ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಸ್ಪತ್ರೆಗೆ ಬೇಕಿದೆ ಔಷಧಿ

Last Updated 7 ಫೆಬ್ರುವರಿ 2011, 10:00 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದ ಜಿಲ್ಲಾ ಆಸ್ಪತ್ರೆಯ ಅವ್ಯವಸ್ಥೆ ಸುಧಾರಿಸಲು ಸರ್ಕಾರ, ಜನಪ್ರತಿನಿಧಿಗಳು ಸೇರಿದಂತೆ ಜಿಲ್ಲಾಡಳಿತ ನಿರಂತರವಾಗಿ ಶ್ರಮಿಸುತ್ತಿದೆ. ವೈದ್ಯಕೀಯ-ಅರೆವೈದ್ಯಕೀಯ ಸಿಬ್ಬಂದಿಗಳ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆಗಾಗ್ಗೆ ಭರವಸೆಗಳು ಕೇಳಿ ಬರುತ್ತವೆ. ಆದರೆ ರೋಗ ವಾಸಿಗೆ ಎಂದು ಬರುವ ರೋಗಿಗಳಿಗೆ ಇಲ್ಲಿ ಗಾಯದ ಮೇಲೆ ಔಷದಿ ಬದಲು ಬರೆ ಬೀಳುವುದು ಮಾತ್ರ ಗ್ಯಾರಂಟಿ ಎನ್ನುವಂತಾಗಿದೆ.

ಇದಕ್ಕೆ ನಿದರ್ಶನಗಳು ಕೆಲ ಕ್ರಮಗಳು ಮತ್ತು ಯೋಜನೆಗಳು ಅನುಷ್ಠಾನಕ್ಕೆ ಬಂದಿವೆ. ಆದರೆ ಆಸ್ಪತ್ರೆಯ ಹೊರ ವಾತಾವರಣ ಮತ್ತು ಶುಚಿತ್ವದ ಬಗ್ಗೆ ಯಾರೂ  ಇಲ್ಲಿಯವೆರೆಗೂ ಗಮನಹರಿಸಿದಂತೆ ಕಾಣುತ್ತಿಲ್ಲ.  ಆಸ್ಪತ್ರೆ ಆವರಣದ ರಸ್ತೆಯಲ್ಲಿನ ಗ್ರಿಲ್‌ಗಳು ತುಂಡಾಗಿ ಅಪಾಯಕಾರಿಯಾಗಿ ಪರಿಣಮಿಸಿದರೂ ಅದನ್ನು ಸರಿಪಡಿಸಲು ಯಾರೂ ಮುಂದಾಗಿಲ್ಲ.ಇಲ್ಲಿ ರೋಗಿಗಿಂತ ಮೊದಲು ಆಸ್ಪತ್ರೆಗೆ ಬೇಕಿದೆ ಔಷಧಿ ಮಾತು ಅನ್ವಯಿಸುತ್ತದೆ.

ಹೌದು ! ಜಿಲ್ಲಾ ಆಸ್ಪತ್ರೆಯ ಪ್ರವೇಶದ್ವಾರದಲ್ಲೇ ರಸ್ತೆಯನ್ನು ಅಗೆಯಲಾಗಿದೆ. ಚರಂಡಿಗೆ ಸಂಪರ್ಕ ಕಲ್ಪಿಸುವ ಮತ್ತು ಪೈಪ್ ಅಳವಡಿಸುವ ಉದ್ದೇಶದಿಂದ ಕಾಮಗಾರಿ ಕೈಗೊಳ್ಳಲಾಗಿದ್ದು 15 ದಿನಗಳಿಂದ ಅರ್ಧಕ್ಕೆ ಸ್ಥಗಿತಗೊಂಡಿದೆ. ಇದರ ಪರಿಣಾಮ ರೋಗಿಗಳು ಮತ್ತು ಸಾರ್ವಜನಿಕರು ತೀವ್ರ ತೊಂದರೆ ಎದುರಿಸುತ್ತಿದ್ದು, ಆಸ್ಪತ್ರೆ ಕಾಲಿಡಲು ಹರಸಾಹಸ ಪಡಬೇಕು. ಇನ್ನು ವಾಹನಗಳನ್ನು ಆಸ್ಪತ್ರೆಯ ಪ್ರವೇಶದ್ವಾರದ ಬಳಿ ತರಲು ಸಾಧ್ಯವಾಗುತ್ತಿಲ್ಲ. ನಿಶ್ಯಕ್ತಿ ಮತ್ತು ಅಸ್ವಸ್ಥತೆಯಿಂದ ಬಳಲುತ್ತಿರುವ ರೋಗಿಗಳನ್ನು ಸಂಬಂಧಿಕರು ಎತ್ತಿಕೊಂಡು ಆಸ್ಪತ್ರೆಯೊಳಗೆ ಪ್ರವೇಶಿಸುತ್ತಿದ್ದಾರೆ.

ಆಸ್ಪತ್ರೆಯಲ್ಲಿನ ಪ್ರಯೋಗಾಲಯದ ತ್ಯಾಜ್ಯ ನೀರು ಸುಗಮವಾಗಿ ಹರಿದು, ಚರಂಡಿಗೆ ಸೇರಲಿ ಎಂಬ ಉದ್ದೇಶದಿಂದ ಕಾಮಗಾರಿ ಕೈಗೊಳ್ಳಲಾಗಿದೆ. ಪೈಪ್ ಅಳವಡಿಸಬೇಕಿದೆ. ಆದರೆ ಆಸ್ಪತ್ರೆಯ ಆಡಳಿತ ವಿಭಾಗ ಮತ್ತು ಗುತ್ತಿಗೆದಾರರ ನಡುವೆ ಹಣಕಾಸು ವೆಚ್ಚಕ್ಕೆ ಸಂಬಂಧಿಸಿದಂತೆ ಉಂಟಾದ ಅಸಮಾಧಾನದಿಂದ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

‘ಪೈಪ್‌ಗಳನ್ನು ಅಳವಡಿಸುವ ಮತ್ತು ಕಾಮಗಾರಿ ಪೂರ್ಣಗೊಳಿಸುವ ಕಾರ್ಯಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ಆಡಳಿತಾಧಿಕಾರಿ ಮತ್ತು ಗುತ್ತಿಗೆದಾರರ ನಡುವೆ ಗೊಂದಲವಾಗಿದೆ. ಹೀಗಾಗಿ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ. ವೈದ್ಯರು, ವೈದ್ಯಕೀಯ ಸಿಬ್ಬಂದಿ ಮತ್ತು ಜಿಲ್ಲೆಯ ಪ್ರಮುಖರು ಕಾಮಗಾರಿ ಕೈಗೊಂಡಿರುವ ಮಾರ್ಗದಿಂದಲೇ ಆಸ್ಪತ್ರೆ ಪ್ರವೇಶಿಸುತ್ತಾರೆ. ಕಾಮಗಾರಿ ಸ್ಥಗಿತಗೊಂಡ ಪರಿಣಾಮ ರೋಗಿಗಳು, ಸಾರ್ವಜನಿಕರು ಸಂಕಷ್ಟಪಡುತ್ತಿದ್ದಾರೆ ಎಂಬ ಅಂಶ ಗೊತ್ತಿದ್ದರೂ ಯಾರೂ ಸಹ ಸಮಸ್ಯೆ ಬಗೆಹರಿಸಲು ಮುಂದಾಗುತ್ತಿಲ್ಲ’ ಎಂದು ಆಸ್ಪತ್ರೆಯ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಒಂದೆಡೆ ಕಾಮಗಾರಿಯದ್ದು ಈ ಸ್ಥಿತಿಯಿದ್ದರೆ, ಮತ್ತೊಂದೆಡೆ ವಾಹನಗಳ ವೇಗವನ್ನು ನಿಯಂತ್ರಿಸುವ ಉದ್ದೇಶದಿಂದ ಹಾಕಲಾಗಿರುವ ಗ್ರಿಲ್ ತುಂಡಾಗಿ ಎರಡು ತಿಂಗಳು ಕಳೆದರೂ ಅದನ್ನು ಸರಿಪಡಿಸಲಾಗಿಲ್ಲ. ಶುಕ್ರವಾರ ರಾತ್ರಿಯಷ್ಟೇ ವ್ಯಕ್ತಿಯೊಬ್ಬ ಗ್ರಿಲ್‌ಗಳ ಮೇಲೆ ಹಜ್ಜೆಯಿಟ್ಟ ಕೂಡಲೇ ನಿಯಂತ್ರಣ ಕಳೆದುಕೊಂಡು ಕೆಳಗಡೆ ಬಿದ್ದು ಗಾಯಗೊಂಡ. ವಾಹನ ಸವಾರರ ಹಾಗೂ ಪಾದಚಾರಿಗಳಿಗೂ ತೊಂದರೆಯಾಗಿದೆ. ಆಸ್ಪತ್ರೆಗೆ ಭಾರಿ ಸಂಖ್ಯೆಯಲ್ಲಿ ರೋಗಿಗಳು ಬರುತ್ತಿರುವುದರಿಂದ ಸಮಸ್ಯೆ ಹೇಳತಿರದಾಗಿದೆ.

ಆಸ್ಪತ್ರೆಯ ಹಿಂಭಾಗದಲ್ಲಿರುವ ಶವದ ಮರಣೋತ್ತರ ಪರೀಕ್ಷೆ ಮಾಡುವ ಕೊಠಡಿ ಬಳಿ ಚರಂಡಿ ನೀರು ಅಲ್ಲಿಯೇ ನಿಂತುಕೊಂಡಿದ್ದು, ನೊಣಗಳ ಕಾಟವು ಹೆಚ್ಚಿದೆ. ಆಸ್ಪತ್ರೆಯಲ್ಲಿನ ತ್ಯಾಜ್ಯವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ  ಮತ್ತು ಗಿಡಗಂಟಿಗಳು ವ್ಯಾಪಕವಾಗಿ ಬೆಳೆದಿರುವುದರಿಂದ ಮಾಲಿನ್ಯತೆ  ಪ್ರಮಾಣ ಹೆಚ್ಚಿದೆ.ಆಸ್ಪತ್ರೆಯಲ್ಲಿನ ಬಟ್ಟೆಗಳನ್ನು ಶುಚಿಗೊಳಿಸುವುದು, ತ್ಯಾಜ್ಯವಸ್ತುಗಳನ್ನು ಅಲ್ಲಿಯೇ ಎಸೆಯುವುದು, ಚರಂಡಿ ನೀರು ಸುಗಮವಾಗಿ ಹರಿಯುತ್ತಿರುವುದರಿಂದ ಇನ್ನಷ್ಟು ಮಲಿನ ವಾತಾವರಣಕ್ಕೆ ಕಾರಣವಾಗಿದೆ. ಆಸ್ಪತ್ರೆಯ ಶುಚಿತ್ವದ ಕುರಿತು ಸಂಬಂಧಪಟ್ಟವರು ಗಮನಹರಿಸಬೇಕು ಎಂದು ಸಾರ್ವಜನಿಕರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT