ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆ ಅಭಿವೃದ್ಧಿಗೆ ರೂ. 100 ಕೋಟಿ: ಶೆಟ್ಟರ್

Last Updated 10 ಜನವರಿ 2013, 8:33 IST
ಅಕ್ಷರ ಗಾತ್ರ

ಚಾಮರಾಜನಗರ: `ಹಿಂದುಳಿದಿರುವ ಗಡಿ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ಈ ಬಾರಿಯ ಬಜೆಟ್‌ನಲ್ಲಿ 100 ಕೋಟಿ ರೂ ಅನುದಾನ ಮೀಸಲಿಡಲಾಗುವುದು' ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಭರವಸೆ ನೀಡಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಿಲಾನ್ಯಾಸ, ಉದ್ಘಾಟನೆ ಮತ್ತು ಫಲಾನುಭವಿಗಳಿಗೆ ಸರ್ಕಾರಿ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಂಜುಂಡಪ್ಪ ವರದಿ ಅನ್ವಯ ಜಿಲ್ಲೆ ಹಿಂದುಳಿದಿದೆ. ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹೆಚ್ಚಿನ ಕಾಳಜಿವಹಿಸುವುದು ಜನಪ್ರತಿನಿಧಿಗಳ ಹೊಣೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಕೂಡಲೇ ಪ್ರಸ್ತಾವ ಸಲ್ಲಿಸಬೇಕು. ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಲು ಕ್ರಮವಹಿಸಲಾಗುವುದು ಎಂದರು.

ಕಬಿನಿ ಮತ್ತು ಕಾವೇರಿ ನದಿ ಮೂಲದಿಂದ ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಶಾಶ್ವತ ಪರಿಹಾರ ಯೋಜನೆ ಜಾರಿಗೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಸಂಸದ ಆರ್. ಧ್ರುವನಾರಾಯಣ ಮಾತನಾಡಿ, `ಜಿಲ್ಲೆಯ ಅರಿಸಿನ ಬೆಳೆಗಾರರ ಅಭಿವೃದ್ಧಿಯ ದೃಷ್ಟಿಯಿಂದ ಅರಿಸಿನ ಮಾರುಕಟ್ಟೆ ಮತ್ತು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ತಕ್ಷಣವೇ ಅನುದಾನ ಬಿಡುಗಡೆಗೊಳಿಸಬೇಕು' ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶವಿದೆ. ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಅನುದಾನ ಬಳಸಿಕೊಳ್ಳಬೇಕು. ಜಿಲ್ಲೆಯಲ್ಲಿ ಕೃಷಿ ಕಾಲೇಜು ತೆರೆಯಲು ಬಜೆಟ್‌ನಲ್ಲಿ ಘೋಷಿಸಿ ಅನುದಾನ ಒದಗಿಸಬೇಕು ಎಂದು ಕೋರಿದರು.

ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಮಾತನಾಡಿ, `ಹನೂರು ಪಟ್ಟಣವನ್ನು  ತಾಲ್ಲೂಕು ಕೇಂದ್ರ ಮಾಡಲು ಸರ್ಕಾರ ಕ್ರಮವಹಿಸಲಿದೆ ಎಂದ ಅವರು, ವರ್ತುಲ ರಸ್ತೆ ನಿರ್ಮಾಣ ಸೇರಿದಂತೆ ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗುವುದು' ಎಂದರು.

ಶಾಸಕ ಆರ್. ನರೇಂದ್ರ, ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯ, ದಕ್ಷಿಣ ವಲಯ ಐಜಿಪಿ ಡಾ.ಕೆ. ರಾಮಚಂದ್ರರಾವ್ ಹಾಜರಿದ್ದರು. ವಿವಿಧ ಯೋಜನೆಯಡಿ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT