ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರತ್ತ ಜಿಲ್ಲಾಡಳಿತ; ನೂತನ ಜಿಲ್ಲಾಧಿಕಾರಿ ಆಶಯ

Last Updated 3 ಸೆಪ್ಟೆಂಬರ್ 2013, 5:34 IST
ಅಕ್ಷರ ಗಾತ್ರ

ದಾವಣಗೆರೆ: ಸಾರ್ವಜನಿಕರ ಕುಂದುಕೊರತೆ ನಿವಾರಣೆಗೆ ಮೊದಲ ಆದ್ಯತೆ ನೀಡಿ, ಜಿಲ್ಲಾಡಳಿತದ ಬಗ್ಗೆ ಜನರಲ್ಲಿ ನಂಬಿಕೆ-ಭರವಸೆ ಮೂಡಿಸಲು ಪ್ರಯತ್ನಿಸಲಾಗುವುದು ಎಂದು ನೂತನ ಜಿಲ್ಲಾಧಿಕಾರಿ ಅಂಜನ್‌ಕುಮಾರ್ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಅಧಿಕಾರ ಸ್ವೀಕರಿಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಸಾರ್ವಜನಿಕರ ಕುಂದುಕೊರತೆ ನಿವಾರಣೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು. ಜನಪ್ರತಿನಿಧಿ ಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯ್ತಿ ಸಿಇಒ ಹಾಗೂ ಸಹೋದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನರ ಬಳಿಗೆ ತಲುಪಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯಲಾಗುವುದು. ಆದ್ಯತೆಯ ಮೇಲೆ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು. ತಿಂಗಳಿಗೊಮ್ಮೆ ಸಭೆ ನಡೆಸಲಾಗುವುದು ಎಂದರು.

ಇದು ಮೂರನೇ ಜಿಲ್ಲೆ...
ಜಿಲ್ಲಾಧಿಕಾರಿಯಾಗಿ ಅಂಜನ್‌ಕುಮಾರ್ ಅವರಿಗೆ ಇದು ಮೂರನೇ ಜಿಲ್ಲೆ. ಕೆಎಎಸ್ ಅಧಿಕಾರಿಯಾಗಿ ವಿವಿಧ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದ ಅವರು 2011ರಲ್ಲಿ ಐಎಎಸ್‌ಗೆ ಬಡ್ತಿ ಪಡೆದಿದ್ದಾರೆ.

ಈ ಮೊದಲು ಚಿಕ್ಕಮಗಳೂರು, ಗದಗ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು, ದಾವಣಗೆರೆ ಅವರಿಗೆ ಮೂರನೇ ಜಿಲ್ಲೆ. ಹಾಸನ ಜಿಲ್ಲಾ ಪಂಚಾಯ್ತಿ ಸಿಇಒ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜಂಟಿ ಆಯುಕ್ತರಾಗಿ ಸೇವೆ ಸಲ್ಲಿಸಿದ ಅನುಭವವೂ ಅವರ ಬೆನ್ನಿಗಿದೆ.

ರಸ್ತೆ ವಿಸ್ತರಣೆಗೆ ಹಣಕಾಸು ಕೊರತೆ ಅಡ್ಡಿ
ನಗರದ ಪಿ.ಬಿ. ರಸ್ತೆ ವಿಸ್ತರಣೆ ಸಂಬಂಧ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಹಣಕಾಸಿನ ಕೊರತೆಯಿಂದಾಗಿ ವಿಳಂಬವಾಯಿತು ಎಂದು ನಿರ್ಗಮಿತ ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಪ್ರತಿಕ್ರಿಯೆ ನೀಡಿದರು.

ರಸ್ತೆ ವಿಸ್ತರಣೆ ಸಂಬಂಧ ಯಾವುದೇ ರಾಜಕೀಯ ಒತ್ತಡ ಇರಲಿಲ್ಲ. ಆದರೆ, ಯಾರೇ ಅಧಿಕಾರಿ ಕಾರ್ಯನಿರ್ವಹಿಸುವಾಗ ರಾಜಕೀಯ ಒತ್ತಡ ಇದ್ದೇ ಇರುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದು ಸಾಮಾನ್ಯ. ಇಲ್ಲಿನ ಎಲ್ಲ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು ಸಾಕಷ್ಟು ಸಹಕಾರ ನೀಡಿದ ಕಾರಣ ಉತ್ತಮ ಕೆಲಸ ನಿರ್ವಹಿಸಲು ಸಾಧ್ಯವಾಯಿತು ಎಂದು ಜಿಲ್ಲೆಯ ಜನರಿಗೆ ಕೃತಜ್ಞತೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT