ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಪ್ತಚರ ಮಾಹಿತಿ ಗಂಭೀರ ಪರಿಗಣನೆಗೆ ಆದೇಶ

ಠಾಣೆಗಳ ಸಿಬ್ಬಂದಿ ಜತೆ ಪೊಲೀಸ್ ಕಮಿಷನರ್ ಸಭೆ
Last Updated 23 ಏಪ್ರಿಲ್ 2013, 19:33 IST
ಅಕ್ಷರ ಗಾತ್ರ

ಬೆಂಗಳೂರು: `ನಗರದ ಗುಪ್ತಚರ ವಿಭಾಗವನ್ನು ಬಲಪಡಿಸುವ ನಿಟ್ಟಿನಲ್ಲಿ ಎಲ್ಲ ಠಾಣೆಗಳ ಸಿಬ್ಬಂದಿ ಜತೆ ಸಭೆ ನಡೆಸಿದ್ದು, ಸಂಭವನೀಯ ಭಯೋತ್ಪಾದನಾ ದಾಳಿಗಳನ್ನು ಹತ್ತಿಕ್ಕಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ' ಎಂದು ನಗರ ಪೊಲೀಸ್ ಕಮಿಷನರ್ ರಾಘವೇಂದ್ರ ಔರಾದಕರ್ ಹೇಳಿದರು.

ನಗರದಲ್ಲಿ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಸುಧಾರಣಾ ಕ್ರಮಗಳ ಬಗ್ಗೆ ಚರ್ಚಿಸಲು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯಲ್ಲಿ (ಎಫ್‌ಕೆಸಿಸಿಐ) ಮಂಗಳವಾರ ನಡೆದ ಸಂವಾದದಲ್ಲಿ ಅವರು ಮಾತನಾಡಿದರು.

`ಗುಪ್ತಚರ ಇಲಾಖೆಯ ವೈಫಲ್ಯದಿಂದ ನಗರದಲ್ಲಿ ಭಯೋತ್ಪಾದನಾ ದಾಳಿಗಳು ಹೆಚ್ಚುತ್ತಿವೆ ಎಂಬ ಆರೋಪ ವ್ಯಾಪಕವಾಗುತ್ತಿದೆ. ಹೀಗಾಗಿ ನಗರದ 102 ಠಾಣೆಗಳ ಸಿಬ್ಬಂದಿ ಜತೆ ಚ\ರ್ಚೆ ನಡೆಸಿ, ಗುಪ್ತಚರ ವಿಭಾಗದಿಂದ ಬರುವ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸುವಂತೆ ಆದೇಶಿಸಲಾಗಿದೆ' ಎಂದರು.

ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ನಾಗರಿಕರ ಸಹಕಾರ ಅತ್ಯಗತ್ಯ. ಒಂದು ಕೋಟಿ ಜನಸಂಖ್ಯೆ ಇರುವ ಸಿಲಿಕಾನ್ ಸಿಟಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಇರುವ ಪೊಲೀಸರ ಸಂಖ್ಯೆ ಕೇವಲ 14 ಸಾವಿರ ಮಾತ್ರ. ದೆಹಲಿಯಂತಹ ಮಹಾನಗರಗಳಲ್ಲಿ 80,000 ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ, ನಾಗರಿಕರು ಪೊಲೀಸರಿಗೆ ನೆರವಾಗಬೇಕು ಎಂದು ಔರಾದಕರ್ ಮನವಿ ಮಾಡಿದರು.

ಬಾಸ್ಟನ್‌ನಲ್ಲಿ ದಾಳಿ ನಡೆಸಿದ ಭಯೋತ್ಪಾದಕರನ್ನು ಅಲ್ಲಿನ ಪೊಲೀಸರು ದಾಳಿ ನಡೆದ 24 ಗಂಟೆಗಳಲ್ಲೇ ಬಂಧಿಸಿದರು ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು, `ಬಾಸ್ಟನ್‌ನಲ್ಲಿ ತನಿಖೆಗೆ ಅಗತ್ಯವಾದ ಸಲಕರಣೆಗಳಿವೆ. ಸರ್ವೈಲೆನ್ಸ್ ಕ್ಯಾಮೆರಾ ಮೂಲಕ ಸುಳಿವು ಪಡೆದು ಅಲ್ಲಿನ ಪೊಲೀಸರು ಪ್ರಕರಣ ಭೇದಿಸಿದರು. ನಗರದಲ್ಲೂ ಸರ್ವೈಲೆನ್ಸ್ ಕ್ಯಾಮೆರಾ ಸೇರಿದಂತೆ ತನಿಖೆಗೆ ಪೂರಕವಾದ ಆಧುನಿಕ ಉಪಕರಣಗಳ ಅಗತ್ಯವಿದೆ. ಸರ್ಕಾರ ಅಥವಾ ಸಂಘ ಸಂಸ್ಥೆಗಳು ಈ ಸೌಲಭ್ಯಗಳನ್ನು ಪೂರೈಸಿದರೆ ಅನುಕೂಲವಾಗುತ್ತದೆ' ಎಂದರು.

ಸಂಚಾರ ದಟ್ಟಣೆ ನಗರದ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ನಗರದಲ್ಲಿರುವ ಜನಸಂಖ್ಯೆ ಒಂದು ಕೋಟಿ ದಾಟಿದ್ದರೆ, ವಾಹನಗಳ ಸಂಖ್ಯೆ 45 ಲಕ್ಷ ಇದೆ. ಅಲ್ಲದೆ, ಹೊರಗಿನಿಂದ ಬಂದು ಹೋಗುವ ವಾಹನಗಳ ಸಂಖ್ಯೆಯೂ ಅಧಿಕವಾಗಿದೆ. ಹೀಗಾಗಿ ಸಂಚಾರ ನಿರ್ವಹಣೆ ಕಷ್ಟವಾಗಿದ್ದು, ಇಷ್ಟೆಲ್ಲಾ ಮಿತಿಗಳಿದ್ದರೂ ಉತ್ತಮ ಸಂಚಾರ ನಿರ್ವಹಣೆ ಮಾಡುತ್ತಿರುವ ಮಹಾನಗರಗಳ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ ಎಂದು ಹೇಳಿದರು.

ರಸ್ತೆ ಅಪಘಾತ ಸಂಭವಿಸಿದಾಗ ನಾಗರಿಕರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲು ಹಾಗೂ ವೈದ್ಯರು ಚಿಕಿತ್ಸೆ ನೀಡಲು ಕೆಲವೊಂದು ಕಾನೂನುಗಳು ಅಡ್ಡಿಬರುತ್ತವೆ ಎಂಬುದಕ್ಕೆ ಉತ್ತರಿಸಿದ ಔರಾದಕರ್, `ಅಪಘಾತದಿಂದ ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ವೈದ್ಯರು ನಿರಾಕರಿಸಬಾರದು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ಮಾಡಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವಿಲ್ಲ' ಎಂದರು.

ನಂತರ ಮಾತನಾಡಿದ ಎಫ್‌ಕೆಸಿಸಿಐ ಅಧ್ಯಕ್ಷ ಕೆ.ಶಿವ ಷಣ್ಮುಗಂ, `ಪೊಲೀಸ್ ಇಲಾಖೆಗೆ ಸರ್ವೈಲೆನ್ಸ್ ಕ್ಯಾಮೆರಾಗಳನ್ನು ಪೂರೈಸುವ ಬಗ್ಗೆ ಏ.26ರಂದು ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುವುದು' ಎಂದರು.

ಆಟೊ ಚಾಲಕನಿಗೆ ಸೆಲ್ಯೂಟ್

`ಮಲ್ಲೇಶ್ವರದಲ್ಲಿ ಬಾಂಬ್ ಸ್ಫೋಟಗೊಂಡ ವಾರದ ನಂತರ ಆಟೊ ಚಾಲಕರೊಬ್ಬರು ನನ್ನನ್ನು ಭೇಟಿ ಮಾಡಿ, `ಸ್ಫೋಟ ಸಂಭವಿಸುವುದಕ್ಕೂ ಮುನ್ನ ಬಿಜೆಪಿ ಕಚೇರಿ ಬಳಿ ವ್ಯಕ್ತಿಯೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದ' ಎಂದು ಮಾಹಿತಿ ನೀಡಿದರು. ಅವರಿಂದ ಮಾಹಿತಿ ಪಡೆದು ಧನ್ಯವಾದ ಹೇಳಿದೆ. ಅವರು ಹೋಗುವುದಕ್ಕೂ ಮುಂಚೆ, `ನಾನು ಕೊಟ್ಟ ಸುಳಿವಿನಿಂದ ಆರೋಪಿಗಳು ಸಿಕ್ಕರೆ, ಸರ್ಕಾರ ಕೊಡುವ ರೂ. 5 ಲಕ್ಷ ಬಹುಮಾನವನ್ನು ಯಾರಾದರೂ ಬಡವರಿಗೆ ಕೊಟ್ಟು ಬಿಡಿ. ಜೀವನೋಪಾಯಕ್ಕೆ ನನಗೆ ತೊಂದರೆಯಿಲ್ಲ' ಎಂದು ಹೇಳಿದರು. ನಿಜಕ್ಕೂ ಅವರಿಗೆ ಸೆಲ್ಯೂಟ್ ಮಾಡಬೇಕೆನಿಸಿತು' ಎಂದು ಔರಾದ್‌ಕರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT