ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂಡೀಗಡದಲ್ಲಿ ಚಳಿ; ಹಾಸನದಲ್ಲಿ ನಡುಕು

ಬಿತ್ತನೆ ಆಲೂಗೆಡ್ಡೆಗೆ ಕಂಟಕವಾಗಿರುವ ಮಂಜು
Last Updated 10 ಜನವರಿ 2013, 19:59 IST
ಅಕ್ಷರ ಗಾತ್ರ

ಹಾಸನ: ಕಳೆದ ಹಂಗಾಮಿನಲ್ಲಿ ಆಲೂಗೆಡ್ಡೆ ಬಿತ್ತನೆ ಬೀಜದ ಬೆಲೆ ದುಪ್ಪಟ್ಟಾಗಿ ಕಷ್ಟ ಅನುಭವಿಸಿದ್ದ ಜಿಲ್ಲೆಯ ರೈತರಿಗೆ ಈಗ ಮತ್ತೊಂದು ಆಘಾತಕಾರಿ ಸುದ್ದಿ ಎದುರಾಗಿದೆ. ಉತ್ತರ ಭಾರತದಲ್ಲಿ ವಿಪರೀತ ಚಳಿಯಿಂದಾಗಿ ಆಲೂಗೆಡ್ಡೆ ಬೆಳೆ ಕುಂಠಿತವಾಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುಂದಿನ ವರ್ಷ ಬಿತ್ತನೆ ಬೀಜಕ್ಕೂ ಸಮಸ್ಯೆಯಾಗುವ ಭೀತಿ ಮೂಡಿದೆ.

ಇಡೀ ಉತ್ತರ ಭಾರತದಲ್ಲಿ ಕಳೆದ ಕೆಲವು ದಿನಗಳಿಂದ ವಿಪರೀತ ಚಳಿ ಹಾಗೂ ಮಂಜು ಮುಸುಕಿದ ವಾತಾವರಣ ಇರುವುದರಿಂದ ಆಲೂಗೆಡ್ಡೆ ಬೆಳೆ ಮೇಲೇಳುತ್ತಲೇ ಇಲ್ಲ.
`ಕಳೆದ ಹತ್ತು ದಿನಗಳಿಂದ ಬೆಳೆಯಲ್ಲಿ ಒಂದಿಷ್ಟು ಚೇತರಿಕೆಯೂ ಕಾಣುತ್ತಿಲ್ಲ. ಇದೇ ಸ್ಥಿತಿ ಇನ್ನೂ ಸ್ವಲ್ಪ ದಿನ ಮುಂದುವರಿದರೆ ಒಟ್ಟಾರೆ ಆಲೂಗೆಡ್ಡೆ ಉತ್ಪಾದನೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆ ಇದೆ' ಎಂಬುದು ಜಲಂಧರ್ ಆಲೂಗೆಡ್ಡೆ ಬೆಳೆಗಾರರ ಸಂಘದ ಅಧ್ಯಕ್ಷ ಜೆ.ಎಸ್.ಸಂಘ ಅವರ ಕಳವಳದ ನುಡಿ.

ಕಳೆದ ಕೆಲವು ದಿನಗಳಿಂದ ಪಂಜಾಬ್‌ನಲ್ಲಿ ಸಾಮಾನ್ಯಕ್ಕಿಂತ 10 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ ತಾಪಮಾನ ಇದೆ. ಮಂಜಿನಿಂದಾಗಿ ಭೂಮಿಯಲ್ಲಿ ತೇವಾಂಶ ಹೆಚ್ಚಾದರೆ ಆಲೂಗೆಡ್ಡೆ ಗಿಡಗಳಿಗೇ ಹಾನಿಯಾಗುತ್ತದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

`ಆಲೂಗೆಡ್ಡೆ ಬೆಳೆಯುವ ಪ್ರದೇಶದಲ್ಲಿ ಈವರೆಗೆ ಅಂಥ ಪರಿಸ್ಥಿತಿ ಕಂಡುಬಂದಿಲ್ಲ. ಆದರೆ ಇದೇ ಸ್ಥಿತಿ ಇನ್ನೂ ಒಂದೆರಡು ದಿನ ಮುಂದುವರಿದರೆ ರಾಜ್ಯದ ಆಲೂಗೆಡ್ಡೆ ಬೆಳೆ ಪೂರ್ತಿಯಾಗಿ ನಾಶವಾಗುವ ಸಾಧ್ಯತೆ ಇದೆ' ಎಂದು ಕಳವಳ ವ್ಯಕ್ತಪಡಿಸುತ್ತಾರೆ ಬಿತ್ತನೆ ಆಲೂಗೆಡ್ಡೆ ಬೆಳೆಯುವ ಜಲಂಧರ್‌ನ ರೈತರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಂಗ್ ಬಹಾದುರ್ ಸಂಘ.

ದೇಶದಲ್ಲಿ ಪ್ರತಿ ವರ್ಷ 84 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 21 ಲಕ್ಷ ಟನ್ ಆಲೂಗೆಡ್ಡೆ ಬೆಳೆಯಲಾಗುತ್ತದೆ. ಆಲೂಗೆಡ್ಡೆ ಮಾತ್ರವಲ್ಲ, ತಾಪಮಾನ ಶೂನ್ಯಕ್ಕಿಂತ ಕೆಳಗಿಳಿದರೆ ಉತ್ತರ ಭಾರತದಲ್ಲಿ ತರಕಾರಿ ಮತ್ತು ಹಣ್ಣು ಹಂಪಲು ಬೆಳೆಗಳ ಮೇಲೆಯೂ ವ್ಯತಿರಿಕ್ತ ಪರಿಣಾಮವಾಗುವ ಸಾಧ್ಯತೆ ಇದೆ ಎಂದು ತೋಟಗಾರಿಕಾ ಕ್ಷೇತ್ರದ ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ.

ವಿಪರೀತ ಚಳಿಯ ವಾತಾವರಣವಿದ್ದರೆ ಹೊಲಗಳ ಸುತ್ತ ಬೆಂಕಿ ಹಚ್ಚುವ ಮೂಲಕ ರೈತರು ತಮ್ಮ ಬೆಳೆ ರಕ್ಷಣೆಗೆ ಕ್ರಮ ಕೈಗೊಳ್ಳಬಹುದು ಎಂದು ಅವರು ಸಲಹೆ ನೀಡಿದ್ದಾರೆ.

ರಾಜ್ಯದಲ್ಲೂ ಆತಂಕ
ರಾಜ್ಯದಲ್ಲಿ ಉತ್ತರ ಕರ್ನಾಟಕದ ಕೆಲವು ಭಾಗ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಆಲೂಗೆಡ್ಡೆ ಬೆಳೆಯಲಾಗುತ್ತಿದೆ. ಹಾಸನದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಆಲೂಗೆಡ್ಡೆ ಬಿತ್ತನೆ ಮಾಡಲಾಗುತ್ತಿದೆ.

ಐದಾರು ವರ್ಷ ಹಿಂದಿನವರೆಗೂ ಜಿಲ್ಲೆಯಲ್ಲಿ 50 ಸಾವಿರ ಎಕರೆ ಪ್ರದೇಶದಲ್ಲಿ ಆಲೂಗೆಡ್ಡೆ ಬಿತ್ತನೆ ಮಾಡಲಾಗುತ್ತಿತ್ತು. ಕಳೆದ ಐದು ವರ್ಷಗಳಿಂದ ಸತತವಾಗಿ ಅಂಗಮಾರಿ ರೋಗದಿಂದ ಬೆಳೆ ಹಾನಿಯಾಗಿ ರೈತರು ಒಟ್ಟಾರೆ ರೂ. 250 ಕೋಟಿಗೂ ಹೆಚ್ಚು ನಷ್ಟ ಅನುಭವಿಸಿದ್ದಾರೆ. ಇದರಿಂದಾಗಿ ಬಿತ್ತನೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿಯುತ್ತಾ ಬಂದಿದ್ದು, ಈಗ 20 ಸಾವಿರ ಎಕರೆಗೂ ಕಡಿಮೆ ವಿಸ್ತಾರಕ್ಕೆ ಬಂದುನಿಂತಿದೆ.

ಬೆಲೆ ಏರಿಕೆ ಹಾಗೂ ಇತರೆ ಸಮಸ್ಯೆಗಳಿಂದಾಗಿ ಜಿಲ್ಲೆಯಲ್ಲಿ ಕಳೆದ ವರ್ಷ ರೈತರು ಬಿತ್ತನೆ ಬೀಜಕ್ಕೂ ಪರದಾಡುವ ಸ್ಥಿತಿ ಉಂಟಾಗಿತ್ತು. ಹಿಂದಿನ ವರ್ಷದವರೆಗೂ ರೂ. 600ರಿಂದ 800ಕ್ಕೆ ಬಿತ್ತನೆ ಬೀಜ ಲಭ್ಯವಾಗುತ್ತಿದ್ದರೆ, ಕಳೆದ ವರ್ಷ ಒಮ್ಮೆಲೇ ರೂ. 1800ಕ್ಕೆ ಏರಿಕೆಯಾಯಿತು. ಬೆಳೆಗಾರರು ಹಲವು ಬಾರಿ ಪ್ರತಿಭಟನೆ, ಹೋರಾಟ ನಡೆಸಿದ ಬಳಿಕ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ರೂ. 1200 ಬೆಲೆ ನಿಗದಿ ಮಾಡಿತು. ಅಲ್ಲದೆ ಮಾರಾಟ ವ್ಯವಸ್ಥೆಯನ್ನೂ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು. ಇದು ವ್ಯಾಪಾರಿಗಳ ಮತ್ತು ಪಂಜಾಬ್‌ನಿಂದ ಬಿತ್ತನೆ ಬೀಜ ತಂದಿದ್ದ ರೈತರ ಅಸಮಾಧಾನಕ್ಕೂ ಕಾರಣವಾಗಿತ್ತು.

ಅಷ್ಟು ಹಣ ತೆತ್ತು ಬೀಜ ಖರೀದಿಸಿ ದ್ದರೂ ಮಳೆ ಕೊರತೆಯಿಂದಾಗಿ ಬಿತ್ತನೆ ಮಾಡಿರುವವರಲ್ಲಿ ಶೇ 60ಕ್ಕಿಂತ ಹೆಚ್ಚು ರೈತರು ಈ ವರ್ಷವೂ ನಷ್ಟ ಅನುಭವಿಸಿದ್ದಾರೆ.
ಕಳೆದ ಬಾರಿ ಅಸಮಾಧಾನಗೊಂಡಿದ್ದ ಪಂಜಾಬಿನ ರೈತರು ಮುಂದಿನ ವರ್ಷದಿಂದ ಬಿತ್ತನೆ ಬೀಜ ತರುವುದಿಲ್ಲ ಎಂದು ಹೇಳಿದ್ದರು. ಈಗ ಅಲ್ಲಿ ಸರಿಯಾಗಿ ಬೆಳೆ ಬಾರದೇ ಇದ್ದರೆ ಮುಂದಿನ ಹಂಗಾಮಿನಲ್ಲಿ ಬಿತ್ತನೆ ಬೀಜವೂ ಲಭ್ಯವಾಗಲಾರದು ಎಂಬ ಭೀತಿ ಜಿಲ್ಲೆಯ ರೈತರನ್ನು ಈಗಲೇ ಕಾಡಲಾರಂಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT