ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಗೆ ಸಜ್ಜಾಗಿ: ಮಧುಸೂದನ ಮಿಸ್ತ್ರಿ

Last Updated 12 ಜನವರಿ 2012, 8:20 IST
ಅಕ್ಷರ ಗಾತ್ರ

ಶಿವಮೊಗ್ಗ: ರಾಜ್ಯದಲ್ಲಿ ನವೆಂಬರ್ ಸುಮಾರಿಗೆ ಚುನಾವಣೆ ನಡೆಯುವ ಸಂಭವವಿದ್ದು, ಇದಕ್ಕಾಗಿ ಪಕ್ಷದ ಕಾರ್ಯಕರ್ತರು ಈಗಿನಿಂದಲೇ ಸಜ್ಜಾಗಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಮಧುಸೂದನ್ ಮಿಸ್ತ್ರಿ ಹೇಳಿದರು.

ನಗರದ ಲಗಾನ್ ಕಲ್ಯಾಣ ಮಂದಿರದಲ್ಲಿ ಜಿಲ್ಲಾ ಕಾಂಗ್ರೆಸ್ ಬುಧವಾರ ಹಮ್ಮಿಕೊಂಡಿದ್ದ ಪಕ್ಷದ ಪ್ರಮುಖರ ಸಮಾಲೋಚನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಮುಂದಿನ ಚುನಾವಣೆಯಲ್ಲಿ ಜನವಿರೋಧಿ, ಭ್ರಷ್ಟಾಚಾರ, ಹಗರಣಗಳಲ್ಲಿ ಮುಳುಗಿರುವ ಬಿಜೆಪಿ ಪಕ್ಷವನ್ನು ರಾಜ್ಯದಲ್ಲಿ ತಿರಸ್ಕರಿಸಿ, ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಬೇಕು ಎಂದರು.

ಚುನಾವಣೆಗೆ ಮುನ್ನ ರಾಜ್ಯ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಕೋಮು ಹಿಂಸಾಚಾರ ಬಯಸುತ್ತಿದೆ. ಸಿಂದಗಿಯಲ್ಲಿ ಪಾಕಿಸ್ತಾನ ಧ್ವಜ ಹಾರಿಸಿರುವ ಪ್ರಕರಣವೇ ಇದಕ್ಕೆ ಉದಾಹರಣೆ ಎಂದು ಆರೋಪಿಸಿದರು.

ಕೋಮುಗಲಭೆ ಎಬ್ಬಿಸುವುದೇ ಬಿಜೆಪಿ ಉದ್ದೇಶವಾಗಿದ್ದು, ಅವರು ಸಹಬಾಳ್ವೆಯನ್ನು ಬಯಸುವವರಲ್ಲ. ಕೋಮು ಸಾಮರಸ್ಯ ಹಾಳುಗೆಡುವ ಮೂಲಕ ಅದರ ಲಾಭ ಪಡೆದುಕೊಳ್ಳುವುದೇ ಅದರ ಉದ್ದೇಶ ಎಂದು ದೂರಿದರು.

ಕಾಂಗ್ರೆಸ್ ಆಡಳಿತದಲ್ಲಿದ್ದ ವೇಳೆಯಲ್ಲಿ ಬೆಂಗಳೂರನ್ನು `ಸಿಲಿಕಾನ್ ಸಿಟಿ~ ಎಂದು ಇಡೀ ವಿಶ್ವವೇ ನಿಬ್ಬೆರಗಾಗಿ ನೋಡುತ್ತಿತ್ತು. ಆದರೆ, ಇಂದು ಬೆಂಗಳೂರಿನ ಹೆಸರೇ ಭೂಪಟದಲ್ಲಿ ಇಲ್ಲವೇನೋ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಅದಕ್ಕೆ ಈಗಿನ ಬಿಜೆಪಿ ಸರ್ಕಾರವೇ ಕಾರಣವಾಗಿದೆ. ಬಿಜೆಪಿಯ ಮೇಲೆ ಯಾವುದೇ ಕಾರಣಕ್ಕೂ ಅಭಿವೃದ್ಧಿಯ ವಿಶ್ವಾಸ ಇಡಬೇಡಿ. ಅದರಿಂದ ಮೋಸ ಹೋಗುತ್ತೀರಿ ಎಂದು ಅವರು ಎಚ್ಚರಿಸಿದರು.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ, ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರ ಉದಾಸೀನದಿಂದಾಗಿಯೇ ನಾವು ಕಳೆದ ಒಂಬತ್ತು ವರ್ಷಗಳಿಂದ ಅಧಿಕಾರ ಕಳೆದುಕೊಳ್ಳಲು ಕಾರಣ ಎಂದು ವಿಶ್ಲೇಷಿಸಿದರು.

ನಾವು ಅಧಿಕಾರದಲ್ಲಿ ಇಲ್ಲದ ಕಾರಣ ಭದ್ರಾವತಿಯಲ್ಲಿ ತಹಶೀಲ್ದಾರ್ ಕಚೇರಿಯಲ್ಲಿ ಕೆಲಸ ಮಾಡಿಸಿಕೊಳ್ಳಲೂ ಕಾರ್ಯಕರ್ತರು ಪರದಾಡುವಂತಾಗುತ್ತದೆ. ಈಗಾಗಲೇ ವಿಧಾನಸೌಧದ ಬಾಗಿಲು ಕಾರ್ಯಕರ್ತರಿಗೆ ಸಂಪೂರ್ಣವಾಗಿ ಬಂದ್ ಆಗಿದೆ.

ಇನ್ನು ಮುಂದಾದರೂ ಉದಾಸೀನ ಬಿಟ್ಟು ಕಾರ್ಯಕರ್ತರನ್ನು ಸಂಘಟಿಸಿ ಮತದಾರರ ಮನೆ ಬಾಗಿಲಿಗೆ ತೆರಳಿ ಮನವೊಲಿಸಬೇಕು. ನಮ್ಮ ಹೋರಾಟ ಶತ್ರುಗಳ ವಿರುದ್ಧ ಹೊರತು ನಮ್ಮ ಸ್ನೇಹಿತರ ಮೇಲಲ್ಲ ಎಂದರು.

ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಜೈಲು ಪಾಲಾಗಿದ್ದು ಕರ್ನಾಟಕದ ಇತಿಹಾಸದಲ್ಲಿಯೇ ಅವಮಾನಕರ ಘಟನೆ ಎಂದ ಅವರು, ಅಂತಹವರಿಗೆ ನಾವು ಅಧಿಕಾರ ನೀಡಿದ್ದೇವೆ. ಶಿವಮೊಗ್ಗವನ್ನು ಗಮನಿಸಿದರೆ ಇಬ್ಬರು ವ್ಯಕ್ತಿಗಳು ಮಾತ್ರವೇ ಅಭಿವೃದ್ಧಿಯಾಗಿರುವುದನ್ನು ಕಾಣಬಹುದು. ಜನಾರ್ದನ ರೆಡ್ಡಿ ಅಂಡ್ ಕಂಪೆನಿ ಎಷ್ಟು ಅಭಿವೃದ್ಧಿ ಮಾಡಿದೆ ಎಂಬುದನ್ನು ಲೋಕಾಯುಕ್ತ ವರದಿಯೇ ಹೇಳಿದೆ. ಇವರಿಗೆ ತಾಕತ್ತಿದ್ದರೆ ಲೋಕಾಯುಕ್ತ ವರದಿಯನ್ನು ತಿರಸ್ಕರಿಸಲಿ ಎಂದು ಸವಾಲು ಹಾಕಿದರು.

ಅಲ್ಪಸಂಖ್ಯಾತರು ತಮಗೆ ಏನು ಮಾಡಿದೆ ಎಂದು ಜೆಡಿಎಸ್ ನಂಬಬೇಕು? ಎಂದು ಪ್ರಶ್ನಿಸಿದ ಅವರು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ 42 ಹಳ್ಳಿಗಳಲ್ಲಿ ಮಲಗಿಯೇ ಕಾಲ ಕಳೆದರು ಎಂದು ಲೇವಡಿ ಮಾಡಿದರು. 

ವಿಧಾನಪರಿಷತ್ ವಿರೋಧ ಪಕ್ಷದ ನಾಯಕಿ ಮೋಟಮ್ಮ ಮಾತನಾಡಿದರು. ಕೆಪಿಸಿಸಿ ಉಪಾಧ್ಯಕ್ಷ ಕರಿಯಣ್ಣ, ಮಾಜಿ ಸಚಿವ ಕುಮಾರ ಬಂಗಾರಪ್ಪ, ಶಾಸಕ ಬಿ.ಕೆ. ಸಂಗಮೇಶ್ವರ, ಮಾಜಿ ಶಾಸಕರಾದ ಡಾ.ಜಿ.ಡಿ. ನಾರಾಯಣಪ್ಪ, ಪಟಮಕ್ಕಿ ರತ್ನಾಕರ್, ಮಹಿಮ ಪಟೇಲ್, ಶಾಂತವೀರಪ್ಪ, ಮಹಾಲಿಂಗಪ್ಪ, ಎಚ್.ಎಂ.ಚಂದ್ರಶೇಖರಪ್ಪ, ಜಿಲ್ಲಾ ಕಾಂಗ್ರೆಸ್ ಘಟಕದ  ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಮುಖಂಡರಾದ ಮಂಜುನಾಥ ಭಂಡಾರಿ, ಬಲ್ಕಿಷ್ ಬಾನು, ಇಸ್ಮಾಯಿಲ್ ಖಾನ್, ಎನ್. ರಮೇಶ್, ರವಿಕುಮಾರ್, ದೇವೇಂದ್ರಪ್ಪ, ಯುವ ಕಾಂಗ್ರೆಸ್‌ನ ರಂಗನಾಥ್, ಎನ್‌ಎಸ್‌ಯುಐನ ಮಧುಸೂದನ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT