ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವಿರೋಧಿ ನೀತಿ: ಜೈಲ್‌ಭರೋ 19ರಂದು

Last Updated 17 ಡಿಸೆಂಬರ್ 2012, 5:57 IST
ಅಕ್ಷರ ಗಾತ್ರ

ಬಳ್ಳಾರಿ: ಕಾಂಗ್ರೆಸ್ ನೇತೃತ್ವದ ಕೇಂದ್ರದ ಯುಪಿಎ ಸರ್ಕಾರ ರೈತ, ಕಾರ್ಮಿಕ ಮತ್ತು ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಇದೇ 19ರಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ನೇತೃತ್ವದಲ್ಲಿ ದೇಶವ್ಯಾಪಿ ಜೈಲ್‌ಭರೋ ಚಳವಳಿ ಹಮ್ಮಿಕೊಳ್ಳಲಾಗಿದೆ.

ನಗರದಲ್ಲಿ ಭಾನುವಾರ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಮಿತಿಯ ಜಿಲ್ಲಾ ಸಂಚಾಲಕ ಟಿ.ಜಿ. ವಿಠ್ಠಲ್ ಮತ್ತು ಜೆ.ಸತ್ಯಬಾಬು, ಕೇಂದ್ರ ಸರ್ಕಾರದ ರೈತ, ಕಾರ್ಮಿಕ ಮತ್ತು ಜನವಿರೋಧಿ ನೀತಿಯು ಜನಸಾಮಾನ್ಯರ ಜೀವನವನ್ನು ನರಕವಾಗಿಸಿದ್ದು, ಇದನ್ನು ವಿರೋಧಿಸಿ ಜೈಲ್ ಭರೋ ಹಮ್ಮಿಕೊಳ್ಳಲಾಗಿದೆ ಎಂದರು.

ನಿತ್ಯ ಬಳಕೆ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿದ್ದು, ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರೆಯದೆ ರೈತರು ಸಂಕಷ್ಟದಲ್ಲಿದ್ದಾರೆ. ಅಸಂಘಟಿತ ವಲಯದ ಕಾರ್ಮಿಕರ ಸಾಮಾಜಿಕ ಭದ್ರತೆ ಕನಸಾಗಿದೆ. ಕೂಲಿ ಕಾರ್ಮಿಕರಿಗೆ ಕನಿಷ್ಠ ಕೂಲಿ ಸಿಗುತ್ತಿಲ್ಲ. ಕೇಂದ್ರ ಸರ್ಕಾರ ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮತಿ ನೀಡಿದ್ದರಿಂದ ಜನಸಾಮಾನ್ಯ ತೊಂದರೆಗೆ ಒಳಗಾಗಲಿದ್ದಾನೆ ಎಂದರು.

ನವದೆಹಲಿಯಲ್ಲಿ ಕಳೆದ ಸೆ. 4ರಂದು ನಡೆದ ರಾಷ್ಟ್ರೀಯ ಕಾರ್ಮಿಕ ಸಂಘಟನೆಗಳ ಜಂಟಿ ಸಮಾವೇಶವು ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ತೀವ್ರವಾಗಿ ಖಂಡಿಸಲಾಗಿದೆ. ಇದೀಗ ಡಿಸೆಂಬರ್ 19ರಂದು ದೇಶವ್ಯಾಪಿ ಜೈಲ್ ಭರೋ ಹಾಗೂ ಡಿಸೆಂಬರ್  20ರಂದು ಪಾರ್ಲಿಮೆಂಟ್ ಚಲೋ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

2013ರ ಜನವರಿ 13ರಂದು ಬಳ್ಳಾರಿ ಜಿಲ್ಲಾ ಮಟ್ಟದ ಜಂಟಿ ಸಮಿತಿಗಳ ಸಮಾವೇಶವು ಜರುಗಲಿದ್ದು, ಈ ಸಮಾವೇಶದಲ್ಲಿ ಫೆ 20 ಮತ್ತು 21ರಂದು ನಡೆಯುವ ದೇಶದ ಪ್ರಪ್ರಥಮ ಎರಡು ದಿನಗಳ ಸಾರ್ವತ್ರಿಕ ಮುಷ್ಕರ (ಭಾರತ್ ಬಂದ್) ಕುರಿತು ಚರ್ಚಿಸಲಾಗುವುದು ಎಂದರು.

ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ. ಗುರುಸಿದ್ಧ ಮೂರ್ತಿ, ಜಲ ಮಂಡಳಿ ನೌಕರರ ಸಂಘದ ಸಿ. ರಘುನಾಥ್, ಬಿಎಂಎಸ್‌ನ ವಿಜಯ ಕುಮಾರ್, ಅಂಗನವಾಡಿ ನೌಕರರ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷೆ ಎರ‌್ರೆಮ್ಮ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT