ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನಪದ ಕಲೆ ರಕ್ಷಣೆಗೆ ನಾಗಾಭರಣ ಸಲಹೆ

Last Updated 29 ಅಕ್ಟೋಬರ್ 2011, 14:30 IST
ಅಕ್ಷರ ಗಾತ್ರ

ರಾಮನಗರ: ಜಾನಪದ ಕಲೆಗಳಿಂದ ಕನ್ನಡ ನಾಡಿನ ಸಾಂಸ್ಕೃತಿಕ ಚರಿತ್ರೆ ಅನಾವರಣಗೊಂಡಿದ್ದು, ಅಂಥ ಕಲೆಯನ್ನು ಉಳಿಸಲು ಎಲ್ಲರೂ ಶ್ರಮಿಸಬೇಕೆಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ.ಎಸ್‌ನಾಗಾಭರಣ ಅಭಿಪ್ರಾಯಪಟ್ಟರು.

ವಾರ್ತಾ ಇಲಾಖೆ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ಹಾಗೂ ಕರ್ನಾಟಕ ಜಾನಪದ ಪರಿಷತ್ತು ಜಂಟಿಯಾಗಿ ಸಮೀಪದ ಜಾನಪದ ಲೋಕದಲ್ಲಿ ಹಮ್ಮಿಕೊಂಡಿದ್ದ `ಕಲಾವಿದರಿಗೆ ಮೂರು ದಿನಗಳ ರಂಗ ತರಬೇತಿ~ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡಿಗರ ಸಂಸ್ಕೃತಿಯನ್ನು ಹಾಡು ಮತ್ತು ನೃತ್ಯ ರೂಪಕಗಳ ಮೂಲಕ ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ವರ್ಗಾವಣೆ ಮಾಡಿದ ಕೀರ್ತಿ ಜಾನಪದ ಕಲಾವಿದರಿಗೆ ಸಲ್ಲುತ್ತದೆ. ಜಾನಪದ ಕಲಾಪ್ರಕಾರಗಳು ಕನ್ನಡ ನಾಡಿನ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ನೆರವಾಗಿವೆ. ಜಾನಪದ ಕಲೆಗಳಿಂದಾಗಿ ಕನ್ನಡಿಗರ ಸಾಂಸ್ಕೃತಿಕ ವೈಭವ ಜಗತ್ತಿಗೆ ಪರಿಚಯವಾಗಿದೆ ಎಂದು ಬಣ್ಣಿಸಿದರು.

ದೃಶ್ಯ ಮಾಧ್ಯಮದ ಭರಾಟೆಯಲ್ಲಿ ಜನಪದ ಕಲೆಗಳು ನಶಿಸುತ್ತಿವೆ. ಜನಪದ ಕಲೆಗಳು ಬದುಕಿನ ಆದರ್ಶ ತತ್ವಗಳನ್ನು ಹಾಡು ಮತ್ತು ನೃತ್ಯಗಳ ಮೂಲಕ ಪ್ರೇಕ್ಷಕರ ಮನಮುಟ್ಟಿಸುತ್ತವೆ. ಆದರೆ ದೃಶ್ಯ ಮಾಧ್ಯಮಗಳು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅಂಧಾನುಕರಣೆ ಮಾಡುತ್ತಾ ಮೂಲ ಜಾನಪದ ಸಂಸ್ಕೃತಿಯ ವಿನಾಶಕ್ಕೆ ಕಾರಣವಾಗುತ್ತಿವೆ. ಕನ್ನಡ ಭಾಷೆ ಮತ್ತು ಸಂಸ್ಕೃತಿ ಸಂರಕ್ಷಣೆಗೆ ಜಾನಪದ ಕಲಾಪ್ರಕಾರಗಳನ್ನು ಉಳಿಸಿಕೊಳ್ಳುವುದು ಅಗತ್ಯ. ಯುವಜನ ಜಾನಪದ ಕಲೆಗಳನ್ನು ಕಲಿಯುವುದು ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಪ್ರದರ್ಶಿಸುವ ಮೂಲಕ ಮೂಲ ಜಾನಪದ ಕಲಾ ಸಂಪತ್ತನ್ನು ಸಂರಕ್ಷಿಸಬೇಕು ಎಂದರು.

ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಜಿ.ನಾರಾಯಣ ಮಾತನಾಡಿ ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದಿವೆ. ಆದರೆ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಕಾಣದೆ ಹಿಂದುಳಿದಿವೆ. ಸರ್ಕಾರ ಸರಿಯಾದ ಯೋಜನೆಗಳನ್ನು ರೂಪಿಸಿ ಅಭಿವೃದ್ಧಿ ಮಾಡದಿರುವುದು ವಿಷಾದನೀಯ ಎಂದರು.

ಗ್ರಾಮೀಣ ಮಕ್ಕಳ ಶೈಕ್ಷಣಿಕ ಉನ್ನತಿಗೆ ಕಾರಣವಾಗಿದ್ದ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದು ಸರಿಯಲ್ಲ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು. ಆಗ ಮಕ್ಕಳು ಸರ್ಕಾರಿ ಶಾಲೆಗಳ ಕಡೆಗೆ ಆಕರ್ಷಿತರಾಗುತ್ತಾರೆ. ಗುಣಮಟ್ಟ ಸುಧಾರಣೆಗೆ ಆದ್ಯತೆ ಕೊಡದೆ ಸರ್ಕಾರಿ ಶಾಲೆಗಳನ್ನೆ ಮುಚ್ಚುವ ತೀರ್ಮಾನ ಕೈಗೊಂಡಿರುವುದು ಗ್ರಾಮೀಣ ಪ್ರದೇಶಗಳು ಮತ್ತಷ್ಟು ಹಿಂದುಳಿಯಲು ಕಾರಣವಾಗುತ್ತದೆ. ಸಮಾಜದಲ್ಲಿರುವ ಗಣ್ಯವ್ಯಕ್ತಿಗಳು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಬೇಕು ಎಂದರು.

ಕರ್ನಾಟಕ ಜಾನಪದ ಪರಿಷತ್ತಿನ ಆಡಳಿತ ಮಂಡಳಿ ಸದಸ್ಯ ಡಾ.ಚಕ್ಕೆರೆ ಶಿವಶಂಕರ್, ಸು.ತ.ರಾಮೇಗೌಡ, ವಾರ್ತಾ ಇಲಾಖೆ ಉಪನಿರ್ದೇಶಕರಾದ ಪುಟ್ಟರಾಜು ಮತ್ತು ಮುರಳೀಧರ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT