ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಗಟೇರಿ ಗ್ರಾಮದಲ್ಲಿ ದಂಗೆ ಎದ್ದ ಮಕ್ಕಳು

Last Updated 26 ಫೆಬ್ರುವರಿ 2011, 18:10 IST
ಅಕ್ಷರ ಗಾತ್ರ

ಹರಪನಹಳ್ಳಿ (ದಾವಣಗೆರೆ ಜಿಲ್ಲೆ): ಶಾಲಾ ಬಾಲಕಿಯೊಬ್ಬಳ ವಿವಾಹಕ್ಕೆ ಮುಂದಾದ ಪೋಷಕರ ಕ್ರಮ ವಿರೋಧಿಸಿ ಹಾಗೂ ವಿವಾಹ ತಡೆಗಟ್ಟುವಂತೆ ಆಗ್ರಹಿಸಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ, ಬೀದಿಗಿಳಿದು ಪ್ರತಿಭಟಿಸಿದ ಘಟನೆ ತಾಲ್ಲೂಕಿನ ಚಿಗಟೇರಿ ಗ್ರಾಮದಲ್ಲಿ ಶನಿವಾರ ನಡೆದಿದೆ.

ಮಡಿವಾಳ ವೀರಭದ್ರಪ್ಪ-ಮಂಜಮ್ಮ ದಂಪತಿ ಸ್ಥಳೀಯ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿ ಓದುತ್ತಿರುವ ತಮ್ಮ ಪುತ್ರಿ ರಾಧಾಳನ್ನು (12 ವರ್ಷ) ಸೋದರ ಮಾವನಾದ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಬ್ಯಾಲಾಳ್ ಗ್ರಾಮದ ಸುರೇಶ್ ಎಂಬಾತನಿಗೆ ಫೆ. 27ರಂದು ವಿವಾಹ ಮಾಡಿಕೊಡಲು ಮುಂದಾಗಿದ್ದರು.

ಬಾಲಕಿ ರಾಧಾಳ ತಾಯಿ ಮಂಜಮ್ಮನ ತಂದೆ ವರ್ಷದ ಹಿಂದೆ ನಿಧನರಾಗಿದ್ದರು. ರಾಧಾಳ ತಂದೆ ವೀರಭದ್ರಪ್ಪ ಅವರ ತಂದೆ ಹೆಚ್ಚು ಕಡಿಮೆ ಅದೇ ಸಮಯದಲ್ಲಿ ನಿಧನರಾಗಿದ್ದರು. ಮನೆಯ ಹಿರಿಯರು ತೀರಿಕೊಂಡ ವರ್ಷದೊಳಗೆ ಶುಭ ಕಾರ್ಯಗಳು ನಡೆಯಬೇಕೆನ್ನುವುದು ಗ್ರಾಮೀಣರಲ್ಲಿ ಮನೆ ಮಾಡಿರುವ ಸಂಪ್ರದಾಯ. ಇದಕ್ಕೆ ಪೂರಕವೆಂಬಂತೆ ಕಾನೂನಿನ ಅರಿವಿಲ್ಲದ ಪೋಷಕರು ಶಾಲಾ ಬಾಲಕಿಯನ್ನು ಧಾರೆ ಎರೆದುಕೊಡಲು ಮುಂದಾಗಿದ್ದರು. ಮದುವೆಗಾಗಿ ಸಕಲ ಸಿದ್ಧತೆ ಆಗಿತ್ತು.

ಸಹಪಾಠಿ ರಾಧಾಳ ಮದುವೆಯ ವಿಷಯ ತಿಳಿದ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ತರಗತಿ ಬಹಿಷ್ಕರಿಸಿ, ರಸ್ತೆಗಿಳಿದು, ಬಾಲ್ಯವಿವಾಹ ತಡೆಗಟ್ಟುವಂತೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ನಡೆಸುತ್ತ ಬಾಲಕಿಯ ಮನೆ ಕಡೆಗೆ ಹೊರಟರು. ಈ ಮಧ್ಯೆ ಕೆಲವರು ಪ್ರತಿಭಟನೆ ಕೈಬಿಡುವಂತೆ ವಿದ್ಯಾರ್ಥಿಗಳಿಗೆ ಬೆದರಿಸಿದರು.

ಆದರೂ ತಮ್ಮ ಪಟ್ಟು ಸಡಿಲಿಸದ ವಿದ್ಯಾರ್ಥಿಗಳು ಸಮೀಪದಲ್ಲಿರುವ ಪೊಲೀಸ್ ಠಾಣೆಗೆ ತೆರಳಿ, ಮದುವೆ ನಿಲ್ಲಿಸುವಂತೆ ಒತ್ತಾಯಿಸಿದರು. ವಿದ್ಯಾರ್ಥಿಗಳ ಒತ್ತಾಯಕ್ಕೆ ಮಣಿದ ಪೊಲೀಸರು ಮೆರವಣಿಗೆಯೊಂದಿಗೆ ಪೋಷಕರ ಮನೆಗೆ ತೆರಳಿ, ಪುಟ್ಟ ಮಕ್ಕಳ ಮದುವೆ ಅಪರಾಧ ಎಂದು ಮನವರಿಕೆ ಮಾಡಿಕೊಟ್ಟರು.

‘ಕಾನೂನಿನ ಅರಿವಿಲ್ಲದೆ, ಮೂಢನಂಬಿಕೆಯಿಂದ ನಾವು ಮದುವೆ ಮಾಡಿಕೊಡಲು ನಿರ್ಧರಿಸಿದ್ದೇವೆ ಹೊರತು, ಬೇರೆ ಉದ್ದೇಶ ಇರಲಿಲ್ಲ. ಮುಂದೆ ತಪ್ಪು ಮಾಡುವುದಿಲ್ಲ’ ಎಂದು ಪೋಷಕರು ಗ್ರಾಮಸ್ಥರ ಸಮಕ್ಷಮ ತಪ್ಪೊಪ್ಪಿಗೆ ಬರೆದುಕೊಟ್ಟು, ಮದುವೆಯನ್ನು ಸ್ಥಗಿತಗೊಳಿಸಿದರು.

ಮಧುಕುಮಾರ್, ರೂಪಿತಾ, ಸೀಮಾ, ತೀರ್ಥರಾಜ್, ಪ್ರಶಾಂತ್, ಆದರ್ಶ, ಕರಿಯಮ್ಮ, ವಸಂತ, ನಾಗವೇಣಿ, ಜ್ಯೋತಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಶಾಲಾ ಬಾಲಕಿಯ ಮದುವೆ ತಡೆಗಟ್ಟುವಂತೆ ಆಗ್ರಹಿಸಿ ತಾವು ಪ್ರತಿಭಟನೆ ದಾರಿ ಹಿಡಿಯಲು ಸ್ಫೂರ್ತಿಯಾಗಿದ್ದು ‘ಅಣಕು ಸಂಸತ್’ ಕಾರ್ಯಕ್ರಮ ಎಂದು ವಿದ್ಯಾರ್ಥಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT