ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್ನೈ ಓಪನ್ ಟೆನಿಸ್: ಎಂಟರ ಘಟ್ಟಕ್ಕೆ ಭೂಪತಿ-ಬೋಪಣ್ಣ

Last Updated 5 ಜನವರಿ 2012, 19:30 IST
ಅಕ್ಷರ ಗಾತ್ರ

ಚೆನ್ನೈ: ಭಾರತದ ಮಹೇಶ್ ಭೂಪತಿ ಹಾಗೂ ರೋಹನ್ ಬೋಪಣ್ಣ ಅವರು ಇಲ್ಲಿ ನಡೆಯುತ್ತಿರುವ ಚೆನ್ನೈ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಡಬಲ್ಸ್‌ನಲ್ಲಿ ಎಂಟರ ಘಟ್ಟ ಪ್ರವೇಶಿಸಿದ್ದಾರೆ.

ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣದಲ್ಲಿ ಬುಧವಾರ ತಡರಾತ್ರಿ ನಡೆದ ಈ ಪಂದ್ಯದಲ್ಲಿ ಭಾರತದ ಜೋಡಿ 5-7, 6-3, 10-5ರಲ್ಲಿ ಬೆಲ್ಜಿಯಂನ ಕ್ಸೇವಿಯರ್ ಮಲಿಸ್ಸಿ ಹಾಗೂ ಇಂಗ್ಲೆಂಡ್‌ನ ಕೆನ್ ಸ್ಕುಪ್ಸ್ಕಿ ಅವರನ್ನು ಸೋಲಿಸಿದರು.

ಮೊದಲ ಸೆಟ್‌ನಲ್ಲಿ ಭೂಪತಿ ಹಾಗೂ ಬೋಪಣ್ಣ ಭಾರಿ ಪ್ರತಿರೋಧ ತೋರಿದರಾದರೂ, ಜಯ ಸಿಗಲಿಲ್ಲ. ಮತ್ತೆ ಲಯ ಕಂಡುಕೊಂಡು ಎರಡು ಹಾಗೂ ಮೂರನೇ ಸೆಟ್‌ನಲ್ಲಿ ಎದುರಾಳಿಗೆ ತಿರುಗೇಟು ನೀಡಿದರು.

ಭಾಂಬ್ರಿಗೆ ಸೋಲು: ಭಾರತದ ಯುವ ಆಟಗಾರ ಯೂಕಿ ಭಾಂಬ್ರಿ ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸೋಲು ಅನುಭವಿಸಿ ನಿರಾಸೆ ಮೂಡಿಸಿದರು.  ಸರ್ಬಿಯಾದ ಅಗ್ರ ಶ್ರೇಯಾಂಕದ ಜಾಂಕೊ ತಿಪ್ಸರೆವಿಕ್ 6-1, 6-3ರ ನೇರ ಸೆಟ್‌ಗಳಿಂದ ಭಾಂಬ್ರಿಗೆ ಸೋಲುಣಿಸಿದರು.

23 ನಿಮಿಷದಲ್ಲಿ ಅಂತ್ಯ ಕಂಡ ಮೊದಲ ಸೆಟ್‌ನಲ್ಲಿ ಭಾರತದ ಆಟಗಾರನಿಗೆ ಪ್ರಬಲ ಪೈಪೋಟಿ ನೀಡಲು ಸಾಧ್ಯವಾಗಲಿಲ್ಲ. ಎರಡನೇ ಸೆಟ್‌ನಲ್ಲಿ ಮಾತ್ರ ಅಲ್ಪ ಪ್ರತಿರೋಧ ತೋರುವಲ್ಲಿ ಯಶಸ್ವಿಯಾಗಿದ್ದೇ 19 ವರ್ಷದ ಭಾಂಬ್ರಿಯ ಸಾಧನೆ.

ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಇನ್ನೊಂದು ಪಂದ್ಯದಲ್ಲಿ ವೈಲ್ಡ್ ಕಾರ್ಡ್ ಪ್ರವೇಶ ಪಡೆದಿದ್ದ ಬೆಲ್ಜಿಯಂನ ಡೇವಿಡ್ ಗೋಫಿನ್ ಗೆಲುವು ಸಾಧಿಸಿದರು. ಈ ಆಟಗಾರ 4-6, 6-4, 6-2ರಲ್ಲಿ ಜರ್ಮನಿಯ ಆ್ಯಂಡ್ರಸ್ ಬ್ಯಾಕ್ ಅವರನ್ನು ಮಣಿಸಿದರು. ಮೊದಲ ಸೆಟ್‌ನಲ್ಲಿ ಸೋಲು ಕಂಡರೂ, ಉಳಿದ ಎರಡೂ ಸೆಟ್‌ಗಳಲ್ಲಿ ಪ್ರಭಾವಿ ಪ್ರದರ್ಶನ ನೀಡಿ ಕ್ವಾರ್ಟರ್‌ಫೈನಲ್ ಪ್ರವೇಶಿಸುವಲ್ಲಿ ಯಶ ಕಂಡರು.

ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ನಿಕೋಲಸ್ ಅಲ್ಮಾಗ್ರೊ ಅವರು ಬೆಲ್ಜಿಯಂ ಸ್ಟೀವ್ ಬಾರ್ಸೆಸ್ ಅವರಿಂದ `ವಾಕ್ ಓವರ್~ ಪಡೆದು, ಬೆವರು ಸುರಿಸದೆಯೇ ಮುಂದಿನ ಸುತ್ತಿಗೆ ಕಾಲಿಟ್ಟರು. ಇನ್ನೊಂದು ಪಂದ್ಯದಲ್ಲಿ ಜಪಾನ್‌ನ ಯೂಚಿ ಸುಗಿತಾ 7-6, 6-4ರಲ್ಲಿ ಚೈನೀಸ್ ತೈಪಿಯಾದ ಯೇನ್ ಸುನ್ ಲೂ ಎದುರು ಗೆಲುವು ಪಡೆದು ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT