ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋದಲಿ ಗುಂಗು

Last Updated 19 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಡಿಸೆಂಬರ್ ಆರಂಭವಾಗುತ್ತಿದ್ದಂತೆಯೇ ಕ್ರಿಸ್‌ಮಸ್ ಹಬ್ಬದ ಸಂಭ್ರಮ ಗರಿಗೆದರುತ್ತದೆ. ಗಡಗಡ ನಡುಗಿಸುವ ಚಳಿಯೊಂದಿಗೇ ಹಬ್ಬದ ಹುರುಪೂ ಹೆಚ್ಚುತ್ತದೆ. ಹಬ್ಬಕ್ಕೆ ಕೆಲ ದಿನಗಳ ಮುನ್ನವೇ ಅಲ್ಲಲ್ಲಿ ಶುರುವಾಗುವ ಕೇಕ್ ಮಿಕ್ಸಿಂಗ್‌ನ ಮೋಜೂ ಹಬ್ಬಕ್ಕೆ ಮುನ್ನುಡಿಯಾಗುತ್ತದೆ.

ಈಗಾಗಲೇ ಎಲ್ಲೆಲ್ಲೂ ಸಾಂತಾಕ್ಲಾಸ್ ವೇಷಧಾರಿಗಳ ಸಿದ್ಧತೆಯೂ ಭರದಿಂದಲೇ ನಡೆದಿದೆ. ಕ್ರಿಸ್‌ಮಸ್ ಟ್ರೀ ಜೊತೆಗೆ ನಕ್ಷತ್ರಾಕಾರದ ಆಕಾಶಬುಟ್ಟಿಗಳ ಮಾರಾಟ, ದೇವಲೋಕದ ಸೃಷ್ಟಿಗೆ ಬೇಕಿರುವ ನಕ್ಷತ್ರಗಳ ಮಾರಾಟದ ಭರಾಟೆ ಕೂಡ ಜೋರು. ದೇವಕನ್ಯೆಯರು, ಮಾತೆ ಮೇರಿ, ಬಾಲ ಏಸು ಇಲ್ಲದೇ ಹಬ್ಬ ಪೂರ್ಣಗೊಳ್ಳುವುದೇ ಇಲ್ಲ... ಈ ಕೊರತೆ ನೀಗಿಸಲೆಂದೇ ಪ್ರತಿ ಮನೆಯಲ್ಲೂ ಗೋದಲಿಗಳ ಸೃಷ್ಟಿಯಾಗುತ್ತದೆ.

ಗೋದಲಿಗಳನ್ನು ಇಟ್ಟು ಏಸುಕ್ರಿಸ್ತನ ಹುಟ್ಟನ್ನು ಆಚರಿಸುವ ಪರಿ ಹಿಂದಿನಿಂದಲೂ ಇದೆ. ಹಿಂದೂಗಳು ದಸರಾ ಹಬ್ಬದಲ್ಲಿ ಪುರಾಣದ ಕತೆ ಹೇಳುವ ಗೊಂಬೆಗಳನ್ನು ಇಟ್ಟು ಆಚರಿಸುವಂತೆ ಕ್ರಿಸ್ಮಸ್ ಹಬ್ಬದಲ್ಲಿ ಕ್ರಿಸ್ತ ಧರ್ಮೀಯರ ಮನೆಯಲ್ಲಿ ಗೋದಲಿಗಳ ಮೂಲಕ ಕ್ರಿಸ್ತನ ಜನನ ಸಂಭ್ರಮದ ಪ್ರತಿಕೃತಿ ಮೂಡಿಸಲಾಗುತ್ತದೆ. ಮೇರಿ, ಜೋಸೆಫ್, ಬಾಲ ಏಸು, ಮೂರು ದೇವತೆಗಳು, ನಕ್ಷತ್ರ, ಕುರಿ, ಹಸು, ಕೊಟ್ಟಿಗೆ ಹೀಗೆ ಏಸು ಜನನವಾದ ಚಿತ್ರಣವನ್ನು ಕಟ್ಟಿಕೊಡುವ ಗೊಂಬೆಗಳನ್ನು ಕೂರಿಸುವುದು ಹಬ್ಬದ ಸಂಪ್ರದಾಯ. ಯೇಸುವಿನ ಹುಟ್ಟು ಪ್ರತಿ ಮನೆಯಲ್ಲೂ ಅಲ್ಲ, ಮನಸಿನಲ್ಲೂ ಆಗಲಿ ಎಂಬ ಆಶಯ ಈ ಸಂಪ್ರದಾಯಕ್ಕಿದೆ.

ಡಿಸೆಂಬರ್ ಆರಂಭವಾಗುತ್ತಿದ್ದಂತೆ ನಗರದಲ್ಲಿ ಕ್ರಿಬ್‌ಗಳ ವ್ಯಾಪಾರ ಬಿರುಸಾಗುತ್ತದೆ. ಶಿವಾಜಿನಗರ, ಮಾರುಕಟ್ಟೆ, ಜಯನಗರ ಹೀಗೆ ಹಲವು ಸ್ಥಳಗಳಲ್ಲಿ ವಿಭಿನ್ನ ರೀತಿಯ ಗೋದಲಿಗಳು ಮಾರಾಟಕ್ಕೆ ಸಜ್ಜಾಗುತ್ತವೆ. ಬೆಳಿಗ್ಗೆ 8.30ರಿಂದ ಆರಂಭವಾಗುವ ಈ ಗೊಂಬೆಗಳ ವ್ಯಾಪಾರ ರಾತ್ರಿ 10ರವರೆಗೂ ಮುಂದುವರೆಯುವುದು ವಿಶೇಷ.

`ನಗರ ಪ್ರದೇಶಕ್ಕೂ, ಗ್ರಾಮೀಣ ಪ್ರದೇಶಕ್ಕೂ ಗೋದಲಿಗಳ ಸಂಪ್ರದಾಯ ಸ್ವಲ್ಪ ಭಿನ್ನವಾಗಿದೆ. ಹಳ್ಳಿಗಳಲ್ಲಿ ಗೋದಲಿಗಳನ್ನು ಇಡುವುದು ಉತ್ಸಾಹದ ಸಂಗತಿ. ಹಬ್ಬಕ್ಕೆ ಹದಿನೈದು ದಿನ ಮುನ್ನವೇ ಗೋದಲಿಗೆ ತಯಾರಿ ನಡೆದಿರುತ್ತದೆ. ಗೊಂಬೆಗಳೇ ಜೀವದುಂಬಿಕೊಂಡು ನಿಂತಂತೆ ಕಾಣುತ್ತವೆ. ಅಲ್ಲಿ ಚರ್ಚ್‌ಗಳಿಂದ ಸ್ಪರ್ಧೆಗಳೂ ನಡೆಯುವುದರಿಂದ ಹಬ್ಬದ ಸಂಭ್ರಮ ದುಪ್ಪಟ್ಟಾಗಿರುತ್ತದೆ. ಆದರೆ ನಗರದಲ್ಲಿ ಸಮಯದ ಅಭಾವ ಇರುವುದರಿಂದ ಸಿದ್ಧವಾಗಿ ಸಿಗುವ ಗೋದಲಿಗಳನ್ನು ತಂದು ಇಡುತ್ತೇವೆ. ಆದರೆ ಆಚರಣೆಯಂತೂ ಇದ್ದೇ ಇರುತ್ತದೆ' ಎನ್ನುತ್ತಾರೆ ಕೇರಳ ಮೂಲದ ಆ್ಯನಿ.

ಹಬ್ಬದ ಪ್ರತೀಕ
ಗೋದಲಿ ಇಲ್ಲದೆ ಹಬ್ಬ ಸಾಗುವುದೇ ಇಲ್ಲ. ನಗರದಲ್ಲಿ ಗೋದಲಿ ಸೃಷ್ಟಿಗೆ ಸಮಯವಿರದೆ ಖರೀದಿಗೆ ಮುಂದಾಗುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಸಹಜವಾಗಿಯೇ ಹುಲ್ಲು, ಗರಿಕೆ, ಸಸ್ಯಗಳನ್ನು ಬಳಸುತ್ತಾರೆ. ಇಲ್ಲಿ ಅವನ್ನು ಬಳಸುವುದಾಗಲೀ ಸಂರಕ್ಷಿಸುವುದಾಗಲೀ ಅಸಾಧ್ಯ. ಅದಕ್ಕೆಂದೇ ಸಹಜವೆನಿಸುವಂಥ ಕೃತಕ ವಾತಾವರಣದ ಗೋದಲಿಗಳನ್ನು ಮಾರಾಟಕ್ಕೆ ಇಡುತ್ತೇವೆ. ಇದರಿಂದ ಜನರಿಗೂ ಅನುಕೂಲ. ಈ ಗೊಂಬೆಗಳನ್ನು ಥಾಯ್ಲೆಂಡ್, ಚೀನಾ, ತಮಿಳುನಾಡು, ಮದ್ರಾಸ್ ಕಡೆಯಿಂದ ತರಿಸಿಕೊಳ್ಳುತ್ತೇವೆ. ಗೊಂಬೆಗಳ ಅಲಂಕಾರದಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ಮಣ್ಣಿನಿಂದ ಲೋಹದವರೆಗೂ ವಿವಿಧ ಬಗೆಯ ಬೊಂಬೆಗಳೀಗ ಲಭ್ಯ. ಅವರವರ ಕೊಳ್ಳುವ ಸಾಮರ್ಥ್ಯ ಹಾಗೂ ಅಭಿರುಚಿಗೆ ಅನುಸಾರವಾಗಿ ಕೊಳ್ಳುತ್ತಾರೆ. 
-ಮುರಳಿ, ಗೊಂಬೆ ವ್ಯಾಪಾರಿ

ಗೋದಲಿಗಳಲ್ಲೂ ವಿಭಿನ್ನತೆ
`ಕ್ರಿಸ್ಮಸ್ ಗೊಂಬೆಗಳ ವ್ಯಾಪಾರವನ್ನು ಸುಮಾರು 15 ವರ್ಷಗಳಿಂದಲೂ ನಡೆಸಿಕೊಂಡು ಬರುತ್ತಿದ್ದೇವೆ. ಹಿಂದೆಲ್ಲಾ ಬರೀ ಮಣ್ಣಿನ ಗೊಂಬೆಗಳಿದ್ದವು. ಈಗ ಅವುಗಳಲ್ಲೂ ನಮೂನೆಗಳು ಬಂದಿವೆ. ಪ್ಲಾಸ್ಟರ್ ಆಫ್ ಪ್ಯಾರಿಸ್, ಫೈಬರ್, ಟೆರಕೋಟಾ ಹೀಗೆ ವಿಭಿನ್ನ ವಸ್ತುಗಳಿಂದ ತಯಾರಾದ ಗೊಂಬೆಗಳಿವೆ. ಮೂರು ಇಂಚಿನಿಂದ ಆರಂಭವಾಗಿ ಎರಡು ಅಡಿಯವರೆಗೂ ಗೊಂಬೆಗಳು ಲಭ್ಯ. ಒಂದು ಸೆಟ್‌ನಲ್ಲಿ ಒಟ್ಟು 18 ಭಾಗಗಳಿರುತ್ತವೆ. 350 ರೂ.ನಿಂದ 20,000 ರೂ.ವರೆಗೂ ಗೊಂಬೆಗಳು ಲಭ್ಯ. ಡಿಸೆಂಬರ್ ಆರಂಭವಾಗುತ್ತಿದ್ದಂತೆ ಗೊಂಬೆಗಳ ಶೆಡ್‌ಗಳನ್ನು ತೆರೆಯುತ್ತೇವೆ. ಡಿ. 24ರ ಮಧ್ಯರಾತ್ರಿವರೆಗೂ ಮಳಿಗೆಗಳು ತೆರೆದೇ ಇರುತ್ತವೆ. ಪ್ರತಿವರ್ಷ ಗೊಂಬೆಗಳ ವ್ಯಾಪಾರ ಜೋರಾಗಿರುತ್ತದೆ.
- ಅರುಣ್, ಗೊಂಬೆ ವ್ಯಾಪಾರಿ

ಗೋದಲಿಗೆ ಸಂಘಟನಾ ಶಕ್ತಿಯಿದೆ
`ಗೋದಲಿಗಳನ್ನು ಇಡುವುದು ಕ್ರೈಸ್ತ ಧರ್ಮೀಯರಿಗೆ ಸಂಪ್ರದಾಯ ಮಾತ್ರವಲ್ಲ, ಅದು ಜನರನ್ನು ಒಗ್ಗೂಡಿಸುವ ಸುಂದರ ಉತ್ಸವ. ಬಾಲ ಏಸು ಹುಟ್ಟಿದ ಕ್ಷಣವನ್ನು ಹಬ್ಬದ ದಿನ ಗೋದಲಿಗಳನ್ನು ಇಡುವ ಮೂಲಕ ಆಚರಿಸುತ್ತೇವೆ. ಇದು ನಮಗೆ ವಿಶೇಷ ದಿನವಾದ್ದರಿಂದ ಗೋದಲಿಗಳನ್ನು ಸುಂದರವಾಗಿ ಮೂಡಿಸುತ್ತೇವೆ. ಇದೇ ಕಾರಣಕ್ಕೆ ನಮ್ಮ ಚರ್ಚ್‌ಗಳಲ್ಲೂ ಗೋದಲಿಗಳ ಸ್ಪರ್ಧೆಯನ್ನು ಆಯೋಜಿಸುತ್ತೇವೆ. ವಾರ್ಡ್‌ಗಳಂತೆ ವಿಂಗಡಿಸಿ ಗೋದಲಿ ಸ್ಪರ್ಧೆಗಳನ್ನು ಅವರವರ ಮನೆಯಲ್ಲೇ ಆಯೋಜಿಸುತ್ತೇವೆ. ಜನರು ಉತ್ಸಾಹದಿಂದ ಪಾಲ್ಗೊಂಡು ಗೋದಲಿಗಳನ್ನು ಅಲಂಕರಿಸುತ್ತಾರೆ. ಅವುಗಳನ್ನು ನೋಡುವುದೇ ಚೆಂದ' ಎನ್ನುವುದು ಜಾಲಹಳ್ಳಿಯ ಸೇಂಟ್ ಥಾಮಸ್ ಚರ್ಚ್‌ನ ಫಾದರ್ ಜೋಸೆಫ್ ಅವರ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT