದೆ ದಯನೀಯ ಸ್ಥಿತಿಯಲ್ಲಿ ಇರುವ ಪಾದಚಾರಿ ಮಾರ್ಗ, ಗುಂಡಿಗಳ ನಡುವೆ ವಾಹನ ಚಲಾಯಿಸಲು ಪರದಾಡುವ ಚಾಲಕರು...

ನಗರದ ಶಿವಾನಂದ ವೃತ್ತ, ಶೇಷಾದ್ರಿಪುರ ಸುತ್ತಮುತ್ತ ಹಾಳಾಗಿರುವ ರಸ್ತೆಗಳಲ್ಲಿ ನಿತ್ಯವೂ ಕಂಡುಬರುವ ದೃಶ್ಯವಿದು. ಶಿವಾನಂದ ವೃತ್ತದಿಂದ ಶೇಷಾದ್ರಿಪುರದ ಕಡೆಗೆ ಹೋಗುವ ಹರೇಕೃಷ್ಣ ರಸ್ತೆ ಸಂಪೂರ್ಣ ಹಾಳಾಗಿದೆ.

ಅಲ್ಲದೇ ಅಕ್ಕಪಕ್ಕದ ಯಾದವ ಕಾಲೇಜು ರಸ್ತೆ ಹಾಗೂ ವೆಸ್ಟ್‌ ಪಾರ್ಕ್‌ ರಸ್ತೆಗಳೂ ಗುಂಡಿ ಬಿದ್ದಿವೆ. ಇದರಿಂದ ರಸ್ತೆಯಲ್ಲಿ ಓಡಾಡಲು ತೊಂದರೆಯಾಗುತ್ತಿದೆ ಎಂಬುದು ಸ್ಥಳೀಯರ ದೂರು.

‘ಗುಂಡಿ ಬಿದ್ದ ರಸ್ತೆಯಲ್ಲಿ ವಾಹನಗಳನ್ನು ಓಡಿಸುವುದು ಕಷ್ಟವಾಗುತ್ತದೆ. ರಾತ್ರಿ ವೇಳೆ ಸ್ವಲ್ಪ ಎಚ್ಚರ ತಪ್ಪಿದರೂ ಬೈಕ್‌ನಿಂದ ಬೀಳುವುದು ತಪ್ಪಿದ್ದಲ್ಲ. ನಗರದ ಪ್ರಮುಖ ಮುಖ್ಯರಸ್ತೆಗಳ ಸ್ಥಿತಿಯ ಬಗ್ಗೆಯೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಮುಖ್ಯಮಂತ್ರಿಗಳ ನಿವಾಸದ ಕೂಗಳತೆಯ ದೂರದಲ್ಲಿರುವ ರಸ್ತೆಗಳ ಸ್ಥಿತಿಯೇ ಹೀಗಾದರೆ ಇನ್ನು ಉಳಿದ ರಸ್ತೆಗಳ ಸ್ಥಿತಿ ಏನು’ ಎಂದು ಸ್ಥಳೀಯರಾದ ರಾಜೇಶ್‌ ಅಸಮಾಧಾನ ವ್ಯಕ್ತಪಡಿಸಿದರು.

‘ರಸ್ತೆಯ ತುಂಬಾ ಗುಂಡಿಗಳೇ ತುಂಬಿವೆ. ಮಳೆ ಬಿದ್ದರೆ ಗುಂಡಿಗಳಲ್ಲಿ ನೀರು ತುಂಬಿ ಗುಂಡಿಗಳು ಎಲ್ಲಿವೆ ಎಂಬುದೇ ತಿಳಿಯುವುದಿಲ್ಲ. ವಾಹನ ಸವಾರರ ಬಲಿಗಾಗಿ ಗುಂಡಿಗಳು ಕಾಯುತ್ತಿವೆ. ಕೆಲ ತಿಂಗಳ ಹಿಂದೆ ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆದಿತ್ತು. ಆದರೆ, ಮತ್ತೆ ರಸ್ತೆಗಳು ಗುಂಡಿ ಬಿದ್ದಿವೆ’ ಎಂದು ನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ಲೋಕೇಶ್‌ ಹೇಳಿದರು.

‘ಮುಖ್ಯರಸ್ತೆಗಳಲ್ಲಿ ವಾಹನ ಸಂಚಾರ ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ. ಈ ರಸ್ತೆಯಲ್ಲಿ ಗುಂಡಿಗಳ ಕಾರಣದಿಂದ ವಾಹನ ದಟ್ಟಣೆ ಇನ್ನೂ

ಹೆಚ್ಚಾಗುತ್ತಿದೆ. ಇದರಿಂದ ಜನರು ನಿತ್ಯ ತೊಂದರೆ ಅನುಭವಿಸುತ್ತಿದ್ದರೂ ರಸ್ತೆ ದುರಸ್ತಿಗೆ ಬಿಬಿಎಂಪಿ ಅಧಿಕಾರಿಗಳು ಮುಂದಾಗುತ್ತಿಲ್ಲ. ರಸ್ತೆ ನಿರ್ವಹಣೆಯ ಬಗ್ಗೆ ಅಧಿಕಾರಿಗಳಿಗೆ ಎಳ್ಳಷ್ಟೂ ಕಾಳಜಿ ಇಲ್ಲ’ ಎಂದು ಅವರು ದೂರಿದರು.

‘ಮಳೆಗಾಲದಲ್ಲಿ ಈ ರಸ್ತೆಗಳಲ್ಲಿ ಓಡಾಡುವುದು ಕಷ್ಟವಾಗಿದೆ. ರಸ್ತೆಯಲ್ಲಿನ ಗುಂಡಿಗಳನ್ನು ತಪ್ಪಿಸಿ ವಾಹನ ಚಲಾಯಿಸುವುದೇ ದೊಡ್ಡ ಸಾಹಸ. ಗುಂಡಿಗಳಿಗೆ ತೇಪೆ ಹಾಕುವ ಕೆಲಸ ಬಿಟ್ಟು ಹೊಸದಾಗಿ ರಸ್ತೆ ನವೀಕರಣಕ್ಕೆ ಮುಂದಾಗಬೇಕು. ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಬಿಬಿಎಂಪಿ ಮುಂದಾಗಬೇಕು’ ಎಂದು ಶೇಷಾದ್ರಿಪುರ ನಿವಾಸಿ ವಿಠ್ಠಲ್‌ ರಾವ್‌ ಒತ್ತಾಯಿಸಿದರು.

‘ರಸ್ತೆ ಹಾಳಾಗಿರುವ ಜತೆಗೆ ಪಾದಚಾರಿ ಮಾರ್ಗವೂ ಹಾಳಾಗಿ ನಡೆದಾಡುವುದು ಕಷ್ಟವಾಗಿದೆ. ಹಿರಿಯ ನಾಗರಿಕರು ಹಾಗೂ ಮಕ್ಕಳು ಈ ರಸ್ತೆಗಳಲ್ಲಿ ಓಡಾಡುವುದು ದುಸ್ತರವಾಗಿದೆ. ಹಾಳಾಗಿರುವ ಪಾದಚಾರಿ ಮಾರ್ಗವನ್ನು ದುರಸ್ತಿ ಪಡಿಸಿ, ಪಾದಚಾರಿಗಳಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಸ್ಥಳೀಯ ನಿವಾಸಿ ಶಶಿಧರ್‌ ಆಗ್ರಹಿಸಿದರು.

ಮುಖ್ಯಾಂಶಗಳು
*ಶಿವಾನಂದ ವೃತ್ತ, ಶೇಷಾದ್ರಿಪುರ ಸುತ್ತಮುತ್ತ ಗುಂಡಿ ಬಿದ್ದು ಹಾಳಾದ ರಸ್ತೆಗಳು
*ಪಾದಚಾರಿ ಮಾರ್ಗ ಸರಿಯಿಲ್ಲದೆ ಜನರ ಪರದಾಟ
*ಶೀಘ್ರ ರಸ್ತೆ ದುರಸ್ತಿಗೆ ಸ್ಥಳೀಯರ ಒತ್ತಾಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT