ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸ್ಪಂದನ ಸಭೆ: ವಿದ್ಯುತ್ ಸಮಸ್ಯೆ ನೀಗಿಸಲು ಒತ್ತಾಯ

Last Updated 9 ಜುಲೈ 2012, 8:35 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಹೆಚ್ಚಾಗಿದೆ. ಈ ಬಾರಿ ಮಳೆಯೂ ಕೈ ಕೊಟ್ಟಿರುವುದರಿಂದ ಅನಿಯಮಿತವಾಗಿ ವಿದ್ಯುತ್ ಕಡಿತದ ಬರೆಯೂ ಸೇರಿ ರೈತರಿಗೆ ಹೆಚ್ಚು ತೊಂದರೆಯಾಗುತ್ತಿದೆ. ಕುಡಿಯುವ ನೀರಿಗೆ ಪ್ರತ್ಯೇಕ ಟಿಸಿ ಅಳವಡಿಸುವ ಕಾರ್ಯವೂ ಇನ್ನು ನಡೆದಿಲ್ಲ ಎಂದು ಯರಿಯೂರು ಗ್ರಾಮಸ್ಥರು ಶನಿವಾರ ಗ್ರಾಮದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ದೂರಿದರು.

ಇದಕ್ಕೆ ಉತ್ತರಿಸಿದ ಜೆಇ ಹುಸೇನ್, ಗ್ರಾಮದಲ್ಲಿ ಯಾವುದೇ ವಿದ್ಯುತ್ ಸಮಸ್ಯೆ ಎದುರಾದರೂ ನೇರವಾಗಿ ತಮ್ಮನ್ನು ಸಂಪರ್ಕಿಸಬಹುದು. ಕುಡಿ ಯುವ ನೀರಿಗೆ ಪ್ರತ್ಯೇಕ ಟಿಸಿ ಅಳವಡಿಕೆಗೆ ಈಗಾಗಲೇ ಕ್ರಿಯಾಯೋಜನೆ ತಯಾರಾ ಗಿದ್ದು ಶೀಘ್ರದಲ್ಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಗ್ರಾಮದ ಮುಂಭಾಗದಲ್ಲಿರುವ ಕಲುಷಿತ ಕೊಳ ಮುಚ್ಚಬೇಕು. ಇದರಲ್ಲಿ ನೀರು ಕೆಟ್ಟು ದುರ್ನಾತ ಬೀರುತ್ತಿದೆ. ಅಲ್ಲದೆ ಅಕ್ಕಪಕ್ಕದ ಕೊಳವೆ ಬಾವಿಗಳಲ್ಲೂ ಈಚೆಗೆ ಇದರ ಅಂಶ ಗೋಚರಿಸುತ್ತಿದೆ. ಹಾಗಾಗಿ ಗ್ರಾಮಸ್ಥರ ಆರೋಗ್ಯದ ಮೇಲೆ ಇದು ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಇದನ್ನು ಮುಚ್ಚಿಸಲು ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ತಾಲ್ಲೂಕಿನಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳನ್ನು 5 ಕಿ.ಮಿ. ಒಳಗೆ ಉಚಿತವಾಗಿ ಸೇವೆ ನೀಡುವಂತೆ ಸರ್ಕಾರದ ನಿಯಮವಿದೆ. ಆದರೆ, ಇಲ್ಲಿನ ಏಜೆನ್ಸಿಯವರು 20 ರೂ. ಅಧಿಕ ವಸೂಲಿ ಮಾಡುತ್ತಿದ್ದಾರೆ. ಎಸ್‌ಎಂಎಸ್ ಮೂಲಕ ಬುಕಿಂಗ್ ಮಾಡುವ ವ್ಯವಸ್ಥೆ ಇದ್ದರೂ ಇದರಲ್ಲೂ ಅವ್ಯವಹಾರ ನಡೆಯುತ್ತಿದೆ.
 
ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಕೇಬಲ್ ಮಂಜು ಸಭೆಯಲ್ಲಿ ದೂರಿದರು. ಇದಕ್ಕೆ ಉತ್ತರಿಸಿದ ಆಹಾರ ನಿರೀಕ್ಷಕ ನಾಗರಾಜು ಈ ಬಗ್ಗೆ ಏಜೆನ್ಸಿಯವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ವೃದ್ಧಾಪ್ಯ ವೇತನ, ಸಂಧ್ಯಾಸುರಕ್ಷಾ ಯೋಜನೆಯಲ್ಲಿನ ಫಲಾನುಭವಿಗಳಿಗೆ ಕಳೆದ 8 ತಿಂಗಳಿಂದ ಮಾಸಾಶನ ಸಿಕ್ಕಿಲ್ಲ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು.

ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ಶಿವನಾಗಯ್ಯ ತಾಲ್ಲೂಕು ಪೈಲಟ್ ಯೋಜನೆಗೆ ಸೇರ್ಪಡೆಯಾಗಿದೆ. ಮುಂದಿನ ದಿನಗಳಲ್ಲಿ ಪ್ರತಿ ತಿಂಗಳೂ ಮಾಸಾಶನ ಬರುವಂತೆ ಕ್ರಮ ವಹಿಸಲಾಗುವುದು ಎಂದರು. ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲು ತೀರ್ಮಾನಿಸಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಟ್ಟಸಿದ್ಧಮ್ಮ, ಉಪಾಧ್ಯಕ್ಷ ಜಯಣ್ಣ, ಪ್ರಭಾರ ಇಒ ದೇವರಾಜು, ಮಂಜುನಾಥ್, ಮಹಾದೇವ್, ನಂಜಯ್ಯ, ಕಾರ್ಯದರ್ಶಿ ಶಶಿಕಲಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT