ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಗ್ಯಾಂಬ್ಲಿಂಗ್ ಬಿಟ್ಟು ರಾತ್ರಿ ಗಸ್ತು ಮಾಡ್ರಿ'

ಹುಬ್ಬಳ್ಳಿ ಪೊಲೀಸ್ ಕಮಿಷನರ್ ಗುಡುಗು
Last Updated 7 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಹುಬ್ಬಳ್ಳಿ:  `ಏನ್ ಗ್ಯಾಂಬ್ಲಿಂಗ್ ಆಡ್ತಿದ್ದೀರಾ? ಹೋಟೆಲ್‌ನಿಂದ ಹೊರಗೆ ಬನ್ರಿ. ಅವರಿಗೆಲ್ಲ ಬಂದು ನೈಟ್ ರೌಂಡ್ ಮಾಡೋಕೆ ಹೇಳಿ. ಇಷ್ಟೆಲ್ಲಾ ಕಳವು ಆಗ್ತಿದೆ. ಇವರು ನೋಡಿದರೆ ಹೋಟೆಲ್‌ನಲ್ಲಿದ್ದಾರೆ'ಪೊಲೀಸ್ ಕಮಿಷನರ್ ಬಿ.ಎ. ಪದ್ಮನಯನ, ಕಳೆದ ಭಾನುವಾರ (ಡಿ.2) ಮಧ್ಯರಾತ್ರಿ 12 ಗಂಟೆಗೆ  ವಾಕಿಟಾಕಿ ಮೂಲಕ ಹೀಗೆಂದು ಗುಡುಗಿದ್ದರು.

ಅಷ್ಟೇ ಅಲ್ಲ, ಕಮಿಷನರ್ ಅವರು ಬಳಸಿದ `ಗ್ಯಾಂಬ್ಲಿಂಗ್' ಶಬ್ದವನ್ನು ಬಳಸದೆ, `ಸಬ್‌ಇನ್‌ಸ್ಪೆಕ್ಟರ್‌ಗಳು, ಇನ್‌ಸ್ಪೆಕ್ಟರ್‌ಗಳು ಕಡ್ಡಾಯವಾಗಿ ನೈಟ್ ರೌಂಡ್ ಮಾಡಬೇಕು' ಎಂದು ನಿಯಂತ್ರಣ ಕೊಠಡಿ ಸಿಬ್ಬಂದಿ ಸಂದೇಶ ಬಿತ್ತರಿಸಿದಾಗ, ಮತ್ತೆ ಗುಡುಗಿದ ಕಮಿಷನರ್, `ನಾನು ಗ್ಯಾಂಬ್ಲಿಂಗ್ ಎಂದು ಹೇಳಿದ್ದೇನೆ. ಆ ಶಬ್ದವನ್ನು ಏಕೆ ಹೇಳಲಿಲ್ಲ, ಅದೇ ಶಬ್ದ ಬಳಸಿ' ಎಂದು ತಾಕೀತೂ ಮಾಡುತ್ತಾರೆ.

ಕಮಿಷನರ್ ಅವರು ಅಷ್ಟೊಂದು ಸಿಟ್ಟಾಗಿ ಈ ಪದಗಳನ್ನು ಬಳಸಲು ಮುಖ್ಯ ಕಾರಣವೆಂದರೆ ಹಲವು ದಿನಗಳಿಂದಲೂ ಹಿರಿಯ ಪೊಲೀಸ್ ಅಧಿಕಾರಿಗಳಿಬ್ಬರು ಸೇರಿದಂತೆ ಒಂದಿಬ್ಬರು ಇನ್‌ಸ್ಪೆಕ್ಟರ್‌ಗಳು ರಾತ್ರಿ ಹೊತ್ತು ಹೋಟೆಲ್‌ನಲ್ಲಿ ಸೇರಿಕೊಂಡು ಇಸ್ಪೀಟಾಡುತ್ತಿರುವುದು ಎನ್ನಲಾಗಿದೆ.

ರಾತ್ರಿ ಗಸ್ತು ಕಡ್ಡಾಯ: ನಗರದಲ್ಲಿ ಭಾನುವಾರ ರಾತ್ರಿ 10 ಗಂಟೆ ಸಮಯಕ್ಕೆ ಒಂದೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಸರಗಳ್ಳತನ ಪ್ರಕರಣಗಳು ನಡೆದಿದ್ದವು. ಅಂದು ಕೂಡ ಈ ಹಿರಿಯ ಪೊಲೀಸ್ ಅಧಿಕಾರಿಗಳಿಬ್ಬರು ಮತ್ತು ಇಬ್ಬರು ಇನ್‌ಸ್ಪೆಪೆಕ್ಟರ್‌ಗಳು ಇದಾವುದರ ಅರಿವೇ ಇಲ್ಲದೇ ತಮ್ಮ ಪಾಡಿಗೆ ಹೋಟೆಲ್‌ನಲ್ಲಿ ಇಸ್ಪೀಟಾಟದಲ್ಲಿ ತಲ್ಲೆನರಾಗಿದ್ದರು. ಸರಗಳ್ಳತನ ಪ್ರಕರಣಗಳು ನಡೆದಿದ್ದರೂ ಅತ್ತ ಗಮನಹರಿಸದೇ, ಹೋಟೆಲ್‌ನಲ್ಲಿ ಅವರು ಇಸ್ಪೀಟ್ ಆಡುತ್ತಿರುವುದು ಕಮಿಷನರ್ ಅವರನ್ನು ಕೆರಳಿಸಿತ್ತು. ಹಾಗಾಗಿ ಅವರು ಈ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲೆಂದೇ ವಾಕಿಟಾಕಿ ಹಿಡಿದು ಗುಡುಗಿದ್ದರು. ಅಲ್ಲದೇ `ಎಲ್ಲ ಇನ್‌ಸ್ಪೆಕ್ಟರ್‌ಗಳು ಮತ್ತು ಸಬ್‌ಇನ್‌ಸ್ಪೆಕ್ಟರ್‌ಗಳಿಗೆ ರಾತ್ರಿ ಗಸ್ತು ಕಡ್ಡಾಯ' ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ಖಚಿತವಾಗಿದೆ.

`ಸರಗಳ್ಳತನದಲ್ಲಿ ರಾಜ್ಯದ ಮಹಾನಗರಗಳ ಪೈಕಿ `ಛೋಟಾ ಮುಂಬೈ' ಹುಬ್ಬಳ್ಳಿ- ಧಾರವಾಡದಲ್ಲಿ 4-5 ತಿಂಗಳಿನಿಂದ ಸರಣಿ ಸರಗಳ್ಳತನ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ರಸ್ತೆಯಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಬೈಕ್‌ನಲ್ಲಿ ಹಿಂಬಾಲಿಸಿ ಸರ ಎಗರಿಸಿ ಪರಾರಿಯಾಗುವ ದುಷ್ಕರ್ಮಿಗಳನ್ನು ನಿಯಂತ್ರಿಸಲು ಮಾತ್ರ  ಪೊಲೀಸರು ಮುಂದಾಗಿಲ್ಲ' ಎಂದು ಆರೋಪಿಸುತ್ತಾರೆ ಗೋಕುಲ ಬಡಾವಣೆಯ ಚಿದಂಬರ ಕುಲಕರ್ಣಿ.

`ಇಂತಹ ಪ್ರಕರಣಗಳನ್ನು ನಿಯಂತ್ರಿಸಲು ನಗರದಲ್ಲಿ ರಾತ್ರಿ ಗಸ್ತು ಹೆಚ್ಚಿಸಿರುವುದಾಗಿ ಪೊಲೀಸರು ಹೇಳುತ್ತಾರೆ. ಆನಂದನಗರ, ಅಶೋಕ ನಗರ, ಲಿಂಗರಾಜ ನಗರ, ಗೋಕುಲ ಪೊಲೀಸ್ ಠಾಣಾ ವ್ಯಾಪ್ತಿಯ ನಿರ್ದಿಷ್ಟ ಜಾಗಗಳಲ್ಲಿ ದಿನವಿಡೀ ಪೊಲೀಸ್ ಕಾವಲು ಏರ್ಪಡಿಸಲಾಗಿದೆ. ಆದರೂ ಒಂಟಿ ಮಹಿಳೆಯರ ಹಿಂದಿನಿಂದ ಬಂದು ಕತ್ತಿನಲ್ಲಿದ್ದ ಮಾಂಗಲ್ಯ ಸರ ಎಗರಿಸಿ ಪರಾರಿ ಕೃತ್ಯಗಳಿಗೆ ಕಡಿವಾಣ ಬಿದ್ದಿಲ್ಲ. ಈ ಪ್ರಕರಣಗಳನ್ನು ನೋಡಿದರೆ ಪೊಲೀಸರ ಹೇಳಿಕೆ ನಂಬಲಾಗದು' ಎನ್ನುತ್ತಾರೆ ಅವರು.

ಸಿಸಿಟಿವಿ ಕ್ಯಾಮೆರಾ ಅಳವಡಿಕೆ: ನಗರದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದರೆ ಸರಗಳ್ಳರ ಚಲನವಲನ ಗುರುತಿಸಬಹುದು ಎಂಬ ಲೆಕ್ಕಾಚಾರ ಕಮಿಷನರದ್ದು. ಹೀಗಾಗಿ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಅವರು ಮುಂದಾಗಿದ್ದಾರೆ.

`ಕೆಲವು ಠಾಣೆಗಳಲ್ಲಿ ಖಾಸಗಿ ಸಂಸ್ಥೆಗಳ ಸಹಕಾರದಲ್ಲಿ ಈಗಾಗಲೇ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಪೆಟ್ರೋಲ್ ಬಂಕ್‌ಗಳಲ್ಲೂ ಸಿಸಿಟಿವಿ ಅಳವಡಿಕೆಗೆ ಒತ್ತು ನೀಡಲಾಗಿದೆ' ಎಂದು ಪದ್ಮನಯನ `ಪ್ರಜಾವಾಣಿ'ಗೆ ತಿಳಿಸಿದರು.

`ನಂಬರ್ ಪ್ಲೇಟ್ ಇಲ್ಲದ, ಇದ್ದರೂ ಸಂಖ್ಯೆ  ವಿರೂಪಗೊಳಿಸಿದ ಬೈಕ್‌ಗಳನ್ನು ಗುರಿ ಇಟ್ಟು ತನಿಖೆ ನಡೆಯುತ್ತಿದೆ. ಈಗಾಗಲೇ ಇಂತಹ ಹಲವು ಬೈಕ್ ವಶಪಡಿಸಿಕೊಳ್ಳಲಾಗಿದೆ. ದ್ವಿಚಕ್ರ ಸವಾರರು ವಾಹನ ದಾಖಲಾತಿ ಜೊತೆಗೆ ಇಟ್ಟುಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ' ಎಂದರು.

ಕಳ್ಳನ ಹೊಟ್ಟೆ ಸೇರಿದ್ದ ಸರ!
 ಇತ್ತೀಚೆಗೆ ಸರ ಎಗರಿಸಿ ಪರಾರಿಯಾಗುವಷ್ಟರಲ್ಲಿ ಸ್ಥಳೀಯರಿಗೆ ಸಿಕ್ಕಿಬಿದ್ದ ಕಳ್ಳನೊಬ್ಬ, `ನಾನು ಕದ್ದಿಲ್ಲ' ಎಂದು ತೋರಿಸಲು ಹೋಗಿ ಕದ್ದ ಸರವನ್ನೇ  ನುಂಗಿದ್ದ! ನಗರದ ಕಿಮ್ಸ ಆಸ್ಪತ್ರೆಗೆ ಕೊಂಡೊಯ್ದ ಪೊಲೀಸರು, ಸ್ಕ್ಯಾನ್ ಮಾಡಿಸಿದಾಗ ಹೊಟ್ಟೆಯಲ್ಲಿ ಸರ ಪತ್ತೆಯಾಗಿತ್ತು. ನಂತರ ವೈದ್ಯರ ಸಹಾಯದಿಂದ ಭೇದಿ ಮಾಡಿಸಿ ಹೊರತೆಗೆಯಲಾಯಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT