ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ

Last Updated 25 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ವಾರದ ರಜೆ ಎಂದರೆ ಸಂಭ್ರಮ. ತುಸು ಅವಧಿ ಕೆಲಸಗಳಿಗೆ ಸೀಮಿತವಾದರೆ, ಬಹುಪಾಲು ಮನೋರಂಜನೆಗೆ ಮೀಸಲು. ವಾರಕ್ಕೆ ಒಂದಾದರೂ ಸಿನಿಮಾ ನೋಡುವ ತವಕ. ಅದು ಇಷ್ಟವಾದ ನಟ, ನಟಿಯದ್ದೇನಾದರೂ ಚಿತ್ರವಾದರೆ ಚಿತ್ರಮಂದಿರ ಎಷ್ಟು ದೂರವಾದರೂ ಸರಿಯೇ ಹೋಗಲು ಸಿದ್ಧ.

`ಮಾಗಡಿ ರೋಡಿನ ಚಿತ್ರಮಂದಿರದಲ್ಲಿ ನಮ್ಮ ಹೀರೊ ಚಿತ್ರ ಹಾಕಿದ್ದಾರೆ ಕಣೆ' ವಾರದ ರಜೆಯ ಹಿಂದಿನ ದಿನ ಗೆಳತಿ ಹೇಳಿದ್ದೇ ತಡ, ಬೆಳಿಗ್ಗೆ ಎದ್ದು ಮನೆಯಿಂದ ಮಾಗಡಿ ರೋಡಿನ ಚಿತ್ರಮಂದಿರದತ್ತ ಹೊರಟಿದ್ದೆ. ಆ ಚಿತ್ರಮಂದಿರಲ್ಲಿ ಮೊದಲ ಸಲ ಚಿತ್ರ ವೀಕ್ಷಣೆಗೆ ತೆರಳಿದ್ದು. ಎಂಟ್ಹತ್ತು ಕಿಲೋಮೀಟರ್ ಟ್ರಾಫಿಕ್‌ನ ದೂಳು ಕುಡಿದು ಹೋದಮೇಲೆ ಅಯ್ಯೋ ಇಷ್ಟು ದೂರಾನ ಈ ಟ್ಯಾಕಿಸು ಎನ್ನಿಸಿತು. ಏದುಸಿರು ಬಿಡುತ್ತಲೇ ಸೀಟಿಗೆ ಒರಗಿ, ಕಣ್ಣುಮುಚ್ಚಿದ ಐದೇ ನಿಮಿಷಕ್ಕೆ `ಜನಗಣ ಮನ ಅಧಿನಾಯಕ ಜಯ ಹೇ ಭಾರತ ಭಾಗ್ಯ ವಿಧಾತ...' ಕಿವಿಮೇಲೆ ಬಿತ್ತು.

ನನ್ನಂತೆಯೇ ಚಿತ್ರ ವೀಕ್ಷಣೆಗೆ ಬಂದಿದ್ದ ಹಲವು ಮಂದಿ ತಮ್ಮ ಆಸನಗಳಿಂದ ಥಟ್ಟನೆ ಎದ್ದು ನಿಂತರು. ಹತ್ತದಿನೈದು ವರ್ಷದ ಮಕ್ಕಳ ರಟ್ಟೆಗಳನ್ನು ಪೋಷಕರು ಹಿಡಿದು ನಿಲ್ಲಿಸಿದ್ದರು. ಅರೆಕ್ಷಣದ ಹಿಂದೆ ಗೌಜು ಗದ್ದಲದಿಂದಿದ್ದ ಚಿತ್ರಮಂದಿರದೊಳಗೆ `ಪಿನ್ ಡ್ರಾಪ್ ಸೈಲೆಂಟ್'! ಆಶ್ಚರ್ಯದಿಂದಲೇ ಕಣ್ಣರಳಿಸಿದ್ದ ನಾನು ಸೀಟಿನಿಂದ ಮೇಲೆದ್ದು ರಾಷ್ಟ್ರಗೀತೆಗೆ ಗೌರವ ಸೂಚಿಸಿದೆ.

ಮಾಗಡಿ ರಸ್ತೆಯ ವೀರೇಶ್ ಚಿತ್ರಮಂದಿರದಲ್ಲಿ ಮೊದಲ ಸಲ ಸಿನಿಮಾ ನೋಡಲು ಹೋದರೆ ಆಶ್ಚರ್ಯದ ಜತೆಗೆ ಹೆಮ್ಮೆ ಎನಿಸುವುದು ಸುಳ್ಳಲ್ಲ. ಸಿನಿಮಾ ಮಂದಿರ ಮನರಂಜನೆಯ ಪ್ರಮುಖ ಕೇಂದ್ರ. ಎರಡೂವರೆ ಗಂಟೆ ಭಾವನೆಗಳ ಉಯ್ಯಾಲೆಯಲ್ಲಿ ತೂಗಿ, ತೇಲಿ ಬರುವ ಸ್ಥಳ.  ಅಂಥ ವೀರೇಶ್ ಚಿತ್ರಮಂದಿರದಲ್ಲಿ ಚಿತ್ರ ಆರಂಭಕ್ಕೂ ಕೆಲ ಕ್ಷಣ ಮೊದಲು ರಾಷ್ಟ್ರಗೀತೆಯನ್ನು ಮೊಳಗಿಸಲಾಗುತ್ತದೆ. `ಚಿತ್ರ ರಸಿಕ'ರಲ್ಲಿ ರಾಷ್ಟ್ರದ ಬಗ್ಗೆ ಗೌರವ, ದೇಶಭಕ್ತಿ ಬೆಳೆಸುವುದು ಒಂದು ಆಶಯವಾದರೆ, ಚಿತ್ರಮಂದಿರಲ್ಲಿ ಶಿಸ್ತು ತರುವುದು ಮತ್ತೊಂದು ಉದ್ದೇಶ. 

ಅನೇಕ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರಾರಂಭವಾಗುವ ಮುನ್ನ ಚಿತ್ರಗೀತೆಗಳನ್ನು ಹಾಕುವುದು ಸಾಮಾನ್ಯ. ಆದರೆ ಈ ಚಿತ್ರಮಂದಿರ ತುಸು ವಿಭಿನ್ನವಾಗಿ ರಾಷ್ಟ್ರಗೀತೆಯನ್ನು ಕೇಳಿಸುತ್ತದೆ. ಮೊದಲ ಬಾರಿಗೆ  ಚಿತ್ರಮಂದಿರಕ್ಕೆ ಹೋದ `ಚಿತ್ರಪ್ರೇಮಿ'ಗಳಿಗೆ ಆಶ್ಚರ್ಯವಾದರೂ ಅವರು ತಾವಾಗಿಯೇ ಸ್ಪಂದಿಸಿ, ಎದ್ದುನಿಲ್ಲುವ ಮೂಲಕ ಗೌರವ ಸೂಚಿಸುತ್ತಾರೆ. ಚಿತ್ರಮಂದಿರದಲ್ಲಿ ನಿತ್ಯ ಐದು ಆಟಗಳು (ಷೋ) ನಡೆಯುತ್ತವೆ. ಈ ವೇಳೆ ಆಶಾ ಬೋಸ್ಲೆ ಹಾಡಿರುವ, ಎ.ಆರ್.ರೆಹಮಾನ್ ಸಂಗೀತ ಸಂಯೋಜನೆಯ ರಾಷ್ಟ್ರಗೀತೆಯನ್ನು ಕೇಳಿಸಲಾಗುತ್ತದೆ.

ನಮಗೆ ಮಾತ್ರ ಹೊಸ ಪರಂಪರೆ: ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಹಾಕುವ ಸಂಪ್ರದಾಯ ಇತ್ತೀಚಿನದ್ದಲ್ಲದಿದ್ದರೂ, ನಗರಕ್ಕೆ ಈ ಸಂಪ್ರದಾಯ ಹೊಸದು. ಥಾಯ್ಲೆಂಡ್ ದೇಶದ ಚಿತ್ರಮಂದಿರಗಳಲ್ಲಿ ಚಲನಚಿತ್ರ ಪ್ರಾರಂಭಕ್ಕೂ ಮೊದಲು ದೇಶಭಕ್ತಿ ಗೀತೆ ಹಾಕುತ್ತಿದ್ದರು. 1960-65ರಲ್ಲಿ ನಮ್ಮ  ದೇಶದ ಎಲ್ಲ ಸಿನಿಮಾ ಮಂದಿರಗಳಲ್ಲೂ ಚಲನಚಿತ್ರ ಮುಕ್ತಾಯದ ನಂತರ ದೇಶಭಕ್ತಿ ಗೀತೆ ಹಾಕಲಾಗುತ್ತಿತ್ತು.

ಆದರೆ ಚಿತ್ರ ಮುಗಿದ ತಕ್ಷಣ ಪ್ರೇಕ್ಷಕರು ಎದ್ದು ಹೋಗುತ್ತಿದ್ದರು. ಹಾಗಾಗಿ ದೇಶಭಕ್ತಿ ಗೀತೆಗೆ ಗೌರವ ಕೊಡುವುದಿಲ್ಲ ಎಂಬ ಉದ್ದೇಶದಿಂದ ಅದನ್ನು ನಿಲ್ಲಿಸಲಾಯಿತು. ಮುಂಬೈ ಸೇರಿದಂತೆ ಮಹಾರಾಷ್ಟ್ರದ ವಿವಿಧ ನಗರಗಳಲ್ಲಿ ಈಗಲೂ ಚಿತ್ರ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಹಾಕಲಾಗುತ್ತಿದೆ. ನಗರದ ವೀರೇಶ್ ಚಿತ್ರ ಮಂದಿರ ಈ ಸಂಪ್ರದಾಯನ್ನು ಪಾಲಿಸುತ್ತಿದೆ.

`ರಾಷ್ಟ್ರಗೀತೆಗೆ ಗೌರವ ತೋರಿಸಲು ಎದ್ದು ನಿಲ್ಲುವಂತೆ ಯಾರನ್ನೂ ಬಲವಂತ ಮಾಡುವುದಿಲ್ಲ. ಜನರೇ ಸ್ವಪ್ರೇರಣೆಯಿಂದ ಎದ್ದುನಿಂತು, ಗೌರವ ತೋರುತ್ತಾರೆ. ಸುಮಾರು 26 ವರ್ಷಗಳ ಹಿಂದೆ ನಮ್ಮ ಚಿತ್ರಮಂದಿರಲ್ಲಿ ಈ ಪ್ರಯೋಗ ಪ್ರಾರಂಭಿಸಿದ್ದೆವು. ಪ್ರಾರಂಭದಲ್ಲಿ ಕೆಲ ಪ್ರೇಕ್ಷಕರು ನಿರ್ಲಕ್ಷ್ಯ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ಎಲ್ಲ ಚಿತ್ರ ಮಂದಿರಗಳಲ್ಲೂ ಈ ಸಂಪ್ರದಾಯ ಆರಂಭಿಸುವ ಯೋಚನೆ ಇದೆ. ಮನರಂಜನೆಯ ಜತೆಗೆ  ದೇಶಭಕ್ತಿ ಬೆಳೆಸುವುದು ಇದರ ಹಿಂದಿನ ಉದ್ದೇಶ' ಎನ್ನುತ್ತಾರೆ ವೀರೇಶ್ ಚಿತ್ರ ಮಂದಿರದ ಮಾಲೀಕ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ  ಕೆ.ವಿ. ಚಂದ್ರಶೇಖರ್.
ದೇಶಭಕ್ತಿ ಯಾವ ಯಾವ ರೂಪದ್ಲ್ಲಲೋ ಪ್ರಕಟವಾಗುತ್ತಿರುವಾಗ, ಶಿಳ್ಳೆ, ಕೂಗಾಟದ ಚಿತ್ರ ಮಂದಿರದಲ್ಲಿ ರಾಷ್ಟ್ರಗೀತೆ ಮೊಳಗುತ್ತಿರುವುದು ಗಮನಾರ್ಹ.

ಹೆಮ್ಮೆ ಹೆಚ್ಚಿಸಿದ ಅನುಭವ
ಮೊದಲ ಬಾರಿಗೆ ಈ ಚಿತ್ರ ಮಂದಿರಕ್ಕೆ ಸಿನಿಮಾ ನೋಡಲು ಬಂದಿದ್ದೇನೆ. ಜನಗಣಮನ ರಾಷ್ಟ್ರಗೀತೆ ಹಾಕಿದ ಕೂಡಲೇ ಆಶ್ಚರ್ಯವಾಯಿತು. ಸಿನಿಮಾ ಮಂದಿರದಲ್ಲಿ ಈ ರೀತಿಯ ಪ್ರಯೋಗ ಮಾಡಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಎಲ್ಲ ಚಿತ್ರ ಮಂದಿರಗಳಲ್ಲೂ ಈ ರೀತಿಯ ಪ್ರಯೋಗ ನಡೆಯಬೇಕು. ಶಾಲಾ ದಿನಗಳಲ್ಲಿ ಮಾತ್ರ  ರಾಷ್ಟ್ರಗೀತೆ ಹಾಡುತ್ತಿದ್ದೆ. ಆ ಅವಕಾಶ ಪುನಃ ಇಲ್ಲಿ ಸಿಕ್ಕಿರುವುದು ಸಂತೋಷವಾಗಿದೆ. ರೆಕಾರ್ಡರ್ ಜೊತೆಗೆ ನಾನು ಹಾಡುತ್ತಿದ್ದೆ. 
-ಜಯಂತ್ ಎಸ್.

ನಿತ್ಯದ ಕೆಲಸ ಒತ್ತಡದಲ್ಲಿರುತ್ತೇವೆ. ವಾರದ ರಜೆಯಲ್ಲಿ ಮನರಂಜನೆಗೆಂದು ಸಿನಿಮಾ ಮಂದಿರಕ್ಕೆ ಬರುತ್ತೇವೆ. ಈ ಸಮಯದಲ್ಲಿ ದೇಶಭಕ್ತಿ ಗೀತೆಗೆ ಗೌರವ ತೋರಲು ಅತ್ಯಲ್ಪ ಸಮಯ ಮೀಸಲಿಡುವಂತೆ ಮಾಡಿರುವ ಚಿತ್ರ ಮಂದಿರದ ಕಾರ್ಯ ಮೆಚ್ಚುವಂತಹದು.
-ವಿಜಯ್

ನಗರದಲ್ಲಿ ವೀರೇಶ್ ಚಿತ್ರಮಂದಿರ ಈ ರೀತಿಯ ಸಂಪ್ರದಾಯ ಪಾಲಿಸುತ್ತಿರುವುದು ಸಂತಸ ತಂದಿದೆ. ಶಾಲೆಯ ತರುವಾಯ ರಾಷ್ಟ್ರಗೀತೆಯ ಕೆಲವು ಸಾಲುಗಳು ಮರೆತೇ ಹೋಗಿದ್ದವು. ಹಳೆಯ ನೆನಪುಗಳನ್ನು ಮೆಲುಕು ಹಾಕುವ ಜತೆಗೆ ರಾಷ್ಟ್ರಗೀತೆಯ ಸ್ಥಾನ ಮತ್ತು ಜನರು ಗೀತೆಗೆ ಕೊಡಬೇಕಾದ ಗೌರವ ನೆನಪಾಗುತ್ತದೆ.
-ಚೈತ್ರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT