ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿನ ಶ್ರೇಯ ಬೌಲರ್‌ಗಳದ್ದು: ಭಜ್ಜಿ

Last Updated 9 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಮೊದಲು ಬ್ಯಾಟಿಂಗ್ ಮಾಡಿ ಎದುರಾಳಿ ತಂಡಕ್ಕೆ ಗುರಿ ನೀಡಿ ಬೌಲಿಂಗ್ ಮೂಲಕವೇ ಪಂದ್ಯ ಗೆಲ್ಲಬೇಕು ಎನ್ನುವ ಲೆಕ್ಕಾಚಾರ ತಪ್ಪಾಗಲಿಲ್ಲ. ಲಸಿತ್ ಮಾಲಿಂಗ ಹಾಗೂ ಜೇಮ್ಸ ಫ್ರಾಂಕ್ಲಿನ್ ಅವರ ಕರಾರುವಾಕ್ಕಾದ ದಾಳಿಯ ನೆರವಿನಿಂದ ಸೆಮಿಫೈನಲ್ ಪಂದ್ಯದಲ್ಲಿ ಗೆಲುವು ಸಾಧ್ಯವಾಯಿತು ಎಂದು ಮುಂಬೈ ಇಂಡಿಯನ್ಸ್ ತಂಡದ ನಾಯಕ ಹರಭಜನ್ ಸಿಂಗ್ ಹೇಳಿದರು.

ಶನಿವಾರ ನಡೆದ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಮುಂಬೈ ತಂಡದವರು ಇಂಗ್ಲೆಂಡ್‌ನ ಕೌಂಟಿ ತಂಡವಾದ ಸಾಮರ್ಸೆಟ್ ಎದುರು 10 ರನ್‌ಗಳ ಗೆಲುವು ಪಡೆದಿದ್ದರು.
`ನಮ್ಮ ತಂಡ ನೀಡಿದ್ದ 161 ರನ್‌ಗಳ ಗುರಿಗೆ ಸಾಮರ್ಸೆಟ್ ಉತ್ತಮ ಪ್ರತಿರೋಧ ತೋರಿತು. ಕೊನೆಯ 12 ಎಸೆತಗಳಲ್ಲಿ ಅಗತ್ಯವಿದ್ದ 22 ರನ್ ಗಳಿಸಲು ಆ ತಂಡ ಯತ್ನಿಸಿತು.

ಆದರೆ ಮಾಲಿಂಗ ಹಾಗೂ ಫ್ರಾಂಕ್ಲಿನ್ ಅದಕ್ಕೆ ಅವಕಾಶ ನೀಡಲಿಲ್ಲ. ಇದರಿಂದ ಫೈನಲ್ ಪ್ರವೇಶಿಸಲು ಸಾಧ್ಯವಾಯಿತು. ಶ್ರೀಲಂಕಾದ ವೇಗಿ ಉತ್ತಮ ಆರಂಭ ಒದಗಿಸಿದರು. ಕೊನೆಯ ಎರಡು ಓವರ್‌ಗಳು ನಮಗೆ ಮಹತ್ವಪೂರ್ಣವಾಗಿತ್ತು ಎಂದು ಭಜ್ಜಿ ಪಂದ್ಯದ ನಂತರ ಪ್ರತಿಕ್ರಿಯಿಸಿದರು.

ಬ್ಯಾಟ್ಸ್‌ಮನ್‌ಗಳ ಮೇಲೆ ನಂಬಿಕೆ ಇಟ್ಟು ಮೊದಲು ಬ್ಯಾಟಿಂಗ್ ಆಯ್ದುಕೊಂಡೆ. ನಿರೀಕ್ಷೆ ಹುಸಿಯಾಗಲಿಲ್ಲ. ಉತ್ತಮ ಮೊತ್ತವನ್ನು ಪೇರಿಸಿದೆವು. ನಮ್ಮ ತಂಡದ ಗೆಲುವಿಗೆ ಅಷ್ಟು ರನ್ ಸಾಕಿತ್ತು ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.

`ಸೆಮಿಫೈನಲ್ ಪಂದ್ಯದಲ್ಲಿ ಗೆಲುವು ಪಡೆದು ಫೈನಲ್ ಪ್ರವೇಶಿಸುವ ಉತ್ತಮ ಅವಕಾಶ ಸಿಕ್ಕಿತ್ತು. ಆದರೆ, ಅವಕಾಶ ಕಳೆದುಕೊಂಡೆವು~ ಎಂದು ಸಾಮರ್ಸೆಟ್ ತಂಡದ ನಾಯಕ ಅಲ್ಫಾನ್ಸೊ ಥಾಮಸ್ ಬೇಸರ ವ್ಯಕ್ತಪಡಿಸಿದರು.
 
ನಮ್ಮ ತಂಡದ ಆಟಗಾರರು ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದರು.ಸಾಕಷ್ಟು ಪರಿಶ್ರಮ ಪಟ್ಟರು. ಇದರಿಂದ ನಮಗಿಂತಲೂ ಬಲಿಷ್ಠ ತಂಡಗಳನ್ನು ಮಣಿಸಲು ಸಾಧ್ಯವಾಯಿತು. ಈ ಟೂರ್ನಿಯಿಂದ ಸಾಕಷ್ಟು ಮನರಂಜನೆ ಸಹ ಸಿಕ್ಕಿತು. ಮಾಲಿಂಗ ಶ್ರೇಷ್ಠ ಬೌಲಿಂಗ್ ಮಾಡಿದರು ಎಂದು ಥಾಮಸ್ ಹೇಳಿದರು.

ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮಾಲಿಂಗ (20ಕ್ಕೆ4) ಹಾಗೂ ಫ್ರಾಂಕ್ಲಿನ್ (16ಕ್ಕೆ2) ಗಳಿಸಿ ತಮ್ಮ ತಂಡ ಫೈನಲ್ ಪ್ರವೇಶಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT