ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋದಾಮು: ಕೃಷಿ ಉತ್ಪನ್ನ ಸಂಗ್ರಹಕ್ಕೆ ವರದಾನ

Last Updated 3 ಜೂನ್ 2011, 10:05 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಎಪಿಎಂಸಿ ಆವರಣದಲ್ಲಿ ಬೃಹತ್ ಸಾಮರ್ಥ್ಯದ ಮೂರು ಗೋದಾಮುಗಳು ತಲೆಯೆತ್ತಿದ್ದು, ದಾವಣಗೆರೆ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಕೃಷಿ ಉತ್ಪನ್ನಗಳ ದಾಸ್ತಾನಿಗೆ ಅನುಕೂಲಕರವಾಗಲಿವೆ.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿ ಕರ್ನಾಟಕ ಉಗ್ರಾಣ ನಿಗಮ ನಿರ್ಮಿಸಿರುವ ಈ ಗೋದಾಮುಗಳು 16 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯ ಹೊಂದಿವೆ. 5 ಎಕರೆ ಪ್ರದೇಶದಲ್ಲಿ ಸುಮಾರು ್ಙ 7 ಕೋಟಿ ವೆಚ್ಚದಲ್ಲಿ ಇವು ನಿರ್ಮಾಣವಾಗಿವೆ.

ವಿಶೇಷತೆ: 5 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ 2(ತಲಾ 100*300 ಚದರ ಅಡಿ), 6 ಸಾವಿರ ಮೆಟ್ರಿಕ್ ಟನ್‌ನ 1(100*340 ಚ. ಅಡಿ) ಸೇರಿದಂತೆ ಒಟ್ಟು ಮೂರು ಗೋದಾಮು  ನಿರ್ಮಾಣಗೊಂಡಿವೆ. ಅಮೆರಿಕದ ತಂತ್ರಜ್ಞಾನ ಬಳಸಿ ಕಬ್ಬಿಣದ ಕಂಬಿ ಬಳಸದೇ ಛಾವಣಿ ನಿರ್ಮಿಸಲಾಗಿದೆ.

ಅದಕ್ಕೆ ಕಮಾನು ಆಕಾರದಲ್ಲಿ 1.4 ಮಿ.ಮೀ. ದಪ್ಪದ ಪಾಲಿ ಕಾರ್ಬೊನೇಟೆಡ್ ಶೀಟ್ ಅಳವಡಿಸಲಾಗಿದೆ. ಇದರ ಮಧ್ಯೆ ಇದೇ ಮಾದರಿಯ ಪಾರದರ್ಶಕ ಶೀಟ್ ಬಳಸಿ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಗಾಳಿಯಾಡಲು ಟರ್ಬೋ ವೆಂಟಿಲೇಟರ್ ಅಳವಡಿಸಲಾಗುವುದು ಎಂದು ಉಗ್ರಾಣ ನಿರ್ಮಾಣದ ಗುತ್ತಿಗೆದಾರ ಎನ್.ಕೆ. ಸೋಮಶೇಖರ್ ತಿಳಿಸಿದರು.

ಕಳೆದ ವರ್ಷ ಮಾರ್ಚ್‌ನಲ್ಲಿ ಈ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗಿತ್ತು. ಮಳೆಗಾಲ ಹೊರತುಪಡಿಸಿ ಕಾಮಗಾರಿ ಮುಗಿಸಲು ಒಂದು ವರ್ಷದ ಗಡುವು ನೀಡಲಾಗಿತ್ತು. ಅದಕ್ಕೆ ಮುನ್ನವೇ ಬಹುತೇಕ ಕಾಮಗಾರಿ ಮುಗಿದಿವೆ. ಒಂದೆರಡು ತಿಂಗಳಲ್ಲಿ ಗೋದಾಮು ಕಾರ್ಯಾರಂಭ ಮಾಡಲಿದೆ ಎಂದು ಕರ್ನಾಟಕ ಉಗ್ರಾಣ ನಿಗಮದ ಮೂಲಗಳು ತಿಳಿಸಿವೆ.

ಆಗಬೇಕಾಗಿರುವುದು: ವೇಬ್ರಿಡ್ಜ್, ಗೋದಾಮು ಆವರಣದ ಒಳಗೆ ರಸ್ತೆ, ನಿಗಮದ ಕಚೇರಿ, ಆವರಣ ಗೋಡೆ ನಿರ್ಮಾಣವಾಗಬೇಕಿದೆ. ನೆರೆಯ ಜಿಲ್ಲೆಗಳಾದ ಶಿವಮೊಗ್ಗ, ಹಾವೇರಿ, ಚಿತ್ರದುರ್ಗಗಳಲ್ಲಿ ಇಷ್ಟು ದೊಡ್ಡ ಗೋದಾಮು ಇಲ್ಲ.

ಹಿಂದಿನ ವರ್ಷಗಳಲ್ಲಿ ಮೆಕ್ಕೆಜೋಳ ಸಂಗ್ರಹಕ್ಕೆ ಸೂಕ್ತ ಗೋದಾಮು ಇಲ್ಲದೆ ನಗರದ ತುಂಬಾ ಲೋಡು ತುಂಬಿದ ಲಾರಿಗಳು ಸಾಲುಗಟ್ಟಿ ಹಲವಾರು ದಿನಗಳ ಕಾಲ ನಿಲ್ಲುವ ಪರಿಸ್ಥಿತಿಯಿತ್ತು. ಖಾಸಗಿ ಗೋದಾಮು ಅವಲಂಬಿಸಬೇಕಾಗಿತ್ತು. ಇದರಿಂದಾಗಿ ರೈತರು ಸಾಕಷ್ಟು ಬಾರಿ ಪ್ರತಿಭಟನೆ, ಗಲಾಟೆ ನಡೆಸಿದ ಘಟನೆಗಳು ನಡೆದಿದ್ದವು.

ಇನ್ನು ಈ ಸಮಸ್ಯೆಗಳು ಅಂತ್ಯ ಕಾಣಲಿವೆ ಎಂದು ರೈತರೊಬ್ಬರು ಆಶಯ ವ್ಯಕ್ತಪಡಿಸಿದರು. ಇದೇ ಮಾದರಿಯಲ್ಲಿ ಚಿತ್ರದುರ್ಗದ ಗುಡ್ಡದ ರಂಗವ್ವನಹಳ್ಳಿಯಲ್ಲಿಯೂ 30 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮು ನಿರ್ಮಾಣವಾಗಲಿದೆ ಎಂದು ಸೋಮಶೇಖರ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT