ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿರಯುವಕರ ಓಟಕ್ಕೆ ಬೆರಗಾದ ಮೈಸೂರು!

Last Updated 2 ಮೇ 2012, 8:20 IST
ಅಕ್ಷರ ಗಾತ್ರ

ಮೈಸೂರು: ಎಪ್ಪತ್ತೈದು ವಯಸ್ಸಿನ ನಂತರವೂ ಯೌವ್ವನ ಮರುಕಳಿಸುತ್ತದೆಯೇ?
ಮಂಗಳವಾರ ಬೆಳಿಗ್ಗೆ ಓವೆಲ್ ಮೈದಾನದಲ್ಲಿ ಸೇರಿದ್ದ ನೂರಾರು ಜನರ ಮನದಲ್ಲಿ ಎದ್ದ ಪ್ರಶ್ನೆಯಿದು. ಅದಕ್ಕೆ ಕಾರಣವಾಗಿದ್ದು 75ರ ಗಡಿ ದಾಟಿದರೂ ನವಯುವಕರಂತೆ ಓಡಿದ ಆ ಚಿರಯುವಕರು!

ಹರಿಯಾಣದ ಭೀಮಸಿಂಗ್ ರಾಠಿ, ಕರ್ನಾಟಕದ ಜಮಖಂಡಿಯ ನಂದೆಪ್ಪ ಬಿ. ಹೊಸಮನಿ ಮತ್ತು ಛತ್ತೀಸಗಢದ ಮೊಹ್ಮದ್ ರಫೀಕ್ ಅವರ ಓಟದ ವೇಗ ಮತ್ತು ಸಾಮರ್ಥ್ಯ ನೋಡಿದವರು ದಂಗಾದರು.

ಕರ್ನಾಟಕ ಮಾಸ್ಟರ್ಸ್ ಅಥ್ಲೆಟಿಕ್ ಸಂಸ್ಥೆ ಮತ್ತು ಮೈಸೂರು ಶಾಖೆಯ ಆಶ್ರಯದಲ್ಲಿ ನಡೆದ ಕ್ರಾಸ್ ಕಂಟ್ರಿ ಸ್ಪರ್ಧೆಯ 75ವರ್ಷ ಮೇಲ್ಪಟ್ಟವರ ವಿಭಾಗದ ಮೊದಲ ಮೂರು ಪ್ರಶಸ್ತಿ ಗೆದ್ದ ಇವರೆಲ್ಲರೂ ಮೇ ದಿನದ ತಾರೆಗಳಾಗಿಬಿಟ್ಟರು. ಮಾಜಿ ಮೇಯರ್ ಮತ್ತು ಅಥ್ಲೆಟಿಕ್ ಸಂಸ್ಥೆ ಅಧ್ಯಕ್ಷ ವಾಸು ಸ್ಥಳದಲ್ಲಿಯೇ ಭೀಮಸಿಂಗ್ ಅವರಿಗೆ ಹತ್ತು ಸಾವಿರ, ನಂದೆಪ್ಪ ಅವರಿಗೆ ಐದು ಮತ್ತು ರಫೀಕ್ ಅವರಿಗೆ ಎರಡೂವರೆ ಸಾವಿರ ರೂಪಾಯಿ ನಗದು ಪುರಸ್ಕಾರ ನೀಡಿದರು.

ಜೀವನದ ಮುಸ್ಸಂಜೆಯಲ್ಲಿಯೂ ಬತ್ತದ ಇಂತಹ ಉತ್ಸಾಹಿ ಯುವಕರು ಹಲವರಿದ್ದರು. 65, 55 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ  ಮಹಿಳೆಯರೂ ಮಿಂಚಿದರು. ತಮ್ಮ ಮೊಮ್ಮಕ್ಕಳೂ ನಾಚಿ ನೀರಾಗುವಂತೆ 2, 8 ಮತ್ತು 10 ಕಿಲೋಮೀಟರ್ ಓಟದ ವಿಭಾಗಗಳಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು. ಇವ ರಿಂದ ಸ್ಫೂರ್ತಿಗೊಂಡ ಐದು ವರ್ಷದ ಪೋರಿ ಸೌಮಿತ್ರಾ ಕೂಡ ಒಂದು ಸುತ್ತು ಓಡಿ ಎಲ್ಲರ ಗಮನ ಸೆಳೆದಳು.

`ಆರೋಗ್ಯ ನಿರ್ವಹಣೆಗಾಗಿ ಓಡುತ್ತಿದ್ದೆ. ಅದೇ ರೂಢಿಯಾಯಿತು. ಸ್ಪರ್ಧೆಗಳಲ್ಲಿ ಭಾಗವಹಿಸಲು ಆರಂಭಿಸಿದೆ, ಪ್ರಶಸ್ತಿ ಪದಕಗಳು ಬಂದಿವೆ. ಓಡುವುದು ನನಗೆ ಖುಷಿ ಕೊಡುತ್ತದೆ. ಜೊತೆಗೆ ಆರೋಗ್ಯ ಸಂಪತ್ತು ಇದೆ~ ಎಂದು ಭೀಮಸಿಂಗ್ ನಗೆ ಬೀರುತ್ತಾರೆ.

65 ವರ್ಷ ಮೇಲ್ಪಟ್ಟ ಮಹಿಳೆಯರ ವಿಭಾಗದಲ್ಲಿ ಪ್ರಥಮರಾದ ಅನ್ನಾ ಇಸಾಕಾ, 55 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಮೊದಲಿಗರಾದ ಪಶ್ಚಿಮ ಬಂಗಾಳದ ಲತಾರಾಣಿ ಅವರಿಗೂ ಓಡುವುದು ನೆಚ್ಚಿನ ಹವ್ಯಾಸ. ಎಲ್ಲರೂ ಓಡುವುದು ಉತ್ತಮ ಆರೋಗ್ಯಕ್ಕೆ ದಾರಿ ಎಂಬ ಅಭಿಮತ ಅವರದ್ದು.

ಓವೆಲ್ ಮೈದಾನದಿಂದ ಆರಂಭವಾದ ಓಟವು ಚಾಮರಾಜಪುರಂ ರೈಲ್ವೆ ನಿಲ್ದಾಣದ ಮಾರ್ಗವಾಗಿ ಮತ್ತೆ ಮರಳಿ ಓವೆಲ್ ಮೈದಾನದಲ್ಲಿಯೇ ಮುಕ್ತಾಯವಾಯಿತು. `ಹಸಿರು ಉಳಿಸಿ~ ಎಂಬ ಘೋಷವಾಕ್ಯದೊಂದಿಗೆ ಬಾಲಕ, ಬಾಲಕಿಯರೂ ಓಡಿದರು. ಆದರೆ ಅವರೆಲ್ಲರ ನಡುವೆ ಗಮನ ಸೆಳೆದವರು ಮಾತ್ರ ಚಿರಯುವಕರು ಮಾತ್ರ!


ಸಿಂಥೆಟಿಕ್ ಟ್ರ್ಯಾಕ್‌ಗೆ ಎಂಟು ಲೇನ್

ಮೈಸೂರು: ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸಲಾಗುತ್ತಿದ್ದು ಅದಕ್ಕೆ ಆರು ಲೇನ್‌ಗಳ ಬದಲು ಎಂಟು ಮತ್ತು ಒಂದು ಹೆಚ್ಚುವರಿ ಲೇನ್ ನಿರ್ಮಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಭರವಸೆ ನೀಡಿದರು.

ನಗರದ ಓವೆಲ್ ಮೈದಾನದಲ್ಲಿ ಮಂಗಳವಾರ ಅಖಿಲ ಭಾರತ ಮಾಸ್ಟರ್ಸ್ ಕ್ರಾಸ್‌ಕಂಟ್ರಿಗೆ ಹಸಿರು ನಿಶಾನೆ ತೋರಿದ ಅವರು, `ಅಥ್ಲೆಟಿಕ್ ಸಂಸ್ಥೆ ಮತ್ತು ಸ್ಥಳೀಯ ಕ್ರೀಡಾಪಟುಗಳ ಬೇಡಿಕೆಗೆ ಅನುಗುಣವಾಗಿ ಮತ್ತು ಅಂತರರಾಷ್ಟ್ರೀಯ ಮಟ್ಟದ ಅನುಗುಣವಾಗಿ ಎಂಟು ಲೇನ್‌ಗಳ ಟ್ರ್ಯಾಕ್ ನಿರ್ಮಿಸಲಾಗುವುದು. ಸದ್ಯದಲ್ಲಿ ಮುಖ್ಯಮಂತ್ರಿಗಳು ಮೈಸೂರಿಗೆ ಆಗಮಿಸಲಿದ್ದು, ಅವರ ಕೈಯಿಂದಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು~ ಎಂದು ಭರವಸೆ ನೀಡಿದರು.

ಕ್ರಾಸ್ ಕಂಟ್ರಿ ಓಟಕ್ಕೆ ಹಸಿರು ನಿಶಾನೆ ತೋರಿದ ಸಚಿವರು ವಿವಿಧ ರಾಜ್ಯಗಳಿಂದ ಬಂದಿದ್ದ ಎಲ್ಲ ಕ್ರೀಡಾಪಟುಗಳಿಗೂ ಶುಭ ಹಾರೈಸಿದರು ಇದೇ ಸಂದರ್ಭಧಲ್ಲಿ ಸಸಿಯನ್ನು ಕೂಡ ನೆಟ್ಟರು .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT