ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣರ ಬದುಕು ಕಟ್ಟಿರಿ

Last Updated 18 ಫೆಬ್ರುವರಿ 2012, 10:05 IST
ಅಕ್ಷರ ಗಾತ್ರ

ಔರಾದ್: ಕೇವಲ ಸಮ್ಮೇಳನ ಮತ್ತು ಸಮಾವೇಶ ಮಾಡುವುದರಿಂದ ಜಾನಪದ ಉಳಿಸಲು ಸಾಧ್ಯವಾಗದು. ಅಳಿವಿನ ಅಂಚಿನಲ್ಲಿರುವ ಗ್ರಾಮೀಣ ವೃತ್ತಿ ಕಲಾವಿದರ ಬದುಕು ಕಟ್ಟುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ನಡೆಯಬೇಕು ಎಂದು ಸುರಪುರದ ಡಾ. ಈಶ್ವರಯ್ಯ ಮಠ ಹೇಳಿದರು.

ಎರಡು ದಿನಗಳ ಕಾಲ ಇಲ್ಲಿ ನಡೆದ ಜಿಲ್ಲಾ ಜಾನಪದ ಸಮ್ಮೇಳನದ ಅಂಗವಾಗಿ ಶುಕ್ರವಾರ ಸಂಜೆ ಅವರು ಸಮಾರೋಪ ಭಾಷಣ ಮಾಡಿದರು. ಸರ್ಕಾರ ಕೇವಲ ಅಕಾಡೆಮಿಗಳಿಗೆ ಅನುದಾನ ನೀಡಿದರೆ ಸಾಲದು. ತೀವ್ರ ಸಂಕಟದಲ್ಲಿರುವ ಗ್ರಾಮೀಣ ಭಾಗದ ವೃತಿ ನಿರತರು ಗೌರವದಿಂದ ಬದುಕುವಂತೆ ಮಾಡಬೇಕಿದೆ.

ಯಾವುದೇ ವ್ಯಕ್ತಿ ಗೌರವ ಸಿಗದ ವೃತ್ತಿಯಲ್ಲಿ ಇರಲು ಇಷ್ಟ ಪಡುವುದಿಲ್ಲ. ಹೀಗಾಗಿ ಅವರ ಜೀವನ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು.

12ನೇ ಶತಮಾನದ ಶರಣರು ಕಾಯಕವೇ ದೇವರು ಎಂದು ನಂಬಿದ್ದರು. ಡೋಹಾರ ಕಕ್ಕಯ್ಯ, ಮಾದರ ಚೆನ್ನಯ್ಯ, ಸಮಗಾರ ಹರಳಯ್ಯ ಸೇರಿದಂತೆ ವೃತ್ತಿ ನಿರತರನ್ನು ಸಮಾನರಾಗಿ ಕಂಡರು. ಇಂಥ ಪರಂಪರೆ ಮರುಕಳಿಸಿದರೆ ಜಾನಪದ ಕಲೆ ಉಳಿಯುತ್ತದೆ ಎಂದು ಬಹಳ ಮಾರ್ಮಿಕವಾಗಿ ಮಾತನಾಡಿದರು.

ಮಾಜಿ ಶಾಸಕ ಗುಂಡಪ್ಪ ವಕೀಲ್ ಮಾತನಾಡಿ, ಔರಾದ್‌ನಲ್ಲಿ ಇಂಥದೊಂದು ಜಾನಪದ ಕಲಾವಿದರ ಸಂಗಮ ನಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ. ಜನ ನಗರಗಳಿಗೆ ವಲಸೆ ಹೋಗುವುದು ತಪ್ಪಿಸುವ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಿದರೆ ಗ್ರಾಮಗಳು ಉಳಿಯುತ್ತವೆ ಎಂದು ಹೇಳಿದರು.

ಡಾ. ಶಿವಗಂಗಾ ರುಮ್ಮಾ ಮಾತನಾಡಿದರು. ಸಮ್ಮೇಳನಾಧ್ಯಕ್ಷ ವೈಜಿನಾಥ ಬಿರಾದಾರ, ಧುರೀಣ ಶ್ರೀಕಾಂತ ಸ್ವಾಮಿ, ಡಾ. ಜಗನ್ನಾಥ ಹೆಬ್ಬಾಳೆ, ಡಾ. ವೈಜಿನಾಥ ಬುಟ್ಟೆ, ಸಂಜುಕುಮಾರ ಜುಮ್ಮಾ ಇತರರು ಉಪಸ್ಥಿತರಿದ್ದರು. ಎಸ್.ಬಿ. ಬಿರಾದಾರ ಸ್ವಾಗತಿಸಿದರು. ಚೆನ್ನಬಸವ ಹೇಡೆ ವಂದಿಸಿದರು. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮತ್ತು ಜಾನಪದ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT