ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಾಣಗೆರೆ: ಏಕಾಏಕಿ ಕೋಡಿ ಒಡೆದ ಇಲಾಖೆ

32 ವರ್ಷದ ನಂತರ ಕೆರೆ ತುಂಬಿದರೂ ಸಿಗದ ಫಲ
Last Updated 18 ಸೆಪ್ಟೆಂಬರ್ 2013, 6:09 IST
ಅಕ್ಷರ ಗಾತ್ರ

ಶಿರಾ: ಮೂರು ದಶಕದ ನಂತರ ತಾಲ್ಲೂಕಿನ ಚಿಕ್ಕಬಾಣಗೆರೆ ಕೆರೆ ತುಂಬಿದರೂ ಏರಿಯ ತೂತು ಮುಚ್ಚುವಲ್ಲಿ ವಿಫಲವಾದ ಸಣ್ಣ ನೀರಾವರಿ ಇಲಾಖೆಯು ಏಕಾಏಕಿ ರಾತ್ರಿ ವೇಳೆ ಕೋಡಿ­ಯನ್ನು ಒಡೆಸುವ ಮೂಲಕ ಗ್ರಾಮಸ್ಥರ ವಿರೋಧ ಎದುರಿಸುವಂತಾಗಿದೆ.

ವಾರದಿಂದ ಈ ಭಾಗದಲ್ಲಿ ಮಳೆಯಾಗು­ತ್ತಿದ್ದು, ಅವಳಿ ಕೆರೆಗಳಾದ ದೊಡ್ಡಬಾಣಗೆರೆ, ಚಿಕ್ಕಬಾಣಗೆರೆ ಕೆರೆ ತುಂಬಿ ತುಳುಕುತ್ತಿದ್ದವು. ಇನ್ನು ಅರ್ಧ ಅಡಿ ನೀರು ಬಂದಿದ್ದರೆ ಚಿಕ್ಕ­ಬಾಣಗೆರೆ ಕೋಡಿ ಹರಿಯುತ್ತಿತ್ತು.

ಅಷ್ಟರಲ್ಲಿ ಮೂರು ದಿನಗಳ ಹಿಂದೆ ಕೆರೆ ಏರಿಯ ಮಧ್ಯದಲ್ಲಿ ತೂತುಗಳು (ಮಂಗೆ) ಬೀಳಲಾರಂಭಿಸಿದವು. ಗ್ರಾಮಸ್ಥರ ಸಹಕಾರ­ದೊಂದಿಗೆ ತೂತುಗಳಿಗೆ ಮರಳಿನ ಚೀಲ. ಪ್ಲಾಸ್ಟಿಕ್‌ ಬಿಡುವ ಕೆಲಸ ನಡೆಯಿತಾದರೂ ತೂತು­ಗಳನ್ನು ಮುಚ್ಚಲು ಸಾಧ್ಯವಾಗಿಲ್ಲ. ಒಂದು ತೂತು ಮುಚ್ಚಿದರೆ, ಇನ್ನೊಂದು ತೂತು ಬೀಳುತ್ತಿದ್ದ ಕಾರಣ ಇಲಾಖೆ ಕೈ ಸೋತಿತು.

ದೊಡ್ಡಬಾಣಗೆರೆ ಕೆರೆಯ ಒಟ್ಟು ವಿಸ್ತೀರ್ಣ 400 ಹೆಕ್ಟೇರ್‌, ಚಿಕ್ಕಬಾಣಗೆರೆ 160 ಹೆಕ್ಟೇರ್‌­ನಷ್ಟು ವಿಸ್ತಾರವಾಗಿದೆ. ಕೆರೆ ಏರಿ ಉದ್ದವೇ 3 ಕಿ.ಮೀ ನಷ್ಟಿದೆ. ಈ ಎರಡು ಕೆರೆಗಳು 1981ರಲ್ಲಿ ತುಂಬಿದ್ದು ಬಿಟ್ಟರೆ ಇಲ್ಲಿಯವರೆಗೂ ತುಂಬಿರಲಿಲ್ಲ.

ಸಣ್ಣ ನೀರಾವರಿ ಇಲಾಖೆ ಸಹಾಯಕ ಎಂಜಿನಿಯರ್‌ ರಾಜ್ ಕುಮಾರ್‌ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಆದರೆ ಇನ್ನಷ್ಟು ಸಿಬ್ಬಂದಿ ಹಾಗೂ ಮಣ್ಣು ಹಾಕಲು ಜೆಸಿಬಿ ಯಂತ್ರಗಳನ್ನು ಬಳಸಿಕೊಂಡಿದ್ದರೆ ತೂತು ಮುಚ್ಚಬಹುದಿತ್ತು ಎಂಬುದು ಗ್ರಾಮಸ್ಥರ ವಾದವಾಗಿದೆ.

ನೀರಿನ ಒತ್ತಡ ಕಡಿಮೆಯಾದ ಬಳಿಕ ಕೆರೆ ಕೋಡಿ ಮತ್ತೇ ಕಟ್ಟಿಸಲಾಗುವುದು. ಕೋಡಿ ಒಡೆಯದೇ ಬೇರೆ ಮಾರ್ಗ ಇರಲಿಲ್ಲ ಎಂಬುದು ಸಣ್ಣ ಇಲಾಖೆಯ ವಾದವಾಗಿದೆ.

ಈ ನಡುವೆ ಚಿಕ್ಕಬಾಣಗೆರೆ ಕೆರೆ ಕೋಡಿ ಒಡೆದ ವಿಚಾರ ತಿಳಿದ ದೊಡ್ಡಬಾಣಗೆರೆ  ಗ್ರಾಮಸ್ಥರು ಗ್ರಾಮದ ಕೆರೆಯಿಂದ ನೀರು ಸಣ್ಣಬಾಣಗೆರೆ ಕೆರೆಗೆ ನೀರು ಹರಿಯದಂತೆ ಸಣ್ಣ ಏರಿ ಕಟ್ಟಿದ್ದಾರೆ.

ಮೂರು ದಶಕಗಳ ಕಾಲದ ನಂತರ ತುಂಬಿದ ಕೆರೆ ನೀರಿನ ಸದುಪಯೋಗಪಡಿಸಿಕೊಳ್ಳಲು ವಿಫಲ­ವಾಗಿದ್ದೇವೆ. ಈ ಕೆರೆ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆ, ಜಲ ಸಂವರ್ಧನಾ ಯೋಜನೆ­ಯಡಿ ಹಣ ಬಿಡುಗಡೆಯಾಗಿದೆ. ಆದರೆ ಹಣದಲ್ಲಿ ಏರಿ ದುರಸ್ತಿಗೊಳಿಸದೆ ಏರಿ ಮೇಲಿದ್ದ ಜಾಲಿ ಮರದ ಕೊಂಬೆಗಳನ್ನು ಕಡಿದು ಹಣ ಲಪಟಾಯಿಸಲಾಗಿದೆ.

ಅತಿವೃಷ್ಟಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೂಡಲೇ ಇತ್ತ ಗಮನ ಹರಿಸಿ ತುರ್ತಾಗಿ ಕೆರೆ ಏರಿ, ಕೋಡಿ ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಪರಿಸರವಾದಿ ಗುಂಡಪ್ಪ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT