ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊತ್ತೇನ್ರಿ ಪಲ್ಮನರಿ ಧಮನಿಬಂಧ?

Last Updated 10 ಜನವರಿ 2014, 19:30 IST
ಅಕ್ಷರ ಗಾತ್ರ

ಒಂದು ದಿನ 26 ವರ್ಷದ ಶ್ರೀಮತಿ ಹಂಸಾ (ಹೆಸರು ಬದಲಾಯಿಸಿದೆ) ಅವರಿಗೆ ಹಠಾತ್ತಾಗಿ ಉಸಿರು ನಿಂತಂತಾಗಿ ಸುಮಾರು ಎರಡು ಸಲ ಉಸಿರು ಹೊರಬಿದ್ದಿತು. ಅವರಿಗೆ ಮೂರು ದಿನಗಳ ಹಿಂದೆ ಬಲಗಾಲಿನಲ್ಲಿ ನೋವು, ಊತ ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಹಂಸಾ ಅವರನ್ನು ತಪಾಸಣೆಗೆ ಒಳಪಡಿಸಿದ ವೈದ್ಯರು ಅವರಿಗೆ ಪಲ್ಮನರಿ ಎಂಬೋಲಿಸಮ್ ಅಂದರೆ ಆಳದ ರಕ್ತನಾಳಗಳಲ್ಲಿ ಕಂಡುಬರುವ ರಕ್ತ ಹೆಪ್ಪುಗಟ್ಟಿರುವುದು ಪತ್ತೆಯಾಯಿತು. ಹೆಪ್ಪುಗಟ್ಟಿದ ರಕ್ತವನ್ನು ಕರಗಿಸಲು ಚುಚ್ಚುಮದ್ದನ್ನು ನೀಡಲಾಯಿತು.

ಇದಾದ ನಂತರ ಆಕೆ ಕೆಲದಿನಗಳವರೆಗೆ ರಕ್ತದಲ್ಲಿ ಉಂಟಾದ ರಕ್ತ ತೆಳುಗೊಳಿಸುವ ಔಷಧವನ್ನು ತೆಗೆದುಕೊಳ್ಳುವಂತೆ ಸೂಚಿಸಲಾ­ಯಿತು. ಅವರು ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸುತ್ತಿದ್ದರು. ಅದರ ಬದಲು ಬೇರೆ ಗರ್ಭ­ನಿರೋಧಕ ಸಾಧನ ಬಳಸಲು ಸೂಚಿ­ಸಲಾಯಿತು. ಗರ್ಭನಿರೋಧಕ ಮಾತ್ರೆ ತೆಗೆದುಕೊಳ್ಳುವುದರಿಂದ ಮಹಿಳೆ­ಯರಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಹೆಚ್ಚು­ತ್ತದೆ.

ಋತುಬಂಧದ ನಂತರ ತೆಗದು­ಕೊಳ್ಳುವ ಹಾರ್ಮೋನು ಬದಲಾವಣೆ ಚಿಕಿತ್ಸೆ ಹಾಗೂ ಬಂಜೆತನ ನಿವಾರಣೆ ಚಿಕಿತ್ಸೆ ಸೇರಿದಂತೆ ಕೆಲವು ಚಿಕಿತ್ಸೆಗಳಲ್ಲಿ ನೀಡಲಾಗುವ ಹಾರ್ಮೋನು ಲಸಿಕೆಗಳಿಂದ ಪಲ್ಮನರಿ ಧಮ­ನಿಬಂಧ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ ಎಂದು ಇತ್ತೀಚಿನ ಕೆಲವು ಅಧ್ಯಯನಗಳು ಹೇಳಿವೆ.
ದೇಹದ ಅಣು ಅಣುವಿಗೂ ರಕ್ತ ಪೂರೈಕೆ ಮಾಡಿ, ಅಶುದ್ಧ ರಕ್ತವನ್ನು ಪಡೆದು, ಶುದ್ಧ ರಕ್ತವನ್ನು ಪೂರೈಸುವ ಪ್ರಮುಖ ರಕ್ತನಾಳಗಳ ಪಾತ್ರ ಬಹಳ ದೊಡ್ಡದು. ಅಂಥದ್ದೊಂದು ರಕ್ತನಾಳದೊಳಗೆ ತಡೆ ಉಂಟಾದರೆ ಆಗುವ ಅನಾಹುತ ಊಹಿಸಲಸಾಧ್ಯ. ಜೀವನ ಶೈಲಿಯಿಂದಾಗಿ ಪಲ್ಮನರಿ ಧಮನಿಬಂಧದಿಂದ ಬಳಲುತ್ತಿರುವ ಸಂಖ್ಯೆ ಏರುಮುಖಿಯಾಗಿದೆ.

ಕಾಲಿನಿಂದ ಹೃದಯದತ್ತ ಹೊರಟ ಪಲ್ಮನರಿ ಅಪಧಮನಿಯಲ್ಲಿ ಹೆಪ್ಪುಗಟ್ಟಿದ ರಕ್ತ ಕಣ, ಅಥವಾ ರಕ್ತದ ಹೆಪ್ಪುಗಟ್ಟುವಿಕೆಯಿಂದಾಗಿ ರಕ್ತ ಪರಿಚಲನೆ ಸರಾಗವಾಗು­ವುದಿಲ್ಲ. ರಕ್ತ ಪರಿಚಲನೆಗೆ ಅಡೆತಡೆ ಉಂಟಾಗುವುದಕ್ಕೆ ಪಲ್ಮನರಿ ಧಮನಿಬಂಧ ಅಥವಾ ಪಲ್ಮನರಿ ಎಂಬೋಲಿಸಂ ಎನ್ನಲಾಗುತ್ತದೆ. ಈ ಸಮಸ್ಯೆಗೆ ಬಲಿಯಾಗುತ್ತಿರು­ವವರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಲಿದೆ ಎನ್ನುವುದೇ ಆಘಾತಕಾರಿ.

ರಕ್ತನಾಳಗಳಲ್ಲಿ ಕಂಡುಬರುವ ರಕ್ತಹೆಪ್ಪುಗಟ್ಟುವಿಕೆಯು ಕಾಲಿನ ಮೀನಖಂಡದಿಂದ ಮೇಲಿರುವ ರಕ್ತನಾಳಗಳಲ್ಲಿ ಊತದ ಮೂಲಕ ಗೋಚರಿಸುತ್ತವೆ. ಹೆಪ್ಪು ಗಟ್ಟಿದ ರಕ್ತದ ಕಣಗಳು ಕ್ರಮೇಣ ಕಿಬ್ಬೊಟ್ಟೆಯ ಮೂಲಕ ಶ್ವಾಸಕೋಶ ತಲುಪುತ್ತವೆ. ಆಗ ಪಲ್ಮನರಿ ಧಮನಿಬಂಧ ಉಂಟಾಗುತ್ತದೆ. ದೀರ್ಘ ಕಾಲದವರೆಗೆ ಹಾಸಿಗೆ ಹಿಡಿದವರು, ಅಪಘಾತದಿಂದ ಹೆಚ್ಚು ಕಾಲ ಮಲಗಿದವರಿಗೆ ಹಾಗೂ ಚಲನ ಶಕ್ತಿ ಕಳೆದುಕೊಂಡವರು ಈ ಸಮಸ್ಯೆಗೆ ತುತ್ತಾಗುವುದು ಹೆಚ್ಚು.

ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರಲು ಇರುವ ಪ್ರಮುಖ ಕಾರಣ­ಗ­ಳೆಂದರೆ ಅತಿಯಾಗಿ ಸೇವಿಸುವ ಗರ್ಭನಿರೋಧಕ ಮಾತ್ರೆ. ಗರ್ಭನಿರೋಧಕ ಮಾತ್ರೆಯು ದೇಹದ ಹಾರ್ಮೋನುಗಳ ಮೇಲೆ ಪ್ರಭಾವ ಬೀರುವುದ­ರಿಂದ ರಕ್ತನಾಳ­ದಲ್ಲಿ ಹಪ್ಪುಗಟ್ಟುವಿಕೆ ಉಂಟಾಗುತ್ತದೆ. ಇದು ಮುಂದೆ ಪಲ್ಮನರಿ ಧಮನಿಬಂಧಕ್ಕೆ ಕಾರಣವಾಗಬಹುದು ಎಂದು ಬೆಂಗಳೂರಿನ ಕನ್ನಿಂಗ್‌ಹ್ಯಾಮ್‌ ರಸ್ತೆಯಲ್ಲಿರುವ ಫೋರ್ಟಿಸ್‌ ಆಸ್ಪತ್ರೆಯ ಹೃದಯಶಸ್ತ್ರಚಿಕಿತ್ಸಾ ತಜ್ಞ ಡಾ. ಶ್ರೀಕಾಂತ ಶೆಟ್ಟಿ ವಿವರಿಸುತ್ತಾರೆ, ಗರ್ಭಾವಸ್ಥೆಯಲ್ಲಿ ಹಾರ್ಮೋನುಗಳ ವ್ಯವಸ್ಥೆಯಲ್ಲಿ ವ್ಯತ್ಯಾಸವಾಗಿರುತ್ತದೆ. 

ಮಗು ಬೆಳೆದಂತೆಲ್ಲ ಕಿಬ್ಬೊಟ್ಟೆಯ ಮೂಲಕ ಹಾದು ಬರುವ ಪಲ್ಮನರಿ ಅಪಧಮನಿ ರಕ್ತನಾಳದ ಮೇಲೆ ಒತ್ತಡ ಹೆಚ್ಚಾಗುವುದರಿಂದಲೂ ಈ ಸಮಸ್ಯೆ ಕಾಡಬಹುದು. ಇದರೊಂದಿಗೆ ಬಂಜೆತನಕ್ಕೆ ಚಿಕಿತ್ಸೆ ಪಡೆಯುವಾಗ ಅಂಡಾಣು­ಗಳ ಉತ್ಪತ್ತಿಗೆ ನೀಡುವ ಚುಚ್ಚುಮದ್ದುಗ­ಳಿಂದಲೂ ದೇಹದಲ್ಲಿ ಹಾರ್ಮೋನುಗಳ ಬದಲಾವಣೆ­ಯಾಗುತ್ತದೆ.  ಋತುಬಂಧದ ವೇಳೆ ದೇಹದಲ್ಲಾಗುವ ಬದಲಾವಣೆಗಳೂ ಇದಕ್ಕೆ ಕಾರಣವಾಗಬಹುದು.

ಗರ್ಭವತಿಯರ ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟಬಹುದಾದ ಅಪಾಯ 3ರಿಂದ 4 ಪಟ್ಟು ಹೆಚ್ಚು ಇರುವುದರಿಂದ ಹೃದಯಾಘಾತ ಅಥವಾ ಪಾರ್ಶ್ವವಾಯು ಸಂಭ­ವಿಸ­ಬಹುದು. ಇವರಲ್ಲಿ ವೀನಸ್‌ ಕ್ಲಾಟಿಂಗ್‌ ಸಂಭವಿಸುವ ಪ್ರಮಾಣ 4ರಿಂದ 5 ಪಟ್ಟು ಅಧಿಕ. ಗರ್ಭಾ­ವಸ್ಥೆಯಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಹಾಗು ಹೆಪ್ಪುಗಟ್ಟಿದ ರಕ್ತದ ದೇಹದ ಮೇಲ್ಬಾಗಕ್ಕೆ ಸ್ಥಳಾಂತರಗೊಳ್ಳುವುದರಿಂದ ಥ್ರೋಂಬೋ ಎಂಬೋಲಿಕ್‌ನ ಸಂಭವನೀಯತೆಯು ಪ್ರತಿ ಸಾವಿರದ ಪ್ರಸವದಲ್ಲಿ ಎರಡು ಪ್ರಕರಣಗಳು ವರದಿಯಾಗುತ್ತವೆ ಎನ್ನುತ್ತಾರೆ ವೈದ್ಯರು.

‘ಪಲ್ಮನರಿ ಧಮನಿಬಂಧ ಉಂಟಾದಲ್ಲಿ ಕಾಲಿನ ಮೀನಖಂಡ, ತೊಡೆಯಲ್ಲಿ ನೋವು ಹಾಗೂ ಊತ ಉಂಟಾಗುತ್ತದೆ. ಇದು ಆರಂಭಿಕ ಹಂತ. ಇದನ್ನು ನಿರ್ಲಕ್ಷಿ­ಸಿದರೆ ಹೆಪ್ಪು­ಗಟ್ಟಿದ ರಕ್ತದ ಕಣ ಶ್ವಾಸಕೋಶ ಸೇರುತ್ತದೆ. ಆಗ ಉಸಿರಾಟಕ್ಕೆ ತೊಂದರೆ, ಎದೆ ನೋವು, ಕಣ್ಣಿಗೆ ಕತ್ತಲೆ ಬಂದಂತಾಗುತ್ತದೆ. ಕಫ ಹೆಚ್ಚಾಗುವುದು ಅಥವಾ ಹಠಾತ್‌ ಕುಸಿತ ಸಹ ಕಂಡುಬರಬ­ಹುದು. ಸೂಕ್ತ ಚಿಕಿತ್ಸೆ ನೀಡದಿದ್ದರೆ ಹಠಾತ್‌ ಸಾವು  ಸಂಭವಿಸುವ ಸಾಧ್ಯತೆಯೂ ಇರುತ್ತದೆ’ ಎಂದು ಡಾ. ಶ್ರೀಕಾಂತ್‌ ಶೆಟ್ಟಿ ಎಚ್ಚರಿಸುತ್ತಾರೆ.

‘ಸಿಟಿ ಸ್ಕ್ಯಾನ್‌ನಿಂದ ರಕ್ತ ಹೆಪ್ಪುಗಟ್ಟಿರುವು­ದುನ್ನು ನಿಖರವಾಗಿ ತಿಳಿಯಬಹುದು. ರಕ್ತನಾಳ­ದಲ್ಲಿ ಉಂಟಾದ ರಕ್ತ ಹೆಪ್ಪುಗಟ್ಟುವಿಕೆ­ಯನ್ನು ನಿವಾರಿಸಲು ಥ್ರೊಂಬೊ­ಲೈಟ್‌ ಲಸಿಕೆ ನೀಡಲಾ­ಗು­ತ್ತದೆ. ನಂತರ ರಕ್ತ ತಿಳಿಗೊಳಿಸುವ ಮಾತ್ರೆ ಸೇವಿಸಬೇಕಾ­ಗುತ್ತದೆ. ಕಿಬ್ಬೊಟ್ಟೆಯಲ್ಲಿ ಉಂಟಾ­ಗುವ ಪಲ್ಮನರಿ ಧಮನಿಬಂಧ  ತಡೆಯಲು ಅಲ್ಲಿ ಕೃತಕ ಜಾಲರಿಯನ್ನು ಅಳವಡಿಸಲಾಗುತ್ತದೆ’ ಎಂದು ಅವರು ವಿವರಿಸುತ್ತಾರೆ.

ಅದರಲ್ಲೂ ಅಸಹಜವಾಗಿ ರಕ್ತ ಹೆಪ್ಪುಗಟ್ಟು­ವುದು, ರಕ್ತ ಪ್ರವಾಹದ ರಭಸದಲ್ಲಿ ಇಳಿಕೆ, ನರ­ಗ­ಳಲ್ಲಿ ಹಾನಿಯುಂಟಾಗುವುದು ಈ ಮೂರು ಅಪಾಯಗಳು ಡೀಪ್ ವೇನ್ ಥ್ರೊಂಬೋಸಿಸ್ ಅಥವಾ ಪಲ್ಮನರಿ ಎಂಬೋಲಿಸಮ್ ಉಂಟಾ­ಗುವ ಸಂಭವನೀಯ­ತೆಯನ್ನು ಹೆಚ್ಚಿಸುತ್ತವೆ. ಈ ಅಪಾಯ ಗರ್ಭಾವಸ್ಥೆಯಲ್ಲಿ ಹೆಚ್ಚಾಗಿರುತ್ತವೆ. ಇದಕ್ಕಿರುವ ಕಾರಣಗಳು ಹಲವು. ಥ್ರೊಂಬೋ­ಫಿಲಿಯಾ ಸಮಸ್ಯೆಯು ಅನು­ವಂಶೀ­ಯವಾಗಿ ಬರಬಹುದು.

ದೀರ್ಘಕಾಲದವರೆಗೆ ಹಾಸಿಗೆ ಹಿಡಿದವರು ಅಥವಾ ಹೆಚ್ಚು ದಿನಗಳ ಕಾಲ ನಡೆದಾಡುವವರು, ಹೈಪರ್‌ ರೆಮಿಸೆಸ್‌, ನಿರ್ಜಲೀಕರಣ, ತೀವ್ರ ಸ್ವರೂಪದ ಸೋಂಕು, ರಕ್ತಸಂಚಯದಿಂದ ಹೃದಯ ಸ್ತಂಭನ, ಮೂತ್ರಪಿಂಡದ ತೊಂದರೆ, ಪ್ರೀಕ್ಲಾಂಪ್ಸಿಯಾ, ತೀವ್ರಸ್ವರೂಪದಲ್ಲಿ ಊದಿಕೊಂಡ ನರಗಳು, ಶಸ್ತ್ರಚಿಕಿತ್ಸೆ, ಅಪಘಾತ ಕೂಡಾ ಇದಕ್ಕೆ ಕಾರಣ.

ಈ ಸಮಸ್ಯೆಗೆ ಸರಳ ಪರಿಹಾರವೆಂದರೆ ಹೆಚ್ಚು ನೀರು ಕುಡಿಯ ಬೇಕು. ನಡಿಗೆ ಅತ್ಯುತ್ತಮ ವ್ಯಾಯಾಮ. ದೀರ್ಘ ಕಾಲ ವಿಮಾನದಲ್ಲಿ ಪ್ರಯಾಣ ಮಾಡುವವರು ಕೆಲವು ಸರಳ ವ್ಯಾಯಾಮ ಮಾಡುವುದು ಉತ್ತಮ. ಈಗಾಗಲೇ ಪಲ್ಮನರಿ ಧಮನಿಬಂಧಕ್ಕೆ ಚಿಕಿತ್ಸೆ ಪಡೆದವರು ರಕ್ತ ತೆಳುಗೊಳಿಸುವ ಔಷಧ ಸೇವಿಸಬೇಕು. ನರಗಳಲ್ಲಿ ಊತ ಹಾಗೂ ಕಾಲುಗಳಲ್ಲಿ ನೋವು ಕಂಡುಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸಲು ಮರೆಯಬಾರದು ಎನ್ನುತ್ತಾರೆ ಡಾ. ಶ್ರೀಕಾಂತ ಶೆಟ್ಟಿ. (ಮಾಹಿತಿ: 9686860310)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT