ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗೃತಿಗೆ ಅಂಕಣ: ಬದಲಾವಣೆಗೆ ರಾಜಕಾರಣ

Last Updated 3 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಮೈಸೂರು: ಪತ್ರಕರ್ತ ಪ್ರತಾಪಸಿಂಹ ಈಗ ಮೈಸೂರು– ಕೊಡಗು ಲೋಕ­ಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ. ಹುಟ್ಟಿದ್ದು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬಿರಡಹಳ್ಳಿಯಲ್ಲಿ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎ ಪತ್ರಿಕೋದ್ಯಮ ಪದವಿ ಪಡೆದ ನಂತರ ವೃತ್ತಿಗೆ  ಸೇರ್ಪಡೆ. ಅಲ್ಲಿ ಅಂಕಣಕಾರ. ಆಗ 22 ವರ್ಷ. ನಿರಂತರವಾಗಿ ಹದಿನಾಲ್ಕೂವರೆ ವರ್ಷ ಅಂಕಣ ಬರೆಯುವುದರ ಜತೆಗೆ ಹಲವಾರು ಕೃತಿಗಳನ್ನೂ ರಚಿಸಿದ್ದಾರೆ. ಐಎಎಸ್‌ ಮಾಡಬೇಕೆಂಬ ಕನಸು ಹೊತ್ತಿದ್ದರು. 37 ವರ್ಷದ ಅವರು ಪತ್ರಿಕೋ­ದ್ಯಮ­ದಿಂದ ಜಿಗಿದು ನೇರ ಚುನಾವಣೆಗೆ ನಿಂತಿದ್ದಾರೆ. ಅವರೊಂದಿಗೆ ನಡೆದ ಸಂದರ್ಶನದ ಆಯ್ದಭಾಗ ಇಲ್ಲಿದೆ.

*ಪತ್ರಿಕಾ ವೃತ್ತಿಯಿಂದ ನೇರವಾಗಿ ಲೋಕಸಭೆ ಚುನಾವಣೆಗೆ ಧುಮುಕಿದ್ದರ ಉದ್ದೇಶ?
ನನ್ನ ಅಂಕಣ ಜಾಗೃತಿ ಮೂಡಿಸಿದೆ. ಜತೆಗೆ, ಬದಲಾವಣೆಯನ್ನೂ ತಂದಿದೆ. ಇದನ್ನು ವಾಸ್ತವ­ದಲ್ಲಿ ಅನುಷ್ಠಾನಕ್ಕೆ ತರಲು ಸಾಧ್ಯವಾಗುವುದು ರಾಜಕೀಯ ಕ್ಷೇತ್ರದಲ್ಲಿ. ಇದಕ್ಕಾಗಿ ಚುನಾವಣೆಗೆ ನಿಂತೆ. ಈಗಾಗಲೇ ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ಬೇರೆ ಬೇರೆ ಕ್ಷೇತ್ರಗಳಲ್ಲಿರು­ವವರು ರಾಜಕೀಯ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ. ಇದರಲ್ಲಿ ಪತ್ರಕರ್ತರೂ ಇದ್ದಾರೆ. ಈ ಹಿನ್ನೆಲೆಯಲ್ಲಿ ನೇರವಾಗಿ ಚುನಾವಣೆಗೆ ಇಳಿಯ­ಬೇಕು, ಜನರ ಆಶೀರ್ವಾದ ಪಡೆಯಬೇಕು ಎಂದು ಬಂದೆ.

*ಬಹುಸಂಸ್ಕೃತಿ, ಪ್ರಗತಿಪರ ವಿಚಾರಧಾರೆ, ಸಾಂಸ್ಕೃತಿಕ ಸಾಮರಸ್ಯವಿರುವ ಮೈಸೂರು ಕ್ಷೇತ್ರದಲ್ಲಿ ಬಿಜೆಪಿ ನೆಲೆ ಕಳೆದುಕೊಂಡಿದೆ. ನರೇಂದ್ರ ಮೋದಿ ಅಲೆಯು ಈ ಕ್ಷೇತ್ರದಲ್ಲಿ ಕೆಲಸ ಮಾಡುವುದೇ?
ದೇಶದಾದ್ಯಂತ ಮೋದಿ ಅಲೆ ಇದೆ. ಜನರಿಗೆ ದೇಶದ ಬಗ್ಗೆ ಕಾಳಜಿ ಇದೆ. ದೇಶ ಉದ್ಧಾರ­ವಾಗಲಿ ಎನ್ನುವ ಆಶಯವಿದೆ.

*ಈ ದೇಶಕ್ಕೆ ಮೋದಿ ಅನಿವಾರ್ಯವೇ?
2008ರಲ್ಲಿ ಮೋದಿ ಕುರಿತ ಜೀವನ ಚರಿತ್ರೆ ‘ನರೇಂದ್ರ ಮೋದಿ ಯಾರೂ ತುಳಿಯದ ಹಾದಿ’ ಕೃತಿ ರಚಿಸಿದೆ. ಅದು ಗುಜರಾತಿ ಭಾಷೆಗೆ ಅನುವಾದ­ವಾಯಿತು. ನಂತರ ಮೋದಿ ಅವರನ್ನು ಮೂರು ಬಾರಿ ಭೇಟಿಯಾಗಿ ಸಂದರ್ಶನ ಮಾಡಿದೆ. ಆಗ ಗಂಭೀರವಾಗಿ ಅನ್ನಿಸಿತು: ಮೋದಿ ಮೇಲೆ ಜನರು ವಿಶ್ವಾಸ ಇಟ್ಟಿದ್ದಾರೆ ಎಂದು. ಈ ದೇಶದ ರಕ್ಷಣೆಗೆ ಅಂಥ ದೊಡ್ಡ ನಾಯಕರ ಅಗತ್ಯವಿದೆ. ಅವರು ಪ್ರಧಾನಿ­ಯಾಗಬೇಕು. ನನ್ನಿಂದಲೂ ಅದಕ್ಕೊಂದು ಕೊಡುಗೆ ಇರಬೇಕು ಎನ್ನುವ ಆಸೆಯಿದೆ.

*ಅಂಕಣ ಬರಹಗಾರರಾಗಿ ಪರಿಚಿತರಾಗಿದ್ದ ನಿಮ್ಮನ್ನು  ಅಭ್ಯರ್ಥಿಯನ್ನಾಗಿ ಜನ ಹೇಗೆ ಸ್ವೀಕರಿಸುತ್ತಿದ್ದಾರೆ?
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ­ದಲ್ಲಿನ ದಲಿತರ ಕಾಲೊನಿಯಲ್ಲಿ ಪಾತ್ರೆ ತೊಳೆಯುತ್ತಿದ್ದ ಪಿಯುಸಿ ಓದೋ ಹುಡುಗಿ ಓಡಿ ಬಂದು ಆಟೋಗ್ರಾಫ್ ತೆಗೆದುಕೊಂಡಳು. ನನ್ನ ಜತೆಗೆ ಬಂದರೆ ಇಂಥ ಅನುಭವಗಳು ಸಿಗುತ್ತವೆ.

*ನಿಮ್ಮ ಅಂಕಣ ಜೀವಪರ ಇರಬೇಕಿತ್ತು. ಆದರೆ, ಜೀವವಿರೋಧಿ ಎನಿಸಿಲ್ಲವೇ?
ನಿಮ್ಮ ಸಂಪಾದಕರಿಗೆ ಫೋನು ಮಾಡುತ್ತೇನೆ. ಟಿಪಿಕಲ್ ‘ಪ್ರಜಾವಾಣಿ’ಯವರ ಹಾಗೆ ಪ್ರಶ್ನೆ ಕೇಳುತ್ತೀರಿ. ಜತೆಗೆ, ಹಳೆಯ ಕಮ್ಯುನಿಸ್ಟರ ಥರಾ ಮಾತಾಡ್ತೀರಿ. ಕವಿ ಸಿದ್ದಲಿಂಗಯ್ಯ ಅವರು ಇಕ್ಕರ್ಲಾ, ವದೀರ್ಲಾ ಎಂದಿದ್ದು ಜೀವವಿರೋಧಿ ಎನ್ನುತ್ತೀರಾ? ಜೀವವಿರೋಧಿ ಎನ್ನುವುದು ಸವಕಲು ಪದ. ಜೀವವಿರೋಧ ಯಾರು ಮಾಡು­­ತ್ತಾರೆ ಎನ್ನುವುದು ಗೊತ್ತಿದೆ. ನನ್ನ ಅಂಕಣ­ದಿಂದ ಗಲಾಟೆ ಆಗಿದೆಯಾ? ಯಾರಾ­ದಾದರೂ ಜೀವ ಹೋಗಿದೆಯಾ?

*ನಿಮ್ಮ ಅಂಕಣದಲ್ಲಿ ರಾಜಕಾರಣಿಗಳನ್ನು ಟೀಕಿಸುತ್ತಿದ್ದಿರಿ. ಈಗ ನೀವೇ ರಾಜಕೀಯಕ್ಕೆ ಸೇರಿದ್ದೀರಲ್ಲ?
ಬಿಜೆಪಿಯಲ್ಲಿ ಎಲ್ಲ ಬಗೆಯವರೂ ಇದ್ದಾರೆ. ಶುದ್ಧಹಸ್ತರು ಇರುವ ಪಕ್ಷ ಎಲ್ಲೂ ಇಲ್ಲ. ಇನ್ನು ನನ್ನ ಅಂಕಣದಲ್ಲಿ ಅಡ್ವಾಣಿ, ವಾಜಪೇಯಿ ಅವರನ್ನೂ ಟೀಕಿಸಿ ಬರೆದಿರುವೆ. ಬಿ.ಎಸ್‌.­ಯಡಿಯೂರಪ್ಪ ಅವರನ್ನೂ ಟೀಕಿಸಿರುವೆ. ಹಾಗಂತ ಬಿಜೆಪಿ ವ್ಯಕ್ತಿ ಆಧಾರಿತ ಪಕ್ಷವಲ್ಲ. ಸೈದ್ಧಾಂತಿಕ ಪಕ್ಷ.


ನಾನು ಓಲೈಕೆ ಬರವಣಿಗೆ ಮಾಡಲಿಲ್ಲ. ಬಿಜೆಪಿಯವರನ್ನು ಇಂದ್ರ, ಚಂದ್ರ ಎಂದು ಹೊಗಳಿ ಬರೆಯಲಿಲ್ಲ. ‘ಮೈನಿಂಗ್‌ ಮಾಫಿಯಾ’ ಎಂಬ ಲೇಖನದ ಮೂಲಕ ಜನಾರ್ದನ ರೆಡ್ಡಿ, ಶ್ರೀರಾಮುಲು ವಿರುದ್ಧ ಬರೆದೆ. ಅದುವರೆಗೆ ಕನ್ನಡದಲ್ಲಿ ಯಾರೂ ಬರೆದಿರಲಿಲ್ಲ. ಎಲ್ಲರನ್ನೂ ಟೀಕೆ ಮಾಡಿರುವೆ. ನನ್ನ ಬರವಣಿಗೆಗೆ ವ್ಯಕ್ತಿನಿಷ್ಠೆ ಇಲ್ಲ. ನನಗೆ ದೇಶಭಕ್ತಿ ಮುಖ್ಯ. ರಾಷ್ಟ್ರೀಯತೆ ಮುಖ್ಯ, ಈ ದೇಶ ಮುಖ್ಯ.

*ರಾಜಕೀಯ ಸೇರಬೇಕೆಂಬ ಕಾರಣಕ್ಕೆ ಅಂಕಣ ಬರೆದಿರೇನು?
ರಾಜಕೀಯಕ್ಕೆ ಸೇರುವ ಉದ್ದೇಶ ಇರಲಿಲ್ಲ. 2009ರಲ್ಲಿ ಕಾಂಗ್ರೆಸ್‌ ಬಗ್ಗೆ ಜನರಿಗೆ ಒಳ್ಳೆಯ ಅಭಿಪ್ರಾಯವಿತ್ತು. ಚೆನ್ನಾಗಿ ಆಡಳಿತ ನಡೆಸಿದಾಗ ಹೊಗಳಿ ಬರೆದೆ. ನಂತರ ಕೆಟ್ಟ ಕೆಲಸ ಮಾಡಿದಾಗ ತೆಗಳಿ ಬರೆದಿರುವೆ.

ಭ್ರಷ್ಟಾಚಾರ ಕುರಿತು ಧ್ವನಿ ಎತ್ತಿದ ಅಣ್ಣಾ ಹಜಾರೆ ಅಷ್ಟು ದೊಡ್ಡ ವ್ಯಕ್ತಿಯಾಗುತ್ತಾರೆಂದು ಗೊತ್ತಿರಲಿಲ್ಲ. ಒಳ್ಳೆಯವರು ರಾಜಕೀಯಕ್ಕೆ ಬರಬೇಕು. ಎಎಪಿಯಲ್ಲೂ ಅನೇಕ ಪತ್ರಕರ್ತರು ಇದ್ದಾರೆ. 1952ರಲ್ಲಿ ಮೊದಲ ಬಾರಿಗೆ ದೇಶ­ದಲ್ಲಿ ಲೋಕಸಭೆ ಚುನಾವಣೆ ನಡೆದಾಗ ಅತಿ ಹೆಚ್ಚು ಪತ್ರಕರ್ತರು ಚುನಾವಣೆಗೆ ನಿಂತಿದ್ದರು. ಜವಾಹರಲಾಲ್‌ ನೆಹರೂ, ಮಹಾತ್ಮ ಗಾಂಧಿ ಕೂಡಾ ಪತ್ರಕರ್ತರು. ಎಲ್ಲ ಚುನಾವಣೆಯಲ್ಲೂ ಪತ್ರಕರ್ತರು ಸ್ಪರ್ಧಿಸಿದ್ದಾರೆ.

*ಹಿಂದೂಗಳ ಪರವಾಗಿಯೇ ಅಂಕಣದಲ್ಲಿ ಹೆಚ್ಚು ಬರೆದಿರಿ. ಅಲ್ಪಸಂಖ್ಯಾತರ ಮತ ಕೇಳಲು ಹೋದಾಗ ನಿಮ್ಮ ಅನುಭವ­ವೇನು?
ಅಲ್ಪಸಂಖ್ಯಾತರು, ಬಹುಸಂಖ್ಯಾತರೆಂದು ಇಲ್ಲ. ಎಲ್ಲರಲ್ಲೂ ಮತ ಕೇಳಿರುವೆ, ಕೇಳುವೆ. ‘ಏಕ್ ಭಾರತ್‌, ಶ್ರೇಷ್ಠ ಭಾರತ್’ ಎಂದು ಮೋದಿ ಹೇಳುತ್ತಾರೆ. ಇದನ್ನು ಕಳೆದ ಏಳೆಂಟು ತಿಂಗಳಿಂದ  ಹೇಳುತ್ತಿದ್ದಾರೆ. ಅವರು ಧರ್ಮಗಳ ಬಗ್ಗೆ ಮಾತಾಡಿಲ್ಲ.  ಬಡತನ ವಿರುದ್ಧ ಹೋರಾಡಿ ಎಂದು ಹಿಂದೂ ಹಾಗೂ ಮುಸಲ್ಮಾನ­ರಿಬ್ಬರಿಗೂ ಕರೆ ಕೊಡುತ್ತಿದ್ದಾರೆ. ಇದು ಬಿಜೆಪಿಯ ಭಾರತದ ಕಲ್ಪನೆ.

*ನೀವು ಹಾಸನ ಜಿಲ್ಲೆಯವರು. ಅಲ್ಲಿಯೇ ಸ್ಪರ್ಧಿಸಬಹುದಿತ್ತು. ಸಿ.ಎಚ್‌. ವಿಜಯ­ಶಂಕರ್‌ ಅವರಿಗೆ ಇಲ್ಲಿ ಸ್ಪರ್ಧಿಸಲು ಅವಕಾಶ ಒದಗಿಸಬಹುದಿತ್ತು. ದೇವೇಗೌಡ­ರಿಗೆ ಹೆದರಿದಿರಾ?
ಹಾಗೇನೂ ಇಲ್ಲ. ಅಲ್ಲದೆ ವಿಜಯಶಂಕರ್ ಕೂಡ  ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ­ವರು. ನಮ್ಮಲ್ಲಿ ಒಳ್ಳೆಯತನ ಇದ್ದರೆ ಜನ ಸ್ವೀಕರಿಸುತ್ತಾರೆ. ಅಲ್ಲದೆ,  ಆಸಕ್ತಿ ಇರುವವರಿಗೆ ಯಾವ ಕ್ಷೇತ್ರವಾದರೇನು?

ಮೈಸೂರು ಕ್ಷೇತ್ರಕ್ಕೆ ಹೊಸಬ ಅಲ್ಲ. ನಾನು ಮೈಸೂರಿಗೆ ಹೊಂದಿಕೊಂಡ ಹಾಸನ ಜಿಲ್ಲೆಯ­ವನು. ಚುನಾವಣೆಗೆ ನಿಲ್ಲುವ ಮೊದಲು ನಾನು ಯಾವ ಸಮುದಾಯದವನು ಎಂದು ಕೆದಕ­ಲಿಲ್ಲ. ಚುನಾವಣೆಗೆ ನಿಂತ ಮೇಲೆ ರಜಪೂತ ವಂಶ­ದವನು ಎಂದು ಕಾಂಗ್ರೆಸ್ಸಿಗರು ಅಪಪ್ರಚಾರ ನಡೆಸಿ­ದ್ದಾರೆ. ಒಕ್ಕಲಿಗರು ನನಗೆ ಮತ ಕೊಟ್ಟುಬಿಟ್ಟರೆ ಎಂಬ ಭಯ ಅವರಿಗಿದೆ.

ಪತ್ರಕರ್ತನಾಗಿದ್ದರಿಂದ ಒಂದು ಭಾಗಕ್ಕೆ ಸೀಮಿತನಲ್ಲ. ಟ್ವಿಟರ್ಸ್, ಫೇಸ್‌ಬುಕ್‌ನಲ್ಲಿ ನನ್ನ ಅಂಕಣಕ್ಕೆ ಹೆಚ್ಚು ಫಾಲೋವರ್ಸ್ ಇದ್ದಾರೆ. ಹೀಗಿರುವಾಗ ಸ್ಥಳೀಯ ಪ್ರಶ್ನೆ ಯಾಕೆ ಬರುತ್ತದೆ? ಪ್ರಾಮಾಣಿಕ ಕಾಳಜಿ, ಬದ್ಧತೆ ಬೇಕಷ್ಟೇ. ಇನ್ನು ಆಂತರಿಕ ಭಿನ್ನಮತ ಇಲ್ಲವೇ ಇಲ್ಲ. ನಾಮಪತ್ರ ಸಲ್ಲಿಸುವ ದಿನ  ವಿಜಯಶಂಕರ್‌ ಬಂದಿದ್ದರು. ರಾಮದಾಸ್‌ ಪಾದಯಾತ್ರೆ ಮಾಡಿದ್ದಾರೆ.

*ನಿಮಗೇ, ನಿಮ್ಮ ಪಕ್ಷಕ್ಕೇ ಏಕೆ ಮತ ನೀಡಬೇಕು ಎಂದು ಅಪೇಕ್ಷಿಸುತ್ತೀರಿ?
10 ವರ್ಷಗಳಲ್ಲಿ ಯುಪಿಎ ಸರ್ಕಾರ ಏನು ಮಾಡಿದೆ? ಏನು ಮಾಡಿಲ್ಲ ಎನ್ನುವುದು ಜನರಿಗೆ ಗೊತ್ತಿದೆ. ದೇಶದ ಟಿ.ವಿ ಚಾನಲ್‌ಗಳ ಸಮೀಕ್ಷೆ­ಯಲ್ಲಿ ವ್ಯಕ್ತವಾಗಿದ್ದು ಏನೆಂದರೆ, ಮೋದಿ ತಮ್ಮ ಸಮೀಪದ ಪ್ರತಿಸ್ಪರ್ಧಿಗಿಂತ ಮೂರು ಪಟ್ಟು ಮುಂದೆ ಇದ್ದಾರೆ. ಮೋದಿ ಮಂತ್ರ ಮೊಳಗು­ತ್ತಿದೆ. ಇದು ಮೋದಿ ಜನಪ್ರಿಯತೆಗೆ ಸಾಕ್ಷಿ.

*ನಿಮ್ಮ ಪ್ರಮುಖ ಎದುರಾಳಿ ಯಾರು? ಅವ­ರನ್ನು ಎಷ್ಟು ಗಂಭೀರವಾಗಿ ಪರಿಗಣಿ­ಸಿದ್ದೀರಿ?
ರಾಜಕೀಯ ಎದುರಾಳಿ, ಪ್ರತಿಸ್ಪರ್ಧಿ ಎಂದು ನೋಡುತ್ತಿಲ್ಲ. ಜನರಿಗೆ ಒಳ್ಳೆಯದಾಗಬೇಕು ಎನ್ನುವ ಉದ್ದೇಶವಿದೆ. ವಿಶ್ವಮಟ್ಟದಲ್ಲಿ ಹೆಸರು ಮಾಡಬೇಕಾದ ಕ್ಷೇತ್ರ ಮೈಸೂರು. ಕೇಂದ್ರ ಸರ್ಕಾರದ ಅನುದಾನ ಪಡೆದುಕೊಂಡು ಎತ್ತರಕ್ಕೆ ಕೊಂಡೊಯ್ಯಬೇಕಿತ್ತು. ಆದರೆ, ಹಾಲಿ ಸಂಸ­ದರು ಹೇಳಿಕೆಗಳನ್ನು ಕೊಟ್ಟಿದ್ದು ಮತ್ತು ಆಗಾಗ ದೇವೇಗೌಡ,  ಕುಮಾರಸ್ವಾಮಿ, ಕೃಷ್ಣ ಅವರ ಚಾರಿತ್ರ್ಯಹರಣ ಮಾಡುವುದರಲ್ಲೇ ಕಾಲಕಳೆ­ದರು. ಜನರಿಗೆ ಅದು ಈಗ ಮನವರಿಕೆ ಆಗಿದೆ. ಸಕಾರಾತ್ಮಕ ರಾಜಕಾರಣ ಮಾಡಬೇಕು. ರೈತ ಕುಟುಂಬದಿಂದ ಬಂದ ನನಗೆ ರೈತರ ನೋವು ಗೊತ್ತಿದೆ. ಈ ಕ್ಷೇತ್ರದಲ್ಲಿ ರೈತಾಪಿ ವರ್ಗ ದೊಡ್ಡ­ದಿದೆ. ಅವರಿಗೆ ಸ್ಪಂದಿಸಬೇಕಿದೆ.

*ಮುಖ್ಯಮಂತ್ರಿ ಇದೇ ಜಿಲ್ಲೆಯವರು. ಹೀಗಾಗಿ ಕಾಂಗ್ರೆಸ್‌ಗೆ ಇದು ಪ್ರತಿಷ್ಠಿತ ಕ್ಷೇತ್ರ. ಈ ಸವಾಲನ್ನು ಎದುರಿಸಿ ಗೆಲ್ಲುವ ವಿಶ್ವಾಸ ನಿಮಗಿದೆಯೇ?
ಮತದಾನಕ್ಕೆ 3–4 ದಿನವಿದ್ದಾಗ ಕಾಂಗ್ರೆಸ್ಸಿ­ಗರು ಹಣದ ಹೊಳೆ ಹರಿಸುತ್ತಾರೆ ಎನ್ನುವುದು ಗೊತ್ತು. ಈ ಮೂಲಕ ಮತದಾರರ ಖರೀದಿ ನಡೆಯುತ್ತದೆ. ಆದರೆ, ನಮ್ಮ ಜನ ಮೋದಿ ಅವರಿಗೆ ಮತ ಕೊಟ್ಟು ಪ್ರಧಾನಿ ಮಾಡ­ಬೇಕೆಂದು ಸಂಕಲ್ಪ ತೊಟ್ಟಿದ್ದಾರೆ. ಈ ಬಾರಿ ಮತದಾರರನ್ನು ಖರೀದಿಸುವ ಪ್ರಯತ್ನಗಳು ವಿಫಲ-ಗೊಳ್ಳುತ್ತವೆ.

*ಕಾಸಿಗಾಗಿ ಸುದ್ದಿ  ಕುರಿತು ಏನಂತೀರಿ?
ಚುನಾವಣೆಯಲ್ಲಿ ಎಲ್ಲ ಬಗೆಯಲ್ಲೂ ಕಾಸಿಗಾಗಿ ಸುದ್ದಿ (ಪೇಡ್‌ನ್ಯೂಸ್‌) ನಡೆಯು­ತ್ತದೆ. ಅದು ಆಯಾ ಪತ್ರಿಕೆಗಳಿಗೆ ಸಂಬಂಧಿಸಿದ್ದು.

*‘ಭಾರತದ ಇಬ್ಬರು ಸೈನಿಕರ ತಲೆ ಕಡಿದ ಪಾಕ್‌ ಸೇನೆಯ ನಾಲ್ಕು ಸೈನಿಕರ ತಲೆ ಕಡಿಯಬೇಕು’ ಎನ್ನುವ ನಿಮ್ಮ ಹೇಳಿಕೆ?
ನನ್ನ ಮಾತು ಪ್ರಚೋದನೆಯಲ್ಲ, ಪ್ರೇರಣೆ. ದೇಶದ ರಕ್ಷಣೆಗಾಗಿ ತಲೆ ಕೊಡಬೇಕಾದವರು ತಲೆ ತೆಗೆಯಬೇಕು ಎನ್ನುವ ಆತ್ಮಸ್ಥೈರ್ಯವನ್ನು ನಮ್ಮ ಪ್ರಧಾನಿ ತುಂಬಬೇಕಿತ್ತು. ಆಂತರಿಕ ಭದ್ರತೆ ಕಾಪಾಡುವ ಪೊಲೀಸರಿಗೆ, ಬಾಹ್ಯಶಕ್ತಿಗಳಿಂದ ರಕ್ಷಿಸುವ ಸೈನಿಕರಿಗೆ ಬೆಂಬಲ, ಆತ್ಮಸ್ಥೈರ್ಯ ತುಂಬದಿದ್ದರೆ ಈ ದೇಶದ ಪರಿಸ್ಥಿತಿ ಏನು?

*ಸಂಸದನಾಗದಿದ್ದರೆ?
ಸೋಲು–ಗೆಲುವನ್ನು ಸಮಭಾವದಿಂದ ಸ್ವೀಕರಿಸುವೆ. ಮುಂದೆ ಪೂರ್ಣಾವಧಿ ಪತ್ರಕರ್ತ­ನಾಗುವುದಿಲ್ಲ. ಅಂಕಣಕಾರನಾಗಿ ರಾಜಕೀಯ­ದಲ್ಲೂ ಮುಂದುವರಿಯುವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT