ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಘಟಕ ಉದ್ಘಾಟನೆ ಹಾಗೂ ಭಾವೈಕ್ಯ ಸಭೆಯಲ್ಲಿ ಸಿದ್ದಲಿಂಗೇಶ್ವರ ಸ್ವಾಮೀಜಿ

Last Updated 9 ಜುಲೈ 2012, 7:15 IST
ಅಕ್ಷರ ಗಾತ್ರ

ಮಲೇಬೆನ್ನೂರು: ವಿವಿಧ ಜನಾಂಗಗಳೊಂದಿಗೆ ಸಾಮರಸ್ಯ ಬೆಳೆಸಿಕೊಂಡು ಸಮಾಜ ಸಂಘಟನೆ ಮಾಡುವಂತೆ ಪಂಚಮಸಾಲಿ ಗುರುಪೀಠದ ಸಿದ್ದಲಿಂಗೇಶ್ವರ ಸ್ವಾಮೀಜಿ ಕರೆ ನೀಡಿದರು.

ಗ್ರಾಮದಲ್ಲಿ ಭಾನುವಾರ  ಪಂಚಮಸಾಲಿ ಸಮಾಜದ ಗ್ರಾಮ ಘಟಕ ಉದ್ಘಾಟನೆ ಹಾಗೂ ಭಾವೈಕ್ಯ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

2008ರಲ್ಲಿ ಮಠ ಕಟ್ಟಿದಾಗ 36 ಬಣಗಳ ವೀರಶೈವ ಸಮಾಜ ಒಡೆಯುವ ಹುನ್ನಾರ ನಡೆದಿದೆ ಎಂಬ ಆರೋಪ ಸುಳ್ಳಾಗಿದ್ದು, ಒಗ್ಗಟ್ಟಿನಲ್ಲಿ ಬಲವಿದೆ ಎಂದು ತೋರಿಸಿ ಮಠ ನಿರ್ಮಿಸಲಾಗುತ್ತಿದೆ. 5 ಕಡೆ ಶಾಲೆ, ಪ್ರಸಾದ ನಿಲಯ ಆರಂಭವಾಗಿವೆ. ಶೀಘ್ರದಲ್ಲಿ ಹರಿಹರದಲ್ಲಿ ಶಿಕ್ಷಣ ಕೇಂದ್ರ ಆರಂಭವಾಗಲಿದೆ.

ಸಮಾಜದ ಜನತೆ ಶಿಸ್ತು, ನಿಯಮ, ನೀತಿ ಪಾಲಿಸಿ. ಸತ್ಕಾರ್ಯಗಳಿಗೆ ದಾನ ಮಾಡಿ. ಭ್ರಷ್ಟ ರಾಜಕಾರಣಿಗಳನ್ನು ದೂರವಿಡಿ. ಪಂಚಮಸಾಲಿ ಸಮಾಜದ ರಾಜಕಾರಣಿಗಳು ಸಮಾಜಮುಖಿ ಆಗಬೇಕು  ಇಲ್ಲವಾದಲ್ಲಿ ಕೀ ಕೊಡುವ ವ್ಯವಸ್ಥೆ ಮಾಡಲಾಗುವುದು ಎಂಬ ಸಂದೇಶ ರವಾನಿಸಿದರು.

ಸಮಾಜದಲ್ಲಿ ಸ್ವಾಮೀಜಿಗಳನ್ನು ಟೀಕಿಸುವವರು ಇದ್ದಾರೆ. ಅವರ ಸಮಸ್ಯೆ ಕೇಳುವವರು ಇಲ್ಲ. ನಿಸ್ವಾರ್ಥ ಮನೋಭಾವದಿಂದ ಸನ್ಯಾಸ ಪಡೆದು ಸಮಾಜೋದ್ಧಾರದ ಗುರಿಯಿಂದ ಬಂದ ಸ್ವಾಮಿ ಹಾಗೂ ಮಠದ ಕಡೆ ಸ್ವಲ್ಪ ಗಮನ ನೀಡಿದರೆ ಸಮಾಜಕ್ಕೆ ಒಳ್ಳೆಯದಾಗುತ್ತದೆ. ಆಸೆ, ದ್ವೇಷ, ಜಾತಿ, ಹಣಬಲದಿಂದ ಸಮಾಜ ಕಟ್ಟಲು ಆಗುವುದಿಲ್ಲ ಮಠಮಾನ್ಯಗಳಿಂದ ಮಾತ್ರ ಸಾಧ್ಯ ಎಂದರು.

ಕನಕದಾಸರ ನುಡಿಯಂತೆ ಕುಲ ಕುಲ ಕುಲ ಎಂದು ಹೊಡೆದಾಡದಿರಿ. ನಿಮ್ಮ ಕುಲದ ನೆಲೆಯನ್ನು ಮೊದಲು ತಿಳಿದುಕೊಂಡು ಮುಂದೆ ಬನ್ನಿ ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

ಪಂಚಮಸಾಲಿ ಜನಾಂಗ ಅನೋನ್ಯತೆಯಿಂದ ಬಾಳಿದ ಸಮಾಜ. ಆರಂಭದ ದಿನಗಳಲ್ಲಿ ವಿರೋಧ ವ್ಯಕ್ತವಾಗಿತ್ತು. ಸರ್ಕಾರಿ ಸವಲತ್ತಿನಿಂದ ವಂಚಿತವಾಗಿದ್ದು, ಅದನ್ನು ಪಡೆಯುವ ನಿಟ್ಟಿನಲ್ಲಿ, ಸಂಘಟಿತರಾಗಿ ಹೋರಾಟ ನಡೆಸುತ್ತಿದ್ದೇವೆ ಎಂದು ಉದ್ಯಮಿ ಬಿ.ಸಿ ಉಮಾಪತಿ ತಿಳಿಸಿದರು.

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸೌಲಭ್ಯ ಸಿಗುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ರಾಜ್ಯ ವೀರಶೈವ ಪಂಚಮಸಾಲಿ ಸಮಾಜ ಗೌರವಾಧ್ಯಕ್ಷ ಬಾವಿಬೆಟ್ಟಪ್ಪ ಹೇಳಿದರು.

ಪ್ರಸಕ್ತ ರಾಜಕೀಯ ವ್ಯವಸ್ಥೆ ಜಾತಿವಾದದಿಂದ ಅಧೋಗತಿಗೆ ತಲುಪಿರುವುದಕ್ಕೆ ಇಂದಿನ ಪರಿಸ್ಥಿತಿ ಒಂದು ಉತ್ತಮ ಉದಾಹರಣೆ. ಜಾತಿ ನೀತಿ ಕೆಟ್ಟು ಹೋಗದಂತೆ ಸಮಾಜದ ಸ್ವಾಸ್ಥ ಕಾಪಾಡಬೇಕಿದೆ. ಶಕ್ತಿ ಪ್ರದರ್ಶನದಿಂದ ಸಾಮರಸ್ಯ ಸಾಧ್ಯವಿಲ್ಲ. ಶಕ್ತಿ-ಯುಕ್ತಿ ಎರಡನ್ನೂ ಬಳಸಿ ಮುನ್ನಡೆಯಬೇಕಿದೆ ಎಂದು ಮಾಜಿ ಶಾಸಕ ಎಚ್.ಎಸ್ ಶಿವಶಂಕರ್ ಕಿವಿಮಾತು ಹೇಳಿದರು.

ಶಂಭುಲಿಂಗಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಾಜಕುಮಾರ್ ಬಳೆಗಾರ್ ಅಧ್ಯಕ್ಷತೆ  ವಹಿಸಿದ್ದರು.
ಜಿ.ಪಂ. ಸದಸ್ಯ ಬಿ. ಹಾಲೇಶಪ್ಪ, ಮೊಹ್ಮದ್ ರೋಷನ್, ಕೆ.ಪಿ. ಸಿದ್ದಬಸಪ್ಪ, ಗಿರಿಗೌಡ್ರು, ಚಂದ್ರಶೇಖರ್ ಪೂಜಾರ್ ಮಾತನಾಡಿದರು.

ಬಿ. ಚಿದಾನಂದಪ್ಪ, ವಾಗೀಶ್‌ಸ್ವಾಮಿ, ನಾಗೇಂದ್ರಪ್ಪ, ಪಂಚಣ್ಣ, ವೃಷಭೇಂದ್ರಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಎಸ್. ಹನುಮಂತಪ್ಪ, ಜ್ಯೋತಿ, ಸುನಿತಾ, ಎಂ. ಕೊಟ್ರಪ್ಪ ಉಪಸ್ಥಿತರಿದ್ದರು.
ಫಾಲಾಕ್ಷಪ್ಪ ಕಾರ್ಯಕ್ರಮ ನಿರೂಪಿಸಿದರು. ಶಿವಶಂಕರ್ ಎರೇಸೀಮಿ ಸ್ವಾಗತಿಸಿದರು. ದಿವ್ಯಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT