ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಂಕೆ ಮರಿ ಕಾದಾಟ

Last Updated 17 ಮೇ 2012, 10:15 IST
ಅಕ್ಷರ ಗಾತ್ರ

ಕಾರಿನಿಂದ ಖಳರು ಕೆಳಗಿಳಿದು ಬರುತ್ತಾರೆ. ಏಕಾಏಕಿ ನಾಯಕನ ಮೇಲೆ ಬೀಳುತ್ತಾರೆ. ಆಗ... ಫೈಟಿಂಗ್!.

ನಾಯಕ- ಖಳರನ್ನು ಧೂಳೀಪಟ ಮಾಡುವಂತೆ ಚಚ್ಚುತ್ತಾನೆ. ಇಂಥ ಕೆಲವು ದೃಶ್ಯಗಳನ್ನು `ಜಿಂಕೆ ಮರಿ~ ಚಿತ್ರಕ್ಕಾಗಿ ಛಾಯಾಗ್ರಾಹಕ ವೀನಸ್ ಮೂರ್ತಿ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿದ್ದರು.
 
ನಿರ್ದೇಶಕ ಕೆ.ಪಿ.ನವೀನ್ ಕುಮಾರ್ ಅವರಿಗೆ ಸಲಹೆ ಸೂಚನೆ ನೀಡುತ್ತಿದ್ದರು. ಅದು ನಡೆಯುತ್ತಿದ್ದುದು ಹೆಸರಘಟ್ಟ ಫಿಲ್ಮ್ ಸಿಟಿಯಲ್ಲಿ.

`ಜಿಂಕೆ ಮರಿ~ ಚಿತ್ರದ ನಾಯಕ ಯೋಗೀಶ್. ನಾಯಕಿ ಸೋನಿಯಾ ಗೌಡ. ಈ ಸಿನಿಮಾ ನಿರ್ಮಾಣದ ಕನಸನ್ನು ಹೊತ್ತು ಬಂದಿರುವ ನಿರ್ಮಾಪಕ ಮಹೇಶ್ ಬಾಳೇಕುಂದ್ರಿ. ಅವರು ಬೆಳಗಾವಿಯವರು.

ಈ ಮೊದಲು  `9 ಟು 12~ ಚಿತ್ರಕ್ಕೆ ಹಣ ಹೂಡಿದ್ದ ಮಹೇಶ್ `ಜಿಂಕೆ ಮರಿ~ಯ ಜೊತೆಜೊತೆಗೆ ಹಿಂದಿ ಚಿತ್ರವೊಂದನ್ನೂ ನಿರ್ಮಿಸುತ್ತಿದ್ದಾರೆ. ಅಲ್ಲದೇ `ಜಿಂಕೆ ಮರಿ~ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲೂ ನಟಿಸುತ್ತಿದ್ದಾರೆ.

ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ ಅನುಭವ ಪಡೆದಿರುವ ನಿರ್ದೇಶಕರು ತಮ್ಮ ಚೊಚ್ಚಿಲ ನಿರ್ದೇಶನದಲ್ಲಿ `ಜಿಂಕೆ ಮರಿ~ಯನ್ನು ರೂಪಿಸುತ್ತಿದ್ದಾರೆ. ಅದು ತೆಲುಗಿನ `ಬಿಂದಾಸ್~ ಚಿತ್ರದ ರೀಮೇಕ್. ತಮ್ಮ ಚಿತ್ರದಲ್ಲಿ ಮೂಲ ಚಿತ್ರವನ್ನು ಹಾಗೆಯೇ ಭಟ್ಟಿ ಇಳಿಸದೇ, ಶೇ 40ರಷ್ಟು ಬದಲಾವಣೆ ಮಾಡಕೊಳ್ಳಲಾಗಿದೆ.

ಕೆಲವು ಹಿಂಸಾತ್ಮಕ ಸನ್ನಿವೇಶಗಳನ್ನು ಕೈ ಬಿಡಲಾಗಿದೆ. ಕೆಲವು ದೃಶ್ಯಗಳನ್ನು ಹೊಸದಾಗಿ ಸೇರಿಸಲಾಗಿದೆ. ಕ್ಲೈಮ್ಯಾಕ್ಸ್‌ನಲ್ಲಿಯೂ ಸಾಕಷ್ಟು ಬದಲಾವಣೆ ಮಾಡಿಕೊಳ್ಳಲಾಗಿದೆ. ತಮ್ಮ ಚಿತ್ರದಲ್ಲಿ 25 ಪೋಷಕ ನಟರು ನಟಿಸುತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಂಡರು.

 ಅವರ ಇಷ್ಟೆಲ್ಲಾ ಬದಲಾವಣೆಗಳನ್ನು ಕಂಡು ಕೆಲವರು `ಬಿಂದಾಸ್~ ಚಿತ್ರದ ರೀಮೇಕ್ ಹಕ್ಕನ್ನು ಖರೀದಿಸುವುದು ಬೇಡ ಎಂದು ಸಲಹೆ ನೀಡಿದ್ದರಂತೆ. ಆದರೆ ಕತೆಗಾಗಿ ಹಕ್ಕನ್ನು ಖರೀದಿಸಬೇಕಾಯ್ತಂತೆ. ಸದ್ಯದಲ್ಲೇ `ಜಿಂಕೆ ಮರಿ~ ಚಿತ್ರೀಕರಣ ಮುಗಿಯಲಿದೆ.
ನಾಯಕ ಯೋಗೀಶ್‌ಗೆ ನಿರ್ದೇಶಕರು ಮಾಡಿಕೊಂಡಿರುವ ಬದಲಾವಣೆಗಳು ಇಷ್ಟವಾಗಿವೆ. `ನಾನು ಚಿತ್ರದಲ್ಲಿ ಎರಡು ಕುಟುಂಬವನ್ನು ಸೇರಿಸುವ ಕೆಲಸ ಮಾಡುವೆ. ಇದರಲ್ಲಿ ಬರುವ ಕಾಮಿಡಿ ಆಸಕ್ತಿಕರವಾಗಿದೆ~ ಎಂದು ನಗು ಚೆಲ್ಲಿದರು.

ಈಗಾಗಲೇ `ರಣ~ ಚಿತ್ರದ ನಾಯಕಿಯಾಗಿ ಅಭಿನಯಿಸಿ, ಅನುಭವ ಪಡೆದಿರುವ ಸೋನಿಯಾ ಗೌಡ, `ಉತ್ತಮ ಕೌಟುಂಬಿಕ ವಾತಾವರಣ ಇರುವ ಚಿತ್ರದಲ್ಲಿ ನಟಿಸುತ್ತಿರುವುದೇ ಖುಷಿ~ ಎಂದರು.

ನಟ ಶೋಭರಾಜ್‌ಗೆ ಚಿತ್ರದಲ್ಲಿ ಕಾಮಿಡಿ ವಿಲನ್ ಪಾತ್ರ. `ನಾನು ನನ್ನ ಕೆಲಸವನ್ನು ಗಂಭೀರವಾಗಿ ಮಾಡುತ್ತಿರುತ್ತೇನೆ. ಅದು ಪ್ರೇಕ್ಷಕರಿಗೆ ಖುಷಿ ನೀಡುತ್ತಿರುತ್ತದೆ~ ಎಂದರು.
ನಟಿ ಮಮತಾ, ಹರೀಶ್ ರಾಯ್ ಅನುಭವ ಹಂಚಿಕೊಂಡರು.
                                                 
                                

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT