ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ಗೆ ಮೋದಿಯೇ `ಸರ್ಕಾರ್'

ಕಾಂಗ್ರೆಸ್‌ಗೆ ಒಲಿದ ಹಿಮಾಚಲ ಪ್ರದೇಶ
Last Updated 20 ಡಿಸೆಂಬರ್ 2012, 20:11 IST
ಅಕ್ಷರ ಗಾತ್ರ

ಅಹಮದಾಬಾದ್/ಶಿಮ್ಲಾ (ಪಿಟಿಐ): ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷೆಯಂತೆ ಭಾರತೀಯ ಜನತಾ ಪಕ್ಷವನ್ನು ಸರಾಗವಾಗಿ ಗೆಲುವಿನ ದಡಕ್ಕೆ ಮುಟ್ಟಿಸಿರುವ ಮುಖ್ಯಮಂತ್ರಿ ನರೇಂದ್ರ ಮೋದಿ ಅಭೂತಪೂರ್ವ ಸತತ ಮೂರನೆಯ ಗೆಲುವು ಸಾಧಿಸಿದ್ದಾರೆ. ತನ್ಮೂಲಕ 2014ರ ಸಾರ್ವತ್ರಿಕ ಚುನಾವಣೆಯಲ್ಲಿ `ಎನ್‌ಡಿಎ' ಅಧಿಕಾರಕ್ಕೆ ಬಂದಲ್ಲಿ ತಾವು ಸಹ ಪ್ರಧಾನಿ ಸ್ಥಾನದ ಅಭ್ಯರ್ಥಿಯೆಂದು ಬಿಂಬಿಸಿಕೊಂಡಿದ್ದಾರೆ.

ಮೋದಿ ನಾಯಕತ್ವದ ವಿರುದ್ಧ ಸಿಡಿದೆದ್ದು ನಾಲ್ಕು ತಿಂಗಳ ಹಿಂದೆ ಗುಜರಾತ್ ಪರಿವರ್ತನ್ ಪಕ್ಷ (ಜಿಪಿಪಿ) ಸ್ಥಾಪಿಸಿದ್ದ ಮಾಜಿ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್ ಅವರಿಗೆ ಭಾರಿ ಮುಖಭಂಗವಾಗಿದೆ. ಜಿಪಿಪಿ 170 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದ್ದರೂ ಕೇಶುಭಾಯ್ ಸೇರಿದಂತೆ ಇಬ್ಬರು ಅಭ್ಯರ್ಥಿಗಳು ಮಾತ್ರ ಗೆಲುವಿನ ರುಚಿ ಸವಿಯಲು ಸಾಧ್ಯವಾಗಿದೆ.
 
ಹಿಮಾಲಯದ ತಪ್ಪಲಿನ ಸುಂದರ ರಾಜ್ಯ ಹಿಮಾಚಲ ಪ್ರದೇಶದಲ್ಲಿ ಬಿಜೆಪಿಯನ್ನು ಸೋಲಿಸಿರುವ ಕಾಂಗ್ರೆಸ್, ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈ ಗೆಲುವಿನಿಂದ ಕಾಂಗ್ರೆಸ್‌ಗೆ ಗುಜರಾತ್ ಚುನಾವಣೆಯ ಸೋಲಿನ ಕಹಿ ಸ್ವಲ್ಪಮಟ್ಟಿಗೆ ಕಡಿಮೆಯಾದಂತಾಗಿದೆ.
 
ಗುಜರಾತ್‌ನಲ್ಲಿ ಬಿಜೆಪಿಗೆ ನರೇಂದ್ರ ಮೋದಿ ನೇತೃತ್ವದಲ್ಲಿ ಇದು ಮೂರನೇ ಗೆಲುವಾದರೂ, ಆ ಪಕ್ಷ ರಾಜ್ಯದಲ್ಲಿ ಇದು ಸತತ ಐದನೇ ಬಾರಿ ಜಯಭೇರಿ ಬಾರಿಸಿದೆ. ಈ ಚುನಾವಣೆಯಲ್ಲಿ ಬಿಜೆಪಿ 2007ರ ಚುನಾವಣೆಗಿಂತ ಎರಡು ಸ್ಥಾನ ಕಡಿಮೆ ಅಂದರೆ 115 ಸ್ಥಾನಗಳನ್ನು ಗಳಿಸಿದೆ. ಬಿಜೆಪಿಗಾದ ಈ ನಷ್ಟ ಕಾಂಗ್ರೆಸ್‌ನ ಲಾಭವಾಗಿ ಪರಿವರ್ತನೆಗೊಂಡಿದ್ದು, ಕಾಂಗ್ರೆಸ್ 61 ಸ್ಥಾನಗಳನ್ನು ಗಳಿಸಿದೆ.

ಗುಜರಾತ್‌ನಲ್ಲಿ 22 ವರ್ಷಗಳಿಂದ ಅಧಿಕಾರದಿಂದ ಹೊರಗಿರುವ ಕಾಂಗ್ರೆಸ್ ಅನ್ನು ಈ ಬಾರಿಯೂ ಮತದಾರರು ತಿರಸ್ಕರಿಸಿದ್ದಾರೆ. 
 
ಕಾಂಗ್ರೆಸ್ ನಾಯಕರ ಪರಾಭವ:  ಕಳೆದ ಚುನಾವಣೆಗಿಂತ ಕಾಂಗ್ರೆಸ್ ಎರಡು ಹೆಚ್ಚುವರಿ ಸ್ಥಾನ ಪಡೆದಿದ್ದರೂ ಪಕ್ಷದ ಘಟಾನುಘಟಿ ನಾಯಕರೆಲ್ಲ  ಮಣ್ಣುಮುಕ್ಕಿದ್ದಾರೆ. ಪೋರಬಂದರ್ ಕ್ಷೇತ್ರದಲ್ಲಿ ಮೂರನೇ ಬಾರಿ ಗೆಲುವು ನಿರೀಕ್ಷಿಸಿದ್ದ ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಅರ್ಜುನ್ ಮೊದ್ವಾಡಿಯಾ ಬಿಜೆಪಿ ಅಭ್ಯರ್ಥಿ ಬಾಬು ಬೊಕಿರಿಯಾ ಎದುರು 17,146 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ. ಕಾಂಗ್ರೆಸ್ ಸೋಲಿನ ನೈತಿಕ ಹೊಣೆ ಹೊತ್ತು ಮೊದ್ವಾಡಿಯಾ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. 
 
ಗುಜರಾತ್ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿದ್ದ ಕಾಂಗ್ರೆಸ್‌ನ ಶಕ್ತಿಸಿನ್ಹ್ ಗೋಹಿಲ್ ಭಾವನಗರ ಗ್ರಾಮೀಣ ಕ್ಷೇತ್ರದಲ್ಲಿ ಸೋಲಪ್ಪಿದ್ದಾರೆ. ಈ ಕ್ಷೇತ್ರದಲ್ಲಿ ಅವರ ಬದ್ಧವೈರಿ ಗುಜರಾತ್‌ನ ಮೀನುಗಾರಿಕಾ ಸಚಿವ ಪುರುಷೋತ್ತಮ ಸೋಲಂಕಿ 18,554 ಮತಗಳಿಂದ ಜಯ ಗಳಿಸಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದಲ್ಲಿ ಈ ಇಬ್ಬರೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾಗುತ್ತಿದ್ದರು. ಆದರೆ, ಗುಜರಾತ್ ಕಾಂಗ್ರೆಸ್‌ನ ಮತ್ತೊಬ್ಬ ಪ್ರಮುಖ ನಾಯಕ ಶಂಕರ್‌ಸಿಂಗ್ ವಘೇಲಾ ಖೇಡಾ ಜಿಲ್ಲೆಯ ಕಪಡವಂಜ್ ಕ್ಷೇತ್ರದಲ್ಲಿ 6,597ರಷ್ಟು ಅಲ್ಪಮತಗಳ ಅಂತರದಿಂದ ಬಿಜೆಪಿಯ ಕನುಭಾಯ್ ದಾಭಿ ಅವರ ವಿರುದ್ಧ ಜಯ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಚುನಾವಣೆಯಲ್ಲಿ ವಘೇಲಾ ಕಾಂಗ್ರೆಸ್‌ನ ಪ್ರಚಾರ ಸಮಿತಿಯ ಅಧ್ಯಕ್ಷರಾಗಿದ್ದರು.
 
ಸಚಿವರ ಸೋಲು: ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಕಣ್ಣುಕುಕ್ಕುವ ಜಯ ಗಳಿಸಿದ್ದರೂ ಹಾಲಿ ಸರ್ಕಾರದ ಏಳು ಸಚಿವರು ಸೋಲಿನ ರುಚಿ ಕಂಡಿದ್ದಾರೆ. 
 
ಟಿ.ವಿ ಚರ್ಚೆಗಳ ಸಂದರ್ಭದಲ್ಲಿ ಮೋದಿ ಸರ್ಕಾರವನ್ನು ಪ್ರತಿನಿಧಿಸುತ್ತಿದ್ದ ಮಾತುಗಾರ ಆರೋಗ್ಯ ಸಚಿವ ಜಯನಾರಾಯಣ್ ವ್ಯಾಸ್ ಸೋಲನ್ನಪ್ಪಿದ್ದಾರೆ. ಅವರ ಹೊರತಾಗಿ ಕೃಷಿ ಸಚಿವ ದಿಲೀಪ್ ಸಂಘಾನಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಫಕೀರ್‌ಭಾಯ್ ವಘೇಲಾ, ಅರಣ್ಯ ಸಚಿವ ಕಿರಿಟ್‌ಸಿನ್ಹ್ ರಾಣಾ ಹಾಗೂ ಕೃಷಿ ಖಾತೆ ರಾಜ್ಯ ಸಚಿವ ಕನುಭಾಯ್ ಭಲಾಲ ಸಹ ಪರಾಭವಗೊಂಡಿದ್ದಾರೆ.
 
ಹಿಮಾಚಲದಲ್ಲಿ ಕಾಂಗ್ರೆಸ್‌ಗೆ ವಿಜಯಮಾಲೆ
ಈ ಗುಡ್ಡಗಾಡು ರಾಜ್ಯದಲ್ಲಿ ಕಾಂಗ್ರೆಸ್‌ನ ಹಿರಿಯ ರಾಜಕಾರಣಿ ಐದು ಬಾರಿ ಮುಖ್ಯಮಂತ್ರಿಯಾಗಿದ್ದ 78 ವರ್ಷದ ವೀರಭದ್ರ ಸಿಂಗ್ ಬಿಜೆಪಿಯವರು ತಮ್ಮ ವಿರುದ್ಧ ಮಾಡಿದ ಭ್ರಷ್ಟಾಚಾರದ ಆರೋಪಗಳನ್ನು ಸಮರ್ಥವಾಗಿ ಎದುರಿಸಿ ಕಾಂಗ್ರೆಸ್ ಗೆಲುವಿನ ರೂವಾರಿಯಾಗಿದ್ದಾರೆ.
 
ಚುನಾವಣೆ ಘೋಷಣೆಯಾದ ಮೇಲೆ, ಕೊನೆಯ ಹಂತದಲ್ಲಿ ತಮಗೆ ಪ್ರಚಾರ ಕಾರ್ಯದ ಹೊಣೆ ಹೊರಿಸಿದ್ದರೂ ವೀರಭದ್ರ ಸಿಂಗ್ ಪಕ್ಷದ ವರಿಷ್ಠರು ತಮ್ಮ ಮೇಲೆ ಇಟ್ಟಿದ್ದ ನಂಬಿಕೆಯನ್ನು ಹುಸಿ ಮಾಡಲಿಲ್ಲ. ಶಿಮ್ಲಾ ಗ್ರಾಮೀಣ ಕ್ಷೇತ್ರದಿಂದ ಜಯ ಗಳಿಸಿರುವ ಅವರು ಈ ಬಾರಿಯೂ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಬಲ ಅಭ್ಯರ್ಥಿಯಾಗಿದ್ದಾರೆ. ಸಿಂಗ್ ಅವರಿಗೆ ಇದು 8ನೇ ಗೆಲುವು.
 
ಪ್ರೇಮ್‌ಕುಮಾರ್ ಧುಮಾಲ್ ಸರ್ಕಾರ ಹೊರಿಸಿದ್ದ ಭ್ರಷ್ಟಾಚಾರದ ಆರೋಪದಿಂದಾಗಿ ಈ ವರ್ಷದ ಜೂನ್‌ನಲ್ಲಿ ಕೇಂದ್ರ ಸಂಪುಟಕ್ಕೆ ರಾಜೀನಾಮೆ ನೀಡಿದ್ದ ಸಿಂಗ್ ಈಗ ಚುನಾವಣೆಯ `ಅಗ್ನಿಪರೀಕ್ಷೆ'ಯನ್ನು ಯಶಸ್ವಿಯಾಗಿ ಎದುರಿಸಿದ್ದಾರೆ. 
 
ರಾಜ್ಯ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕಿಯಾಗಿದ್ದ ಕಾಂಗ್ರೆಸ್‌ನ ಹಿರಿಯ ನಾಯಕಿ ವಿದ್ಯಾ ಸ್ಟೋಕ್ಸ್ ಥಿಯೋಗ್ ಕ್ಷೇತ್ರದಿಂದ ಜಯಗಳಿಸಿದ್ದು, ಅವರಿಗೂ ಇದು 8ನೇ ಗೆಲುವು. 
ಹಾಲಿ ಮುಖ್ಯಮಂತ್ರಿ ಧುಮಾಲ್ ಹಮೀರ್‌ಪುರ್ ಕ್ಷೇತ್ರದಿಂದ ಜಯ ಗಳಿಸಿದ್ದರೂ ಅವರ ಸಂಪುಟ ಸಹೋದ್ಯೋಗಿಗಳಾದ ನರೀಂದರ್ ಬ್ರಗತಾ, ಖಿಮಿ ರಾಮ್, ಕೃಷ್ಣನ್ ಕುಮಾರ್ ಮತ್ತು ರೋಮೆಷ್ ಧವಾಲಾ ಪರಾಭವಗೊಂಡಿದ್ದಾರೆ. 
 
ವೀರಭದ್ರ ಸಿಂಗ್ ಅವರ ಬದ್ಧವೈರಿ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದ ವಿ.ಬಿ. ಸಿಂಗ್ ಷಾಹಪುರ್‌ನಲ್ಲಿ ಸೋಲಪ್ಪಿದ್ದಾರೆ. 
 
ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ವರ್ಮಾ ಸುಜಾನ್‌ಪುರ್ ಕ್ಷೇತ್ರದಲ್ಲಿ ಬಿಜೆಪಿಯ ಭಿನ್ನಮತೀಯ ರಾಜೀಂದರ್ ಸಿಂಗ್ ಎದುರು ಸೋಲು ಉಂಡಿದ್ದಾರೆ. 
 
68 ಸದಸ್ಯ ಬಲದ ಹಿಮಾಚಲ ಪ್ರದೇಶದ ವಿಧಾನಸಭೆಯಲ್ಲಿ 36 ಸ್ಥಾನಗಳನ್ನು ಗಳಿಸಿರುವ ಕಾಂಗ್ರೆಸ್ ಸರಳ ಬಹುಮತಕ್ಕಿಂತ 2 ಹೆಚುವರಿ ಸ್ಥಾನ ಗಳಿಸಲಷ್ಟೇ ಯಶಸ್ವಿಯಾಗಿದೆ. ಕಳೆದ ಚುನಾವಣೆಗಿಂತ ಕಾಂಗ್ರೆಸ್ 13 ಹೆಚ್ಚುವರಿ ಸ್ಥಾನ ಗಳಿಸಿದೆ. ಕಳೆದ ಚುನಾವಣೆಯಲ್ಲಿ 41 ಕ್ಷೇತ್ರದಲ್ಲಿ ಜಯಗಳಿಸಿದ್ದ ಬಿಜೆಪಿ ಈಗ ಕೇವಲ 26 ಸ್ಥಾನಗಳಲ್ಲಿ ಮಾತ್ರ ಜಯ ಗಳಿಸಿದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT