ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಕೊಲೇಟ್ ಮಳಿಗೆಗಳ ಈ ಲೋಕ

Last Updated 6 ಜುಲೈ 2012, 19:30 IST
ಅಕ್ಷರ ಗಾತ್ರ

ರೀ, ನಾನು ನಿಮ್ಮ ಮಗುವಿನ ತಾಯಿ ಆಗುತ್ತಿದ್ದೇನೆ/ ಮ್...ನಾವು ಇಬ್ಬರು ಮೂವರಾಗುತ್ತಿದ್ದೇವೆ/ ರೀ...ನಾನು ಪ್ರೆಗ್ನೆಂಟ್ /ರೀ...ನಂಗೆ ಹುಳಿ ತಿನ್ಬೇಕು ಅನ್ನಿಸ್ತಿದೆ (ಕೊನೆಯ ಮಾತು ಕೇಳಿಸಿಕೊಂಡ ಪತಿ ಶಾಕ್ ಆದವನಂತೆ ಹಾಗೆಯೇ ಹಿಂದಿರುಗುತ್ತಾನೆ) ಮೊದಲು ಸಿಹಿ ತಿನ್ನೋಣ.../ಹೊಸ ಜೀವನದ ಶುಭಾರಂಭ... ಒಂದಿಷ್ಟು ಸಿಹಿಯೊಂದಿಗೆ.

ಟೀವಿಯಲ್ಲಿ ಪ್ರತಿ ಹತ್ತು ನಿಮಿಷಕ್ಕೊಮ್ಮೆ ಹಲವು ಭಾಷೆಗಳಲ್ಲಿ ಬಿತ್ತರಗೊಳ್ಳುವ ಕ್ಯಾಡ್‌ಬರಿ ಡೈರಿಮಿಲ್ಕ್ ಚಾಕೊಲೇಟ್‌ನ ಜಾಹೀರಾತಿದು. ಶಾಪಿಂಗ್ ಮಳಿಗೆಗಳ ರ‌್ಯಾಕ್‌ಗಳಲ್ಲಿ ನೀಟಾಗಿ ಜೋಡಿಸಿಟ್ಟ ಚಾಕೊಲೇಟ್ ಕಂಡಾಗಲೆಲ್ಲಾ ಈ ಜಾಹೀರಾತು ನೆನಪಾಗಿ ನಗೆ ಮೂಡುತ್ತದೆ.
ಚಾಕೊಲೇಟ್ ಈಗ ಮಿಠಾಯಿಯೇ ಆಗಿಬಿಟ್ಟಿದೆ. ಅದರಲ್ಲೂ ಕ್ಯಾಡಬರಿಗೆ ಭಾರೀ ಬೇಡಿಕೆ.

ತಾಯಿಯ ಹೊಟ್ಟೆಯಲ್ಲಿ ಮಗು ಇರುವಾಗ ನಡೆಯುವ ಸೀಮಂತ ಕಾರ್ಯಕ್ರಮದಲ್ಲಿಯೇ ಬಂದವರಿಗೆಲ್ಲಾ ಚಾಕೊಲೇಟ್ ಹಂಚುವವರುಂಟು. ನಾಮಕರಣವಾಗಲೀ, ಶಾಲೆಗೆ ಸೇರಿಸಿದ ಸಂದರ್ಭವಾಗಲೀ, ಹುಟ್ಟುಹಬ್ಬವೋ ಪರೀಕ್ಷೆಯಲ್ಲಿ ಪಾಸಾಗುವುದೋ ಆಗಲೀ ಎಲ್ಲಕ್ಕೂ ಚಾಕೊಲೇಟ್ ಸುಲಭಕ್ಕೆ ಹಂಚಲಾಗುವ ಸಿಹಿ. ಹಿಂದೆ ಸರಸದ ಸಂಕೇತವಾಗಿ ಮೈಸೂರ್ ಪಾಕ್ ಚಾಲ್ತಿಯಲ್ಲಿತ್ತು. ಈಗ ಆ ಜಾಗಕ್ಕೂ ಕ್ಯಾಡಬರಿ ಬಂದು ಕೂತಿದೆ. ಪ್ರೇಮನಿವೇದನೆಗೆ ಗುಲಾಬಿಯೊಂದೇ ಸಾಲದು, ಜೊತೆಗೆ ಅಂಗೈ ಅಗಲದ ಚಾಕೊಲೇಟನ್ನೂ ಕೊಡುವ ಕಾಲ ಬಂದಾಗಿದೆ.

`ಚಾಕೊಲೇಟ್‌ನೊಂದಿಗಿನ ನನ್ನ ಪಯಣ ಆರಂಭವಾಗಿದ್ದೂ ಇದೇ ರೀತಿ. ಪತಿಗೆ ಚಾಕೊಲೇಟ್ ಎಂದರೆ ಬಲು ಪ್ರೀತಿ. ನಾನೇ ಯಾಕೆ ಮನೆಯಲ್ಲಿ ತಯಾರಿಸಿ ಆತನಿಗೆ ಉಡುಗೊರೆ ನೀಡಬಾರದು ಎಂಬ ವಿಚಾರ ಹೊಳೆಯಿತು. ಚಾಕೊಲೇಟ್ ತಯಾರಿಸುವುದು ಹೇಗೆ ಎಂದು ಮುಂಬೈನಲ್ಲಿ ಒಂದು ವಾರ ತರಬೇತಿ ಪಡೆದಿದ್ದೆ. ಹಾಗಾಗಿ ತಯಾರಿ ಕಷ್ಟವಾಗಲಿಲ್ಲ. ಮನೆಮಟ್ಟಿಗೆ ತಯಾರಿಸಿದ ಚಾಕೊಲೇಟ್‌ಗಳಿಗೆ ನೆರೆಹೊರೆಯವರಿಂದಲೂ ಹೊಗಳಿಕೆ ಸಂದಿತು. ಹೀಗೆ ಆರಂಭವಾದ ಚಾಕಿ ಅರ್ಥಾತ್ ಚಾಕೊಲೇಟ್ ಪ್ರೀತಿ ಇಂದು ನಾಲ್ಕು ಮಳಿಗೆಗಳ ಉದ್ಯಮಿಯಾಗಲು ನಾಂದಿಯಾಗಿದೆ...~ ಸಾರ್ಥಕ ಭಾವದಲ್ಲಿ ಹೇಳುತ್ತಾ ಹೋದರು ಅನುಪಮಾ. ಪತಿ ಅಮರ್‌ನಾಥ್ ಪ್ರೋತ್ಸಾಹದಿಂದ ಇಷ್ಟೆಲ್ಲಾ ಸಾಧಿಸಲು ಸಾಧ್ಯವಾಯಿತೆನ್ನುವ ಅವರು ಇಂದು ಅವರು ಮುನ್ನೂರು ಬಗೆಯ ಚಾಕೊಲೇಟ್ ಉತ್ಪಾದಿಸುತ್ತಾರೆ. 

ತಮ್ಮದೇ ಉತ್ಪಾದನಾ ಘಟಕ ನಿರ್ಮಿಸಿಕೊಂಡು ಹನ್ನೆರಡು ಮಂದಿಗೆ ಉದ್ಯೋಗ ನೀಡಿರುವ ಅನುಪಮಾ, `ಲೌಡ್ ವಿಸ್ಪರ್~ (ಚಿತ್ರ ಹಾಗೂ ಸಂದೇಶ), `ಚಾಕೊಲೇಟ್ ಫ್ರೇಮ್~, `ಬೊಕೆ~, `ಎನ್‌ಲೈಟ್~ (ಸಕ್ಕರೆ ರಹಿತ), `ಬ್ರೌನ್‌ಗೋಲ್ಡ್~ (ಚಿನ್ನ, ಬೆಳ್ಳಿ ಹಾಗೂ ತಾಮ್ರದ ಬಣ್ಣದಲ್ಲಿ), `ಚಾಕೊಲೇಟ್ ಕೇಕ್~, `ಫೌಂಟೆನ್ ಫಾರ್ ಫನ್~ ಮೊದಲಾದ ಬಗೆಗಳನ್ನು ಮಾರುಕಟ್ಟೆಗೆ ಇಳಿಸಿದ್ದಾರೆ. ಈ ಚಾಕೊಲೇಟ್‌ಗಳ ಬೆಲೆ 86 ರೂ.ನಿಂದ ಆರಂಭಗೊಳ್ಳುತ್ತದೆ. ಸಾವಿರಾರು ರೂಪಾಯಿ ಬೆಲೆಯ ಚಾಕೊಲೇಟ್‌ಗಳಿಗೆ ಇವರಲ್ಲಿ ಆರ್ಡರ್ ಕೊಡುವವರೂ ಇದ್ದಾರೆ. 12 ರೂ.ನಿಂದ ಆರಂಭಗೊಳ್ಳುವ ಚಾಕೊಲೇಟ್ ಬಿಸ್ಕತ್‌ಗಳು ಕೂಡ ಇವರ ಬಳಿ ಲಭ್ಯ. ಹುರಿದ ಬಾದಾಮಿಯ ಸಕ್ಕರೆ ರಹಿತ ಚಾಕೊಲೇಟ್‌ಗಳು ಜನರಿಗೆ ತುಂಬಾ ಮೆಚ್ಚಾಗುತ್ತದಂತೆ.

`ಕ್ಯಾಡ್‌ಬರಿ, ನೆಸ್ಲೆ ಕಂಪೆನಿಗಳಿಗೆ ನಾವು ಸ್ಪರ್ಧಿಗಳಲ್ಲ. ನಾವು ತಯಾರಿಸುವ ಪ್ರಮಾಣ ಬಲು ಸಣ್ಣದು. ಗ್ರಾಹಕರು ಫ್ರೆಶ್ ಉತ್ಪನ್ನಗಳು ಎಂಬ ಕಾರಣಕ್ಕೆ ಹೆಚ್ಚು ಇಷ್ಟಪಡುತ್ತಾರೆ. ಅವರ ಮಾರುಕಟ್ಟೆ ಇಡೀ ವಿಶ್ವಕ್ಕೇ ಸೀಮಿತವಾದರೆ ನಮ್ಮದು ನಗರದ ಗಡಿ ದಾಟುವುದು ಕಡಿಮೆ.

ಗ್ರಾಹಕರು ಬೇಡಿಕೆ ಸಲ್ಲಿಸಿದಂತೆ ಅವರಿಗಿಷ್ಟವಾದ ವಿನ್ಯಾಸದಲ್ಲಿ ನಾವು ಚಾಕೊಲೇಟ್ ತಯಾರಿಸಿಕೊಡುತ್ತೇವೆ. ಪ್ರಿಂಟೆಡ್ ಚಾಕೊಲೇಟ್ ಇಂದು ಮಾರುಕಟ್ಟೆಯಲ್ಲಿ ಬಹು ಬೇಡಿಕೆ ಪಡೆದುಕೊಂಡಿದೆ. ತಮಗಿಷ್ಟವಾದವರ ಚಿತ್ರವನ್ನು ಚಾಕೊಲೇಟ್ ಮೇಲೆ ಪ್ರಿಂಟ್ ಹಾಕುವುದು ಈ ಪ್ರಕಾರದ ವೈಶಿಷ್ಟ್ಯ. ಬಹುತೇಕರು ಇದನ್ನು ತಿನ್ನದೆ ಹಾಗೆಯೇ ಉಳಿಸಿಕೊಳ್ಳಲು ಇಷ್ಟಪಡುವುದರಿಂದ ದೀರ್ಘಕಾಲ ಹಾಳಾಗದಂತೆ ಇದನ್ನು ತಯಾರಿಸುತ್ತೇವೆ~ ಎನ್ನುತ್ತಾರೆ ಅನುಪಮಾ ಅವರ ಪತಿ ಅಮರ್‌ನಾಥ್. ಹುಟ್ಟುಹಬ್ಬಕ್ಕಷ್ಟೇ ಚಾಕೊಲೇಟ್ ಕಡ್ಡಿಗಳಿರುವ ಬೊಕೆಗಳನ್ನು ನೀಡುವ ಪ್ರತೀತಿಯೂ ಬೆಳೆಯುತ್ತಿದೆಯಂತೆ. ಚಾಕೊಲೇಟ್ ತಿನ್ನುವುದನ್ನೇ ಚಟವಾಗಿಸಿಕೊಂಡ ಕೆಲವು ಮಂದಿ ಪ್ರತಿನಿತ್ಯ ಕೊಳ್ಳುವುದೂ ಇದೆಯಂತೆ. ತಲೆನೋವು, ಶೀತ, ಬೆನ್ನುನೋವು ಶಮನಕ್ಕೆ ಅವರಿಗೆ ಇದೇ ಚಿಕಿತ್ಸೆಯಂತೆ. ಇದು ನಿಜವೇ ಎಂದು ಪ್ರಶ್ನಿಸಿದರೆ ಗ್ರಾಹಕರು ನಮ್ಮ ಮೇಲೆ ಇಟ್ಟಿರುವ ಅಭಿಮಾನಕ್ಕೆ ಅದು ಉದಾಹರಣೆ~ ಎಂದು ನಗೆ ಬೀರುತ್ತಾರೆ.

ನಗರದಲ್ಲಿ ಚಾಕೊಲೇಟ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಇನ್ನೊಂದು ಕಂಪೆನಿ `ಬ್ಲಿಸ್~. ಆಹಾರ ಪದಾರ್ಥಗಳ ಬಗ್ಗೆ ಅಪಾರ ಒಲವಿರುವ ಆಸ್ಟ್ರೇಲಿಯಾ ಮೂಲದ ವಿಮಲ್ ಶರ್ಮ 2008ರಲ್ಲಿ `ಬ್ಲಿಸ್ ಚಾಕೊಲೇಟ್ ಲಾಂಜ್~ ಆರಂಭಿಸಿದರು. ಇದೀಗ ನಾಲ್ಕು ಮಳಿಗೆಗಳಿಗೆ ವ್ಯಾಪಿಸಿರುವ `ಬ್ಲಿಸ್~ ಪ್ರತಿದಿನ 25,000 ಚಾಕೊಲೇಟ್‌ಗಳನ್ನು ತಯಾರಿಸುತ್ತಿದೆ. 39 ಸ್ವಾದಗಳಲ್ಲಿ `ಬ್ಲಿಸ್~ ಚಾಕೊಲೇಟ್‌ಗಳು ದೊರೆಯುತ್ತಿವೆ. ಹಳೇ ಏರ್‌ಪೋರ್ಟ್ ರಸ್ತೆಯಲ್ಲಿರುವ ಉತ್ಪಾದನಾ ಘಟಕದಲ್ಲಿ ನೂರೈವತ್ತು ಮಂದಿ ಚಾಕೊಲೇಟ್ ತಯಾರಿಕೆಯಲ್ಲಿ ಕಾರ್ಯನಿರತರಾಗಿದ್ದಾರೆ. ಶ್ರೀಲಂಕಾ ಮೂಲದ ಶೆಫ್ ಪ್ರತಿದಿನ ಹೊಸ ರುಚಿಯ ಚಾಕೊಲೇಟ್ ತಯಾರಿಸುತ್ತಾರೆ.

ಆರೋಗ್ಯಕರ ಚಾಕೊಲೇಟ್ ನೀಡುವುದು ನಮ್ಮ ಮೂಲ ಉದ್ದೇಶ ಎನ್ನುವ ಮಾರ್ಕೆಟಿಂಗ್ ಅಧಿಕಾರಿ ಕಾಂಚನ್ ಅಚ್ಪಾಲ್ `ಕಳೆದೊಂದು ವರ್ಷದಲ್ಲಿ ಚಾಕಲೇಟ್ ಕೊಳ್ಳುವವರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಹೃದಯ ಸಂಬಂಧಿ ಕಾಯಿಲೆಗಳನ್ನು ಗಮನದಲ್ಲಿಟ್ಟುಕೊಂಡು ಅವರ ಆರೋಗ್ಯಕ್ಕೆ ಹೊಂದಿಕೆಯಾಗುವ ಉತ್ತಮ ಗುಣಮಟ್ಟದ ಚಾಕೊಲೇಟ್‌ಗಳನ್ನು ನೀಡುವುದರಿಂದ ಅರವತ್ತು ವರ್ಷ ದಾಟಿದವರೂ ನಮ್ಮ ಗ್ರಾಹಕರಾಗಿದ್ದಾರೆ. ಕೋಕೋ ಪ್ರಮಾಣ ಹೆಚ್ಚಿರುವ ಚಾಕೊಲೇಟ್‌ಗಳನ್ನು ನೂರು ಗ್ರಾಂನಷ್ಟು ಸೇವಿಸಿದರೆ ಅದು ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ. ಚಾಕೊಲೇಟ್ ಉತ್ಪಾದನೆಗಾಗಿ ಬ್ಲಿಸ್‌ಗೆ ಐಎಸ್‌ಒ ಪ್ರಮಾಣ ಪತ್ರವೂ ಲಭಿಸಿದೆ. ಡಿಸೈನ್‌ನೊಂದಿಗೆ ಗುಣಮಟ್ಟದ ಚಾಕೊಲೇಟ್ ತಯಾರಿಸುವುದಕ್ಕೇ ಪ್ರಾಶಸ್ತ್ಯ ನೀಡುತ್ತೇವೆ~ ಎನ್ನುತ್ತಾರೆ.

ಚಾಕೊಲೇಟ್ ಮಾರುಕಟ್ಟೆ ನಗರದಲ್ಲಿ ಗುಲಾಬಿ ಮಾರುಕಟ್ಟೆಯಂತೆಯೇ ಅರಳುತ್ತಿದೆ ಎಂಬುದಕ್ಕೆ ಇವೆಲ್ಲಾ ಸಣ್ಣ ಸಣ್ಣ ಉದಾಹರಣೆಗಳಷ್ಟೆ. ಸೌಂದರ್ಯ ಸಂಬಂಧಿ ಚಿಕಿತ್ಸೆಗೂ ಚಾಕೊಲೇಟ್ ಬಳಕೆಯಾಗುತ್ತಿರುವುದು ಇನ್ನೊಂದು ವಿಶೇಷ. ಕಾಲಕ್ಕೆ ತಕ್ಕಂತೆ ಚಾಕೊಲೇಟ್ ಆಕಾರ ದೊಡ್ಡದಾಗುತ್ತಲೇ ಇದೆ; ಅದರ ಕುರಿತ ಮೋಹವೂ!

ಅನುಪಮಾ ಅಮರ್‌ನಾಥ್ ಸಂಪರ್ಕಕ್ಕೆ: 98450 19693.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT