ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘರ್ಷಣೆ: ಪಿಎಸ್‌ಐ ಸೇರಿ ಹಲವರಿಗೆ ಗಾಯ

ಅಬ್ಬೇನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರ ಚುನಾವಣೆ
Last Updated 27 ಡಿಸೆಂಬರ್ 2012, 6:01 IST
ಅಕ್ಷರ ಗಾತ್ರ

ಚಿತ್ರದುರ್ಗ: ಗ್ರಾಮ ಪಂಚಾಯ್ತಿ ಅಧ್ಯಕ್ಷರ ಚುನಾವಣೆ ವೇಳೆಯಲ್ಲಿ ಗುಂಪು ಘರ್ಷಣೆ ಸಂಭವಿಸಿ ಪಿಎಸ್‌ಐ ಸೇರಿದಂತೆ ಹಲವರು ಗಾಯಗೊಂಡ ಘಟನೆ ಚಳ್ಳಕೆರೆ ತಾಲ್ಲೂಕಿನ ಅಬ್ಬೇನಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.

ಗ್ರಾಮ ಪಂಚಾಯ್ತಿ ಅಧ್ಯಕ್ಷರ ಚುನಾವಣೆಯನ್ನು ಬುಧವಾರಕ್ಕೆ ಅಧಿಕಾರಿಗಳು ನಿಗದಿಪಡಿಸಿದ್ದರು. ಆದರೆ, ಚುನಾವಣೆಗೆ ಅವಕಾಶ ನೀಡದೆ ಸ್ಥಗಿತಗೊಳಿಸುವ ಉದ್ದೇಶದಿಂದ ಚುನಾವಣೆ ನಡೆಯುವ ಸ್ಥಳಕ್ಕೆ ಸದಸ್ಯರು ಆಗಮಿಸುವ ವೇಳೆಯಲ್ಲಿ ಗುಂಪೊಂದು ಇದ್ದಕ್ಕಿದ್ದಂತೆ ಅವರ ಮೇಲೆ ಕಲ್ಲುಗಳನ್ನು ತೂರಿ, ದೊಣ್ಣೆಗಳಿಂದ ಹಲ್ಲೆ ನಡೆಸಲು ಯತ್ನ ನಡೆಸಿದೆ.

ಈ ಘಟನೆಯಲ್ಲಿ ಪಿಎಸ್‌ಐ ರೇವಣಪ್ಪ ಅವರ ತಲೆಗೆ ಪಟ್ಟು ಬಿದ್ದಿದೆ. ನಂತರ ಸುದ್ದಿ ತಿಳಿದ ತಕ್ಷಣ ಡಿವೈಎಸ್‌ಪಿ, ಸಿಪಿಐ ಸೇರಿಂದಂತೆ ಹೆಚ್ಚಿನ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರಿಂದ ಹೆಚ್ಚಿನ ಅನಾಹುತವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಗ್ರಾಮದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ. ಈ ಘಟನೆಯಲ್ಲಿ ನಾಲ್ವರು ಗ್ರಾಮ ಪಂಚಾಯ್ತಿ ಸದಸ್ಯರು ಗಾಯಗೊಂಡಿದ್ದಾರೆ. ನಂತರ ಪೊಲೀಸರ ಸಮ್ಮುಖದಲ್ಲಿ ಬಿಗಿಭದ್ರತೆಯೊಂದಿಗೆ ಅಧ್ಯಕ್ಷರ ಆಯ್ಕೆ ನಡೆಯಿತು.

ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಹಲವರ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ನಾಯಕನಹಟ್ಟಿ ಠಾಣೆಯಲ್ಲಿ ದೂರು ದಾಖಲಾಗಿದೆ.

21 ಮಂದಿ ಬಂಧನ
ಗುಂಪು ಘರ್ಷಣೆ ಘಟನೆಗೆ ಸಂಬಂಧಿಸಿದಂತೆ 21 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. 12 ಸದಸ್ಯರನ್ನು ಹೊಂದಿರುವ ಈ ಅಬ್ಬೇನಹಳ್ಳಿ ಗ್ರಾಮ ಪಂಚಾಯ್ತಿಯ ಅಧ್ಯಕ್ಷ ಸ್ಥಾನದ ಚುನಾವಣೆ ತೀವ್ರ ಪೈಪೋಟಿಯಿಂದ ಕೂಡಿತ್ತು. ಅಧ್ಯಕ್ಷ ಸ್ಥಾನದ ಚುನಾವಣೆ ಘೋಷಣೆ ಆಗುತ್ತಿದ್ದಂತೆ 12 ಸದಸ್ಯರ ಗುಂಪೊಂದು ವಿವಿಧ ಸ್ಥಳಗಳಿಗೆ ಪ್ರವಾಸಕ್ಕೆ ತೆರಳಿತ್ತು. ಚುನಾವಣೆ ದಿನವಾದ ಬುಧವಾರ ಈ ಗುಂಪು ವಾಹನದಲ್ಲಿ ಗ್ರಾಮಕ್ಕೆ ಆಗಮಿಸಿತು.

ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದ ಇನ್ನೊಂದು ಗುಂಪು ಚುನಾವಣೆ ಅಡ್ಡಿಪಡಿಸುವ ಉದ್ದೇಶದಿಂದ ಪ್ರವಾಸಕ್ಕೆ ತೆರಳಿದ ಗುಂಪು ಆಗಮಿಸಿದ ತಕ್ಷಣ ಗಲಾಟೆ ಆರಂಭಿಸಿತು. ಸುಮಾರು ನೂರು ಜನರಿದ್ದ ಗುಂಪು ಗ್ರಾ.ಪಂ. ಕಚೇರಿ ಮೇಲೆಯೂ ದಾಳಿ ಮಾಡಿತು. ಈ ಘಟನೆಯಲ್ಲಿ ಗ್ರಾಮ ಪಂಚಾಯ್ತಿ ಕಚೇರಿಯ ಪೀಠೋಪಕರಣಗಳನ್ನು ಹಾಳು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ಶಾಂತವಾದ ನಂತರ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಏಳು ಮತಗಳನ್ನು ಪಡೆದ ವೀರಭದ್ರಪ್ಪ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಏಳು ಮತಗಳನ್ನು ಪಡೆದ ಕಮಲಮ್ಮ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಚುನಾವಣಾ ಅಧಿಕಾರಿಯಾಗಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ತಿಪ್ಪೇಸ್ವಾಮಿ ಕಾರ್ಯನಿರ್ವಹಿಸಿದರು. ಗ್ರಾಮ ಲೆಕ್ಕಾಧಿಕಾರಿ ಶಾಂತಪ್ಪ, ನಾಗರಾಜು, ರಘುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT