ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛಾಯಾ ಸಿಂಗ್ ಜೇನ್ನುಡಿ...

Last Updated 15 ಮೇ 2012, 19:30 IST
ಅಕ್ಷರ ಗಾತ್ರ

ಛಾಯಾ ಸಿಂಗ್ ಅಂದ್ರೆ ಸಾಕು ಈಗ ಹಾಲು-ಜೇನು ನೆನಪಾಗುತ್ತದೆ. ಹಾಲಿನಂಥ ಬಣ್ಣ, ಜೇನಿನಂಥ ಕಣ್ಣು ಅನ್ನೋದು ಒಂದು ಕಾರಣವಾದರೆ ಇನ್ನೊಂದು ಅವರು ನಡೆಸಿಕೊಡುವ `ನಾನು-ನೀನು, ಹಾಲು ಜೇನು~ ಕಾರ್ಯಕ್ರಮ...

ಛಾಯಾಸಿಂಗ್‌ಗೆ ಅಮ್ಮ ಅಂದ್ರೆ ಪ್ರಾಣವಂತೆ. ಅವರ ದಿನ ಆರಂಭವಾಗುವುದೇ ಅಮ್ಮನನ್ನು ನೋಡಿದ ನಂತರ. ಎದ್ದೊಡನೆ ಅಮ್ಮ ಕಣ್ಮುಂದಿರಬೇಕು. ಇಲ್ಲದಿದ್ದರೆ ಮನೆಯಲ್ಲಿ ಅಮ್ಮನಿಗಾಗಿ ಕಣ್ಮುಚ್ಚಿಕೊಂಡು ಹುಡುಕಾಟ ಆರಂಭವಾಗುತ್ತದೆಯಂತೆ. ಒಮ್ಮೆ ಅವರಿಗೆ ಶುಭೋದಯ ಹೇಳಿದರೇನೆ ದಿನದ ಶುಭಾರಂಭ ಎನ್ನುವುದು ಅವರ ನಂಬಿಕೆಯಂತೆ.

ನಾನು ಭಾವುಕ ಹುಡುಗಿ. ಬಹುಶಃ ಅದೇ ಕಾರಣಕ್ಕೆ ಹಿರಿತೆರೆಯಲ್ಲಿ ಬಹುಕಾಲ ಉಳಿಯಲಾಗಲಿಲ್ಲವೇನೋ..! ಸಂತೋಷವನ್ನು ತಡೆಯಲಾಗುವುದಿಲ್ಲ. ಕಣ್ಣಾಲಿ ತುಂಬಿ ಬರುತ್ತವೆ. ಈಗ ಈ ಶೋಗೆ ಬಂದ ನಂತರ ಬದುಕು ಎಂದರೇನು ಎಂದು ಅರ್ಥವಾಗುತ್ತಿದೆ. ಪ್ರೀತಿ ಎಂದರೇನು? ಬಾಂಧವ್ಯ ಎಂದರೇನು? ಎಂಬುದೂ ಅರ್ಥವಾಗುತ್ತಿದೆ ಎನ್ನುತ್ತಾರೆ ಅವರು.

ಸುದೀರ್ಘ ದಾಂಪತ್ಯ ಇದ್ದರೂ ಕೆಲವೊಮ್ಮೆ ದೋಷಾರೋಪಗಳು ಇದ್ದೇ ಇರುತ್ತವೆ. ಸಣ್ಣದೊಂದು ಸಿಡುಕು, ಕೋಪ ಇದ್ದರೂ ಮತ್ತದೇ ಪರಸ್ಪರ ಅವಲಂಬಿತರಾಗಿರುವ ರೀತಿ ಅಚ್ಚರಿಯೆನಿಸುತ್ತದೆ. ಸಹನೆ-ಸಂಯಮಗಳೇ ಬಾಂಧವ್ಯವನ್ನು ಕೊನೆಯವರೆಗೂ ಉಳಿಸುತ್ತವೆಯೆಂಬುದು ಅಕ್ಷರಶಃ ಅರ್ಥವಾಗಿದೆ ಎನ್ನುತ್ತಾರೆ ಛಾಯಾ.

ಅಪ್ಪ-ಅಮ್ಮನನ್ನು ಯಾರಾದರೂ ನೋಯಿಸಿದರೆ.. ಅಥವಾ ತಮ್ಮ ಪ್ರೀತಿಗಾಗಿ ಅಪ್ಪ-ಅಮ್ಮನನ್ನು ಬಿಟ್ಟು ಬಂದು, ಅವರಿಗಾಗಿ ಪರಿತಪಿಸುವವರನ್ನು ಕಂಡಾಗ ಕಣ್ತುಂಬಿ ಬರುತ್ತವೆ. ಕೊರಳುಬ್ಬಿ ಬರುತ್ತದೆ. ಬದುಕು ನೀಡಿದವರೂ ತಮ್ಮ ಛಲಕ್ಕೆ ಮಕ್ಕಳನ್ನು ದೂರ ಮಾಡಿಕೊಳ್ಳುವುದು.. ತಮ್ಮ ಹಟಕ್ಕಾಗಿ ಹೆತ್ತವರನ್ನು ದೂರ ತಳ್ಳಿ ಬರುವುದು... ಇಬ್ಬರೂ ಪರಿತಪಿಸುವುದು ಇದು ಯಾವಾಗಲೂ ನನ್ನೊಳಗನ್ನೇ ಅಲುಗಾಡಿಸುತ್ತದೆ ಎನ್ನುತ್ತಾರೆ ಅವರು.

 ಅವರ ಮದುವೆಯ ಮಾತನ್ನು ತೇಲಿಸಿಬಿಡುವ ಛಾಯಾ ಸಿಂಗ್‌ಗೆ ಅತಿ ಖುಷಿ ಕೊಡುವ ಸಂಗಾತಿ ಎಂದರೆ ಅವರು ಸಾಕಿಕೊಂಡಿರುವ ನಾಯಿಮರಿಗಳು. ಮನೆಯ್ಲ್ಲಲಿ ಅಮ್ಮನ ನಂತರದ ಸ್ಥಾನವನ್ನು ಈ ಮರಿಗಳು ಪಡೆದಿವೆಯಂತೆ.

ಪುಳಿಯೋಗರೆಯನ್ನು ಇಷ್ಟ ಪಡುವ ಛಾಯಾಸಿಂಗ್‌ಗೆ ದಕ್ಷಿಣ ಭಾರತೀಯ ತಿನಿಸುಗಳೇ ಅತಿ ಹೆಚ್ಚು ಇಷ್ಟ ಎನ್ನುತ್ತಾರೆ.

ಯೋಗ, ಕಸರತ್ತು ತಮ್ಮ ಫಿಟ್‌ನೆಸ್ ಮಂತ್ರ ಎಂದು ಹೇಳುವುದು ಮರೆಯುವುದಿಲ್ಲ.
ಅಮ್ಮನನ್ನು ಇಷ್ಟೆಲ್ಲ ಇಷ್ಟ ಪಡುವ ಅವರು ಅಮ್ಮನ ಬಗ್ಗೆ ಏನು ಹೇಳುತ್ತೀರಿ ಎಂದರೆ ಒಂದರೆ ಗಳಿಗೆ ಸುಮ್ಮನಾಗುತ್ತಾರೆ.

ಅಮ್ಮನ ಬಗ್ಗೆ ಅಥವಾ ಅಮ್ಮನಾಗಿರುವುದಕ್ಕೆ ಅಮ್ಮನಿಗೆ ಏನು ಹೇಳುವುದು...? ನನ್ನಲ್ಲಿ ಯಾವುದೇ ಶಬ್ದಗಳಿಲ್ಲ. ಇರುವ ಭಾವನೆ ಹಾಗೇ ಇರಲಿ ಬಿಡಿ. ಮಾತಿಗಿಳಿದರೆ ಮನಸು ಬರಿದಾದೀತು. ಪ್ರೀತಿ ಬರಿದಾಗದ ಒಡಲು ಅದು ಎನ್ನುತ್ತ ಸುಮ್ಮನಾಗುತ್ತಾರೆ ಛಾಯಾಸಿಂಗ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT