ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಆಯೋಗದ ವಿರುದ್ಧ ಮಾಯಾವತಿ ಟೀಕೆ :ಖುರೇಷಿ ಖಂಡನೆ

Last Updated 18 ಜನವರಿ 2012, 19:30 IST
ಅಕ್ಷರ ಗಾತ್ರ

 ನವದೆಹಲಿ (ಪಿಟಿಐ): ಚುನಾವಣಾ ಆಯೋಗದ ಆದೇಶ ವಿರುದ್ಧ ಹರಿಹಾಯ್ದ ಉತ್ತರಪ್ರದೇಶ ಮುಖ್ಯಮಂತ್ರಿ ಮಾಯಾವತಿ ಅವರನ್ನು ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೇಷಿ ಖಂಡಿಸಿದ್ದಾರೆ.

`ಆಕೆ ಒಬ್ಬ ಹಿರಿಯ ನಾಯಕಿ. ಚುನಾವಣಾ ಆಯೋಗದ ಆದೇಶದ ವಿರುದ್ಧ ಪ್ರತಿಕ್ರಿಯಿಸುವ ಮುನ್ನ ಅವರು ಯೋಚಿಸಬೇಕು~ ಎಂದು ಅವರು ಹೇಳಿದ್ದಾರೆ.

ಉತ್ತರಪ್ರದೇಶದ ಹಲವೆಡೆ ಉದ್ಯಾನಗಳಲ್ಲಿ ಸ್ಥಾಪಿಸಿರುವ ಮಾಯಾವತಿ ಪ್ರತಿಮೆ ಹಾಗೂ ಬಹುಜನ ಸಮಾಜ ಪಕ್ಷದ ಚಿಹ್ನೆಯಾದ ಆನೆಯ ಪ್ರತಿಮೆಗಳಿಗೆ ಚುನಾವಣೆ ಮುಗಿಯುವವರೆಗೆ ಮುಸುಕು ಹಾಕುವಂತೆ ಆಯೋಗ ಆದೇಶಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಮಾಯಾ, ಆಯೋಗದ ಆದೇಶ ಏಕಪಕ್ಷೀಯವಾದುದ್ದು ಮತ್ತು ಪಕ್ಷದ ಸಂಸ್ಥಾಪಕ ಕಾನ್ಶಿರಾಮ್ ಅವರಿಗೆ ಅವಮಾನ ಮಾಡುವಂತಹದ್ದು ಎಂದು ಟೀಕಿಸಿದ್ದರು. 

 `ಇಂಥ ಪ್ರತಿಕ್ರಿಯೆ ಸರಿಯಲ್ಲ. ಇತರ ರಾಜಕೀಯ ಪಕ್ಷಗಳು ಸರ್ಕಾರಿ ಉದ್ಯಾನದಲ್ಲಿ ತಮ್ಮ ಚುನಾವಣಾ ಚಿಹ್ನೆ ಪ್ರದರ್ಶಿಸಲು ಅವಕಾಶ ನೀಡಿ ಎಂದು ಆಗ ಕೇಳಬಹುದು. ಚುನಾವಣೆ ದಿನಾಂಕ ಪ್ರಕಟವಾದ ನಂತರ ಆಯೋಗ ಎಲ್ಲರನ್ನೂ ಸಮನಾಗಿ ಕಾಣುತ್ತದೆ. ಸರ್ಕಾರಿ ಕಚೇರಿಗಳಲ್ಲಿರುವ ಪ್ರಧಾನಿ, ಮುಖ್ಯಮಂತ್ರಿ ಮತ್ತು ಆಡಳಿತಾರೂಢ ಪಕ್ಷದ ನಾಯಕರ ಛಾಯಾಚಿತ್ರ ತೆಗೆದುಹಾಕುವಂತೆ ಸಹ ಆಯೋಗ ಸೂಚಿಸುತ್ತದೆ~ ಎಂದೂ ಖುರೇಷಿ ಹೇಳಿದ್ದಾರೆ.

ಒಳಮೀಸಲಾತಿಗೆ ವಿರೋಧ
 ಲಖನೌ ವರದಿ:
ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಕಲ್ಯಾಣಸಿಂಗ್ ನೇತೃತ್ವ ಜನಕ್ರಾಂತಿ ಪಕ್ಷವು ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ರಾಜ್ಯವನ್ನು 4 ಭಾಗಗಳಾಗಿ ವಿಭಜಿಸುವುದಕ್ಕೆ ಒಲವು ತೋರಿದೆ. ಆದರೆ ಅಲ್ಪಸಂಖ್ಯಾತರಿಗೆ ಒಳಮೀಸಲಾತಿ ನೀಡುವ ಕೇಂದ್ರದ ಪ್ರಸ್ತಾವವನ್ನು ವಿರೋಧಿಸಿದೆ.

ಧರ್ಮ ಆಧರಿತ ಮೀಸಲಾತಿ ಸಲ್ಲ ಎಂದು ಹೇಳಿರುವ ಪಕ್ಷ, ಇತರೆ ಹಿಂದುಳಿದ ವರ್ಗಗಳಿಗೆ ನೀಡಲಾಗಿರುವ ಶೇ 27ರ ಮೀಸಲಾತಿಯಲ್ಲಿ ಅಲ್ಪಸಂಖ್ಯಾತರಿಗೆ ಶೇ 4.5ರಷ್ಟು ಒಳಮೀಸಲಾತಿ ಕಲ್ಪಿಸುವ ಕಾಂಗ್ರೆಸ್ ನಿಲುವನ್ನು ಖಂಡಿಸಿದೆ.

ಜನಕ್ರಾಂತಿ ಪಕ್ಷ ಎಲ್ಲರಿಗೂ ನ್ಯಾಯ ಕಲ್ಪಿಸಬೇಕು ಎಂಬ ನೀತಿ ಅನುಸರಿಸುತ್ತದೆ ಹಾಗೂ ಯಾರನ್ನೂ ಓಲೈಸುವುದಿಲ್ಲ ಎಂದು ಪ್ರಣಾಳಿಕೆ ಬಿಡುಗಡೆ ಮಾಡಿದ ಕಲ್ಯಾಣ ಸಿಂಗ್ ಹೇಳಿದ್ದಾರೆ.

ಪ್ರಿಯಾಂಕಾ ಭೇಟಿ ಅಂತ್ಯ

ರಾಯ್‌ಬರೇಲಿ (ಪಿಟಿಐ): ರಾಯ್‌ಬರೇಲಿ ಮತ್ತು ಅಮೇಥಿ ಲೋಕಸಭಾ ಕ್ಷೇತ್ರ ವ್ಯಾಪ್ತಿ ಮೂರು ದಿನಗಳಿಂದ ಕಾಂಗ್ರೆಸ್ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಪ್ರಿಯಾಂಕಾ ವಾದ್ರಾ ತಮ್ಮ ಪ್ರವಾಸ ಮುಗಿಸಿದ್ದಾರೆ.
 ಬುಧವಾರ ಬೆಳಿಗ್ಗೆ ಬಚರ್‌ವಾನ್ ಮತ್ತು ಹರ್‌ಚಂದ್‌ಪುರ ವ್ಯಾಪಿ ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳನ್ನು ಭೇಟಿ ಮಾಡಿದ ಪ್ರಿಯಾಂಕಾ, ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ಸೂಚನೆ ನೀಡಿದರೆಂದು ಪ್ರದೇಶ ಕಾಂಗ್ರೆಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT