ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌಜು ಗದ್ದಲ ಇಲ್ಲದ ನೀನಾ ನಡೆ

Last Updated 5 ಏಪ್ರಿಲ್ 2014, 19:45 IST
ಅಕ್ಷರ ಗಾತ್ರ

ಬೆಂಗಳೂರು: ಜನ ಸಾಮಾನ್ಯರ ನಡಿಗೆಯಷ್ಟೇ ತಣ್ಣಗೆ  60ರ ಹರೆಯದ ಆಮ್‌ ಆದ್ಮಿ ಪಕ್ಷದ ದಕ್ಷಿಣ ಲೋಕಸಭಾ ಅಭ್ಯರ್ಥಿ ನೀನಾ ನಾಯಕ್ ಪಾದಯಾತ್ರೆಯ ಮೂಲಕ ಬಾಪೂಜಿ ನಗರ, ಗೋವಿಂದರಾಜನಗರ ಹಾಗೂ ವಿಜಯನಗರದ ಬಡಾವಣೆಗಳಲ್ಲಿ ಶನಿವಾರ ಮತ ಯಾಚನೆ ಮಾಡಿದರು.

50 ಸಂಖ್ಯೆಗೂ ಮೀರದ ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರೊಂದಿಗೆ ನೀನಾ ನಾಯಕ್‌  ಅಬ್ಬರ, ಗೌಜುಗಳಿಲ್ಲದ ಸರಳ ಮತಪ್ರಚಾರದ ವೈಖರಿಗೆ ಮೊರೆ ಹೋದರು.

ಮಲ್ಲೇಶ್ವರದಲ್ಲಿರುವ ಮನೆಯಿಂದ ಬೆಳಿಗ್ಗೆ 9ಕ್ಕೆ ಸ್ಯಾಂಟ್ರೊ ಕಾರಿನಲ್ಲಿ ಹೊರಟ ಅವರು 9.45ಕ್ಕೆ ಮೈಸೂರು ರಸ್ತೆಯ ಸ್ಯಾಟಲೈಟ್‌ ಬಸ್‌ ನಿಲ್ದಾಣವನ್ನು ತಲುಪಿದರು. ಆಗಮಿಸಿದ್ದ ಕೆಲವೇ ಮಂದಿ ಕಾರ್ಯಕರ್ತರ ಜತೆಗೂಡಿ ಪ್ರಚಾರದ ರೂಪುರೇಷೆಗಳನ್ನು ಸಿದ್ಧಪಡಿಸಿದರು.
‘ಎಲ್ಲ ಬಡಾವಣೆಗಳ ಜನರೊಂದಿಗೆ ಮುಖಾಮುಖಿಯಾಗಲು ಸಾಧ್ಯವಾ ಗಬೇಕು. ಆ  ಮೂಲಕ ಈ ದಿನವನ್ನು ಸಾರ್ಥಕಪ­ಡಿಸಿಕೊಳ್ಳೋಣ’ ಎನ್ನುವ ಮೂಲಕ ಕಾರ್ಯಕರ್ತರನ್ನು ಹುರಿದುಂಬಿಸಿದರು.

‘ಜನ ಸಾಮಾನ್ಯನ ಪಕ್ಷ’ದ ಪ್ರಚಾರಕ್ಕೆ  ಅಡ್ಡಿ ಆತಂಕ: ಆಮ್‌ ಆದ್ಮಿ ಪಕ್ಷಕ್ಕೆ ಪ್ರಚಾರದ ಸಂದರ್ಭದಲ್ಲಿ  ಬರೀ ಆಡಚಣೆಗಳೇ ಎದುರಾದವು. ತೆರೆದ ಜೀಪಿನ ಮೂಲಕ ರೋಡ್‌ ಷೋ ನಡೆಸಬೇಕೆಂದು ಮೊದಲೇ ಪೂರ್ವಸಿದ್ಧತೆ ಮಾಡ­ಲಾಗಿತ್ತು. ಆದರೆ, ಜೀಪ್‌ ಪಂಕ್ಚರ್‌ ಆಗಿ ತೊಡಕಾಯಿತು.

ಜೀಪ್‌ ದುರಸ್ತಿಯಾಗಬಹುದೆಂಬ ನಿರೀಕ್ಷೆಯಲ್ಲಿಯೇ ಕಾದು,  ನಂತರ  ಒಂದು   ಗಂಟೆ ತಡವಾಗಿ ಪ್ರಚಾರ ಕಾರ್ಯವನ್ನು

ಆರಂಭಿಸಲಾಯಿತು. ಜೀಪ್‌ ದುರಸ್ತಿಯಾಗದ ಕಾರಣ 11.30ಕ್ಕೆ  ನೀನಾ ನಾಯಕ್‌ ಅವರು ಪಾದಯಾತ್ರೆಯ ಮೂಲಕವೇ ಜನರ ಬಳಿ ತೆರಳಿ, ‘ಆಮ್‌ ಆದ್ಮಿ’ ಪಕ್ಷಕ್ಕೆ  ಮತ ನೀಡಬೇಕು ಎಂದು ಮನವಿ ಮಾಡಿದರು.

ಇತ್ತ ರ್‌್ಯಾಲಿಯೂ ಅಲ್ಲ, ಅತ್ತ ಪಾದಯಾತ್ರೆಯೂ ಅಲ್ಲ: ಮೆರವಣಿಗೆಯ ಮುಂಭಾಗದಲ್ಲಿ ನೀನಾ  ನಾಯಕ್‌ ಜತೆ ಇನ್ನಿಬ್ಬರು ಕಾರ್ಯಕರ್ತರು ನಡೆದುಕೊಂಡೇ ಮತ ಕೇಳಲು ಮುಂದಾದರೆ,  ಉಳಿದ ಯವ ಕಾರ್ಯಕರ್ತರು ಪೊರಕೆ ಹಾಗೂ ಪಕ್ಷದ ಬಾವುಟಗಳಿದ್ದ  ಬೈಕ್‌ಗಳ ಮೂಲಕ ಅವರನ್ನು ಹಿಂಬಾಲಿಸಿದರು. ಕಾರು  ಹಾಗೂ ಆಟೊಗಳಲ್ಲಿದ್ದ  ಕಾರ್ಯಕರ್ತರು ಇವರನ್ನು ಅನುಸರಿಸಿದರು.
ಬಾಪೂಜಿನಗರದ ಕಿಷ್ಕಿಂದೆಯಂತಹ ಬೀದಿಗಳಲ್ಲಿ ಸಾಮಾನ್ಯವಾಗಿ ಮೂರು ನಾಲ್ಕು  ಮಂದಿ ನಡೆದುಕೊಂಡು ಹೋಗುವುದೇ ಕಷ್ಟ. ಅಂತಹುದ್ದರಲ್ಲಿ ಬೈಕ್‌ ಹಾಗೂ  ಕಾರುಗಳ ರ್‌್ಯಾಲಿ ನಡೆದಿದ್ದರಿಂದ   ವಾಹನಗಳ ದಟ್ಟಣೆ ಉಂಟಾಗಿ ಜನ ಸ್ವಲ್ಪ ಮಟ್ಟಿಗೆ ಕಿರಿಕಿರಿ ಅನುಭವಿಸಿದರು.

ಹೊಸಗುಡ್ಡಹಳ್ಳಿಯ ಬಡಾವಣೆ ಗಳಲ್ಲಿದ್ದ ಅಂಗಡಿಗಳು ಹಾಗೂ ಮನೆಗಳಿಗೆ ಆಮ್‌ ಆದ್ಮಿ ಪಕ್ಷದ ಕರಪತ್ರವನ್ನು ಹಂಚಲಾಯಿತು.
ಬಿಸಿಲ ಬೇಗೆಗೆ ತತ್ತರಿಸಿದ ನೀನಾ ‘ಜೀಪು ದುರಸ್ತಿ ಆಯಿತೇ?’ ಎಂದು ಆಪ್ತರಲ್ಲಿ ಕೇಳುತ್ತಲೇ  ಇದ್ದರು. ಬಾಪೂಜಿ­ನಗರದ ಬಡಾವಣೆಗಳೆಲ್ಲ ಸುತ್ತಾಡಿದ ನಂತರ ಅತ್ತಿಗುಪ್ಪೆಯಿಂದ   ಅಂತೂ ದುರಸ್ತಿಗೊಂಡ  ತೆರೆದ ಜೀಪಿ­ನಲ್ಲಿ ನಿಂತು ಪ್ರಚಾರ ಆರಂಭಿಸಿದರು.

ಅತ್ತಿಗುಪ್ಪೆಯಿಂದ ಆರ್‌ಪಿಸಿ ಲೇಔಟ್‌, ಹಂಪಿ ನಗರದ ಬಡಾವಣೆ­ಗಳಲ್ಲಿ ಪ್ರಚಾರ ಪೂರ್ಣಗೊಳಿಸುವ ಹೊತ್ತಿಗೆ ಮಧ್ಯಾಹ್ನ 2 ಗಂಟೆಯಾಗಿತ್ತು. ಮೊದಲೇ ಸಿದ್ಧಪಡಿಸಿ ತಂದಿದ್ದ ಟೊಮೆಟೊ ಬಾತ್‌ ಹಾಗೂ ಮೊಸರನ್ನವನ್ನು ನಾಯಕ್‌ ಹಾಗೂ ಆಪ್‌ ಕಾರ್ಯಕರ್ತರು ಸೇವಿಸಿ, ಕೆಲಕಾಲ ವಿಶ್ರಾಂತಿ ಪಡೆದರು.

ಮಧ್ಯಾಹ್ನದ ನಂತರ ಚಂದ್ರಾ­ಲೇಔಟ್‌, ನಾಗರಬಾವಿ, ವಿಜಯನಗರ  ಸುತ್ತಮುತ್ತ  ತೆರೆದ ಜೀಪಿನಲ್ಲಿಯೇ  ಪ್ರಚಾರ ನಡೆಸಿದರು. ‘ದೇಶದ ಆಡಳಿತ ಯಂತ್ರಕ್ಕೆ ಬದಲಾವಣೆಯ ಅಗತ್ಯವಿದೆ. ಜನಸಾ­ಮಾನ್ಯನ ಕಷ್ಟಗಳನ್ನು ಅರಿತಿರು­ವುದು ಕೇವಲ ಆಮ್‌ ಆದ್ಮಿ ಪಕ್ಷ. ಇದಕ್ಕೆ ಮತ ನೀಡಿ, ಹರಸಿ’ ಎಂದು ನೀನಾ ನಾಯಕ್‌ ಮನವಿ ಮಾಡಿದರು.

ಫ್ಲ್ಯಾಷ್‌ ಮಾಬ್‌: ಪ್ರಚಾರದ ವೇಳೆ ಜನರ ಗಮನ ಸೆಳೆಯಲು ಆಪ್‌ನ ಕಾರ್ಯಕರ್ತರು ‘ಫ್ಲ್ಯಾಷ್‌ ಮಾಬ್‌’ ಮಾಡಿದರು. ಆಪ್‌ ಕಾರ್ಯಕರ್ತರಲ್ಲೇ  ‘ಪ್ಲೇ ಫಾರ್‌ ಚೇಂಜ್‌’ ನೃತ್ಯ ತಂಡವು  ‘ಹಮ್‌ ಹೋಂಗೆ ಕಾಮಿಯಾ’ ಗೀತೆಗೆ ನೃತ್ಯ ಪ್ರದರ್ಶನ ನೀಡಿತು.
ವಾರಾಂತ್ಯವಾಗಿರುವುದರಿಂದ ಆಪ್‌ನ ಹಲವು ಯುವ ಕಾರ್ಯ­ಕರ್ತರು ಪ್ರಚಾರ ಕಾರ್ಯಕ್ಕೆ ಗೈರಾಗಿ­ದ್ದರು. ಇನ್ನೂ ‘ಪ್ಲೇ ಫಾರ್‌ ಚೇಂಜ್’ ತಂಡದಲ್ಲಿದ್ದ 20 ನೃತ್ಯಪಟುಗಳಲ್ಲಿ ಕೇವಲ 10 ಮಂದಿಯಷ್ಟೆ ಇದ್ದರು.

ಸಂಜೆ ಕಾವೇರಿಪುರ, ಹೌಸಿಂಗ್‌ ಬೋರ್ಡ್‌ ಹಾಗೂ ವಿಜಯನಗರದ ಮುಖ್ಯರಸ್ತೆಗಳಲ್ಲಿ ಪ್ರಚಾರ ನಡೆಸಲಾಯಿತು. ರಾತ್ರಿ 7 ಗಂಟೆ ಸುಮಾರಿಗೆ ಗುಡ್‌ವಿಲ್‌ ಅಪಾರ್ಟ್‌ ಮೆಂಟ್‌ ಹಾಗೂ  ಉದ್ಯಾನದಲ್ಲಿ ಪ್ರಚಾರ ಕಾರ್ಯ ಮುಕ್ತಾಯಗೊಂಡಿತು.

ಪೊರಕೆ ಹಿಡಿದು ನೃತ್ಯ: ಪಕ್ಷದ ಚಿಹ್ನೆಯಾಗಿರುವ ಪೊರಕೆಯನ್ನು ಹಿಡಿದು ಯುವ ಸಮೂಹ ನೃತ್ಯ ಮಾಡಿತು. ಪೊರಕೆ ಸಿಗದ ಬಹುತೇಕ ಕಾರ್ಯಕರ್ತರು ಹಾಗೇ ಹೆಜ್ಜೆ ಹಾಕಿದರು.

ಅಪರಿಚಿತ ಸಂಸದರು
ಬೆಂಗಳೂರು: ‘ನಗರದ ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದರು ಬಹುತೇಕ ಮಂದಿಗೆ  ಅಪರಿಚಿತರು’ ಎಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿ ವಿ ಬಾಲಕೃಷ್ಣನ್ ವ್ಯಂಗ್ಯವಾಡಿದರು.

  ಶನಿವಾರ  ಮಹದೇವಪುರ ಕ್ಷೇತ್ರದಲ್ಲಿ ನಡೆದ  ರೋಡ್‌ ಶೋ ಸಂದರ್ಭದಲ್ಲಿ ಅವರು ಮಾತನಾಡಿದರು.

‘ಈ ಬಾರಿಯ ಚುನಾವಣೆಯಲ್ಲಿ ಬೆಂಗಳೂರು ಹೊಸ ಇತಿಹಾಸ ಬರೆಯಲಿದೆ ಎಂಬ ಭರವಸೆ ಇದೆ. ಈ ಮೂಲಕ ಜನಸಾಮಾನ್ಯರು ಬದಲಾವಣೆಯನ್ನು ಕಾಣಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಬಿಜೆಪಿ ಪಕ್ಷದಲ್ಲಿ  ಶೇ ೩೭ ರಷ್ಟು ಮಂದಿ ಅಭ್ಯರ್ಥಿಗಳ ಮೇಲೆ ದೋಷಾರೋಪಗಳಿದೆ. ಕೆಲವರು ಗಂಭೀರ ಸ್ವರೂಪದ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುವ ಹಿನ್ನಲೆಯಿದೆ. ಇಂತಹವರಿಗೆ ಮತ ನೀಡುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ದ್ರೋಹ ಬಗೆದಂತೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT