ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘಾಟಿ,‘ಚರಂಘಾಟಿ’

Last Updated 14 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಕೆಚ್ಚೆದೆಯ ಯುವ ಚಾರಣಿಗರನ್ನು ಕೈಬೀಸಿ ಕರೆಯುವ ಚರಂಘಾಟಿ ದಟ್ಟ ಹಿಮದ ಕಣಿವೆ ಮಾರ್ಗ. ಇದು ಹಿಮಾಚಲ ಪ್ರದೇಶದ ‘ಕಿನ್ನೂರ ಹಿಮಾಲಯ’ದಲ್ಲಿದೆ. ಸಮುದ್ರ ಮಟ್ಟದಿಂದ ಸರಿಸುಮಾರು 17,600 ಅಡಿಗಳಷ್ಟು ಎತ್ತರದಲ್ಲಿದೆ. ಈ ಸ್ಥಳವನ್ನು ತಲುಪಲು ಮೊದಲಿಗೆ ಸಿಮ್ಲಾಕ್ಕೆ ಹೋಗಬೇಕು. ಅಲ್ಲಿಂದ ನಾರಕಂಡಾ ಎನ್ನುವ ಮಾರ್ಗದ ಮೂಲಕವಾಗಿ ‘ರೆಕಾಂಗ್‌ಪಿಯೊ’ ಎಂಬ ಸ್ಥಳಕ್ಕೆ ತೆರಳಬೇಕು. ಆ ಸ್ಥಳದಲ್ಲಿ ಚರಂಘಾಟಿಗೆ ಚಾರಣ ಕೈಗೊಳ್ಳಲು ಅಗತ್ಯವಾದಂತಹ ಪ್ರವೇಶ ಪತ್ರವನ್ನು ಪಡೆದುಕೊಳ್ಳಬೇಕು. ಬಳಿಕ ಚಾರಣವನ್ನು ಆರಂಭಿಸಬಹುದು.

ಸುಮಾರು ಐದಾರು ಗಂಟೆಗಳ ಚಾರಣದ ನಂತರ ಲಂಬರ್ ಅನ್ನುವ ಪುಟ್ಟ ಊರು ಸಿಗುತ್ತದೆ. ಆ ಊರು ತಲುಪಲು ತುಂಬಾ ಪ್ರಯಾಸಪಡಬೇಕು. ಮೈಕೊರೆಯುವ ಚಳಿಗಾಳಿಗೆ ಎದೆಯೊಡ್ಡಿ ಹೆಜ್ಜೆಗಳನ್ನು ಎತ್ತಿ ಎತ್ತಿ ಇಡುತ್ತಲೇ ಸಾಗಬೇಕು. ಆ ಪ್ರದೇಶದಲ್ಲಿ ಕೆಲವು ವೇಳೆ ಅನಿರೀಕ್ಷಿತವಾಗಿ ದಟ್ಟ ಹಿಮವೂ ಬೀಳಲಾರಂಭಿಸುತ್ತದೆ. ಆಗ ಚಾರಣದ ಹಾದಿ ಮತ್ತಷ್ಟು ಕಠಿಣ. ಅಂತಹ ಸಂದರ್ಭದಲ್ಲಿ ಮುಖವನ್ನು ತೆರೆದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ. ಕಣ್ಣುಗಳ ರಕ್ಷಣೆಗಾಗಿ ಸಮರ್ಪಕವಾದ ಕನ್ನಡಕವನ್ನು ಹಾಕಲೇಬೇಕು. ಮೇಲಾಗಿ ಆ ಸ್ಥಳದಲ್ಲಿ ಎಲ್ಲೂ ನಿಲ್ಲದೆ ನಿರಂತರವಾಗಿ ನಡೆಯುತ್ತಲೇ ಇರಲೇಬೇಕು. ಎಲ್ಲಿಯಾದರೂ ನಿಂತರೆ ಹಿಮ ಆವರಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚು.

ಲಂಬರ್ ಊರಿನಲ್ಲಿ ಬೆರಳೆಣಿಕೆಯಷ್ಟು ಮಾತ್ರ ಮನೆಗಳಿವೆ. ಅಲ್ಲಿನ ಜನತೆ ಸೇವಾ ಮನೋಭಾವ ಉಳ್ಳವರು. ಚಾರಣಿಗರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ರಾತ್ರಿವೇಳೆಯಲ್ಲಿ ತಂಗಲು ವ್ಯವಸ್ಥೆ ಕಲ್ಪಿಸಿಕೊಡುತ್ತಾರೆ. ನಡೆದು ಸುಸ್ತಾದವರು, ಅತಿ ಚಳಿಗಾಳಿಯಿಂದ ಆರೋಗ್ಯ ಕೆಟ್ಟವರು ಆ ಊರಿನಲ್ಲಿ ಉಳಿದುಕೊಂಡು ವಿಶ್ರಮಿಸಬಹುದು. ಅಲ್ಲಿಯವರೆಗೆ ಹೋಗಿ ಮುಂದೆ ಚಾರಣ ಕೈಗೊಳ್ಳಲಾಗದೆ ಮರಳಿ ಬಂದವರ ಸಂಖ್ಯೆಯೇ ಹೆಚ್ಚು.

ಏನಾದರೂ ಸರಿಯೇ, ಚರಂಘಾಟಿ ಹಿಮದ ಕಣಿವೆ ಮಾರ್ಗವನ್ನು ನೋಡಲೇಬೇಕು ಅನ್ನುವವರು ಲಂಬರ್ ಊರಿನಿಂದ ಮತ್ತೆ ಚಾರಣ ಆರಂಭಿಸಬೇಕು. ಹನ್ನೆರಡು ಗಂಟೆಗಳಿಗೂ ಹೆಚ್ಚು ಕಾಲ ಹಿಮದ ಬಂಡೆಗಳ ಮೇಲೆ ಹಾಗೂ ಇಳಿಜಾರಿನ ಕಿರಿದಾದ ದಾರಿಯಲ್ಲಿ ನಡೆಯಬೇಕು. ಮಾರ್ಗ ಮಧ್ಯೆ ಅಲ್ಲಲ್ಲಿ ಮನಮೋಹಕ ಬೌದ್ಧ ಧಾಮಗಳನ್ನು ಕಾಣಬಹುದು. ರಾತ್ರಿವೇಳೆ ಅಲ್ಲಿ ಉಳಿದುಕೊಳ್ಳಬಹುದು. ಬರೋಬ್ಬರಿ ಒಂದು ದಿನದ ಬಳಿಕ ಚರಂಗ ಎಂಬ ಮತ್ತೊಂದು ಊರು ಎದುರಾಗುತ್ತದೆ. ಅಲ್ಲಿ ಮಾತ್ರ ಸಮತಟ್ಟಾದ ಬಯಲು ಭೂಪ್ರದೇಶವಿದೆ. ಆ ಸ್ಥಳದಲ್ಲಿ ಹೇಳಿಕೊಳ್ಳುವಂತಹ ಸೌಲಭ್ಯಗಳು ಇಲ್ಲ. ಟೆಂಟ್ ಹಾಕಿಕೊಂಡು ತಂಗಬಹುದು.

ಚರಂಗದ ನಂತರ 3 ಕಿ.ಮೀ. ದೂರ ಕ್ರಮಿಸಿದಾಗ ನಮಗೆ ಎದುರಾಗುವುದು ರಾಂಗ್‌ರಿಕ್ ಎನ್ನುವ ಸುಂದರ ಬೌದ್ಧ ವಿಹಾರ ಧಾಮ. ಅಲ್ಲಿಂದ ಮತ್ತೆ ಒಂದು ದಿನದ ಚಾರಣವನ್ನು ಪೂರ್ಣಗೊಳಿಸಿದರೆ- ‘ಲಲಾಂತಿ ಡೊಂಗ್ರಿ’ ಎನ್ನುವ ಬಯಲು ಪ್ರದೇಶ ಎದುರಾಗುತ್ತದೆ. ಆ ಸ್ಥಳದಲ್ಲಿ ರಾತ್ರಿ ಕಳೆದು ಮತ್ತೆ ಒಂದು ದಿನದ ಕಾಲ ಚಾರಣ ಮುಂದುವರೆಸಿದರೆ ಚರಂಘಾಟಿ ಹಿಮ ಕಣಿವೆ ಮಾರ್ಗ ಕಾಣಸಿಗುತ್ತದೆ.

ಆ ಕಣಿವೆ ಮಾರ್ಗ ದೂರದಿಂದಲೇ ಭಯ ಹುಟ್ಟಿಸುವಂತಿದೆ. ಅದಿರುವುದು ದಟ್ಟ ಹಿಮಬೆಟ್ಟಗಳ ಸಾಲಿನ ಮಧ್ಯದಲ್ಲಿ. ಆ ದಾರಿಯಲ್ಲಿ ಹೆಜ್ಜೆ ಇಡುತ್ತಿದ್ದರೆ ಎಲ್ಲಿ ಬೆಟ್ಟ ಮೈಮೇಲೆ ಬೀಳುವುದೋ ಎನ್ನಿಸುತ್ತದೆ. ಆ ಹಿಮ ಕಣಿವೆ ಮಾರ್ಗದಲ್ಲಿ ಕೆಲ ಕಾಲ ನಿಂತು ಹಿಂದಕ್ಕೆ ತಿರುಗಿ ಬಂದ ಹಾದಿಯನ್ನು ನೋಡಿದರೆ ಎದೆ ಝಲ್ಲೆನ್ನುತ್ತದೆ. ಮತ್ತ್ಯಾವುದೋ ಲೋಕದಲ್ಲಿ ನಿಂತ ಅನುಭವವಾಗುತ್ತದೆ. ಅಷ್ಟೇ ಅಲ್ಲ, ಜೀವನದಲ್ಲೊಮ್ಮೆ ಅಂತಹ ಕಣಿವೆ ಮಾರ್ಗವನ್ನು ಕಾಣಲು ಸಾಧ್ಯವೇ ಇಲ್ಲ ಅನ್ನಿಸುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT