ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡಿಕೈಗಾರಿಕೆ ಉತ್ತೇಜನಕ್ಕೆ ಸಹಾಯಧನ: ಬೋಪಯ್ಯ

Last Updated 7 ಜನವರಿ 2012, 6:00 IST
ಅಕ್ಷರ ಗಾತ್ರ

ಮಡಿಕೇರಿ:  ಗ್ರಾಮೀಣ ಪ್ರದೇಶದ ಗುಡಿಕೈಗಾರಿಕೆಗಳನ್ನು ಉತ್ತೇಜಿಸಲು ಶೇ.4ರಷ್ಟು ಬಡ್ಡಿ ದರದಲ್ಲಿ ಸಾಲ ಹಾಗೂ ಸಹಾಯಧನ ನೀಡುತ್ತಿದ್ದು, ಇವುಗಳನ್ನು ಬಳಸಿಕೊಂಡು ಕೈಮಗ್ಗ ಮತ್ತು ಜವಳಿ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲು ಮುಂದಾಗಬೇಕು ಎಂದು ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಹೇಳಿದರು.

ನಗರದ ಕೆಳಗಿನ ಕೊಡವ ಸಮಾಜದಲ್ಲಿ ಶುಕ್ರವಾರ ನಡೆದ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ 6 ದಿನಗಳ ಕಾಲ ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ ಕೈಮಗ್ಗ ಉತ್ಪನ್ನಗಳ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟಿಸಿ ಮಾತನಾಡಿದರು.

ಇಂದಿನ ಯಾಂತ್ರಿಕ ಯುಗದಲ್ಲಿ ಗುಡಿಕೈಗಾರಿಕೆಗಳು ಕ್ಷೀಣಿಸುತ್ತಿದ್ದು, ಜವಳಿ ಮತ್ತಿತರ ಸಣ್ಣಕೈಗಾರಿಕೆ ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯೋನ್ಮುಖವಾಗಬೇಕು. ಸರ್ಕಾರ ನೀಡುವ ಸಹಾಯಧನ ಬಳಸಿಕೊಂಡು ನೇಕಾರರು ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಬೇಕು ಎಂದು ಹೇಳಿದರು.

ಕೈಮಗ್ಗ ಮತ್ತು ಜವಳಿಯಿಂದ ತಯಾರಿಸಿದ ವಸ್ತುಗಳು ಅತ್ಯಂತ ಕುಶಲತೆಯಿಂದ ಕೂಡಿವೆ. ಇಂತಹ ಪ್ರದರ್ಶನದಲ್ಲಿ ಶೇ.20ರಷ್ಟು ರಿಯಾಯಿತಿ ದರದಲ್ಲಿ ಜವಳಿ ವಸ್ತು ಮಾರಾಟ ಮಾಡಲಾಗುತ್ತಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಶಾಸಕ ಅಪ್ಪಚ್ಚುರಂಜನ್ ಮಾತನಾಡಿ, ಗುಡಿ ಕೈಗಾರಿಕೆ ನಂಬಿಕೊಂಡು ಜೀವನ ನಡೆಸುತ್ತಿರುವ ನೇಕಾರರ ಬದುಕು ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸುತ್ತಿದೆ. ಗುಡಿ ಕೈಗಾರಿಕೆಗಳಲ್ಲಿ ದುಡಿಯುವವರ ಬದುಕು ಹಸನಾಗುವಲ್ಲಿ ಸರ್ಕಾರ ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದು ಅವುಗಳನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.

ಚೀನಾದ ರೇಷ್ಮೆ ಆಮದಿನಿಂದಾಗಿ ರಾಜ್ಯ ಮತ್ತು ದೇಶದ ರೇಷ್ಮೆಗೆ ಬೆಲೆ ಇಲ್ಲದಂತಾಗಿದೆ. ಆದರೂ ಧೃತಿಗೆಡದೆ ಇಲ್ಲಿನ ನೇಕಾರರು ಉತ್ಕೃಷ್ಟ ದರ್ಜೆಯ ಜವಳಿ ಉತ್ಪನ್ನ ತಯಾರಿಸುತ್ತಿದ್ದಾರೆ. ಜಿಲ್ಲೆಯ ಜನರು ಕೈಮಗ್ಗ ಉತ್ಪನ್ನಗಳ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳವನ್ನು ವೀಕ್ಷಣೆ ಮಾಡಿ ವಸ್ತು ಕೊಳ್ಳುವಂತಾಗಬೇಕು ಎಂದು ಹೇಳಿದರು.

ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯ ಉಪ ನಿರ್ದೇಶಕ ರಾಜಯ್ಯ, ಕೈಗಾರಿಕಾ ಉತ್ತೇಜನಾಧಿಕಾರಿ ರಾಜಪ್ಪ, ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎಸ್.ಗುರುಸ್ವಾಮಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT