ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರುವ ಜಾಣ–ಜಾಣೆಯರು

Last Updated 7 ಜನವರಿ 2014, 5:36 IST
ಅಕ್ಷರ ಗಾತ್ರ

ಸಂಜೆ ಏಳು ಗಂಟೆಯಾದರೂ ರಾಜಾಜಿನಗರದ ಅಂಬೇಡ್ಕರ್‌ ಮೈದಾನದಲ್ಲಿ ಮಕ್ಕಳ ಕಲರವ. ಮಬ್ಬುಗತ್ತಲೆ, ಮೈಗೆ ಕಚಗುಳಿ ಇಡುವ ಚಳಿಯ ಹಂಗಿಲ್ಲದೆ ಕಾಲಿಗೆ ಚಕ್ರ ಕಟ್ಟಿಕೊಂಡ ಮಕ್ಕಳು ತಮ್ಮ ದೇಹವನ್ನು ಬಿಲ್ಲಿನಂತೆ ಬಾಗಿಸಿ ವೇಗದ ಸ್ಕೇಟಿಂಗ್‌ ಆಟದಲ್ಲಿ ಮಗ್ನರಾಗಿರುತ್ತಾರೆ.

ಕಾಲನ್ನು ಅತ್ತಿತ್ತ ಜಾರಿಸುತ್ತಾ, ಚಲನೆಗೆ ತಕ್ಕಂತೆ ಕೈಗಳನ್ನು ಆಡಿಸುತ್ತಾ, ಕಂಗಳನ್ನು ಮುಂದೆ ನೆಟ್ಟು ವೇಗವಾಗಿ ಸಾಗುವ ಇವರು ಬಿದ್ದರೇನು ಗತಿ ಎಂಬ ಭಯದಲ್ಲಿ ನೋಡುಗರ ಎದೆ ಢವಗುಡುತ್ತದೆ. ಆದರೆ, ಮಕ್ಕಳು ಮಾತ್ರ ಯಾವ ಭಯವೂ ಇಲ್ಲದೆ ಸ್ಕೇಟಿಂಗ್‌ ಆಟದ ಮೋಜನ್ನು ಸವಿಯುತ್ತಿರುತ್ತಾರೆ. ರಿಂಕ್‌ನೊಳಗೆ ಚಲನೆಯ ವೇಗನವನ್ನು ಹೆಚ್ಚಿಸಿ, ಇದಕ್ಕಿದ್ದಂತೆ ಬ್ರೇಕ್‌ ಹಾಕುವುದು, ಒಮ್ಮಿಂದೊಮ್ಮೆಲೆ ಥಟ್ಟನೆ ತಿರುಗುವುದು, ಮೈದಾನದಲ್ಲೇ ಸುತ್ತು ಹಾಕುವುದು ಹೀಗೆ ನೋಡುಗರ ಮೈನವಿರೇಳಿಸುವ ಅನೇಕ ಸಾಹಸದಲ್ಲಿ ನಿರತರಾಗಿರುತ್ತಾರೆ. ‘ಹೊತ್ತಾಯ್ತು ಮನೆಗೆ ಹೋಗೋಣ’ ಎಂದು ಅಮ್ಮ ಕೂಗುತ್ತಿದ್ದರೆ, ‘ಮಮ್ಮೀ ಪ್ಲೀಸ್‌ ಹತ್ತೇ ನಿಮಿಷ’ ಎನ್ನುತ್ತಾ ಮತ್ತೆ ಚಕ್ರದ ವೇಗವನ್ನು ಹೆಚ್ಚಿಸುತ್ತಾರೆ.

ಆರೋಗ್ಯದ ಸಲುವಾಗಿ, ಫಿಟ್‌ನೆಸ್‌ಗಾಗಿ, ಕ್ರೀಡೆಯಲ್ಲಿ ಸಾಧನೆ ಮಾಡಲು, ಹೊಸತನ್ನು ಕಲಿಯುವ ಆಸೆಯಿಂದ... ಹೀಗೆ ಕಾರಣಗಳನ್ನು ಹೇಳುತ್ತಾ ಸ್ಕೇಟಿಂಗ್‌ ತರಗತಿಗೆ ಸೇರಿಕೊಳ್ಳುವ ಮಕ್ಕಳು ಅನೇಕ. ಕೆಲವು ಮಕ್ಕಳು ಅಪ್ಪಅಮ್ಮನ ಒತ್ತಾಯಕ್ಕೆ ಬಂದರೆ, ಇನ್ನು ಕೆಲವರು ಚಕ್ರ ಕಟ್ಟಿ ಓಡಬೇಕು ಎಂದು ಬಯಸಿ ತರಗತಿ ಸೇರುತ್ತಾರೆ. ಸೇರಿದ ಕೆಲವೇ ದಿನಕ್ಕೆ ಅವರ ಸ್ಕೇಟಿಂಗ್‌ ಪ್ರೀತಿ ಆಶ್ವರ್ಯ ಮೂಡಿಸುವಂತಿರುತ್ತದೆ. ಆದರೆ ಅವರನ್ನು ಸಂಭಾಳಿಸುವುದು ತರಬೇತುದಾರರಿಗೂ ಕಷ್ಟವಾಗುತ್ತದಂತೆ. ‘ಮಕ್ಕಳು ಎಂದರೆ ತುಂಟಾಟ ಜಾಸ್ತಿ. ಪ್ರಾರಂಭದಲ್ಲಿ ಸ್ವಲ್ಪ ದಿನ ನಾವೇ ಕೈಹಿಡಿದು ಮಾಡಿಸಬೇಕು. ಬ್ಯಾಲೆನ್ಸ್‌ ಬಂದಮೇಲೆ ನಮ್ಮ ಕೆಲಸ ಸುಲಭ. ಹೆಚ್ಚಿನ ಮಕ್ಕಳು ಬಿದ್ದು ಅನೇಕ ಸಲ ಗಾಯ ಮಾಡಿಕೊಳ್ಳುತ್ತಾರೆ. ಆದರೆ ಅವರಿಗೆ ಧೈರ್ಯ ಹೇಳಿ ಹುರಿದುಂಬಿಸುವ ಕೆಲಸವನ್ನು ಮಾಡಬೇಕು. ಒಮ್ಮೆ ಬಿದ್ದಮೇಲೆ ಅವರಲ್ಲಿ ಧೈರ್ಯ ಹೆಚ್ಚುತ್ತದೆ. ಇನ್ನೂ ಖುಷಿಯಿಂದ ಆಟದಲ್ಲಿ ತೊಡಗಿಕೊಳ್ಳುತ್ತಾರೆ’ ಎನ್ನುತ್ತಾರೆ 10 ವರ್ಷಗಳ ಅನುಭವ ಇರುವ ರಾಘವೇಂದ್ರ ಕೆ.

‘ಇದುವರೆಗೆ ಸಾವಿರಕ್ಕೂ ಹೆಚ್ಚು ಮಕ್ಕಳು ಇಲ್ಲಿ ಸ್ಕೇಟಿಂಗ್‌ ಕಲಿತಿದ್ದಾರೆ. ಆದರೆ, ಅನೇಕರು ಫ್ಯಾಷನ್‌ಗಾಗಿ ಬಂದು ಸ್ವಲ್ಪೇ ದಿನದಲ್ಲಿ ಬಿಟ್ಟು ಹೋಗುತ್ತಾರೆ. ಇನ್ನೂ ಕೆಲವರು ದಪ್ಪಗಿರುತ್ತಾರೆ. ವೈದ್ಯರ ಸಲಹೆ ಮೇರೆಗೆ ಸ್ಕೇಟಿಂಗ್‌ ತರಗತಿಗೆ ಸೇರಿಕೊಳ್ಳುತ್ತಾರೆ. ಇಲ್ಲಿ ಕಲಿತ ಅನೇಕ ಮಕ್ಕಳು ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವುದು ರಾಜಾಜಿನಗರ ತಂಡದ ಮುಂದಿನ ಗುರಿ’ ಎಂದು ಮಾತು ಸೇರಿಸುತ್ತಾರೆ ಅವರು.

ಅಂದಹಾಗೆ, ಬೆಂಗಳೂರಿನಲ್ಲಿ ಕ್ಲೋಸ್ಡ್‌ ರಿಂಕ್‌ ಸ್ಕೇಟಿಂಗ್‌ ಮೈದಾನ ಇರುವುದು ಇಲ್ಲಿ ಮಾತ್ರ. ‘ಪ್ರತೀ ಸಲ ಅಭ್ಯಾಸಕ್ಕಾಗಿ ಮಕ್ಕಳನ್ನೆಲ್ಲಾ ಕರೆದುಕೊಂಡು ಕಂಠೀರವಕ್ಕೆ ಹೋಗಬೇಕಿತ್ತು. ಹೀಗಾಗಿ ನಾವು ಮಹಾನಗರ ಪಾಲಿಕೆ ಸದಸ್ಯರಾಗಿದ್ದ ಗಂಗಭೈರಯ್ಯ ಅವರನ್ನು ಒತ್ತಾಯಿಸಿ ಸ್ಕೇಟಿಂಗ್‌ಗಾಗಿ ವಿಶೇಷ ಜಾಗವನ್ನು ಮಾಡಿಸಿಕೊಂಡಿದ್ದೇವೆ. ಈಗ ಮಕ್ಕಳು ಖುಷಿಯಿಂದ ಬೇಕೆಂದಾಗ ಅಭ್ಯಾಸ ನಿರತರಾಗುತ್ತಾರೆ. ಕರ್ನಾಟಕ ರೋಲರ್‌ ಸ್ಕೇಟಿಂಗ್‌ ಅಸೋಸಿಯೇಷನ್‌ನ ಕಾರ್ಯದರ್ಶಿ ಪಿ.ಕೆ.ಭರತ್‌ ನೇತೃತ್ವದಲ್ಲಿ ಅನೇಕ ಸ್ಪರ್ಧೆಗಳು ನಡೆಯುತ್ತಿರುವುದು ಮಕ್ಕಳಿಗೆ ಪ್ರೋತ್ಸಾಹದಾಯಕವಾಗಿದೆ’ ಎಂದು ಖುಷಿ ಹಂಚಿಕೊಳ್ಳುತ್ತಾರೆ ರಾಘವೇಂದ್ರ.

ಅಭ್ಯಾಸಕ್ಕೆ ಸೂಕ್ತ ವಯಸ್ಸು
ಸ್ಕೇಟಿಂಗ್‌ ಕಲಿಕೆಯನ್ನು ಯಾವುದೇ ವಯಸ್ಸಿನಲ್ಲಿ ಪ್ರಾರಂಭಿಸಬಹುದು. ಆದರೆ ಇಲ್ಲಿ ಬ್ಯಾಲೆನ್ಸ್‌ ಮಾಡುವುದು ಮುಖ್ಯವಾದ್ದರಿಂದ ಮೂರು ಅಥವಾ ನಾಲ್ಕು ವರ್ಷದಿಂದ ಸ್ಕೇಟಿಂಗ್‌ ಕಲಿಯಲು ಆರಂಭಿಸಿದರೆ ಉತ್ತಮ ಎನ್ನುವುದು ತರಬೇತುದಾರರ ಅಭಿಪ್ರಾಯ. 14 ವರ್ಷದವರೆಗೂ ಕಲಿಕೆ ಸುಲಭ. 

ಸ್ಕೇಟಿಂಗ್ ಉಪಯೋಗ
ಚಕ್ರಗಳ ಮೇಲೇಯೇ ಕಸರತ್ತು ತೋರಬೇಕಿರುವುದರಿಂದ ಬ್ಯಾಲೆನ್ಸ್‌ ಮುಖ್ಯ. ಏಕಾಗ್ರತೆಯನ್ನು ಹೆಚ್ಚು ಬಯಸುವ ಈ ಆಟದಿಂದ ಮಕ್ಕಳಲ್ಲಿ ಆತ್ಮವಿಶ್ವಾಸವೂ ಹೆಚ್ಚುತ್ತದೆ. ಅಲ್ಲದೆ ಕೆಲವೇ ದಿನಗಳಲ್ಲಿ ಚುರುಕುತನ ಮನೆಮಾಡುತ್ತದೆ. ದೇಹದ ಫಿಟ್‌ನೆಸ್‌ಗೆ ಸ್ಕೇಟಿಂಗ್‌ ಹೆಚ್ಚು ಸಹಕಾರಿ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಕೇಟಿಂಗ್‌ಗೆ ಸಂಬಂಧಪಟ್ಟ ಅನೇಕ ಸ್ಪರ್ಧೆಗಳಿವೆ. ಸ್ಪೀಡ್‌, ಸ್ಕೇಟಿಂಗ್‌ ಹಾಕಿ, ಆರ್ಟಿಸ್ಟಿಕ್‌, ಜಿಮ್ನಾಸ್ಟಿಕ್‌, ಫ್ರೀಸ್ಟೈಲ್‌, ಸ್ಕೇಟಿಂಗ್‌ ಡಾನ್ಸ್‌ ಮುಂತಾದ ವಿಭಾಗಗಳಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ದುರದೃಷ್ಟವೆಂದರೆ ಭಾರತೀಯರು ಭಾಗವಹಿಸುತ್ತಿರುವುದು ಸ್ಪೀಡ್‌ ಹಾಗೂ ಸ್ಕೇಟಿಂಗ್‌ ಹಾಕಿ ಸ್ಪರ್ಧೆಯಲ್ಲಿ ಮಾತ್ರ. ಉಳಿದ ಸ್‍ಪರ್ಧೆಗಳಲ್ಲಿ ತೀರಾ ಕಡಿಮೆ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಚಿನ್ನದ ಹುಡುಗಿ
ಚನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ರವೀಶ್‌ ರಾವ್‌ ಹಾಗೂ ಅರವಿಂದ ಅವರಿಂದ ಸ್ಕೇಟಿಂಗ್‌ ಕಲಿಯುತ್ತಿರುವ ನಾಲ್ಕನೇ ತರಗತಿಯ ನಿತ್ಯಾ ರಾಜ್ಯಮಟ್ಟದಲ್ಲಿ (ಇನ್‌ಲೈನ್‌ ಸ್ಕೇಟಿಂಗ್‌) 15ಕ್ಕೂ ಹೆಚ್ಚು ಚಿನ್ನದ ಪದಕ ಪಡೆದಿದ್ದಾಳೆ. 40ಕ್ಕೂ ಹೆಚ್ಚು ಪದಕಗಳು ಇವಳ ಹೆಸರಲ್ಲಿವೆ. ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ಐದನೇ ಸ್ಥಾನ ಪಡೆದಿದ್ದಳು. ದೇಹಾರೋಗ್ಯಕ್ಕಾಗಿ ಸ್ಕೇಟಿಂಗ್‌ ಸೇರಿಕೊಂಡ ಈಕೆಗೆ ಈಗ ಸ್ಕೇಟಿಂಗ್‌ ಪ್ರೀತಿಯ ಹವ್ಯಾಸ. ‘2ನೇ ತರಗತಿಯಲ್ಲಿದ್ದಾಗ ಸ್ಕೇಟಿಂಗ್‌ ಅಭ್ಯಾಸದ ಸಂದರ್ಭದಲ್ಲೇ ಕೈ ಮುರಿದುಕೊಂಡಿದ್ದಳು. ಆದರೂ ಸ್ಪರ್ಧೆಯಲ್ಲಿ ಭಾಗವಹಿಸಿ ಎರಡು ಬೆಳ್ಳಿ ಪದಕ ಗೆದ್ದಿದ್ದಳು’ ಎನ್ನುವಾಗ ಆಕೆಯ ತಾಯಿ ಛಾಯಾ ಅವರ ಕಣ್ಣು ತುಂಬಿಕೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT