ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆದ್ದರೆ ಸಮಾಧಾನ, ಸೋತರೆ ತಲೆದಂಡ

ಕ್ರಿಕೆಟ್: ಇತಿಹಾಸ ಬರೆಯಲು ಇಂಗ್ಲೆಂಡ್ ಕಾತರ, ಮಾನ ಉಳಿಸಿಕೊಳ್ಳಲು ಭಾರತ ಆತುರ
Last Updated 13 ಡಿಸೆಂಬರ್ 2012, 7:52 IST
ಅಕ್ಷರ ಗಾತ್ರ

ನಾಗಪುರ: ಆತ್ಮವಿಶ್ವಾಸ ಚಮತ್ಕಾರ ಮಾಡುತ್ತದೆ. ಅತೀ ವಿಶ್ವಾಸ ತಿರಸ್ಕರಿಸಿಬಿಡುತ್ತದೆ ಎಂಬ ಮಾತಿದೆ. ಸ್ಪಿನ್ನರ್‌ಗಳಿಗೆ ನೆರವು ನೀಡುವ ಪಿಚ್ ನಿರ್ಮಿಸಿಕೊಂಡು ತಮ್ಮನ್ನು ಸೋಲಿಸುವವರೇ ಇಲ್ಲ ಎಂದು ಮೆರೆಯುತ್ತಿದ್ದ ದೋನಿ ಬಳಗಕ್ಕೆ ಈಗ ಆಂಗ್ಲರು ಮರೆಯಲಾಗದಂಥ ಪೆಟ್ಟು ಕೊಟ್ಟಿದ್ದಾರೆ.

ಇಂಗ್ಲೆಂಡ್ ವಿರುದ್ಧ ಎದುರಾದ ಸತತ ಎರಡು ಸೋಲುಗಳು ಟೆಸ್ಟ್‌ನಲ್ಲಿ ಭಾರತದ ಅಧಃಪತನಕ್ಕೊಂದು ಮುನ್ನುಡಿ ಬರೆದಂತಿವೆ. ಇತ್ತೀಚಿನ ವರ್ಷಗಳಲ್ಲಿ ಸ್ವದೇಶದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಭಾರತ ಈ ರೀತಿ ಆಡಿದ ಉದಾಹರಣೆ ಇಲ್ಲ.

ಹಾಗಾಗಿ ಕ್ರಿಕೆಟ್ ಪ್ರೇಮಿಗಳು ದೋನಿ ಬಳಗದ ಬಗ್ಗೆ ತಮ್ಮ ಒಡಲಲ್ಲಿ ಕಟ್ಟಿಕೊಂಡು ಬಂದಿರುವ ಅಭಿಮಾನದ ಗೋಪುರ ಕುಸಿಯುವ ಹಂತದಲ್ಲಿದೆ. ಮತ್ತೊಂದು ಪಂದ್ಯ ಸೋತರೆ ಮುಗಿಯಿತು; ಅಭಿಮಾನಿಗಳು ಹಾಗೂ ಮಾಜಿ ಆಟಗಾರರು ಸುಮ್ಮನಿರಲಾರರು. ನಾಯಕ ದೋನಿ ಸೇರಿದಂತೆ ಪ್ರಮುಖ ಆಟಗಾರರ ತಲೆದಂಡ ಅನಿವಾರ್ಯವಾಗಬಹುದು. ಏಕೆಂದರೆ ಕ್ರಿಕೆಟ್ ಮಂಡಳಿ, ಆಯ್ಕೆ ಸಮಿತಿ ಹಾಗೂ ದೋನಿ ಅವರನ್ನು ಈಗಾಗಲೇ ಮಾಜಿ ಆಟಗಾರರು ತರಾಟೆಗೆ ತೆಗೆದುಕೊಂಡಾಗಿದೆ.

ಈ ಕಾರಣ, ಜಾಮ್ತಾದಲ್ಲಿರುವ ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾಗಲಿರುವ ಟೆಸ್ಟ್ ಕ್ರಿಕೆಟ್ ಸರಣಿಯ ನಾಲ್ಕನೇ ಪಂದ್ಯ ದೋನಿ ಬಳಗಕ್ಕೆ ಅಗ್ನಿಪರೀಕ್ಷೆಯಾಗಿದೆ. ಅವಮಾನದಿಂದ ಪಾರಾಗಲು ಇದು ಕೊನೆಯ ಅವಕಾಶ ಕೂಡ.

ಭಾರತ ತಂಡದಲ್ಲಿ ಪ್ರಸಿದ್ಧ ಆಟಗಾರರಿದ್ದಾರೆ. ಆದರೆ ಅವರೆಲ್ಲಾ ಈಗ ಹಲ್ಲು ಹಾಗೂ ಉಗುರು ಕಳೆದುಕೊಂಡ ಸಿಂಹದಂತಾಗಿದ್ದಾರೆ. ಸತತ ಸೋಲಿಗಿಂತ ಮುಖ್ಯವಾಗಿ ಆತಿಥೇಯ ತಂಡದ ಆಟಗಾರರು ಪೂರ್ಣ ಪ್ರಮಾಣದ ಬದ್ಧತೆ ಪ್ರದರ್ಶಿಸದೆ ಇರುವುದು ಮಾಜಿ ಕ್ರಿಕೆಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಅವರೆಲ್ಲಾ ಈ ಆಟಗಾರರ ಮನೋಭಾವ ಹಾಗೂ ಆಟದ ವೈಖರಿಯನ್ನು ಪ್ರಶ್ನಿಸುತ್ತಿದ್ದಾರೆ.

`ಇಂಥ ಪಿಚ್‌ಗಳಲ್ಲಿ ನನ್ನ ಅಮ್ಮ ಹಾಗೂ ಅಜ್ಜಿ ಕೂಡ ಭಾರತದ ಬ್ಯಾಟ್ಸ್‌ಮನ್‌ಗಳಿಗಿಂತ ಚೆನ್ನಾಗಿ ಬ್ಯಾಟ್ ಮಾಡುತ್ತಾರೆ' ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಹಾಗೂ ವೀಕ್ಷಕ ವಿವರಣೆಗಾರ ಜೆಫ್ರಿ ಬಾಯ್ಕಾಟ್ ಛೇಡಿಸುವಷ್ಟರ ಮಟ್ಟಿಗೆ ಆತಿಥೇಯರ ಬ್ಯಾಟಿಂಗ್ ಪ್ರದರ್ಶನ ಕಳಪೆಯಾಗಿದೆ.

ಅಸ್ತಮಿಸಿರುವ ಸರಣಿ ಜಯದ ಆಸೆ
ಸರಣಿ ಗೆಲ್ಲುವ ಆತಿಥೇಯರ ಆಸೆ ಅಸ್ತಮಿಸಿದೆ. ಆದರೆ ಡ್ರಾ ಮಾಡಿಕೊಳ್ಳುವ ಅವಕಾಶ ಇನ್ನೂ ಇದೆ. ಅದಕ್ಕಾಗಿ ಇಲ್ಲಿ ಗೆಲ್ಲಬೇಕು. ಅದು ಕೊಂಚ ಸಮಾಧಾನಕ್ಕೆ ಕಾರಣವಾಗಬಹುದು. 12 ವರ್ಷಗಳ ಅವಧಿಯಲ್ಲಿ ಭಾರತದ ನೆಲದಲ್ಲಿ ಸರಣಿ ಗೆದ್ದಿರುವ ಏಕೈಕ ತಂಡ ಆಸ್ಟ್ರೇಲಿಯಾ. 2004ರಲ್ಲಿ ಕಾಂಗರೂ ಪಡೆ ಈ ಸಾಧನೆ ಮಾಡಿತ್ತು.

ಸರಣಿ ಜಯದತ್ತ ಆಂಗ್ಲರ ಚಿತ್ತ
2-1 ಮುನ್ನಡೆ ಸಾಧಿಸಿರುವ ಇಂಗ್ಲೆಂಡ್ ಆಟಗಾರರ ಮನಸ್ಸಿನ ಅಂತಃಪುರದಲ್ಲಿ ಹೊಸ ಕನಸೊಂದು ಶುರುವಾಗಿದೆ. ಸರಣಿ ಜಯಿಸಿ ತಮ್ಮ ದೇಶದ ಕ್ರಿಕೆಟ್ ಪ್ರೇಮಿಗಳ ಹೃದಯ ಗದ್ದುಗೆ ಏರಲು ಸಿದ್ಧತೆ ನಡೆಸಿದ್ದಾರೆ. ಈ ಪಂದ್ಯವನ್ನು ಡ್ರಾ ಮಾಡಿಕೊಂಡರೂ ಅಂತಹ ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಗಬಹುದು.

ಡೇವಿಡ್ ಗ್ರೋವರ್ ಸಾರಥ್ಯದ ಆಂಗ್ಲರ ಬಳಗ 1984-85ರಲ್ಲಿ ಭಾರತ ತಂಡವನ್ನು ಭಾರತದ ನೆಲದಲ್ಲಿ ಸೋಲಿಸಿ 2-1ರಲ್ಲಿ ಟೆಸ್ಟ್ ಸರಣಿ ಗೆದ್ದಿತ್ತು. ಆ ಬಳಿಕ ಇಲ್ಲಿ ಈ ತಂಡಕ್ಕೆ ಸರಣಿ ಗೆಲುವು ಮರೀಚಿಕೆಯಾಗಿ ಉಳಿದಿದೆ.

ಆಸಕ್ತಿ ಕಳೆದುಕೊಂಡ ಪಿಚ್ ವಿವಾದ
ಪಿಚ್ ಸ್ವರೂಪದ ಬಗೆಗಿನ ಆಸಕ್ತಿ ಈಗ ಕಡಿಮೆಯಾಗಿರುವಂತಿದೆ. ಏಕೆಂದರೆ ಭಾರತದ ಆಟಗಾರರ ಅಗತ್ಯಕ್ಕೆ ತಕ್ಕಂತೆ ರೂಪಿಸಲಾಗಿರುವ ಪಿಚ್‌ನಲ್ಲಿಯೇ ಇಂಗ್ಲೆಂಡ್ ಬೌಲರ್‌ಗಳು ಮಿಂಚು ಹರಿಸುತ್ತಿದ್ದಾರೆ. ಹಾಗಾಗಿ ದೋನಿಯೇ ಈಗ ಗೊಂದಲಕ್ಕೆ ಸಿಲುಕಿದ್ದಾರೆ. ಆದರೂ ಅವರು ಬುಧವಾರ ಇಲ್ಲಿನ ಪಿಚ್ ಕ್ಯೂರೇಟರ್ ಪ್ರವೀಣ್ ಜೊತೆ ದೀರ್ಘ ಸಮಾಲೋಚನೆಯಲ್ಲಿ ತೊಡಗಿದ್ದರು.

ಈ ಪಂದ್ಯಕ್ಕೆ ಯುವರಾಜ್ ಬದಲಿಗೆ ಸ್ಥಾನ ಪಡೆದಿರುವ ಆಲ್‌ರೌಂಡರ್ ರವೀಂದ್ರ ಜಡೇಜಾ ಪದಾರ್ಪಣೆ ಮಾಡುವ ನಿರೀಕ್ಷೆ ಇದೆ. ರಹಾನೆ ಕೂಡ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಇಬ್ಬರು ವೇಗಿಗಳು ಹಾಗೂ ಇಬ್ಬರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುವ ಸಂಭವವಿದೆ. ಆದರೆ ಇಲ್ಲಿನ ಪಿಚ್ ಸ್ವರೂಪ ಗಮನಿಸಿದರೆ ಒಬ್ಬ ವೇಗಿ ಹಾಗೂ ಮೂವರು ಸ್ಪಿನ್ನರ್‌ಗಳನ್ನು ಆಡಿಸಿದರೂ ಅಚ್ಚರಿ ಇಲ್ಲ. ಹಾಗಾದಲ್ಲಿ ಲೆಗ್ ಸ್ಪಿನ್ನರ್ ಚಾವ್ಲಾಗೆ ಅವಕಾಶ ಸಿಗಲಿದೆ.

ಸ್ಟೀವನ್ ಫಿನ್ ಅನುಮಾನ: ಗಾಯಗೊಂಡಿರುವ ವೇಗಿ ಫಿನ್ ಕಣಕ್ಕಿಳಿಯುವುದು ಅನುಮಾನ. ಅವರ ಬದಲು ಬ್ರೆಸ್ನನ್ ಆಡಬಹುದು. ಆದರೆ ಈ ಸರಣಿಯಲ್ಲಿ 538 ರನ್ ಗಳಿಸಿರುವ ಪ್ರವಾಸಿ ನಾಯಕ ಕುಕ್ ಅವರನ್ನು ನಿಯಂತ್ರಿಸುವುದೇ ದೋನಿ ಬಳಗಕ್ಕೆ ದೊಡ್ಡ ಸವಾಲಾಗಿದೆ.

ಭಾರತ ಹಿಂದೆ ಇಂತಹ ಸಂಕಷ್ಟಕ್ಕೆ ಸಿಲುಕಿದ್ದಾಗ ಹಲವು ಬಾರಿ ಎದ್ದು ಬಂದ ಉದಾಹರಣೆ ಇದೆ. `ಕಿತ್ತಲೆ ನಗರಿ'ಯಲ್ಲಿ ನಡೆಯಲಿರುವ ಈ ಪಂದ್ಯ ಆತಿಥೇಯರ ಪಾಲಿಗೆ ಹುಳಿಯಾಗಲಿದೆಯೋ? ಸಿಹಿಯಾಗಲಿದೆಯೋ? ಎಂಬ ಕುತೂಹಲ ಈಗ ಎಲ್ಲರ ಮನದಲ್ಲಿದೆ.

ತಂಡಗಳು
ಭಾರತ: ಮಹೇಂದ್ರ ಸಿಂಗ್ ದೋನಿ (ನಾಯಕ), ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್, ಚೇತೇಶ್ವರ ಪೂಜಾರ, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಆರ್.ಅಶ್ವಿನ್, ಪ್ರಗ್ಯಾನ್ ಓಜಾ, ಪಿಯೂಷ್ ಚಾವ್ಲಾ, ಇಶಾಂತ್ ಶರ್ಮ, ಅಶೋಕ್ ದಿಂಡಾ, ಅಜಿಂಕ್ಯ ರಹಾನೆ, ಮುರಳಿ ವಿಜಯ್ ಹಾಗೂ ಪರ್ವಿಂದರ್ ಅವಾನ.

ಇಂಗ್ಲೆಂಡ್: ಅಲಸ್ಟೇರ್ ಕುಕ್ (ನಾಯಕ), ನಿಕ್ ಕಾಂಪ್ಟನ್, ಕೆವಿನ್ ಪೀಟರ್ಸನ್, ಎಯೋನ್ ಮಾರ್ಗನ್, ಜೊನಾಥನ್ ಟ್ರಾಟ್, ಮಟ್ ಪ್ರಯೋರ್, ಇಯಾನ್ ಬೆಲ್, ಜಾನಿ ಬೈಸ್ಟೋವ್, ಟಿಮ್ ಬ್ರೆಸ್ನನ್, ಸ್ಟುವರ್ಟ್ ಬ್ರಾಡ್, ಜೇಮ್ಸ ಆ್ಯಂಡರ್ಸನ್, ಗ್ರೇಮ್ ಸ್ವಾನ್, ಸ್ಟುವರ್ಟ್ ಮೀಕರ್, ಗ್ರಹಾಮ್ ಆನಿಯನ್ಸ್, ಮಾಂಟಿ ಪನೇಸರ್, ಸಮಿತ್ ಪಟೇಲ್, ಜೋ ರೂಟ್ ಹಾಗೂ ಸ್ಟೀವನ್ ಫಿನ್.

ಅಂಪೈರ್‌ಗಳು: ರಾಡ್ ಟಕ್ಕರ್ (ಆಸ್ಟ್ರೇಲಿಯಾ) ಹಾಗೂ ಕುಮಾರ ಧರ್ಮಸೇನಾ (ಶ್ರೀಲಂಕಾ). ಮೂರನೇ ಅಂಪೈರ್: ಎಸ್.ರವಿ (ಭಾರತ). ಮ್ಯಾಚ್ ರೆಫರಿ: ಜೆಫ್ ಕ್ರೋವ್ (ನ್ಯೂಜಿಲೆಂಡ್)
ಪಂದ್ಯ ಆರಂಭ: ಬೆಳಿಗ್ಗೆ 9.30 ಗಂಟೆಗೆ. ನೇರ ಪ್ರಸಾರ: ಸ್ಟಾರ್ ಕ್ರಿಕೆಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT