ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ-20ವಾಣಿಜ್ಯ ಸಚಿವರ ಸಭೆ

Last Updated 15 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಪ್ಯಾರಿಸ್ (ಪಿಟಿಐ): ಅಮೆರಿಕ ಮತ್ತು  ಯೂರೋಪ್ ಒಕ್ಕೂಟದಲ್ಲಿ ಕಾಣಿಸಿಕೊಂಡಿರುವ ಆರ್ಥಿಕ ಬಿಕ್ಕಟ್ಟು, ಭಾರತವೂ ಸೇರಿದಂತೆ ಪ್ರವರ್ಧಮಾನಕ್ಕೆ ಬರುತ್ತಿರುವ ಇತರ ದೇಶಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ.

ಅಂತರರಾಷ್ಟ್ರೀಯ ಹಣಕಾಸು  ನಿಧಿ (ಐಎಂಎಫ್) ಮತ್ತು ವಿಶ್ವಬ್ಯಾಂಕ್ ತ್ವರಿತವಾಗಿ ಜಾಗತಿಕ ಆರ್ಥಿಕ ಬಿಕ್ಕಟಿಗೆ ಸ್ಪಂದಿಸಬೇಕು. ಆದರೆ,  ಪ್ರವರ್ಧಮಾನಕ್ಕೆ ಬರುತ್ತಿರುವ  ದೇಶಗಳು ಹಣಕಾಸು ನೆರವಿಗಾಗಿ `ಐಎಂಎಫ್~ ಅನ್ನು ಅವಲಂಬಿಸುವ ಬದಲು,  ತಮ್ಮ ಆಂತರಿಕ ಸಾಲದ ಮೂಲಗಳು ಮತ್ತು ಕೇಂದ್ರೀಯ ಬ್ಯಾಂಕುಗಳನ್ನು ಆಶ್ರಯಿಸುವುದು ಉತ್ತಮ ಎಂದು ಅವರು ಶನಿವಾರ ಇಲ್ಲಿ ನಡೆದ `ಜಿ-20~ ಹಣಕಾಸು ಸಚಿವರ ಸಭೆಯಲ್ಲಿ ಅಭಿಪ್ರಾಯಪಟ್ಟರು.

ಕಳೆದ ಮೂರು ವರ್ಷಗಳ ಹಿಂದೆ 250 ಶತಕೋಟಿ ಡಾಲರ್ ಇದ್ದ ಅಂತರರಾಷ್ಟ್ರೀಯ ಹಣಕಾಸು ನಿಧಿ ಸಂಪನ್ಮೂಲ ಸದ್ಯ 750 ಶತಕೋಟಿ ಡಾಲರ್‌ಗಳಿಗೆ ಏರಿಕೆಯಾಗಿದೆ. ಆದರೆ, ಆರ್ಥಿಕ ಬಿಕ್ಕಟ್ಟು ಇರುವ  ದೇಶಗಳು, ಹಣಕಾಸು ನೆರವಿಗಾಗಿ `ಐಎಂಎಫ್~ ಅನ್ನು ಆಶ್ರಯಿಸುವ ಬದಲು, ಕೇಂದ್ರೀಯ ಬ್ಯಾಂಕುಗಳನ್ನು ಆಶ್ರಯಿಸಬಹುದು  ಎಂದು ಸಲಹೆ ನೀಡಿದರು.

`ಐಎಂಎಫ್~ ನೆರವಿನ ಅಗತ್ಯವಿಲ್ಲದೆ, ತನ್ನ ಸಮಸ್ಯೆಯನ್ನು ತಾನೇ ಬಗೆಹರಿಸಿಕೊಳ್ಳಲು ಯೂರೋಪ್‌ಗೆ ತನ್ನ ಬಳಿಯೇ ಸಾಕಷ್ಟು ಸಂಪನ್ಮೂಲವಿದೆ ಎಂದು ಅಮೆರಿಕದ ಹಣಕಾಸು ಕಾರ್ಯದರ್ಶಿ ತಿಮೊಥಿ ಗೇಟ್ನರ್ ಪ್ರತಿಕ್ರಿಯಿಸಿದ್ದಾರೆ. ಯೂರೋಪ್ ಹೆಚ್ಚುವರಿಯಾಗಿ `ಐಎಂಎಫ್~ನಿಂದ 350 ಶತಕೋಟಿ ಡಾಲರ್ ನೆರವು ಕೇಳಿದೆ.

`ಅಮೆರಿಕದ ಆರ್ಥಿಕ ಪುನಶ್ಚೇತನ ನಿರೀಕ್ಷೆಗಿಂತ ಕೆಳಮಟ್ಟದಲ್ಲಿದೆ. ಯೂರೋ ಕರೆನ್ಸಿ ವ್ಯಾಪ್ತಿಗೆ ಒಳಪಡುವ ರಾಷ್ಟ್ರಗಳಲ್ಲಿ ಸಾಲದ ಬಿಕ್ಕಟ್ಟು ಮುಂದುವರೆದಿದೆ. ಈ ಎಲ್ಲ ಸಂಗತಿಗಳು ಜಾಗತಿಕ ಷೇರುಪೇಟೆಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದ್ದು, ಗರಿಷ್ಠ ಏರಿಳಿತಕ್ಕೆ ಕಾರಣವಾಗಿದೆ. ಆದರೆ, ಈ ಪ್ರತಿಕೂಲ ವಾತಾವರಣದ ನಡುವೆಯೂ ದೇಶದ ಆರ್ಥಿಕ ವೃದ್ಧಿ ದರ (ಜಿಡಿಪಿ) ವರ್ಷಾಂತ್ಯಕ್ಕೆ ಶೇ 8.2ರಷ್ಟು ಪ್ರಗತಿ ದಾಖಲಿಸುವ ವಿಶ್ವಾಸ ಇದೆ ಎಂದು ಪ್ರಣವ್ ಹೇಳಿದರು.  

 ತೆರಿಗೆ ಮಾಹಿತಿ ವಿನಿಮಯ: ತೆರಿಗೆ ವಂಚನೆ ಪ್ರಕರಣಗಳ ಕುರಿತು ದೇಶಗಳ ನಡುವೆ ಮಾಹಿತಿ ವಿನಿಯಮಕ್ಕೆ  ಜಾಗತಿಕ ಒಪ್ಪಂದದ ಅಗತ್ಯ ಇದೆ ಎಂದು ಪ್ರಣವ್ ಮುಖರ್ಜಿ ಹೇಳಿದ್ದಾರೆ.

ಅಕ್ರಮ ಹಣ ವಿನಿಮಯ ಮತ್ತು ತೆರಿಗೆ ವಂಚನೆ ಪ್ರಕರಣಗಳು ಜಾಗತಿಕ ಆರ್ಥಿಕತೆಗೆ ತೀವ್ರ ಸವಾಲೊಡ್ಡುತ್ತಿವೆ. ಕಳೆದ ಎರಡು ವರ್ಷಗಳಲ್ಲಿ ತೆರಿಗೆ ವಂಚನೆ ಮಾಹಿತಿ ವಿನಿಯಮಕ್ಕೆ ಸಂಬಂಧಿಸಿದಂತೆ ಸುಮಾರು 700 ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಆದಾಗ್ಯೂ, ತೆರಿಗೆ ವಂಚನೆ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ ಎಂದರು.  

ಬೆಲೆ ಏರಿಕೆಗೆ ಕಡಿವಾಣ:
ಅಂತರರಾಷ್ಟೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಅಗತ್ಯ ಸರಕುಗಳ ಬೆಲೆ ಹೆಚ್ಚಿರುವುದು ಹಣದುಬ್ಬರ ಒತ್ತಡ ಹೆಚ್ಚುವಂತೆ ಮಾಡಿದೆ. ಸರಕು ಬೆಲೆ ಏರಿಳಿತ ತಡೆಯಲು ಸಂಘಟಿತ ಪರಿಹಾರವೊಂದನ್ನು ಕಂಡುಕೊಳ್ಳಬೇಕು ಎಂದು ಪ್ರಣವ್ `ಜಿ-20~ ಸದಸ್ಯ ರಾಷ್ಟ್ರಗಳಿಗೆ ಮನವಿ ಮಾಡಿದರು.

ಹಣದುಬ್ಬರ ತಡೆಯಲು ಇರುವ ಅತ್ಯುತ್ತಮ ಮಾರ್ಗ,  ಪೂರೈಕೆ ಸರಪಣಿ ಸರಿಪಡಿಸುವುದು ಮತ್ತು ಉತ್ತಮ ತಂತ್ರಜ್ಞಾನ ಬಳಸಿ ಉತ್ಪಾದನೆ ಹೆಚ್ಚಿಸುವುದು ಎಂದು ಅವರು ಶನಿವಾರ ಇ್ಲ್ಲಲಿ ನಡೆದ `ಜಿ-20~ ವಾಣಿಜ್ಯ ಸಚಿವರುಗಳ ಸಭೆಯಲ್ಲಿ ಅಭಿಪ್ರಾಯಪಟ್ಟರು.

ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳು ಹಣದುಬ್ಬರದ ಗರಿಷ್ಠ ಪರಿಣಾಮ ಎದುರಿಸುತ್ತಿವೆ. ಭಾರತವು ಶೇ 80 ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದು, ಹೆಚ್ಚಿನ ಒತ್ತಡ ಅನುಭವಿಸುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT