ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳವಳಿ ಹಿಂದೆ ಆರ್‌ಎಸ್‌ಎಸ್

Last Updated 8 ಜೂನ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಬಾಬಾ ರಾಮ್‌ದೇವ್ ಅವರ ಭ್ರಷ್ಟಾಚಾರ ವಿರೋಧಿ ಆಂದೋಲನದ ಹಿಂದೆ ಆರ್‌ಎಸ್‌ಎಸ್ ಕೈವಾಡವಿದೆ. ಸಂಘವು ಈ ಹಿಂದೆಯೂ ಭ್ರಷ್ಟಾಚಾರ ವಿರುದ್ಧದ ಯಾವುದೇ ಚಳವಳಿಯನ್ನು ಬೆಂಬಲಿಸುವುದಾಗಿ ಹೇಳಿತ್ತು ಎಂದು ಗೃಹ ಸಚಿವ ಪಿ.ಚಿದಂಬರಂ ಆಪಾದಿಸಿದ್ದಾರೆ.

`ತುಸು ಹಿಂದಿನದನ್ನು ನೆನಪಿಸಿಕೊಳ್ಳಿ, ಕರ್ನಾಟಕದ ಪುತ್ತೂರಿನಲ್ಲಿ ಆರ್‌ಎಸ್‌ಎಸ್‌ನಿಂದ ಅಖಿಲ ಭಾರತೀಯ ಪ್ರತಿನಿಧಿ ಸಭಾ ಏರ್ಪಡಿಸಲಾಗಿತ್ತು. ಭ್ರಷ್ಟಾಚಾರ ವಿರುದ್ಧದ ಎಲ್ಲ ಹೋರಾಟಗಳನ್ನೂ ಬೆಂಬಲಿಸುವ ನಿರ್ಧಾರವನ್ನು ಅಲ್ಲಿ ತೆಗೆದುಕೊಳ್ಳಲಾಗಿತ್ತು. ನಂತರ ಏ.2ರಂದು ಆರ್‌ಎಸ್‌ಎಸ್ ರಾಮ್‌ದೇವ್ ಅವರ ನೇತೃತ್ವದಲ್ಲಿ ಭ್ರಷ್ಟಾಚಾರ ವಿರೋಧಿ ವೇದಿಕೆ ರಚನೆಯ ಬಗ್ಗೆ ಘೋಷಿಸಿತ್ತು. ರಾಮ್‌ದೇವ್ ಅವರ ಹಿಂದೆ ಯಾರ ಬೆಂಬಲವಿದೆ ಎಂಬುದನ್ನು ಅರಿತುಕೊಳ್ಳುವುದು ಅತ್ಯವಶ್ಯಕ~ ಎಂದು ಅವರು ದೂರದರ್ಶನಕ್ಕೆ ನೀಡಿರುವ ಸಂದರ್ಶನದಲ್ಲಿ ಬುಧವಾರ ಹೇಳಿದ್ದಾರೆ.

ಮಾಧ್ಯಮ ಲೋಕದ ಒಂದು ಭಾಗ ಮಾತ್ರ ಅಣ್ಣಾ ಹಜಾರೆ ಅವರ ಚಳವಳಿಗೆ, ರಾಮ್‌ದೇವ್ ಅವರ ಹೋರಾಟಕ್ಕೆ ಅತಿ ಹೆಚ್ಚಿನ ಪ್ರಚಾರ ನೀಡುತ್ತಿದೆ. ಸಂಸದೀಯ ಪ್ರಜಾಪ್ರಭುತ್ವವನ್ನು ಒಳಗೊಳಗೇ ಕೊಲ್ಲುವ ಕೆಲಸ ಮಾಡುತ್ತಿದೆ. ನಾನು ಹೇಳಲಾಗದ ಕಾರಣಗಳಿಂದಾಗಿ ಮಾಧ್ಯಮದ ಒಂದು ವಿಭಾಗವು ಇಂಥ ಪ್ರಚಾರವನ್ನು ನೀಡುತ್ತಿದೆ ಎಂದು ಹೇಳಿದರು.

ಭ್ರಷ್ಟಾಚಾರದ ವಿರುದ್ಧ ನಾಗರಿಕ ಸಮಾಜವು ಧ್ವನಿ ಎತ್ತುವುದನ್ನು ತಾವು ಯಾವತ್ತಿಗೂ ಬೆಂಬಲಿಸಿರುವುದಾಗಿ ಚಿದಂಬರಂ ತಿಳಿಸಿದರು. ಆದರೆ ಚುನಾಯಿತ ಪ್ರತಿನಿಧಿಗಳು, ನಾಗರಿಕ ಸಮಾಜದ ಪ್ರತಿನಿಧಿಗಳೊಂದಿಗೆ ಸೇರಿ ತಮ್ಮ ಕಟ್ಟುಪಾಡುಗಳನ್ನು ಮರೆಯುವುದನ್ನು ಬೆಂಬಲಿಸುವುದಿಲ್ಲ. ಸಂಸದೀಯ ಪ್ರಜಾಪ್ರಭುತ್ವವೇ ಈ ದೇಶದ ಬುನಾದಿ ಎಂಬುದನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.

ಲೋಕಪಾಲ ಮಸೂದೆಯ ಕರಡು ಸಿದ್ಧಪಡಿಸಲು ಜೂನ್ 30ನ್ನು ಗುರಿಯಾಗಿಸಿಕೊಂಡಿದ್ದೇವೆ. ಕರಡು ಸಮಿತಿಯ ಉಳಿದ ಐವರು ಸದಸ್ಯರೂ ಸಭೆಗೆ ಹಾಜರಾಗುತ್ತಾರೆ ಎಂಬ ನಿರೀಕ್ಷೆ ಇದೆ ಎಂದ ಅವರು, ಹಜಾರೆ ಅವರ ಅನುಪಸ್ಥಿತಿಯಿಂದಾಗಿ ಮುಂದಿನ ಸಭೆಯ ದಿನಾಂಕದಲ್ಲಿ ಬದಲಾವಣೆಯಾಗಿದೆ ಎಂದು ತಿಳಿಸಿದರು.

ರಾಮಲೀಲಾ ಮೈದಾನದಲ್ಲಿ ನಡೆದ ಕಾರ್ಯಾಚರಣೆಯ ಬಗ್ಗೆ ಕಾಂಗ್ರೆಸ್ ಹಾಗೂ ಸರ್ಕಾರದ ನಡುವೆ ಭಿನ್ನಾಭಿಪ್ರಾಯ ಇತ್ತು ಎಂಬ ಹೇಳಿಕೆಗಳನ್ನು ಸಚಿವರು ತಳ್ಳಿಹಾಕಿದರು. ಅರುಣ್ ಜೇಟ್ಲಿ ಹಾಗೂ ಸುಷ್ಮಾ ಸ್ವರಾಜ್‌ರಂಥ ದ್ವಿಮುಖ ವ್ಯಕ್ತಿತ್ವ ಉಳ್ಳವರು ನಮ್ಮ ಪಕ್ಷ ಹಾಗೂ ಸರ್ಕಾರದಲ್ಲಿ ಇಲ್ಲ ಎಂದು ಖಾರವಾಗಿ ಉತ್ತರಿಸಿದರು.

ಕಂಧಹಾರ್ ವಿಮಾನ ಅಪಹರಣದ ಸಂದರ್ಭದಲ್ಲಿ ಜಸ್ವಂತ್ ಸಿಂಗ್ ಹಾಗೂ ಎಲ್.ಕೆ.ಅಡ್ವಾಣಿ ಅವರ ನಡುವೆ ಇಂಥ ದ್ವಿಮುಖ ನೀತಿಯನ್ನು ಇಡೀ ರಾಷ್ಟ್ರವೇ ಗಮನಿಸಿತ್ತು. ಆದರೆ ನಮ್ಮ ಪಕ್ಷದಲ್ಲಿ ನಾವೆಲ್ಲರೂ ಒಂದೇ ಧ್ವನಿಯಲ್ಲಿ ಮಾತನಾಡುತ್ತೇವೆ, ಒಂದೇ ಗುರಿಗಾಗಿ ಶ್ರಮಿಸುತ್ತೇವೆ ಎಂದರು.

ಬಾಬಾ ಅವರ ಅನುಯಾಯಿ ರಾಜಬಾಲಾ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಕಾಳಜಿ ವ್ಯಕ್ತಪಡಿಸಿದ ಚಿದಂಬರಂ, ಅವರ ಕುಟುಂಬವನ್ನು ಸರ್ಕಾರ ಸಂಪರ್ಕಿಸಿದ್ದು ಸಕಲ ಸಹಾಯವನ್ನೂ ನೀಡಲಾಗುವುದು ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT