ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಯಿಕಾಯಿ ಶುಭ್ರ ಬಾಯಿ

Last Updated 5 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಸಾಂಬಾರ ಪದಾರ್ಥಗಳಲ್ಲಿ ಒಂದೆನಿಸಿದ ಜಾಯಿಕಾಯಿ ಎಲ್ಲರಿಗೂ ಪರಿಚಿತವಾದ ವಸ್ತು. ಅಡುಗೆ ಮನೆಯಲ್ಲಿ ಅದಕ್ಕೆ ಶಾಶ್ವತ ಸ್ಥಾನವಿದೆ. ಸಿಹಿ ತಿನಿಸುಗಳಿಗೆ ಅದರ ಒಂದು ಚಿಟಿಕೆ ಪುಡಿ ಬೆರೆಸಿದರೆ ಪರಿಮಳ ಮಾತ್ರವಲ್ಲ ರುಚಿಯೇ ಬೇರೆ. ಹಾಗೆಯೇ ಮನೆ ಮದ್ದಿನ ಹಲವು ಉಪಯೋಗಗಳೂ ಅದರಿಂದ ಆಗುತ್ತವೆ.

ಸಸ್ಯಶಾಸ್ತ್ರದಲ್ಲಿ ಮಿರಿಸ್ಟಿಕಾ ಫ್ರೇಗ್ರೆನ್ಸ್ ವರ್ಗಕ್ಕೆ ಸೇರಿದ ಜಾಯಿಕಾಯಿ ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ಎಲ್ಲೆಡೆ ಬೆಳೆಯುತ್ತದೆ. ಅದು ನೆರಳು ಮತ್ತು ಬಿಸಿಲನ್ನು ಸಮಾನವಾಗಿ ಬಯಸುವ ಸಸ್ಯವಾದ್ದರಿಂದ ಮಿಶ್ರಬೆಳೆಯಾಗಿ ಬೆಳೆಸಲಾಗುತ್ತದೆ.

ಅದರ ಹಣ್ಣು ದೊಡ್ಡ ಅಡಿಕೆಯ ಗಾತ್ರ ಇರುತ್ತದೆ. ದಪ್ಪ ತೊಗಟೆಯನ್ನು ಒಡೆದಾಗ, ಒಳಗೆ ಸುಲಿದ ಅಡಿಕೆ ಗಾತ್ರದ ಬೀಜ ಇರುತ್ತದೆ. ಇದೇ ಜಾಯಿಕಾಯಿ. ಅದರ ಹೊರಗಿನಿಂದ ಆವರಿಸಿರುವ ಕೆಂಪಗಿನ ದಳಗಳು ಪತ್ರೆ ಎಂಬ ಹೆಸರು ಪಡೆದು ಪ್ರಮುಖ ಮಸಾಲೆ ಪದಾರ್ಥಗಳಲ್ಲಿ ಸೇರಿವೆ. ಜಾಯಿಕಾಯಿ ಹಣ್ಣಿನ ಹುಳಿ ಮಿಶ್ರಿತ ಸಿಹಿಯ ತಿರುಳಿನಿಂದ ಜಾಮ್ ಮತ್ತು ಉಪ್ಪಿನಕಾಯಿ ತಯಾರಿಸುತ್ತಾರೆ. ಶರಬತ್ತನ್ನೂ ಮಾಡಬಹುದು.

ಎಳೆಯ ಮಕ್ಕಳಿಗೆ ತೆಳ್ಳಗೆ ಭೇದಿಯಾಗುತ್ತಿದ್ದರೆ ಜಾಯಿಕಾಯಿಯನ್ನು ನೀರಿನಲ್ಲಿ ಗಂಧದಂತೆ ತೇಯ್ದು ನೆಕ್ಕಿಸಿದರೆ ಶಮನವಾಗುತ್ತದೆ. ಒಣ ಕೆಮ್ಮಿನ ಬಾಧೆಯೇ? ಜಾಯಿಕಾಯಿಯನ್ನು ಪುಡಿ ಮಾಡಿ ಚೆನ್ನಾಗಿ ಹುರಿಯಬೇಕು. ಅದಕ್ಕೆ ಬೆಲ್ಲ ಸೇರಿಸಿ ಗುಳಿಗೆ ಕಟ್ಟಬೇಕು. ಅದನ್ನು ಬಾಯಿಯಲ್ಲಿ ಚೀಪುತ್ತಾ ನಿಧಾನವಾಗಿ ನುಂಗುವುದರಿಂದ ಬಹು ಸಮಯದಿಂದ ಕಾಡುತ್ತಿದ್ದ ಒಣ ಕೆಮ್ಮು ಕೂಡ ಗುಣವಾಗುತ್ತದೆ.

ತಾಂಬೂಲದೊಂದಿಗೆ ಜಾಯಿಕಾಯಿಯ ಪುಡಿಯನ್ನು ಬೆರೆಸಿ ತಿನ್ನುವುದರಿಂದ ಬಾಯಿ ಸುಗಂಧ ಕಾಯ್ದುಕೊಳ್ಳಬಹುದು. ಹಲ್ಲುಗಳಿಂದ ಕೆಟ್ಟ ವಾಸನೆಯ ದ್ರವ ಸೋರುವುದನ್ನು ಜಾಯಿಕಾಯಿ ತಡೆಯುತ್ತದೆ. ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.

ನಿದ್ರಾಹೀನತೆಯಿಂದ ಬಳಲುವವರು ರಾತ್ರಿ ಮಲಗುವ ಮುನ್ನ ಬಿಸಿ ಹಾಲಿನಲ್ಲಿ ಚಿಟಿಕೆ ಜಾಯಿಕಾಯಿಯ ಪುಡಿಯನ್ನು ಕದಡಿ ಕುಡಿಯಬೇಕು ಅಥವಾ ಗರುಗನ ಎಲೆಯ ರಸ, ನೆಲ್ಲಿಕಾಯಿ ರಸ, ರಕ್ತಚಂದನ, ಹಣ್ಣಡಿಕೆ ಸಿಪ್ಪೆಯ ರಸಗಳೊಂದಿಗೆ ಜಾಯಿಕಾಯಿ ಪುಡಿಯನ್ನು ತೆಂಗಿನೆಣ್ಣೆಯಲ್ಲಿ ಬೆರೆಸಿ ತಯಾರಿಸಿದ ತೈಲವನ್ನು ತಲೆಗೆ ಲೇಪಿಸಿಕೊಂಡರೆ ಸುಖನಿದ್ರೆ ಬರುತ್ತದೆ. ಬಾಯಿಯೊಳಗೆ ಹುಣ್ಣುಗಳಿದ್ದರೆ ಕರಿ ಜೀರಿಗೆ ಮತ್ತು ಜಾಯಿಕಾಯಿಯನ್ನು ಜೇನುತುಪ್ಪದಲ್ಲಿ ಅರೆದು ಹಚ್ಚುವುದರಿಂದ ಶೀಘ್ರ ಗುಣವಾಗುತ್ತದೆ.

ಪೇಟೆಯಿಂದ ತಂದ ಅಥವಾ ಮನೆಯಲ್ಲಿ ಕಾಯಿಸಿದ ತುಪ್ಪ ಬಳಕೆಗೆ ಅಸಾಧ್ಯವೆನಿಸುವಷ್ಟು ದುರ್ಗಂಧ ಬೀರುತ್ತಿದ್ದರೆ ಅದನ್ನು ಮತ್ತೊಮ್ಮೆ ಬಿಸಿ ಮಾಡಿ ಇಳಿಸುವ ಮುನ್ನ ಚಿಟಿಕೆ ಜಾಯಿಕಾಯಿ ಪುಡಿ ಹಾಕಿದರೆ ಸಿಹಿ ತಯಾರಿಸಿದರೂ ಘಮಘಮಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT