ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಬದುಕಿಗೆ ಕಲೆಯ ಅನುಸಂಧಾನ

Last Updated 5 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

`ನನ್ನ ಕಲಾಕೃತಿಗಳು ನಿನ್ನೆ ನೋಡಿದ ಯಾವುದೋ ಕಲಾಕೃತಿಗಿಂತ ಹೇಗೆ ಭಿನ್ನವಾಗಿವೆ ಎಂದು ನೋಡುಗರನ್ನು ಒಂದು ಕ್ಷಣ ಚಿಂತನೆಗೆ ಹಚ್ಚಿದರೂ ಸಾಕು; ಇಲ್ಲಿ ಈ ಬಣ್ಣವನ್ನು ಯಾಕೆ ಬಳಸಿರಬಹುದು ಎಂದು ಯೋಚಿಸಿದರೂ ಸಾಕು; ಆ ಕಲಾಕೃತಿ ಅವರಲ್ಲಿ ಒಂದು ಸಣ್ಣ ಸಂಚಲನಕ್ಕೆ ನಿಮಿತ್ತವಾಗಿದೆ ಎಂದೇ ಅರ್ಥ. ನನ್ನ ಪರಿಶ್ರಮಕ್ಕೆ ಬೆಲೆ ಸಿಕ್ಕಿತು ಎಂದುಕೊಳ್ಳಳ್ಳುತ್ತೇನೆ' ಎಂಬ ನಮ್ರತೆಯೊಂದಿಗೆ ಕಲಾಯಾನ ಕೈಗೊಂಡಿರುವ ಕಲಾವಿದ ಕೆ.ಎನ್. ಮನುಚಕ್ರವರ್ತಿ. ತುಮಕೂರಿನ ಕ್ಯಾತಸಂದ್ರದಲ್ಲಿ ಹುಟ್ಟಿಬೆಳೆದವರು.

ತಮ್ಮ ಸುತ್ತಮುತ್ತಲಿನ ಸನ್ನಿವೇಶಗಳನ್ನೇ, ತನ್ನ ನೆರೆಕೆರೆಯನ್ನೇ, ಹಳ್ಳಿಯ ನೋಟಗಳನ್ನೇ ಕುಂಚದಲ್ಲಿ ಪಡಿಮೂಡಿಸುವ ಮೂಲಕ ಒಂದು ಸಹಜ ಬದುಕನ್ನು, ಅಲ್ಲಿನ ಪಲುಕುಗಳನ್ನು ಲೋಕೋತ್ತರವಾಗಿಸಿದ್ದಾರೆ. ಅಕ್ರಿಲಿಕ್ ಮಾಧ್ಯಮದಲ್ಲಿ ಕ್ಯಾನ್ವಾಸ್ ತುಂಬುವ ಮನುಚಕ್ರವರ್ತಿ ಅವರ ಕಲಾಕೃತಿಗಳಲ್ಲಿ ಕಾಣುವ ತಂತ್ರಗಾರಿಕೆಯಲ್ಲಿ, ಬಣ್ಣಗಳ ಆಯ್ಕೆಯಲ್ಲಿ, ಪ್ರಸ್ತುತಿಯಲ್ಲಿ ಸ್ವಂತಿಕೆಯ ಗಟ್ಟಿ ಛಾಪು ಇದೆ. ಬೃಹತ್ ಕ್ಯಾನ್ವಾಸ್‌ನಲ್ಲಿ ವಿವರವಾಗಿ, ವಿಸ್ತಾರವಾಗಿ ಚಿತ್ರ ಬಿಡಿಸುವುದು ಇವರ ವಿಶೇಷತೆ.

ಬಾಟಲಿಯಲ್ಲಿ ಗಿಡವೊಂದು ಈಗಷ್ಟೇ ಅರಳುತ್ತಿದೆ. ಮನೆಯಲ್ಲೋ, ಗಲ್ಲಾಪೆಟ್ಟಿಗೆಯಲ್ಲೋ ಇಟ್ಟು ಪೊಗದಸ್ತಾಗಿ ಬೆಳೆದರೆ ಅದೇ ವೇಗದಲ್ಲಿ ಅಲ್ಲಿ ಕಾಂಚಾಣವೂ ಬೆಳೆಯುತ್ತದೆ ಎಂದು ಹೇಳಲಾಗುವ `ಮನಿಪ್ಲಾಂಟ್' ಅದು. ಆದರೆ ಕಲಾವಿದನ ಕುಂಚದಲ್ಲಿ ಮನಿಪ್ಲಾಂಟ್ ಬೆಳೆಯುತ್ತಿರುವುದು ವಿಸ್ಕಿ ಬಾಟಲಿಯಲ್ಲಿ! ಕುಡುಕನ ನಶೆಯನ್ನೂ, ಮನಸ್ಥಿತಿಯನ್ನೂ ವಾಸ್ತವವನ್ನೂ ವಿಡಂಬನೆ ಮಾಡುವಂತಿರುವ ಈ ಕಲಾಕೃತಿ ರಚನೆಯಾಗಬೇಕಾದರೆ ಕಲಾವಿದ ಎಷ್ಟೊಂದು ಗಾಢ ಚಿಂತನೆ ನಡೆಸಿದ್ದಾರೆ ಎಂಬುದು ಗೊತ್ತಾಗುತ್ತದೆ. ಕಲಾಕೃತಿಯೊಂದು ಸಮಾಜಕ್ಕೆ ಕೈಗನ್ನಡಿಯಾಗುವುದು ಹೀಗೇ ತಾನೆ?

ಕಡುಕಪ್ಪು ಹಿನ್ನೆಲೆಯಲ್ಲಿ ಅಚ್ಚ ಬಿಳುಪಿನ ಕುರಿಗಳು ಚದುರಿದಂತೆ ಮೇಯುತ್ತಿವೆ, ಆಗಲೇ ಹೊಟ್ಟೆ ತುಂಬಿಸಿಕೊಂಡವುಗಳು ವಿಹರಿಸುತ್ತಿವೆ; ಅವುಗಳ ಮುನ್ನೆಲೆಯಲ್ಲಿ ಐವರು ಕುರಿ ಕಾಯವ `ಹುಡುಗರು' ಮನತುಂಬಿ ನಗುತ್ತಿದ್ದಾರೆ. ಒಬ್ಬೊಬ್ಬರ ಹೆಗಲ ಮೇಲೇರಿರುವ ಮತ್ತೊಬ್ಬರ ಕೈ... ಮುಗ್ಧತೆಯೇ ಮೈವೆತ್ತಂತಹ ನಗುವಿನ ಸ್ನಿಗ್ಧತೆ... ದಟ್ಟಡವಿಯಲ್ಲಿ ಕುರಿ ಮೇಯಿಸುತ್ತಿದ್ದರೂ ಸುಕ್ಕಾಗದಂತಹ ಹೊಸ ಹೊಸ ಮಾದರಿಯ ಅಂಗಿಗಳು ಆಧುನಿಕತೆಯೂ, ಫ್ಯಾಷನ್ನೂ `ಜಾಗತಿಕ ಹಳ್ಳಿ'ಯನ್ನೂ ಆವರಿಸಿಕೊಳ್ಳುವ ಸತ್ಯಕ್ಕೆ ಕೈಮರದಂತೆ ಕಾಣುತ್ತದೆ.

`ಮಹಾಯಾನ' ಹೆಸರಿನ ಈ ಸರಣಿಯಲ್ಲಿ ಥೇಟ್ ಇದೇ ಮಾದರಿಯ ಇನ್ನೊಂದು ಕಲಾಕೃತಿಯಿದೆ; ಆಕಾಶ ನೀಲಿ ಬಣ್ಣದ ಪ್ಯಾಂಟು ಶರ್ಟು ಧರಿಸಿ ಬಲಕ್ಕೆ ನೀಟಾಗಿ ಕ್ರಾಪು ತೆಗೆದ ಬಾಲಕನೊಬ್ಬ ಸಿಟಿ ಹುಡುಗರ ನೆಚ್ಚಿನ ಬರ್ಮುಡಾದ ಮೇಲೆ ಒಪ್ಪವಾದ ಟಿಶರ್ಟು, ಕೊರಳಿಗೆ ಸ್ಟೋಲ್ ಸುತ್ತಿಕೊಂಡ ಓರಗೆಯವನ ಭುಜವನ್ನು ಬಳಸಿ ನಿಂತ ಚಿತ್ರವದು.

ಬಾಲಕರ ಮುಖದಲ್ಲಿ, ಅದರಲ್ಲಿನ ಭಾವದಲ್ಲಿ ಗ್ರಾಮ್ಯನೋಟ ನಿಚ್ಚಳವಾಗಿದೆ. ಚಳಿಗಾಲದ ದಿನಗಳನ್ನು ಪ್ರತಿನಿಧಿಸುವ ಶುಭ್ರ ಆಗಸ, ಬಿಳಿಮೋಡಗಳ ನಡುವೆಯೇ ಇವರಿಬ್ಬರು ಇಡೀ ಬಾನಿಗೆ ತಾವೇ ವಾರಸುದಾರರು ಎಂಬಂತೆ ಠಾಕುಠೀಕಾಗಿ ನಿಂತ ಬಗೆ... ಒಂದು ಕ್ಷಣ ಅವರ ಹುಡುಗುತನಕ್ಕೆ ನಗು ಬರುತ್ತದೆ. ಅಥವಾ ಇವರದು ಹಗಲುಗನಸೂ ಇರಬಹುದೇ?

ತಮ್ಮನ್ನು ತಾವೇ ಕ್ಯಾನ್ವಾಸ್‌ನಲ್ಲಿ ತುಂಬಿಕೊಂಡಿದ್ದಾರೆ ಮನು ಚಕ್ರವರ್ತಿ. ಅದೇ ಶುಭ್ರ ಆಕಾಶದಲ್ಲಿ ಹತ್ತಿಮೂಟೆಗಳಂತಹ ಮೇಘಮಾಲೆಯ ಚಪ್ಪರದಡಿ ಸುಖನಿದ್ರೆ ಮಾಡುತ್ತಿರುವ ನಂಬುಗೆಯ ನಾಯಿ ಅದರ ಕಾಲ್ಕೆಳಗೆ ಮಲಗಿರುವ ಕಲಾವಿದ!

ನೆಲದ ಮೇಲೆ ನಿಂತುಕೊಂಡ ಮೂಳೆಚಕ್ಕಳದಂತಹ ವ್ಯಕ್ತಿಯೊಬ್ಬ ಆಕಾಶಕ್ಕೆ ಕೈಚಾಚಿದ್ದಾನೆ. ಮೋಡಗಳ ಬಿಳಿ ಬಣ್ಣ ಪ್ರತಿಫಲನವಾದಂತಹ ಬಿಳಿಕಣ್ಣು, ಬಲಗೆನ್ನೆಯನ್ನು ಬೆಳಗಿರುವ ಬಿಸಿಲು... ಕಡುಬಡತನದಿಂದ ಹೈರಾಣಾದ ವ್ಯಕ್ತಿ ಕಣಕಣದಲ್ಲೂ ಮಹತ್ವಾಕಾಂಕ್ಷೆಯನ್ನೋ, ಮಹದಾಸೆಯನ್ನೋ ಬಾಚಿಕೊಳ್ಳಲು ಮುಂದಾದಂತಿದೆ ಒಟ್ಟಾರೆ ನೋಟ.

ಹೀಗೆ, ಭಿನ್ನ ನೋಟ ವಿಭಿನ್ನ ಚಿಂತನೆಗಳಿಗೆ ಎಡೆಮಾಡಿಕೊಡುವ ಪ್ರತಿಯೊಂದು ಕಲಾಕೃತಿಗಳು ಬಗೆಬಗೆಯ ಅನುಸಂಧಾನಗಳನ್ನು ಪರಿಚಯಿಸುತ್ತವೆ.ಮನುಚಕ್ರವರ್ತಿ ಅವರ ಕಲಾಕೃತಿಗಳ ಪ್ರದರ್ಶನ ಡಿ. 6ರಿಂದ 10ರವರೆಗೂ ಕಸ್ತೂರಬಾ ರಸ್ತೆಯಲ್ಲಿರುವ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಏರ್ಪಾಡಾಗಿದೆ. ಸಂಪರ್ಕಕ್ಕೆ: 98863 46299.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT