ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆಗ್ರಹ

Last Updated 27 ಡಿಸೆಂಬರ್ 2012, 6:08 IST
ಅಕ್ಷರ ಗಾತ್ರ

ಕೋಲಾರ: ಪರಮಶಿವಯ್ಯನವರ ನೀರಾವರಿ ವರದಿಯನ್ನು ಜಾರಿಗೊಳಿಸಬೇಕು ಎಂಬುದು ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕೋಲಾರ ಜಿಲ್ಲಾ ಸಮಗ್ರ ಅಭಿವೃದ್ಧಿಗೆ ಜನಪರ ವೇದಿಕೆ ಕಾರ್ಯಕರ್ತರು ಕೋಲಾರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಧರಣಿ ನಡೆಸಿದರು.

ಕೆಜಿಎಫ್ ಚಿನ್ನದ ಗಣಿಯನ್ನು ಕೇಂದ್ರ ಸರ್ಕಾರವೇ ಮತ್ತೆ ಆರಂಭಿಸಬೇಕು. ಬಿಇಎಂಎಲ್‌ನಿಂದ ಹೆಚ್ಚು ರಕ್ಷಣಾ ಸಾಮಗ್ರಿಗಳನ್ನು ಖರೀದಿಸಬೇಕು. ರೈಲ್ವೆ ಕೋಚ್ ಕಾರ್ಖಾನೆಯನ್ನು ಕೂಡಲೇ ಶುರು ಮಾಡಲು ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ರೈತರು ಸ್ವಂತ ಭೂಮಿಯಲ್ಲಿ ನಡೆಸುವ ಬಿತ್ತನೆ, ಸುಗ್ಗಿಯಂಥ ಚಟುವಟಿಕೆಗಳಿಗೂ ಯೋಜನೆಯನ್ನು ವಿಸ್ತರಿಸಬೇಕು ಎಂದು ಆಗ್ರಹಿಸಿದರು.

ನಿವೇಶನ ನೀಡಿ: ವಸತಿ ಹೀನರಿಗೆ ಕನಿಷ್ಠ 30x40 ಅಳತೆಯ ನಿವೇಶನಗಳನ್ನು ನೀಡಬೇಕು. ಮನೆಗಾಗಿ ರೂ 1 ಲಕ್ಷ ಸಹಾಯಧನ ನೀಡಬೇಕು. ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‌ನ ದುಃಸ್ಥಿತಿಯ ಹಿನ್ನೆಲೆಯಲ್ಲಿ ಬಡ್ಡಿರಹಿತ ಅಥವಾ ಕಡಿಮೆ ಬಡ್ಡಿ ದರದ ಕೃಷಿ ಸಾಲವನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಬೇಕು. ಕೃಷಿಯಾಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಬೇಕು. ಜಿಲ್ಲೆಯ ಅಸಂಘಟಿತ ಕಾರ್ಮಿಕರಿಗೆ ಮಾಸಿಕವಾಗಿ 10 ಸಾವಿರ ರೂಪಾಯಿ ವೇತನ ನೀಡಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಉತ್ಪನ್ನವಾಗುವ ರೇಷ್ಮೆ, ಹಾಲು, ತರಕಾರಿ ಸೇರಿದಂತೆ ಹಲವು ಉತ್ಪನ್ನಗಳನ್ನು ಸಾಗಿಸಲು ಉತ್ತಮ ಹಾಗೂ ಕಡಿಮೆ ದರದ ಸಾರಿಗೆ ವ್ಯವಸ್ಥೆಯನ್ನು ನೀಡಬೇಕು. ಪ್ರತಿ ತಾಲ್ಲೂಕು ಕೇಂದ್ರದಿಂದ ಬೆಂಗಳೂರಿಗೆ ರೈಲು ಮಾರ್ಗ ಕಲ್ಪಿಸಬೇಕು. ಉತ್ತಮ ರಸ್ತೆಗಳನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಸಾಮಾಜಿಕ ಅಭಿವೃದ್ಧಿ: ಜಿಲ್ಲೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ವಿಶೇಷ ಪ್ಯಾಕೇಜ್ ಘೋಷಿಸಬೇಕು. ಈ ಪ್ಯಾಕೇಜ್, ದೊಡ್ಡ ಸಂಖ್ಯೆಯಲ್ಲಿರುವ ಭೂಹೀನರಿಗೆ ಕೃಷಿ ಭೂಮಿಯನ್ನು ನೀಡುವುದು, ವಿದ್ಯಾವಂತ ನಿರುದ್ಯೋಗಿಗಳಿಗೆ ತರಬೇತಿ ನೀಡಿ ಉದ್ಯೋಗಸ್ಥರನ್ನಾಗಿಸುವುದನ್ನು ಒಳಗೊಂಡಿರಬೇಕು. ಸ್ವಂತ ಉದ್ಯೋಗಕ್ಕಾಗಿ ಅಗತ್ಯ ವಿರುವ ಕಡಿಮೆಬಡ್ಡಿಯ ಸಾಲ ಮತ್ತಿತರೆ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

ಇಡೀ ರಾಜ್ಯದಲ್ಲೇ ಮೊದಲಿಗೆ ವಿದ್ಯುತ್ ಸಂಪರ್ಕ ಪಡೆದ ಜಿಲ್ಲೆ ಎಂದೇ ಖ್ಯಾತವಾಗಿರುವ ಕೋಲಾರದಲ್ಲಿ ಈಗ ನಿಗದಿತವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಪರಿಣಾಮವಾಗಿ ಕೃಷಿ ಮತ್ತು ಕೈಗಾರಿಕೆ ಕ್ಷೇತ್ರ ಕಷ್ಟದ ಪರಿಸ್ಥಿತಿಯಲ್ಲಿವೆ. ಈ ಸಮಸ್ಯೆಯನ್ನು ನಿವಾರಿಸಿ ಜಿಲ್ಲೆಗೆ ನಿರಂತರ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿದರು.

ಭ್ರಷ್ಟಾಚಾರ ಮುಕ್ತಗೊಳಿಸಿ:  ದಲಿತರಿಗೆ ಅನುಕೂಲ ಕಲ್ಪಿಸಲು ಇರುವ ಸಮಾಜ ಕಲ್ಯಾಣ ಇಲಾಖೆ, ಅಂಬೇಡ್ಕರ್ ಅಭಿವೃದ್ಧಿ ನಿಗಮಗಳನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಬೇಕು. ದಲಿತ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳಲ್ಲಿ ನೀಡಬೇಕಾದ ಸೌಲಭ್ಯಗಳನ್ನು ತಪ್ಪಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ದಲಿತ ಸಮುದಾಯದ ಕಷ್ಟ, ನಷ್ಟಗಳಿಗೆ ಸ್ಪಂದಿಸುವ ಅಧಿಕಾರಿಗಳನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.

ನಗರದಲ್ಲಿರುವ ನರಸಿಂಹರಾಜ ಜಿಲ್ಲಾ ಆಸ್ಪತ್ರೆಯ ಸೌಲಭ್ಯವನ್ನು ಬಳಸಿಕೊಂಡು ಸರ್ಕಾರಿ ವೈದ್ಯಕೀಯ ಕಾಲೇಜನ್ನು ಆರಂಭಿಸಬೇಕು. ಜಿಲ್ಲಾ ಕೇಂದ್ರದಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಮತ್ತು ಪಾಲಿಟೆಕ್ನಿಕ್ ಕಾಲೇಜುಗಳನ್ನು ಸ್ಥಾಪಿಸಬೇಕು. ಅತ್ಯಂತ ಹಿಂದುಳಿದಿರುವ ಜಿಲ್ಲೆಯ ಅಂಗನವಾಡಿ ಮತ್ತು ಸರ್ಕಾರಿ ಶಾಲೆಯ ಮಕ್ಕಳ ಆರೋಗ್ಯ ಮತ್ತು ಹಾಜರಾತಿಯನ್ನು ಉತ್ತಮಪಡಿಸಲು ಬಿಸಿಯೂಟದ ಜೊತೆಗೆ, ಜಿಲ್ಲೆಯಲ್ಲಿ ಯಥೇಚ್ಛವಾಗಿ ಉತ್ಪಾದನೆಯಾಗುತ್ತಿರುವ ಹಾಲು ಮತ್ತು ಕೋಳಿ ಮೊಟ್ಟೆಯನ್ನು ಉಚಿತವಾಗಿ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.
ವೇದಿಕೆಯ ಪ್ರಮುಖರಾದ ಮುನಿರಾಜಮ್ಮ, ಸುಶೀಲ, ಗಾಂಧಿನಗರ ನಾರಾಯಣಸ್ವಾಮಿ, ಕೆ.ಪಿ.ಸೂರ್ಯನಾರಾಯಣ, ಜಿ.ಅರ್ಜುನನ್, ವಿ.ಗೀತಾ, ಪಿ.ಶ್ರೀನಿವಾಸ್, ಮಣಿಘಟ್ಟ ರಾಮಯ್ಯ, ಬಿ.ವಿ.ಸಂಪಂಗಿ, ಗಂಗಮ್ಮ, ವಿಜಯಕೃಷ್ಣ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT