ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋದಾಮಿಗೆ ಬೆಂಕಿ: ರೂ 2 ಕೋಟಿ ಮೌಲ್ಯದ ಆಹಾರ ಧಾನ್ಯ ಹಾನಿ

Last Updated 2 ಜೂನ್ 2013, 19:59 IST
ಅಕ್ಷರ ಗಾತ್ರ

ಬಳ್ಳಾರಿ: ಇಲ್ಲಿಯ ಕೈಗಾರಿಕಾ ಪ್ರದೇಶದಲ್ಲಿರುವ ಬೃಹತ್ ಶೀತಲೀಕರಣ ಘಟಕದ ಗೋದಾಮಿಗೆ ಬೆಂಕಿ ಹೊತ್ತಿದ ಪರಿಣಾಮ ರೂ 2 ಕೋಟಿ ಮೌಲ್ಯದ ಮೆಣಸಿನಕಾಯಿ, ಆಹಾರ ಧಾನ್ಯ ಸುಟ್ಟು ಕರಕಲಾಗಿರುವ ಘಟನೆ ಭಾನುವಾರ ಬೆಳಗಿನ ಜಾವ ಸಂಭವಿಸಿದೆ.

ನಗರದ ಬೆಂಗಳೂರು ರಸ್ತೆಯಲ್ಲಿನ  ಕೈಗಾರಿಕಾ ಪ್ರದೇಶದಲ್ಲಿರುವ ಸಾಯಿ ಬಾಲಾಜಿ ಕೋಲ್ಡ್ ಸ್ಟೋರೇಜ್ ಗೋದಾಮಿಗೆ ಭಾನುವಾರ ಬೆಳಗಿನ ಜಾವ 4 ಗಂಟೆಗೆ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ. ಗೋದಾಮಿನ ಎರಡು ಮತ್ತು ಮೂರನೇ ಅಂತಸ್ತಿನಲ್ಲಿ ಶೀಘ್ರವೇ ಬೆಂಕಿ ವ್ಯಾಪಿಸಿದೆ. ಅಗ್ನಿ ಶಾಮಕ ಸಿಬ್ಬಂದಿ ಹರ ಸಾಹಸಪಟ್ಟು ಬೆಂಕಿಯನ್ನು ನಿಯಂತ್ರಣಕ್ಕೆ ತಂದರು.

ಈ ಶೀತಲೀಕರಣ ಘಟಕದಲ್ಲಿ ರೈತರು ಸಂಗ್ರಹ ಮಾಡಿದ್ದ ಒಣ ಮೆಣಸಿನಕಾಯಿ, ಕಡಲೆ, ಜೋಳ, ಹವೀಜ, ಹುಣಸೆಹಣ್ಣು, ಗೋಧಿ, ಸಜ್ಜೆ, ಮುಸುಕಿನ ಜೋಳ ಸೇರಿದಂತೆ ವಿವಿಧ ಆಹಾರ ಸಾಮಗ್ರಿಗಳ 1.10 ಲಕ್ಷ ಚೀಲಗಳನ್ನು ಸಂಗ್ರಹಿಸಿ ಇಡಲಾಗಿತ್ತು. ಈ ವ್ಯವಸಾಯೋತ್ಪನ್ನಗಳ ಒಟ್ಟು ಮೌಲ್ಯ ರೂ 10 ಕೋಟಿಗಳಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.

ಆದರೆ ರೂ 2 ಕೋಟಿಗೂ ಹೆಚ್ಚಿನ ಮೊತ್ತದ ಮೆಣಸಿನಕಾಯಿ, ಬೇಳೆ ಕಾಳು ಅಗ್ನಿಗೆ ಅಹುತಿಯಾಗಿವೆ ಎಂದು ಅಗ್ನಿ ಶಾಮಕ ದಳದ ಅಧಿಕಾರಿ ಶ್ರೀನಿವಾಸ ಮೂರ್ತಿ ತಿಳಿಸಿದ್ದಾರೆ.

`ಎರಡು ವರ್ಷಗಳಿಂದ ಬೆಲೆ ಕುಸಿತದ ಕಾರಣ ನಾವು ಬೆಳೆದ ಬೆಳೆಗಳಿಗೆ ಮುಂದಿನ ದಿನಗಳಲ್ಲಿ ಉತ್ತಮ ಬೆಲೆ ಬರಬಹುದೆಂಬ ನಿರೀಕ್ಷೆಯಿಂದ ಮತ್ತು ಧಾನ್ಯಗಳು ಕೆಡಬಾರದೆಂದು ವಿವಿಧ ವ್ಯವಸಾಯೋತ್ಪನ್ನಗಳನ್ನು ಇಲ್ಲಿ ಸಂಗ್ರಹಿಸಿ ಇಟ್ಟಿದ್ದೆ. ಈಗ ನಮ್ಮ ಬೆಳೆಗೆ ಬೆಲೆ ಬಂದಿದೆ. ಆದರೆ ನಮ್ಮ ಬೆಳೆ ಬೆಂಕಿಗೆ ಆಹುತಿಯಾಗಿದೆ' ಎಂದು ತಾಲ್ಲೂಕಿನ ಬಲಗುಡ್ಡ ಗ್ರಾಮದ ರೈತರೊಬ್ಬರು ಪತ್ರಕರ್ತರೆದುರು ಅಳಲು ತೋಡಿಕೊಂಡರು.

ನೆರೆಯ ಆಂಧ್ರಪ್ರದೇಶದ ಗುಂಟೂರು, ಕರ್ನೂಲು, ಗುಂತಕಲ್, ವಿಡುಪನಕಲ್ಲು ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳ ನೂರಾರು ರೈತರು ಈ ಶೀತಲೀಕರಣ ಘಟಕದಲ್ಲಿ ತಮ್ಮ ವ್ಯವಸಾಯೋತ್ಪನ್ನಗಳನ್ನು ದಾಸ್ತಾನು ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT