ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಧಿಕಾರಿ ಖಾತೆಗೆ ತಲುಪದ ದೇಣಿಗೆ ಹಣ

Last Updated 23 ಫೆಬ್ರುವರಿ 2012, 8:10 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲಾ ಸರ್ಕಾರಿ ನೌಕರರ ಭವನ ನಿರ್ಮಾಣಕ್ಕೆ ಭದ್ರಾವತಿ ತಾಲ್ಲೂಕಿನ ಸರ್ಕಾರಿ ನೌಕರರು ನೀಡಿದ ಒಂದು ದಿನದ ವೇತನ ಇದುವರೆಗೂ ಜಿಲ್ಲಾಧಿಕಾರಿ ಖಾತೆಗೆ ತಲುಪಿಯೇ ಇಲ್ಲ.

ಉದ್ದೇಶಿತ ನೌಕರರ ಭವನ ನಿರ್ಮಾಣಕ್ಕೆ 2011ರ ಜೂನ್ ತಿಂಗಳ ಒಂದು ದಿನದ ಸಂಬಳವನ್ನು ಜಿಲ್ಲೆಯ ಸರ್ಕಾರಿ ನೌಕರರು ದೇಣಿಗೆಯಾಗಿ ನೀಡುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದರು. ಈ ಸಂಬಂಧ ಆದೇಶ ಹೊರಡಿಸಿ ನಿಗದಿತ ಕಾಲಮಿತಿ ಒಳಗೆ `ಜಿಲ್ಲಾಧಿಕಾರಿ ಶಿವಮೊಗ್ಗ~ ಇವರಿಗೆ ಚೆಕ್ ಮೂಲಕ ಖಜಾನೆ ಅಧಿಕಾರಿಗಳು ಸಂದಾಯ ಮಾಡಬೇಕು ಎಂದು  ಸೂಚಿಸಲಾಗಿತ್ತು.

ಆದರೆ, ಭದ್ರಾವತಿ ತಾಲ್ಲೂಕು ಬ್ಲಾಕ್ ಶಿಕ್ಷಣಾಧಿಕಾರಿ ಕಚೇರಿಯ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಿಬ್ಬಂದಿ ಹಾಗೂ ಶಿಕ್ಷಕರ ಒಂದು ದಿನದ ವೇತನ ಒಟ್ಟು ರೂ. 56,160 ಇದುವರೆಗೂ `ಜಿಲ್ಲಾಧಿಕಾರಿ ಶಿವಮೊಗ್ಗ~ ಇವರ ಖಾತೆಗೆ ಜಮಾವಣೆಯಾಗಿಯೇ ಇಲ್ಲ. ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯ ಅಧಿಕಾರಿಗಳು 2011ರ ಜೂನ್ 30ರಂದು  ರೂ. 56,160 ಚೆಕ್ ನಂ. 927250 ಮೂಲಕ ಭದ್ರಾವತಿ ತಾಲ್ಲೂಕು ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ನೀಡಿದ್ದಾರೆ. ತಾವು ಸ್ವೀಕರಿಸಿದ ಹಣಕ್ಕೆ ಸಂಘದ ಅಧ್ಯಕ್ಷ ಎನ್. ಕೃಷ್ಣಪ್ಪ ರಸೀದಿಯನ್ನೂ ನೀಡಿದ್ದಾರೆ. ಹೀಗೆ ಪಡೆದ ಹಣವನ್ನು ಅದೇ ವರ್ಷದ ಜುಲೈ ತಿಂಗಳ ಒಳಗೆ ಜಿಲ್ಲಾಧಿಕಾರಿ ಶಿವಮೊಗ್ಗಕ್ಕೆ ಸಲ್ಲಿಸಬೇಕೆಂಬ ಸೂಚನೆ ಇದ್ದರೂ ಕೃಷ್ಣಪ್ಪ ಮಾತ್ರ ಇದುವರೆಗೂ ಹಣ ನೀಡಿಲ್ಲ.

ಈ ಸಂಬಂಧ ದೇಣಿಗೆ ನೀಡಿದ ನೌಕರರು ಮತ್ತು ಸಿಬ್ಬಂದಿ ಈಗ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮೂಲಕ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಇಷ್ಟಲ್ಲದೇ ಕೃಷ್ಣಪ್ಪ ಅವರು 2008-09ನೇ ಸಾಲಿನಲ್ಲಿ ಶಿವಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ನೌಕರರ ಸಮ್ಮೇಳನದ ಪ್ರತಿನಿಧಿ ಶುಲ್ಕ ಹಾಗೂ ಹಲವು ಇಲಾಖೆಗಳ ನಗದು ಹಣವನ್ನೂ ಜಿಲ್ಲಾ ಹಾಗೂ ರಾಜ್ಯ ಸಂಘಕ್ಕೆ ನೀಡದಿರುವುದು ಕಂಡುಬಂದಿದೆ. ಈ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಅವರನ್ನು ಆಗ್ರಹಿಸಿದ್ದಾರೆ.

ಹಣ ಬಂದಿಲ್ಲ: `ಭದ್ರಾವತಿಯಿಂದ ನೌಕರರ ಭವನಕ್ಕೆ ಹಣ ಬಾರದಿರುವುದು ನಿಜ. ದೇಣಿಗೆ ನೀಡಲು ಜುಲೈವರೆಗೆ ನೀಡಿದ್ದ ಕಾಲಮಿತಿಯನ್ನು ಡಿಸೆಂಬರ್‌ಗೆ ವಿಸ್ತರಿಸಲಾಗಿತ್ತು. ಕೆಲವು ಕಡೆಗಳಲ್ಲಿ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯ ಅಧಿಕಾರಿಗಳ ಖಾತೆಯಲ್ಲಿ ದೇಣಿಗೆ ಹಣ ಇನ್ನೂ ಇದೆ. ಕೆಲವರು ಈಗ ಕೊಡುತ್ತಿದ್ದಾರೆ. ಭದ್ರಾವತಿ ನೌಕರರ ಹಣವನ್ನೂ ನಾವು ಪಡೆದುಕೊಳ್ಳುತ್ತೇವೆ. ಯಾವ ದೇಣಿಗೆ ಹಣ ದುರುಪಯೋಗವಾಗಲು ಬಿಡುವುದಿಲ್ಲ~ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಘುರಾಮ ದೇವಾಡಿಗ `ಪ್ರಜಾವಾಣಿ~ಗೆ ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT