ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಬಡವ, ಶ್ರೀಮಂತರ ನಡುವಿನ ಹೋರಾಟ

Last Updated 2 ಏಪ್ರಿಲ್ 2013, 9:58 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ರಾಜಕೀಯ ಧ್ರುವೀಕರಣಕ್ಕೆ ಈ ಬಾರಿ ತೀರ್ಥಹಳ್ಳಿ ಕ್ಷೇತ್ರ ಸಾಕ್ಷಿಯಾಗಲಿದೆ. ಮತಕ್ಕೆ ಬೆಲೆ ಕಟ್ಟುವ ವ್ಯಕ್ತಿಗಳ ಬಣ್ಣ ಬಯಲಾಗ ಬೇಕಾಗಿದೆ. ಈಗಾಗಲೇ ಪಡೆದ ಮತಗಳಿಂದ ಶೋಷಿತರ ದನಿಯಾಗಿ ಕೆಲಸ ಮಾಡಿವೆಯೇ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಈ ವಿಚಾರ ಸಾರ್ವಜನಿಕ ಚರ್ಚೆಗೆ ಒಳಗಾಗಬೇಕು ಎಂದು ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ಅಶೋಕಮೂರ್ತಿ ಹೇಳಿದರು.

ಪಕ್ಷದ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಕಣ್ಣಿಗೆ ಕಾಣದ ಮತದಾರ ವರ್ಗ ತಣ್ಣನೆ ಕೆಲಸ ಮಾಡುತ್ತಿದೆ. ಯಾರನ್ನು ಗೆಲ್ಲಿಸಬೇಕು ಎಂಬ ಚರ್ಚೆ ನಡೆಯುತ್ತಿದೆ. ಕಳೆದ ಒಂದೆರಡು ತಿಂಗಳಿನಿಂದ ಕ್ಷೇತ್ರಾದ್ಯಂತ ಓಡಾಟ ನೆಡೆಸಿದ್ದೇನೆ. ಪ್ರಜ್ಞಾವಂತರ ಕ್ಷೇತ್ರ ಬೇರೆಯವರ ನಡುವಳಿಕೆಯನ್ನು ಅರಿತು ಮತದಾನ ಮಾಡಬೇಕಾಗಿದೆ ಎಂದರು.

ಯಾವ ಅಭ್ಯರ್ಥಿಗೆ ಮತ ನೀಡಬೇಕು ಎಂಬುದು ಸಾರ್ವಜನಿಕ ಚರ್ಚೆಗೆ ಒಳಗಾಗಬೇಕು. ಸಾರ್ವಜನಿಕ ಜೀವನದಲ್ಲಿ ತಮ್ಮ ಛಾಪು ಏನಿದೆ?. ಎಂದು ವಿವಿಧ ಪಕ್ಷಗಳಿಂದ ಸ್ಪರ್ಧಿಸುವ ಅಭ್ಯರ್ಥಿಗಳನ್ನು ಪ್ರಶ್ನಿಸಿದ ಅವರು, ಸಾಮಾಜಿಕ ಬದ್ಧತೆ ಆ ವ್ಯಕ್ತಿಗಳಲ್ಲಿ ಇದೆಯೇ ಎಂಬ ಆಧಾರದಲ್ಲಿ ನಿರ್ಣಾಯಕ ಮತ ಚಲಾಯಿಸುವಂತೆ ಮಾಧ್ಯಮದ ಮೂಲಕ ಮತದಾರರಲ್ಲಿ ಮನವಿ ಮಾಡಿದರು.

ಅನೇಕ ಸಂದರ್ಭಗಳಲ್ಲಿ ರಾಜಕೀಯ ಸ್ಥಾನ, ಮಾನ ಪಡೆದವರು ಸಮಾಜವಾದಿ ನೇತಾರ ಶಾಂತವೇರಿ ಗೋಪಾಲಗೌಡ ಅವರ ಹೆಸರನ್ನು ಉಲ್ಲೇಖಿಸುತ್ತಾರೆ. ಅವರು ಇಂದು ನಮ್ಮಂದಿಗಿಲ್ಲ. ಅವರು ಹತ್ತಿಸಿದ ಕಿಡಿ ಇಂದಿನವರೆಗೂ ಇದೆ. ಅದು ಮುಂದುವರಿಯಲಿದೆ.

ಏ. 15ರಂದು ನಾಮಪತ್ರ ಸಲ್ಲಿಸಲಿದ್ದೇನೆ. ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆ ಶ್ರೀಮಂತರು, ಬಡವರ ನಡುವಿನ ಸಂಘರ್ಷವಾಗಲಿದೆ. ವರ್ಗ ಸಂಘರ್ಷದ ಆಧಾರದ ಮೇಲೆ ಮತದಾನ ಮಾಡುವ ಮೂಲಕ ಬಡವರ ಸಾಮರ್ಥ್ಯ ಸಾಬೀತಾಗಲಿದೆ. ಕ್ಷೇತ್ರದಲ್ಲಿ ಶಾಸಕರು ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. 10 ಪೈಸೆ ಖರ್ಚಾಗದೇ ಬಗರ್‌ಹುಕುಂ ಹಕ್ಕು ಪತ್ರ ಸಿಕ್ಕಿದೆ ಎಂಬುದು ಸಾಬೀತಾದರೆ ರಾಜಕೀಯ ಜೀವನದಿಂದ ನಿವೃತ್ತಿ ಆಗುತ್ತೇನೆ. ಬಗರ್‌ಹುಕುಂ ಸಾಗುವಳಿದಾರರಿಗೆ ಮನೆಬಾಗಿಲಿಗೆ ಹೋಗಿ ಹಕ್ಕು ಪತ್ರ ನೀಡಲು ಸಮಸ್ಯೆ ಏನಿದೆ ಎಂದು ಅಶೋಕ ಮೂರ್ತಿ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಿದರಹಳ್ಳಿ ಪುರುಷೋತ್ತಮ್, ಪೂರ್ಣಿಮಾ ದಿನೇಶ್, ಹೆಬ್ಬುಲಿಗೆ ದಾಸಣ್ಣ, ವಿಜೇಂದ್ರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT