ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛೀ...ಪದೇ ಪದೇ ಅವಮಾನ!

Last Updated 26 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಅದು ಸೆ. 29ರ ರಾತ್ರಿ. ಅಮೆರಿಕದ ನ್ಯೂಯಾರ್ಕ್‌ನ ಜಾನ್ ಎಫ್ ಕೆನಡಿ ವಿಮಾನ ನಿಲ್ದಾಣ. ಅಲ್ಲಿಂದ ಭಾರತಕ್ಕೆ ಹೊರಡಲು ಸಿದ್ಧವಾಗಿತ್ತು ಏರ್ ಇಂಡಿಯಾ ವಿಮಾನ. ಪ್ರಯಾಣಿಕರೆಲ್ಲ ಕುಳಿತಾಗಿತ್ತು.

ಅಷ್ಟರಲ್ಲಿ ನಿಲ್ದಾಣದ ಭದ್ರತಾ ಅಧಿಕಾರಿಗಳು ಪೈಲಟ್‌ಗೆ ಸೂಚನೆ ಕಳಿಸಿ ವಿಮಾನದ ಬಾಗಿಲು ತೆಗೆಸಿದರು. ಅದರಲ್ಲಿ ಕುಳಿತಿದ್ದ 80 ವರ್ಷದ ಭಾರತೀಯ ಬಿಳಿ ಕೂದಲಿನ ಸೂಟುಧಾರಿಯ ಕೋಟು, ಬೂಟು ಬಿಚ್ಚಿಸಿ ಏರ್ ಇಂಡಿಯಾ ಸಿಬ್ಬಂದಿಯ ಆಕ್ಷೇಪಣೆಯನ್ನು ಲೆಕ್ಕಿಸದೆ ತಪಾಸಣೆಗೆ ಒಯ್ದರು. ಸ್ವಲ್ಪ ಹೊತ್ತಿನ ನಂತರ ವಾಪಸ್ ಕೊಟ್ಟರು. ಆ ಬಳಿಕವೇ ವಿಮಾನ ಹೊರಟಿದ್ದು.

ಈ ಸೂಟುಧಾರಿ ಬೇರಾರೂ ಅಲ್ಲ. ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ. ಎರಡನೇ ಸಲ (ಒಮ್ಮೆ ವಿಮಾನ ಏರುವ ಮುನ್ನ ನಿಲ್ದಾಣದಲ್ಲಿ) ತಪಾಸಣೆಯಿಂದ ಮುಜುಗರಕ್ಕೆ ಒಳಗಾದರೂ ಅವರೇನೂ ಮಾತಾಡಲಿಲ್ಲ. ಭಾರತಕ್ಕೆ ಬಂದ ನಂತರವೂ ಯಾರಿಗೂ ಹೇಳಲಿಲ್ಲ; ದೊಡ್ಡ ವಿಷಯ ಮಾಡಲೂ ಇಲ್ಲ.

ಆದರೆ ಹೇಗೋ ಈ ಸಂಗತಿ ಸೋರಿಕೆಯಾಗಿ ನ. 13ರಂದು ದೆಹಲಿಯ ಪತ್ರಿಕೆಯೊಂದರಲ್ಲಿ ಪ್ರಕಟವಾಯಿತು. `ನಮ್ಮ ಗಣ್ಯರನ್ನು ಈ ರೀತಿ ಅವಮಾನ ಮಾಡಿದರೆ ನಿಮ್ಮ ಗಣ್ಯರು ಇಲ್ಲಿ ಬಂದಾಗ ಅವರಿಗೂ ಹೀಗೆ ಸತ್ಕಾರ ಮಾಡಬೇಕಾಗುತ್ತದೆ~ ಎಂದು ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅಮೆರಿಕಕ್ಕೆ ಎಚ್ಚರಿಕೆ ಕೊಟ್ಟರು.

ಅದರ ಬೆನ್ನಹಿಂದೆಯೇ ಹೊರ ಬಿತ್ತು ಅಮೆರಿಕದ ಪ್ರತಿಕ್ರಿಯೆ. `ಮಾಜಿ ರಾಷ್ಟ್ರಪತಿ ಬಗ್ಗೆ ನಮಗೆ ಅಪಾರ ಗೌರವವಿದೆ. ಅವರಿಗೆ ಆದ ಅನಾನುಕೂಲಕ್ಕೆ ವಿಷಾದಿಸುತ್ತೇವೆ~ ಎಂಬ ಪತ್ರವನ್ನು ಅಮೆರಿಕದ ರಾಯಭಾರಿ ಭಾರತ ಸರ್ಕಾರಕ್ಕೆ ಮತ್ತು ಕಲಾಂ ಅವರಿಗೆ ತಲುಪಿಸಿದರು.

ನಂತರ ವಿಮಾನ ನಿಲ್ದಾಣ ಭದ್ರತಾ ವಿಭಾಗದ ಇಬ್ಬರು ಸಿಬ್ಬಂದಿಯನ್ನು ಅಮೆರಿಕ ಅಮಾನತು ಮಾಡಿತು. ಆದರೆ ಅದು `ಕಲಾಂ ಅವರನ್ನು ತಪಾಸಣೆ ಮಾಡಿದ್ದಕ್ಕಲ್ಲ; ಬದಲಾಗಿ ಗಣ್ಯರ ತ್ವರಿತ ತಪಾಸಣೆಗೆ ಸಂಬಂಧಿಸಿದ ನಿಯಮ ಪಾಲಿಸಿಲ್ಲ~ ಎಂಬ ಕಾರಣಕ್ಕಾಗಿ.

ಭಾರತದಂತೆ ಅಲ್ಲೂ ನಿಲ್ದಾಣದಲ್ಲಿ ಒಮ್ಮೆ ಸಾಮಾನ್ಯ ತಪಾಸಣೆ ಮತ್ತು ವಿಮಾನ ಏರುವ ಮುನ್ನ ಭದ್ರತಾ ತಪಾಸಣೆ ಕಡ್ಡಾಯ.

ಕಲಾಂ ಪ್ರಕರಣದಲ್ಲಿ ವಿಮಾನ ಪ್ರವೇಶಕ್ಕೆ ಮುನ್ನ ಭದ್ರತಾ ಸಿಬ್ಬಂದಿಗಳು ನಿರ್ಲಕ್ಷ್ಯದಿಂದ ಕೋಟು, ಬೂಟು ತಪಾಸಣೆ ಮಾಡಿರಲಿಲ್ಲ. ಈ ಲೋಪ ಸರಿಪಡಿಸಲು ವಿಮಾನದ ಬಾಗಿಲು ತೆಗೆಸಿ ಅವೆರಡನ್ನೂ ತೆಗೆದುಕೊಂಡು ಹೋಗಿ ತಪಾಸಣೆ ಮಾಡಿದ್ದಾರೆ. ಸಿಬ್ಬಂದಿ `ತ್ವರಿತ ತಪಾಸಣಾ ನಿಯಮ~ವನ್ನು ಪಾಲಿಸಿಲ್ಲ. ಮುಂದೆ ಈ ರೀತಿ ತಡ ಆಗದಂತೆ ಸೂಕ್ತ ಅನುಸರಿಸಲಾಗುವುದು ಎಂದು ಅಮೆರಿಕ ಪ್ರತಿಕ್ರಿಯಿಸಿತು.

ಇದರರ್ಥ ಅತ್ಯಂತ ಸ್ಪಷ್ಟ. ಕಲಾಂ ಮತ್ತೆ ಅಮೆರಿಕಕ್ಕೆ ಬಂದರೆ ತಪಾಸಣೆಗೆ ಒಳಗಾಗಲೇ ಬೇಕು. ಆದರೆ ಭಾರತೀಯ ವಿಐಪಿಗಳು ಸಾಮಾನ್ಯರಂತೆ ಕ್ಯೂನಲ್ಲಿ ನಿಲ್ಲಬೇಕಿಲ್ಲ; ಎಲ್ಲರ ಎದುರಿಗೆ ಬದಲಾಗಿ ಪ್ರತ್ಯೇಕವಾದ, ಹೊರಗಿನವರಿಗೆ ಕಾಣದ ಖಾಸಗಿ ಕೊಠಡಿಯಲ್ಲಿ ನೇರವಾಗಿ ತಪಾಸಣೆಗೆ ಒಳಗಾಗಬಹುದು. ಅಂಥ ಸೌಕರ್ಯ ಅಲ್ಲಿನ ಎಲ್ಲ ನಿಲ್ದಾಣಗಳಲ್ಲೂ ಇದೆ.

ಆದರೆ ಭಾರತೀಯ ಗಣ್ಯರು, ಖ್ಯಾತನಾಮರನ್ನು ವಿನಾಕಾರಣ ಮುಜುಗರಕ್ಕೆ ಒಳಪಡಿಸುವುದು ಅಮೆರಿಕನ್ನರಿಗೆ ಒಂದು ಚಾಳಿಯಂತೆ ಬೆಳೆದಿದೆ.

ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿದ್ದ ಮೀರಾ ಶಂಕರ್ ಸೀರೆ ಉಟ್ಟಿದ್ದಾರೆ ಎಂಬ ಕಾರಣಕ್ಕೆ 2010 ಡಿಸೆಂಬರ್‌ನಲ್ಲಿ ಮಿಸ್ಸಿಸಿಪ್ಪಿ ವಿಮಾನ ನಿಲ್ದಾಣದಲ್ಲಿ ಎರಡನೇ ಸಲ ದೇಹವನ್ನೆಲ್ಲ ತಡಕಾಡಿ ಭದ್ರತಾ ತಪಾಸಣೆಗೆ ಒಳಪಡಿಸಲಾಗಿತ್ತು (ಸಾಮಾನ್ಯವಾಗಿ ತಪಾಸಣೆ ಎಂದರೆ ಸ್ಕಾನರ್ ಮೂಲಕ ಹಾದು ಹೋಗುವುದು. ಅನುಮಾನ ಬಂದರೆ ಮಾತ್ರ ದೈಹಿಕ ತಪಾಸಣೆ ಮಾಡುತ್ತಾರೆ. ನಮ್ಮ ದೇಶದ ವಿಮಾನ ನಿಲ್ದಾಣಗಳಲ್ಲಿ ಮಾತ್ರ ಕೈ ಎತ್ತಿ ನಿಲ್ಲಿಸಿ ಮೈ ತಡವಿ ತಪಾಸಣೆ ಮಾಡುವ ಪದ್ಧತಿಯಿದೆ).

ಮೀರಾ ವಿಷಯದಲ್ಲಿ `ನಿಮ್ಮ ಉಡುಪು ಅನುಮಾನಾಸ್ಪದ~ ಎಂದು ಮಹಿಳಾ ತಪಾಸಕಿ ಹೇಳಿದ್ದಳು.

2010ರ ಸೆಪ್ಟೆಂಬರ್‌ನಲ್ಲಿ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಅವರನ್ನು ಷಿಕಾಗೊದ ಒಹಾರೆ ನಿಲ್ದಾಣದಲ್ಲಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ಅನೇಕ ಗಂಟೆ ಕಾಲ ಪ್ರಶ್ನೆಗೆ ಒಳಪಡಿಸಿದ್ದರು. ಅಮೆರಿಕದ ವಿಮಾನ ನಿಲ್ದಾಣ ನಿಗಾ ಪಟ್ಟಿಯಲ್ಲಿ ಅದೇ ಹೆಸರು, ಜನ್ಮ ದಿನದ ವ್ಯಕ್ತಿಯೊಬ್ಬ ಇದ್ದದ್ದೇ ಇದಕ್ಕೆ ಕಾರಣ. ನಂತರ ಅಮೆರಿಕ `ಎಂದಿನಂತೆ~ ವಿಷಾದ ಸೂಚಿಸಿತ್ತು.

ನಿಯಮ ಪಾಲನೆ: ಅಮೆರಿಕದ ನಿಯಮಗಳ ಪ್ರಕಾರ ರಾಷ್ಟ್ರವೊಂದರ ಹಾಲಿ ಮುಖ್ಯಸ್ಥರಿಗೆ (ದೊರೆ, ರಾಣಿ, ಅಧ್ಯಕ್ಷ, ಪ್ರಧಾನಿ) ಮಾತ್ರ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯಿಂದ ವಿನಾಯ್ತಿ.

ಭಾರತಕ್ಕೆ ಸಂಬಂಧಿಸಿದಂತೆ ಎರಡೂ ದೇಶಗಳು ಸೇರಿ ತಪಾಸಣೆ ಅಗತ್ಯವಿಲ್ಲದವರ ಜಂಟಿ ಪಟ್ಟಿ ಮಾಡಬಹುದು. ಆದರೆ ಭಾರತದಲ್ಲಿ ಇಂಥವರ ಸಂಖ್ಯೆ ದೊಡ್ಡದಿದೆ. ಅದೇ ಸಮಸ್ಯೆ ಎಂಬುದು ಅಮೆರಿಕನ್ ಅಧಿಕಾರಿಗಳ ಅಳಲು. ಅದು ವಾಸ್ತವವೂ ಹೌದು.
 

ಕಟ್ಟುನಿಟ್ಟು ನಿಯಮ
ಅಮೆರಿಕದಲ್ಲಿ ವಿಮಾನ ನಿಲ್ದಾಣ ಭದ್ರತೆಯ ಹೊಣೆ ಟ್ರಾನ್ಸ್‌ಪೊರ್ಟೇಷನ್ ಸೆಕ್ಯುರಿಟಿ ಅಡ್ಮಿನಿಸ್ಟ್ರೇಷನ್ ಅಥವಾ ಟಿಎಸ್‌ಎಗೆ ಸೇರಿದ್ದು
ಅಲ್ಲಿನ ನಾಗರಿಕ ವಿಮಾನ ನಿಲ್ಯಾಣಗಳಲ್ಲಿ ಎಲ್ಲರೂ ವಿಮಾನ ಏರುವ ಮುನ್ನ ಸಂಪೂರ್ಣ ಭದ್ರತಾ ತಪಾಸಣೆಗೆ ಒಳಪಡಬೇಕು. ಸರ್ಕಾರದ ಕೆಲ ಕಾರ್ಯದರ್ಶಿಗಳು, ಕಾಂಗ್ರೆಸ್‌ನ ಕೆಲ ಹಿರಿಯ ಸದಸ್ಯರಿಗಷ್ಟೇ (ನಮ್ಮಲ್ಲಿ ಎಂಪಿಗಳಿದ್ದಂತೆ) ಇದರಿಂದ ವಿನಾಯ್ತಿಯಿದೆ.

ಆದರೆ ವಿನಾಯ್ತಿ ಪಟ್ಟಿಯಲ್ಲಿದ್ದರೂ ಸ್ವತಃ ಟಿಎಸ್‌ಎ ಮುಖ್ಯಸ್ಥ ಜಾನ್ ಪಿಸ್ತೋಲ್, ಶ್ವೇತ ಭವನದ ಹಿರಿಯ ಅಧಿಕಾರಿಗಳಾದ ಡೆವಿಡ್ ಅಕ್ಸಲೆರ್ಡ್, ವೆಲೇರಿ ಜರೆಟ್, ಒಬಾಮಾ ಅವರ ಒಳಾಡಳಿತ ಸಲಹೆಗಾರ ಜಾನ್ ಬರ್ನನ್ ಎಲ್ಲರಂತೆ ಸರದಿ ಸಾಲಿನಲ್ಲಿ ನಿಂತು ಕಾದು ಭದ್ರತಾ ತಪಾಸಣೆಗೆ ಒಳಗಾಗಿಯೇ ವಿಮಾನ ಹತ್ತುತ್ತಾರೆ.

ಅನೇಕ ಟಿಎಸ್‌ಎ ಸಿಬ್ಬಂದಿ ತುಂಬ ಅಹಂಕಾರಿಗಳು. ಅಲ್ಲಿಯೂ ಮಾಧ್ಯಮಗಳಲ್ಲಿ ಇವರ ಬಗ್ಗೆ ಹುಚ್ಚಾಟಗಳ ಬಗ್ಗೆ ಚರ್ಚೆ ನಡೆಯುತ್ತಲೇ ಇರುತ್ತದೆ.ಜನರ ಬ್ಯಾಗ್‌ನಿಂದು ಕದ್ದು ಮಾರಾಟ, ತಪಾಸಣೆ ನೆಪದಲ್ಲಿ ಲೈಂಗಿಕ ಚೇಷ್ಟೆ, ಜನನಾಂಗ, ಸ್ತನ, ಪ್ರಷ್ಟ ಮುಟ್ಟುವುದು ಇತ್ಯಾದಿ ಅತಿರೇಕದ ಪ್ರಕರಣಗಳು ವರದಿಯಾಗಿವೆ. ಈ ವರ್ಷ 500 ಸಿಬ್ಬಂದಿ ಇಂಥದೇ ಕುಚೇಷ್ಟೆ ಮಾಡಲು ಹೋಗಿ ವಜಾ ಆಗಿದ್ದಾರೆ.


ಎರಡನೇ ಸಲ: ಹಾಗಂತ ಕಲಾಂ ಈ ರೀತಿಯ ಮುಜುಗರ ಎದುರಿಸಿದ್ದು ಇದು ಎರಡನೇ ಸಲ. 2009ರ ಏಪ್ರಿಲ್ 21ರಂದು ಅಮೆರಿಕಕ್ಕೆ ಹೊರಟು ನಿಂತಾಗ ದೆಹಲಿ ವಿಮಾನ ನಿಲ್ದಾಣದಲ್ಲಿಯೇ ಅವರನ್ನು ಕಾಂಟಿನೆಂಟಲ್ ಏರ್‌ಲೈನ್ಸ್ ಸಿಬ್ಬಂದಿ ಭದ್ರತಾ ತಪಾಸಣೆಗೆ ಒಳಪಡಿಸಿದ್ದರು. ಇದು ಅಮೆರಿಕದ ಭದ್ರತಾ ನಿಯಮಗಳಿಗೆ ಅನುಗುಣವಾಗಿಯೇ ಇದೆ ಎಂದು ಸಮರ್ಥಿಸಿಕೊಂಡಿದ್ದರು.

ಇಲ್ಲಿ ಸನ್ಮಾನ: ಇನ್ನೊಂದು ಪ್ರಸಂಗ ನೋಡಿ. ಕಲಾಂ ಪ್ರಕರಣ ಬೆಳಕಿಗೆ ಬರುವ ಒಂದು ವಾರ ಮೊದಲು ಅಂದರೆ ನ. 7ರ ರಾತ್ರಿ ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ಖಾಸಗಿ ಭೇಟಿಗಾಗಿ ಕೊರಿಯಾದಿಂದ ವಿಶೇಷ ವಿಮಾನದಲ್ಲಿ ಮುಂಬೈಗೆ ಬಂದಿಳಿದರು. ಬುಧವಾರ ಬೆಳಿಗ್ಗೆ ಇಲ್ಲಿಂದ ಹೊರಡುವ ತನಕವೂ ಅವರ `ಭೇಟಿಯ ವಿವರ~ ರಹಸ್ಯವಾಗಿ ಇಡಲಾಗಿತ್ತು. ಅವರು ತಂಗಿದ್ದ ಹೋಟೆಲ್ ಸುತ್ತ ಭಾರಿ ಭದ್ರತೆ, ನಿಲ್ದಾಣದಲ್ಲೂ ಅವರಿಗೆ ಮುಜುಗರ ಆಗುವಂತಹ ಭದ್ರತಾ ತಪಾಸಣೆಯೇನೂ ಇರಲಿಲ್ಲ.

ಭಯದ ಸನ್ನಿ: 2001 ಸೆ. 11ರಂದು ವಿಶ್ವ ವ್ಯಾಪಾರ ಕೇಂದ್ರದ ಮೇಲೆ ಉಗ್ರರ ದಾಳಿಯ ನಂತರ ಇಡಿ ಅಮೆರಿಕವೇ ಭಯದ ಸಾಮೂಹಿಕ ಸನ್ನಿಗೆ ಒಳಗಾದಂತಿದೆ. ಅದನ್ನು ಇನ್ನಷ್ಟು ಹೆಚ್ಚಿಸುವಂತ ಸಂಗತಿಗಳು ಆಗೊಮ್ಮೆ ಈಗೊಮ್ಮೆ ನಡೆಯುತ್ತವೆ. ಹೀಗಾಗಿ ಅಲ್ಲಿ ಎಲ್ಲೆಡೆ ಭದ್ರತಾ ವ್ಯವಸ್ಥೆ ಕಿರಿಕಿರಿ ಎನಿಸುವ ಮಟ್ಟದಲ್ಲಿದೆ. ಮುಸ್ಲಿಂ ದೇಶಗಳಿಂದ ಬಂದವರು, ಮುಸ್ಲಿಂ ಹೆಸರಿನ ಭಾರತೀಯರಿಗಂತೂ ಭದ್ರತೆ ಹೆಸರಿನಲ್ಲಿ ಕಿರುಕುಳ ಸ್ವಲ್ಪ ಹೆಚ್ಚೇ ಇದೆ.

ಮನೋಭಾವದ ಸಮಸ್ಯೆ: ಆದರೆ ಇದು ಮೂಲತಃ ಮನೋಭಾವದ, ಅರಿವಿನ ಸಮಸ್ಯೆ. ಪ್ರತಿಯೊಂದು ದೇಶಕ್ಕೂ ಅದರದೇ ಆದ ನಿಯಮಗಳಿವೆ. ಆಯಾ ದೇಶದಲ್ಲಿ ಅದನ್ನು ಪಾಲಿಸುವುದು ನಮ್ಮ ಧರ್ಮ. ಭಾರತೀಯ ಸಂಸ್ಕೃತಿಯಲ್ಲಿ ಅತಿಥಿ ದೇವರಿಗೆ ಸಮಾನ. ಆದ್ದರಿಂದ ಅವರಿಗೆ ನೋವಾಗದಂತೆ, ಮುಜುಗರವಾಗದಂತೆ ನಾವು ವರ್ತಿಸುತ್ತೇವೆ.
ಆದರೆ ನಮ್ಮಲ್ಲಿ `ದೊಡ್ಡವರು, ವಿವಿಐಪಿಗಳು, ಅಧಿಕಾರಸ್ಥರು~

ಜನಸಾಮಾನ್ಯರಿಗಿಂತಲೂ ಮೇಲೆ ಎಂಬ ಭಾವನೆ ಬಲವಾಗಿ ಬೇರೂರಿದೆ.  ಅವರಿಗೆ ಸಾಮಾನ್ಯ ಕಾನೂನುಗಳು ಅನ್ವಯಿಸುವುದೇ ಇಲ್ಲ.

ಕೆಲ ತಿಂಗಳ ಹಿಂದೆ ನಮ್ಮ ಬೆಂಗಳೂರಲ್ಲೇ `ಪ್ರಭಾವಿ ಮಂತ್ರಿಯೊಬ್ಬರ ಮಗ ಶಿವಾಜಿನಗರ ಪ್ರದೇಶದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ. ಇನ್ನೊಂದು ವಾಹನದ ಚಾಲಕನ ಜತೆ ಅನುಚಿತವಾಗಿ ವರ್ತಿಸಿದ. ಸ್ಥಳಕ್ಕೆ ಬಂದ ಸಂಚಾರ ಪೊಲೀಸ್ ಅಧಿಕಾರಿಗೇ ಕೆನ್ನೆಗೆ ಬಾರಿಸಿದ. ಆದರೂ ಕೇಸ್ ಇಲ್ಲದೆ ಬಚಾವಾದ~ ಎಂಬ ಸುದ್ದಿ ಮಾಧ್ಯಮದಲ್ಲಿ ವರದಿಯಾಗಿತ್ತು.

ಅಮೆರಿಕದಲ್ಲಿ ಹಾಗಲ್ಲ. ಅಲ್ಲಿ ಕಾನೂನು ಎಲ್ಲರಿಗೂ ಒಂದೇ. ವಾಹನ ಓಡಿಸುವಾಗ ಸ್ವತಃ ಅಧ್ಯಕ್ಷರ ಮಕ್ಕಳೇ ತಪ್ಪು ಮಾಡಿದರೂ ಸಾಮಾನ್ಯ ಪೊಲೀಸನೊಬ್ಬ ನಿಲ್ಲಿಸಿ ದಂಡ ಹಾಕುತ್ತಾನೆ. ನಮ್ಮ ದೇಶದಲ್ಲಿ ಅದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ.
ಹಾಗಾಗಿ ನಮಗೆ ಕೆಲವು ಸಲ ಅಮೆರಿಕನ್ನರದು ಅತಿರೇಕ ಎನಿಸುತ್ತದೆಯೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT